Sri Lanka Economic Crisis: ಮಾಲ್ಡೀವ್ಸ್​ಗೆ ಓಡಿಹೋದ ಅಧ್ಯಕ್ಷ ಗೊಟಬಯ ರಾಜಪಕ್ಸ; ಮಾಜಿ ವಿತ್ತ ಸಚಿವಗೆ ವಿಮಾನ ಹತ್ತಲು ಬಿಡದ ಜನ

ಜನರು ರಾಜಕಾರಿಣಿಗಳ ಬಗ್ಗೆ ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ಜನಾಕ್ರೋಶಕ್ಕೆ ಹೆದರಿದ ಮಾಜಿ ವಿತ್ತ ಸಚಿವ ಬಾಸಿಲ್ ರಾಜಪಕ್ಸ ವಿಮಾನ ನಿಲ್ದಾಣದಿಂದ ತರಾತುರಿಯಲ್ಲಿ ಹೊರ ನಡೆದರು.

Sri Lanka Economic Crisis: ಮಾಲ್ಡೀವ್ಸ್​ಗೆ ಓಡಿಹೋದ ಅಧ್ಯಕ್ಷ ಗೊಟಬಯ ರಾಜಪಕ್ಸ; ಮಾಜಿ ವಿತ್ತ ಸಚಿವಗೆ ವಿಮಾನ ಹತ್ತಲು ಬಿಡದ ಜನ
ಗೊಟಬಯ ರಾಜಪಕ್ಸೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 13, 2022 | 12:23 PM

ಕೊಲಂಬೊ: ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ (Sri Lanka Economic Crisis) ದಿನಕ್ಕೊಂದು ಹೊಸ ಬೆಳವಣಿಗೆಗಳು ವರದಿಯಾಗುತ್ತಿವೆ. ಸಾವಿರಾರು ಜನರು ಅಧ್ಯಕ್ಷರ ಅಧಿಕೃತ ನಿವಾಸದ ಮೇಲೆ ದಾಳಿ ನಡೆಸಿ, ದಾಂದಲೆ ನಡೆಸುವ ಕೆಲವೇ ಗಂಟೆಗಳು ಮೊದಲು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದ ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ತಮ್ಮ ಸ್ಥಾನಕ್ಕೆ ಇಂದು (ಜುಲೈ 13) ರಾಜೀನಾಮೆ ನೀಡುವುದಾಗಿ ಭರವಸೆ ನೀಡಿದ್ದರು. ಅವರು ಈಗ ಮಾಲ್ಡೀವ್ಸ್​ಗೆ ಹೋಗಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಅಧ್ಯಕ್ಷ ಸ್ಥಾನ ಇರುವವರೆಗೆ ರಾಜಪಕ್ಸ ಅವರಿಗೆ ಬಂಧನದಿಂದ ರಕ್ಷಣೆ ಇರುತ್ತದೆ. ಶ್ರೀಲಂಕಾದಲ್ಲಿ ಸ್ಥಾಪನೆಯಾಗಲಿರುವ ಹೊಸ ಸರ್ಕಾರದಿಂದ ಬಂಧನ ಮತ್ತ ವಿಚಾರಣೆ ತಪ್ಪಿಸಿಕೊಳ್ಳಲು ಗೊಟಬಯ ರಾಜಪಕ್ಸ ವಿದೇಶಕ್ಕೆ ತೆರಳಲು ಹಾತೊರೆಯುತ್ತಿದ್ದಾರೆ.

ಶ್ರೀಲಂಕಾದ ಮುಖ್ಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಂಟೊನೊವ್-32 ಮಿಲಿಟರಿ ವಿಮಾನದಲ್ಲಿ ಗೊಟಬಯ ಅವರು ತಮ್ಮ ಅಂಗರಕ್ಷಕರು, ಪತ್ನಿಯೊಂದಿಗೆ ವಿದೇಶಕ್ಕೆ ತೆರಳಿದರು ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್​ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಮಾಲ್ಡೀವ್ಸ್​ಗೆ ಅವರು ಬಂದ ತಕ್ಷಣ ಗೌಪ್ಯ ಸ್ಥಳವೊಂದಕ್ಕೆ ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲಾಯಿತು ಎಂದು ಮಾಲ್ಡೀವ್ಸ್​ ಅಧಿಕಾರಿಗಳು ಹೇಳಿದ್ದಾರೆ. 73 ವರ್ಷದ ಗೊಟಬಯ ಅವರು ಶ್ರೀಲಂಕಾದಿಂದ ದೂರ ಹೋಗುವುದರೊಂದಿಗೆ ಅಲ್ಲಿನ ರಾಜಕಾರಣದ ಅಧ್ಯಾಯವೊಂದು ಬದಲಾದಂತೆ ಆಗಿದೆ.

