Suez canal unblocked: ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಎವರ್ ಗಿವನ್ ಹಡಗು ಮುಕ್ತ ಮುಕ್ತ ಮುಕ್ತ
ಈಜಿಪ್ಟ್ನ ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಎವರ್ ಗ್ರೀನ್ ಕಂಪೆನಿಯ ಹಡಗು ಎವರ್ ಗಿವನ್ ಮಾರ್ಚ್ 29ರಂದು ಮತ್ತೆ ಸಂಚಾರ ಆರಂಭಿಸಿದೆ. ಈ ಮೂಲಕ ದಟ್ಟಣೆ ನಿವಾರಣೆಗೆ ದಾರಿಯಾಗಿದೆ.
ಕೈರೋ: ಈಜಿಪ್ಟ್ನ ಸೂಯೆಜ್ ಕಾಲುವೆಯಲ್ಲಿ ಮಾರ್ಚ್ 23ರಿಂದ ಸಂಚಾರ ದಟ್ಟಣೆಗೆ ಕಾರಣವಾಗಿದ್ದ ದೈತ್ಯಾಕಾರದ ಕಂಟೇನರ್ ಹಡಗು, ಎವರ್ಗ್ರೀನ್ ಕಂಪೆನಿಯ ಎವರ್ ಗಿವನ್ ಅಂತೂ ಮಾರ್ಚ್ 29ರಂದು ಮತ್ತೆ ತೇಲುತ್ತಾ ಸಾಗಿದೆ. ಈಜಿಪ್ಷಿಯನ್ ಟಿವಿ ಮತ್ತು ಹಡಗಿನ ಟ್ರ್ಯಾಕರ್ ಎವರ್ ಗಿವನ್ ಹಡಗು ಕಾಲುವೆಯ ಮಧ್ಯದಲ್ಲಿ ಇರುವುದನ್ನು ತೋರಿಸಿವೆ. ಮರಳಿನಲ್ಲಿ ಹೂತಿದ್ದ ಬೃಹತ್ ಹಡಗು ಮತ್ತೆ ಮುಂದೆ ಸಾಗಲು ಸಹಾಯ ಮಾಡಿದ್ದು ದೊಡ್ಡ ಮಟ್ಟದ ಗಾಳಿ, ಟಗ್ಬೋಟ್ಗಳು.
ಇದಕ್ಕೂ ಮುನ್ನ ದಿನದ ಆರಂಭದಲ್ಲಿ ಸೂಯೆಜ್ ಕಾಲುವೆ ಪ್ರಾಧಿಕಾರವು (ಎಸ್ಸಿಎ), ಎವರ್ ಗಿವನ್ ಹಡಗು ಭಾಗಶಃ ಮತ್ತೆ ತೇಲುತ್ತಿದೆ ಹಾಗೂ ಸರಿಯಾದ ದಿಕ್ಕಿನೆಡೆಗೆ ತಿರುಗಿದೆ ಎಂದು ತಿಳಿಸಿತ್ತು. ವಿಶ್ವದ ಅತ್ಯಂತ ದಟ್ಟಣೆಯ ಹಡಗುಗಳ ಮಾರ್ಗವು ಕಳೆದ ಒಂದು ವಾರದಿಂದ ತಡೆಯಾಗಿದ್ದ ಕಾರಣಕ್ಕೆ ಹಾಗತಿಕ ವ್ಯಾಪಾರ- ವಹಿವಾಟಿನ ಮೇಲೆ ಪ್ರಭಾವ ಆಗಿತ್ತು.
