ಸಿಂಗಾಪುರ ಸಂಸತ್ತಿನಲ್ಲಿ ಜವಾಹರ್ ಲಾಲ್ ನೆಹರೂ ಉಲ್ಲೇಖ; ಭಾರತಕ್ಕೆ ಶ್ರೇಷ್ಠ ಮೌಲ್ಯಗಳ ಅಡಿಪಾಯ ಹಾಕಲಾಗಿದೆ ಎಂದ ಪ್ರಧಾನಿ ಲಿ ಸೇನ್ ಲೂಂಗ್
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಅದನ್ನು ಗೆದ್ದ ನಾಯಕರು ಮಹಾನ್ ಧೈರ್ಯಶಾಲಿಗಳಾದ ಅಸಾಧಾರಣ ವ್ಯಕ್ತಿಗಳು. ವಿವಿಧ ದೇಶಗಳಲ್ಲಿ ಇಂಥ ಮಹಾನ್ ನಾಯಕರಿದ್ದಾರೆ ಎಂದು ಲಿ ಸೀನ್ ಲೂಂಗ್ ಹೇಳಿದ್ದಾರೆ.
ಸಿಂಗಾಪುರ ಪಾರ್ಲಿಮೆಂಟ್ನಲ್ಲಿ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂ ಬಗ್ಗೆ ಮಾತನಾಡಲಾಗಿದೆ. ಜವಾಹರ್ ಲಾಲ್ ನೆಹರೂ ಅವರ ಪರಂಪರೆಯನ್ನು ಉಲ್ಲೇಖಿಸಿ ಸಂಸತ್ತಿನಲ್ಲಿ ಮಾತನಾಡಿದ್ದು ಬೇರೆ ಯಾರೂ ಅಲ್ಲ, ಸಿಂಗಾಪುರದ ಪ್ರಧಾನಮಂತ್ರಿ ಲಿ ಸೇನ್ ಲೂಂಗ್(Singapore, Prime Minister Lee Hsien Loong). ಸ್ವತಂತ್ರ ಭಾರತಕ್ಕೆ ಅತ್ಯುನ್ನತ ಆದರ್ಶ ಮತ್ತು ಶ್ರೇಷ್ಠ ಮೌಲ್ಯಗಳ ಅಡಿಪಾಯ ಹಾಕಲಾಗಿದೆ ಎಂದು ಲಿ ಸೇನ್ ಲೂಂಗ್ ಹೇಳಿದ್ದಾರೆ. ಸಿಂಗಾಪುರ್ನ ವರ್ಕರ್ಸ್ ಪಾರ್ಟಿಯ ಮಾಜಿ ಸಂಸದೆ ರಯೀಸಾ ಖಾನ್ ಅವರು ಇತ್ತೀಚೆಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಸಂಸತ್ತಿನಲ್ಲಿ ಹೇಳಿದ್ದರು. ಆದರೆ ಅದು ಕಟ್ಟುಕತೆಯಾಗಿತ್ತು. ನಂತರ ಇದೇ ಎಡವಟ್ಟಿನ ಕಾರಣಕ್ಕೆ ಅವರು ರಾಜೀನಾಮೆಯನ್ನೂ ಕೊಟ್ಟಿದ್ದಾರೆ. ಆದರೆ ರಯೀಸಾ ಖಾನ್ ಹೇಳಿಕೆಗಳನ್ನು ಪರಿಶೀಲಿಸಿ, ತನಿಖೆ ನಡೆಸುವ ಸಂಬಂಧ ಒಂದು ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಫೆ.10ರಂದು ತನ್ನ ತನಿಖಾ ವರದಿ ನೀಡಿದ್ದು, ಸದ್ಯ ಸಿಂಗಾಪುರ ಸಂಸತ್ತಿನಲ್ಲಿ ಈ ವರದಿ ಮೇಲೆ ಚರ್ಚೆ ನಡೆಯುತ್ತಿದೆ. ಇದೇ ವೇಳೆ ಮಾತನಾಡಿದ ಪ್ರಧಾನಮಂತ್ರಿ ಭಾರತ ಮತ್ತು ಅದರ ಮೊದಲ ಪ್ರಧಾನಮಂತ್ರಿ ಬಗ್ಗೆ ಉಲ್ಲೇಖಿಸಿದ್ದಾರೆ.
ಭಾರತಕ್ಕೆ ಶ್ರೇಷ್ಠ ಮೌಲ್ಯಗಳು, ಆದರ್ಶಗಳ ಅಡಿಪಾಯ ಹಾಕಲಾಗಿದೆ. ಆದರೂ ಜವಾಹರ್ ಲಾಲ್ ನೆಹರೂರವರ ಭಾರತದಲ್ಲಿಯೂ ಕೂಡ ಲೋಕಸಭೆಯಲ್ಲಿ ಅರ್ಧದಷ್ಟು ಸಂಸದರ ವಿರುದ್ಧ ಕ್ರಿಮಿನಲ್ ಕೇಸ್ಗಳು, ರೇಪ್, ಮರ್ಡರ್ ಕೇಸ್ಗಳು ಇವೆ ಎಂದು ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಆದರೆ ಅದರಲ್ಲಿ ಅನೇಕ ಕೇಸ್ಗಳು ರಾಜಕೀಯ ಪ್ರೇರಿತವಾದದ್ದು ಎಂದೂ ಹೇಳಲಾಗಿದೆ ಎಂದು ಪ್ರಧಾನಿ ಲೂಂಗ್ ಹೇಳಿದ್ದಾರೆ. ಅಷ್ಟೇ ಅಲ್ಲ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮತ್ತು ಅದನ್ನು ಗೆದ್ದ ನಾಯಕರು ಮಹಾನ್ ಧೈರ್ಯಶಾಲಿಗಳಾದ ಅಸಾಧಾರಣ ವ್ಯಕ್ತಿಗಳು. ವಿವಿಧ ದೇಶಗಳಲ್ಲಿ ಇಂಥ ಮಹಾನ್ ನಾಯಕರಿದ್ದಾರೆ. ಡೇವಿಡ್ ಬೆನ್ ಗುರಿಯನ್ಸ್ ಇರಬಹುದು, ಜವಾಹರ್ ಲಾಲ್ ನೆಹರೂ ಇರಬಹುದು. ಹಾಗೇ, ನಮ್ಮ ದೇಶದಲ್ಲೂ ಇದ್ದಾರೆ ಎಂದು ಪ್ರಧಾನಿ ಹೇಳಿದರು. ಈ ಮೂಲಕ ರಾಜಕಾರಣಿಗಳಿಗೆ ಇರಬೇಕಾದ ಮೌಲ್ಯಗಳ ಬಗ್ಗೆ ಮಾತನಾಡಿದರು.