ಚಿಲಿಯಲ್ಲಿ ಪತ್ತೆಯಾಯ್ತು ಡೈನೋಸಾರ್‌ ಪ್ರಭೇದದ ಪಳೆಯುಳಿಕೆ; ಥೇಟ್​ ಕತ್ತಿಯಂತೆ ಭಾಸವಾಗ್ತಿದೆ ಸ್ಟೆಗೊರೊಸ್ ಎಲೆಂಗಸ್ಸೆನ್​ನ ಬಾಲ

| Updated By: preethi shettigar

Updated on: Dec 07, 2021 | 3:15 PM

ಚಿಲಿಯ ಸಂಶೋಧಕರು ಡೈನೋಸಾರ್‌ಗಳ ಪ್ರಭೇದಕ್ಕೆ ಸೇರಿದ ಆಂಕೈಲೋಸಾರ್‌ ಎಂಬ ಹೊಸ ಜಾತಿಯ ಪ್ರಾಣಿ ಬಗ್ಗೆ ಪ್ರಸ್ತುತಪಡಿಸಿದ್ದಾರೆ. ಸ್ಟೆಗೊರೊಸ್ ಎಲೆಂಗಸ್ಸೆನ್ ಎಂದು ಈ ಪ್ರಾಣಿಗೆ ಹೆಸರಿಟ್ಟಿದ್ದು, ಈ ಪ್ರಾಣಿ ಮೈ ತುಂಬಾ ಆಯುಧಗಳನ್ನು ಹೊಂದಿದಂತೆ ಕಾಣುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.

ಚಿಲಿಯಲ್ಲಿ ಪತ್ತೆಯಾಯ್ತು ಡೈನೋಸಾರ್‌ ಪ್ರಭೇದದ ಪಳೆಯುಳಿಕೆ; ಥೇಟ್​ ಕತ್ತಿಯಂತೆ ಭಾಸವಾಗ್ತಿದೆ ಸ್ಟೆಗೊರೊಸ್ ಎಲೆಂಗಸ್ಸೆನ್​ನ ಬಾಲ
ಸ್ಟೆಗೊರೊಸ್ ಎಲೆಂಗಸ್ಸೆನ್
Follow us on

ಪ್ರಾಚೀನ ಕಾಲದ ಅದೆಷ್ಟೋ ಜೀವಿಗಳು ಇಂದು ಕೇವಲ ಪಳೆಯುಳಿಕೆಗಳಾಗಿ ನಮ್ಮ ನಡುವೆ ಇದೆ. ವಿಶಿಷ್ಟವಾದ ಮೈಬಣ್ಣ, ಆಕರ್ಷಕ ನೋಟ, ಭಯಾನಕ ಅವತಾರವನ್ನು ಹೊತ್ತ ಅದೆಷ್ಟೋ ಜೀವಸಂಕುಲಗಳು ಇಂದು ಕಣ್ಮರೆಯಾಗಿದೆ. ಆದರೆ ಇಂತಹ ಅಪರೂಪದ ಪ್ರಾಣಿಗಳ ಮೇಲಿನ ಅಧ್ಯಯನಗಳು ಮಾತ್ರ ಇನ್ನು ನಿಂತಿಲ್ಲ. ಈ ಅಧ್ಯಯನದಿಂದಲೇ ಅದೆಷ್ಟೋ ಅಪರೂಪದ ಜೀವಿಗಳ ದರ್ಶನವಾಗುತ್ತಿದೆ. ಡೈನೋಸಾರ್ ( dinosaur) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇದರ ತಳಿ ಇಲ್ಲವಾಗಿದ್ದರೂ, ಸಿನಿಮಾಗಳಿಂದ ಹಿಡಿದು ಮಕ್ಕಳು ನೋಡುವ ಕಾರ್ಟೂನ್​​ವರೆಗೆ ಈ ಪ್ರಾಣಿ ಚಿರಪರಿಚಿತ. ಇದೀಗ ಅಂಥ ಡೈನೋಸಾರ್ ಪ್ರಭೇದಕ್ಕೆ ಸೇರಿದ ಪ್ರಾಣಿಯ ಪಳೆಯುಳಿಕೆಯೊಂದು ಪತ್ತೆಯಾಗಿದೆ.

ಚಿಲಿಯ ಸಂಶೋಧಕರು ಡೈನೋಸಾರ್‌ಗಳ ಪ್ರಭೇದಕ್ಕೆ ಸೇರಿದ ಆಂಕೈಲೋಸಾರ್‌ ಎಂಬ ಹೊಸ ಜಾತಿಯ ಪ್ರಾಣಿ ಬಗ್ಗೆ ಪ್ರಸ್ತುತಪಡಿಸಿದ್ದಾರೆ. ಸ್ಟೆಗೊರೊಸ್ ಎಲೆಂಗಸ್ಸೆನ್ (Stegouros elengassen) ಎಂದು ಈ ಪ್ರಾಣಿಗೆ ಹೆಸರಿಟ್ಟಿದ್ದು, ಈ ಪ್ರಾಣಿ ಮೈ ತುಂಬಾ ಆಯುಧಗಳನ್ನು ಹೊಂದಿದಂತೆ ಕಾಣುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.