ಇನ್ನು ಸೂಯೆಜ್ ಕಾಲುವೆಯನ್ನು ಸಂಚಾರಕ್ಕೆ ಮುಕ್ತ ಮಾಡುವುದಾಗಿ ಪ್ರಾಧಿಕಾರವು ತಿಳಿಸಿದೆ. ಈ ಬಗ್ಗೆ ಸೂಯೆಜ್ ಪ್ರಾಧಿಕಾರದ ಮುಖ್ಯಸ್ಥರಾದ ಅಡ್ಮಿರಲ್ ಒಸಾಮ ರಬೀ ಘೋಷಣೆ ಮಾಡಿದ್ದಾರೆ. ಕಾಲುವೆ ಸಮೀಪದಲ್ಲಿ 450ಕ್ಕೂ ಹೆಚ್ಚು ಹಡಗುಗಳು ಈಗಾಗಲೇ ಕಾಯುತ್ತಿವೆ. ಈ ರೀತಿ ಉಳಿದುಹೋದ ಕಾರಣಕ್ಕೆ ಜಾಗತಿಕ ಮಟ್ಟದಲ್ಲೇ ಪೂರೈಕೆ ಜಾಲಕ್ಕೆ ಪೆಟ್ಟು ಬಿದ್ದಿತ್ತು. ಜಾಗತಿಕ ವ್ಯಾಪಾರ- ವ್ಯವಹಾರಗಳ ಪೈಕಿ ಶೇ 12ರಷ್ಟು ಇದೇ ಮಾರ್ಗದಲ್ಲಿ ಆಗುತ್ತದೆ ಎಂಬುದು ಇಲ್ಲಿ ಉಲ್ಲೇಖಾರ್ಹವಾದ ಸಂಗತಿ.
1312 ಅಡಿ ಉದ್ದ ಹಾಗೂ 193 ಅಡಿ ಅಗಲದ ಎವರ್ ಗಿವನ್ ಹಡಗು 2,00,000 ಟನ್ ತೂಕದ್ದು. ಪನಾಮದಲ್ಲಿ ನೋಂದಣಿ ಆಗಿರುವ ಈ ಹಡಗನ್ನು ತೈವಾನ್ ಮೂಲದ ಹಡಗು ಕಂಪೆನಿ ನಿರ್ವಹಣೆ ಮಾಡುತ್ತಿದೆ. ಎವರ್ ಗಿವನ್ ಹಡಗು ಮತ್ತೆ ತೇಲುತ್ತಿದ್ದಂತೆ ಸಂತೋಷದ ಉದ್ಗಾರಗಳು ಮತ್ತು ಸಂಭ್ರಮಾಚರಣೆಗಳು ಕಂಡುಬಂದವು. ಸೂಯೆಜ್ ಕಾಲುವೆಯಲ್ಲಿ ಈ ಹಡಗು ಸಿಕ್ಕಿಹಾಕಿಕೊಂಡ ಮೇಲೆ ಕಚ್ಚಾ ತೈಲ ಬೆಲೆಯಲ್ಲೂ ಏರಿಕೆ ಆಗಿತ್ತು. ವಾಹನೋದ್ಯಮಕ್ಕೆ ಪೆಟ್ಟು ಬೀಳಬಹುದು ಎಂಬ ಆತಂಕ ಎದುರಾಗಿತ್ತು.
#BREAKING #Suez Canal Authority Reuters report, saying that the Ever Given vessel has successfully floated and entered the canal’s navigational watersection.#SuezCrisis #suezcanel #السفينة_الجانحة #قناة_السويس pic.twitter.com/GyITfb11Tq
— Daily News Egypt (@DailyNewsEgypt) March 29, 2021
ಇದನ್ನೂ ಓದಿ: ಸೂಯೆಜ್ ಕಾಲುವೆಯಲ್ಲಿ 1312 ಅಡಿ ಉದ್ದದ ಹಡಗಿನಿಂದ ಟ್ರಾಫಿಕ್ ಜಾಮ್; ದಿನಕ್ಕೆ 70 ಸಾವಿರ ಕೋಟಿ ರೂ. ನಷ್ಟ
ಇದನ್ನೂ ಓದಿ: Suez Canal Blockage: ಮುಂದಕ್ಕೆ ಚಲಿಸುತ್ತಿದೆ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿರುವ ದೈತ್ಯ ಹಡಗು
Published On - 8:15 pm, Mon, 29 March 21