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್​ಗೆ ತೆರಳಲು ಭಾರತ ನೆರವಾಗಿದೆ ಎನ್ನುವ ವರದಿಗಳನ್ನು ಆಧಾರರಹಿತ ಎಂದು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆ ತಳ್ಳಿಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೊಲಂಬೊದಲ್ಲಿರುವ ಭಾರತೀಯ ರಾಯಭಾರ ಕಚೇರಿ, ‘ಪ್ರಜಾಸತ್ತಾತ್ಮಕ ಮೌಲ್ಯಗಳ ಮೂಲಕ ಶಾಂತಿ ಸ್ಥಾಪನೆ ಮತ್ತು ಸಮೃದ್ಧ ಭವಿಷ್ಯ ರೂಪಿಸಿಕೊಳ್ಳಲು ಶ್ರೀಲಂಕಾ ಪ್ರಜೆಗಳು ತುಡಿಯುತ್ತಿದ್ದಾರೆ. ಈ ಆಶಯ ಈಡೇರಲು ಭಾರತ ಸರ್ಕಾರವು ಶ್ರೀಲಂಕಾ ಪ್ರಜೆಗಳಿಗೆ ನೆರವಾಗುತ್ತದೆ’ ಎಂದು ಹೇಳಿದೆ.

ಗೊಟಬಯ ಅವರು ದುಬೈಗೆ ತೆರಳಲು ಉದ್ದೇಶಿಸಿದ್ದರು. ಆದರೆ ಬಂಡಾರನಾಯಿಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವಿಐಪಿ ಸೇವೆಗಳನ್ನು ರದ್ದುಪಡಿಸಿ, ಸಾರ್ವಜನಿಕ ಕೌಂಟರ್​ನಲ್ಲಿ ತೆರಳಿಯೇ ಗೊಟಬಯ ಸಹ ವಿಮಾನ ಹತ್ತಬೇಕು ಎಂದು ಸೂಚಿಸಿದರು. ಜನರ ಜೊತೆಗೆ ಬೆರೆಯಲು ಹೆದರಿದ ಗೊಟಬಯ ಮಿಲಿಟರಿ ವಿಮಾನದಲ್ಲಿ ಮಾಲ್ಡೀವ್ಸ್​ಗೆ ತೆರಳಿದರು. ಶ್ರೀಲಂಕಾದ ಜನರು ಅಲ್ಲಿನ ರಾಜಕಾರಿಣಿಗಳೊಂದಿಗೆ ಪ್ರಯಾಣ ಮಾಡಲು ಅಸಹ್ಯ ಪಟ್ಟುಕೊಂಡು ಪ್ರತಿಭಟಿಸುತ್ತಿದ್ದಾರೆ. ಇದು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಮಾಲ್ಡೀವ್ಸ್​ಗೆ ತೆರಳುವ ಮೊದಲು ಭಾರತದಲ್ಲಿ ಲ್ಯಾಂಡ್ ಆಗಲು ತಮ್ಮ ವಿಮಾನಕ್ಕೆ ಅನುಮತಿ ಪಡೆದುಕೊಳ್ಳಲು ಗೊಟಬಯ ಯತ್ನಿಸಿದರು. ಆದರೆ ಭಾರತದಿಂದ ಪ್ರತಿಕ್ರಿಯೆ ಬರುವುದು ತಡವಾದ ಕಾರಣ ಮಾಲ್ಡೀವ್ಸ್​ಗೆ ತೆರಳಲು ನಿರ್ಧರಿಸಿದರು. ವಿಮಾನ ಏರುವ ಮೊದಲು ಜಲಮಾರ್ಗದಲ್ಲಿ ದೇಶ ತೊರೆಯಲು ಗೊಟಬಯ ಚಿಂತನೆ ನಡೆಸಿದ್ದರು. ಅಧ್ಯಕ್ಷರ ಸಿಬ್ಬಂದಿ ಸೂಟ್​ಕೇಸ್​ಗಳನ್ನು ಯುದ್ಧನೌಕೆಗೆ ಸ್ಥಳಾಂತರಿಸುವ ವಿಡಿಯೊ ತುಣುಕು ವೈರಲ್ ಆಗಿತ್ತು.

ಶ್ರೀಲಂಕಾದ ಹಣಕಾಸು ಸಚಿವರಾಗಿದ್ದ ಗೊಟಬಯ ಅವರ ಸೋದರ ಬಾಸಿಲ್ ರಾಜಪಕ್ಸ ಅಮೆರಿಕ ಪೌರತ್ವವನ್ನೂ ಹೊಂದಿದ್ದಾರೆ. ಕಳೆದ ಮಂಗಳವಾರ ದುಬೈಗೆ ತೆರಳಲು ಅವರು ವಿಫಲ ಯತ್ನ ನಡೆಸಿದರು. ‘ಬಾಸಿಲ್ ವಿಮಾನ ಹತ್ತಲು ಹಲವು ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದರು. ಜನರು ರಾಜಕಾರಿಣಿಗಳ ಬಗ್ಗೆ ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ. ಪ್ರಯಾಣಿಕರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಬಾಸಿಲ್ ಹೆದರಿ, ವಿಮಾನ ನಿಲ್ದಾಣದಿಂದ ಹೊರಗೆ ಹೋದರು’ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದರು.

Published On - 7:38 am, Wed, 13 July 22