ಸ್ಟೆಗೊರೊಸ್ ಎಲೆಂಗಸ್ಸೆನ್ ಒಂದು ಶಸ್ತ್ರಸಜ್ಜಿತ ಮಾದರಿಯ ಬಾಲವನ್ನು ಹೊಂದಿರುವ ಡೈನೋಸಾರ್ ಪ್ರಭೇದಕ್ಕೆ ಸೇರಿದ ಪ್ರಾಣಿ. ಸ್ಟೆಗೊರೊಸ್ ಎಂಬ ಪದ ಗ್ರೀಕ್‌ನಿಂದ ಬಂದಿದೆ. ಸ್ಟೆಗೊ ಎಂದರೆ ಛಾವಣಿ, ರೊಸ್ ಎಂದರೆ ಬಾಲ ಎಂಬ ಅರ್ಥ ಸಿಗುತ್ತದೆ. ಒಟ್ಟಾರೆ ಸ್ಟೆಗೊರೊಸ್ ಎಲೆಂಗಸ್ಸೆನ್ ಅನ್ನು ಶಸ್ತ್ರಸಜ್ಜಿತ ಪ್ರಾಣಿ ಎಂದು ಕರೆಯಲಾಗುತ್ತದೆ.

ಸ್ಟೆಗೊರೊಸ್ ಎಲೆಂಗಸ್ಸೆನ್ ಜೀವಿಯು 71.7 ಮಿಲಿಯನ್ ಮತ್ತು 74.9 ಮಿಲಿಯನ್ ವರ್ಷಗಳ ಹಿಂದಿನ ಅವಧಿಯಲ್ಲಿ ಕಂಡು ಬಂದಿದ್ದು, ಡೈನೋಸಾರ್‌ಗಿಂತ ಭಿನ್ನವಾಗಿದೆ. ಸ್ಟೆಗೊರೊಸ್ ಎಲೆಂಗಸ್ಸೆನ್ 6.5 ಅಡಿ ಉದ್ದ ಇತ್ತು ಎಂದು ಅಂದಾಜಿಸಲಾಗಿದೆ. ಈ ಜೀವಿಯು ನೋಡಲು ಭಯಾನಕವಾಗಿದ್ದರೂ ನಾಲ್ಕು ಕಾಲುಗಳಿಂದ ನಿಧಾನಕ್ಕೆ ಚಲಿಸುತ್ತ ಕೇವಲ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿತ್ತು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಬೇರೆ ಪ್ರಾಣಿಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಈ ಪ್ರಾಣಿಯು ತನ್ನ ಬಾಲವನ್ನು ಬಳಸುತ್ತಿತ್ತು. ಇದರ ಬಾಲವು ವಿಶಿಷ್ಟ ಲಕ್ಷಣಗಳಿಂದ ಕೂಡಿದ್ದು, ಕತ್ತಿಯಂತೆ ಹೊಲುವ ಆಕಾರ ಇದರ ಬಾಲದ ಮೇಲಿದೆ. ಆಸ್ಟಿಯೋಡರ್ಮ್ಸ್ ಎಂದು ಕರೆಯಲ್ಪಡುವ ಎಲುಬಿನ ರಚನೆಗಳು ಕೂಡ ಈ ಪ್ರಾಣಿಯ ಮೈಮೆಲಿದೆ ಎಂದು ಚಿಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಅಧ್ಯಯನದ ಸಹ ಲೇಖಕ ಅಲೆಕ್ಸಾಂಡರ್ ವರ್ಗಾಸ್ ಹೇಳಿದ್ದಾರೆ.

ಬಾಲದ ರಚನೆಯ ಆಧಾರದ ಮೇಲೆ ಈ ಪ್ರಭೇದವನ್ನು ಡೈನೋಸಾರ್‌ಗಳ ಆಂಕೈಲೋಸಾರ್ ಕುಟುಂಬಕ್ಕೆ ಸೇರಿದೆ ಎಂದು ಸಂಶೋಧನಾ ತಂಡ ಗುರುತಿಸಿದೆ. ಅಧ್ಯಯನದ ಪ್ರಕಾರ ಶಸ್ತ್ರಸಜ್ಜಿತ ಡೈನೋಸಾರ್‌ಗಳು ವಿಶೇಷವಾದ ಬಾಲ, ಶಸ್ತ್ರಾಸ್ತ್ರಗಳ ವಿಕಸನಕ್ಕೆ ಹೆಸರುವಾಸಿಯಾಗಿದೆ. ದಕ್ಷಿಣ ಗೊಂಡ್ವಾನಾದ ಶಸ್ತ್ರಸಜ್ಜಿತ ಡೈನೋಸಾರ್‌ಗಳು ಅಪರೂಪ ಮತ್ತು ನಿಗೂಢವಾಗಿವೆ. ಇನ್ನು 201.3 ಮಿಲಿಯನ್​ನಿಂದ 145 ಮಿಲಿಯನ್ ವರ್ಷಗಳ ಹಿಂದೆ ಜುರಾಸಿಕ್ ಅವಧಿಯಲ್ಲಿ ಆಂಕೈಲೋಸಾರ್‌ ಪ್ರಭೇದಗಳಲ್ಲಿ ಬದಲಾವಣೆಗಳಾಗಿಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ:
ಅಫ್ಘಾನಿಸ್ತಾನದಿಂದ ಬಂದ ಅಮೆರಿಕದ ಮಿಲಿಟರಿ ವಿಮಾನದ ಚಕ್ರದ ಸುತ್ತ ಅಂಟಿತ್ತು ಮನುಷ್ಯರ ಪಳೆಯುಳಿಕೆ!

ಕಾರವಾರದ ಕಡಲತೀರದಲ್ಲಿ ಅಪರೂಪದ ಗ್ರೀನ್ ಸೀ ಆಮೆ ಕಳೆಬರ ಪತ್ತೆ