ನಾವು ಫ್ರೆಂಡ್ಸ್; ಭಾರತ ಸೇರಿದಂತೆ 5 ದೇಶಗಳಿಗೆ ಹಾರ್ಮುಜ್ ಪ್ರವೇಶಕ್ಕೆ ಇರಾನ್ ಅನುಮತಿ

ಜಗತ್ತಿನ ಪ್ರಮುಖ ಹಡಗು ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಇರಾನ್ ಅನುಮತಿ ನೀಡದ ಕಾರಣದಿಂದ ಅನೇಕ ದೇಶಗಳಲ್ಲಿ ಇಂಧನ ಬಿಕ್ಕಟ್ಟು ಎದುರಾಗಿತ್ತು. ಭಾರತದ ಪ್ರಧಾನಿ ಮೋದಿ ಇರಾನ್ ಜೊತೆ ಮಾತುಕತೆ ನಡೆಸಿ ಭಾರತದ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಲು ತಾತ್ಕಾಲಿಕ ಅನುಮತಿ ಪಡೆದಿದ್ದರು. ಇದೀಗ ಭಾರತವನ್ನು ತಮ್ಮ ಸ್ನೇಹಿತ ಎಂದು ಕರೆದಿರುವ ಇರಾನ್ ಭಾರತ ಸೇರಿದಂತೆ ಒಟ್ಟು 5 ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯ ಪ್ರವೇಶಕ್ಕೆ ಅನುಮತಿ ನೀಡಿದೆ.

ನಾವು ಫ್ರೆಂಡ್ಸ್; ಭಾರತ ಸೇರಿದಂತೆ 5 ದೇಶಗಳಿಗೆ ಹಾರ್ಮುಜ್ ಪ್ರವೇಶಕ್ಕೆ ಇರಾನ್ ಅನುಮತಿ
Indian Ship Crossed Hormuz
Image Credit source: PTI

Updated on: Mar 26, 2026 | 11:35 AM

ಟೆಹ್ರಾನ್, ಮಾರ್ಚ್ 26: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ಮಧ್ಯೆ ಇರಾನ್ ಭಾರತಕ್ಕೆ ಗುಡ್ ನ್ಯೂಸ್ ನೀಡಿದೆ. ಇಂಧನ ಹಡಗುಗಳ ಸಾಗಾಟಕ್ಕೆ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯೊಳಗೆ (Strait of Hormuz) ಪ್ರವೇಶಿಸಲು ಭಾರತಕ್ಕೆ ಅನುಮತಿ ನೀಡಲಾಗಿದೆ. ವಿಶ್ವದ ತೈಲದ ಐದನೇ ಒಂದು ಭಾಗದಷ್ಟು ಹಡಗುಗಳ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿರುವ ಪರ್ಷಿಯನ್ ಕೊಲ್ಲಿಯ ಕಿರಿದಾದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಕಳೆದ ತಿಂಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗಿನಿಂದ ಇರಾನ್ ಬಂದ್ ಮಾಡಿತ್ತು.

ಇದೀಗ ಭಾರತ ಸೇರಿದಂತೆ ಇರಾನ್​ನ 5 ಸ್ನೇಹಿತ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಇರಾನಿನ ರಾಜ್ಯ ಟಿವಿಯೊಂದಿಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, “ಹಲವು ಹಡಗುಗಳ ಮಾಲೀಕರು ಅಥವಾ ಈ ಹಡಗುಗಳನ್ನು ಹೊಂದಿರುವ ದೇಶಗಳು ನಮ್ಮನ್ನು ಸಂಪರ್ಕಿಸಿ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಅನುಮತಿ ಪಡೆದಿದ್ದವು. ಅವರಿಗೆ ನಾವು ಸುರಕ್ಷಿತ ಮಾರ್ಗವನ್ನು ಒದಗಿಸಿದ್ದೇವೆ. ನಾವು ಸ್ನೇಹಪರ ರಾಷ್ಟ್ರಗಳೆಂದು ಪರಿಗಣಿಸುವ ಕೆಲವು ದೇಶಗಳಿಗೆ ಈ ಜಲಮಾರ್ಗವನ್ನು ಬಳಸಲು ಅನುಮತಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

“ಚೀನಾ, ರಷ್ಯಾ, ಪಾಕಿಸ್ತಾನ, ಇರಾಕ್ ಮತ್ತು ಭಾರತದ ಎರಡು ಹಡಗುಗಳು ಕೆಲವು ರಾತ್ರಿಗಳ ಹಿಂದೆ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋದವು. ಇನ್ನೂ ಕೆಲವು ದೇಶಗಳು ಕೂಡ ನಮ್ಮೊಂದಿಗೆ ಮಾತನಾಡಿ, ನಮ್ಮೊಂದಿಗೆ ಸಮನ್ವಯ ಸಾಧಿಸಿವೆ. ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ದೇಶಗಳಿಗೆ ಈ ಜಲಮಾರ್ಗ ಬಳಸಲು ಯಾವುದೇ ಅಡ್ಡಿಪಡಿಸುವುದಿಲ್ಲ. ಆದರೆ, ಶತ್ರು ದೇಶಗಳಿಗೆ ಹಾರ್ಮುಜ್ ಜಲಸಂಧಿಯೊಳಗೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಬಿಕ್ಕಟ್ಟಿನಲ್ಲಿ ಪಾತ್ರವಹಿಸುವ ಅಮೆರಿಕ, ಇಸ್ರೇಲ್ ಮತ್ತು ಕೆಲವು ಗಲ್ಫ್ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಅನುಮತಿ ನೀಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಇರಾನ್ ನನ್ನನ್ನು ಸುಪ್ರೀಂ ಲೀಡರ್ ಆಗಿ ಮಾಡಲು ಬಯಸಿತ್ತು, ನಾನೇ ಒಪ್ಪಲಿಲ್ಲ; ಟ್ರಂಪ್ ಹೊಸ ವರಸೆ

ಗಮನಿಸಬೇಕಾದ ವಿಷಯವೆಂದರೆ ಈ ವಾರದ ಆರಂಭದಲ್ಲಿ ಇರಾನ್ ಪಾಕಿಸ್ತಾನಕ್ಕೆ ಹೋಗುವ ಕಂಟೇನರ್ ಹಡಗನ್ನು ಹಾರ್ಮುಜ್ ಜಲಸಂಧಿಯನ್ನು ದಾಟದಂತೆ ತಡೆದಿತ್ತು. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪ್ರಕಾರ, ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಿಂದ ಕರಾಚಿ ಕಡೆಗೆ ಪ್ರಯಾಣಿಸುತ್ತಿದ್ದ SELEN ಎಂಬ ಹಡಗು ಸಾಗಾಟಕ್ಕೆ ಅನುಮತಿ ಪಡೆಯದ ಕಾರಣದಿಂದ ಹಾರ್ಮುಜ್ ಜಲಮಾರ್ಗದ ಪ್ರವೇಶದ್ವಾರದಲ್ಲಿ ವಾಪಾಸ್ ತೆರಳಬೇಕಾಯಿತು.

ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?:

ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಕಾರಿಡಾರ್‌ಗಳಲ್ಲಿ ಒಂದಾಗಿದೆ. ಇದು ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಕುವೈತ್, ಇರಾಕ್, ಬಹ್ರೇನ್ ಮತ್ತು ಇರಾನ್‌ನಂತಹ ದೇಶಗಳಿಂದ ಕಚ್ಚಾ ತೈಲ ಮತ್ತು ಎಲ್‌ಎನ್‌ಜಿ ರಫ್ತಿಗೆ ಅನುಕೂಲ ಮಾಡಿಕೊಡುತ್ತದೆ. ಈ ಮಾರ್ಗದ ಮೂಲಕ ಸಂಚರಿಸುವ ಪ್ರಮುಖ ಗ್ರಾಹಕರಲ್ಲಿ ಭಾರತ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿವೆ. ಭಾರತವು ತನ್ನ ಕಚ್ಚಾ ತೈಲದ ಸುಮಾರು 40 ಪ್ರತಿಶತ ಮತ್ತು ಅದರ ಎಲ್‌ಎನ್‌ಜಿಯ ಶೇ. 54ಕ್ಕಿಂತ ಹೆಚ್ಚು ಈ ಜಲಮಾರ್ಗದ ಮೂಲಕ ಆಮದು ಮಾಡಿಕೊಳ್ಳುತ್ತದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us