ಪಾಕಿಸ್ತಾನದ ಒಂದು ಹನಿ ನೀರನ್ನು ಕಸಿದುಕೊಳ್ಳಲು ಸಹ ಭಾರತಕ್ಕೆ ಅವಕಾಶ ನೀಡುವುದಿಲ್ಲ: ಶೆಹಬಾಜ್ ಷರೀಫ್ ಎಚ್ಚರಿಕೆ
ಪಾಕಿಸ್ತಾನ(Pakistan)ದ ನೀರು ಕಸಿದುಕೊಂಡರೆ ಭಾರತಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಬೆದರಿಕೆ ಹಾಕಿದ್ದಾರೆ. ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಬೆದರಿಕೆ ಬಳಿಕ ಶೆಹಬಾಜ್ ಕೂಡ ಭಾರತದ ಬಗ್ಗೆ ಕಿಡಿಕಾರಿದ್ದಾರೆ.ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದ್ದಕ್ಕೆ ಕೋಪಗೊಂಡಿರುವ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತೊಮ್ಮೆ ಭಾರತದ ವಿರುದ್ಧ ವಿಷ ಕಾರಿದ್ದಾರೆ.

ಇಸ್ಲಾಮಾಬಾದ್, ಆಗಸ್ಟ್ 13: ಪಾಕಿಸ್ತಾನ(Pakistan)ದ ನೀರು ಕಸಿದುಕೊಂಡರೆ ಭಾರತಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಬೆದರಿಕೆ ಹಾಕಿದ್ದಾರೆ. ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಬೆದರಿಕೆ ಬಳಿಕ ಶೆಹಬಾಜ್ ಕೂಡ ಭಾರತದ ಬಗ್ಗೆ ಕಿಡಿಕಾರಿದ್ದಾರೆ. ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದ್ದಕ್ಕೆ ಕೋಪಗೊಂಡಿರುವ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮತ್ತೊಮ್ಮೆ ಭಾರತದ ವಿರುದ್ಧ ವಿಷ ಕಾರಿದ್ದಾರೆ. ಪಾಕಿಸ್ತಾನದ ಒಂದು ಹನಿ ನೀರನ್ನು ಸಹ ಕಸಿದುಕೊಳ್ಳಲು ಭಾರತಕ್ಕೆ ಅವಕಾಶ ನೀಡುವುದಿಲ್ಲ ಎಂದು ಶೆಹಬಾಜ್ ಷರೀಫ್ ಮಂಗಳವಾರ ಹೇಳಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ಭಾರತವು ಪಾಕಿಸ್ತಾನದ ವಿರುದ್ಧ ಹಲವಾರು ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಂಡಿತು, ಇದರಲ್ಲಿ 1960 ರ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದು ಕೂಡ ಸೇರಿದೆ. ಪಾಕಿಸ್ತಾನದ ಒಂದು ಹನಿ ನೀರನ್ನು ಸಹ ನೀವು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ ಎಂದು ಷರೀಫ್ ಹೇಳಿದ್ದಾರೆ.
ಭಾರತ ಅಂತಹ ಯಾವುದೇ ಕ್ರಮ ಕೈಗೊಂಡರೆ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸೋಮವಾರ, ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಸಿಂಧೂ ನದಿ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದನ್ನು ಸಿಂಧೂ ಕಣಿವೆ ನಾಗರಿಕತೆಯ ಮೇಲಿನ ದಾಳಿ ಎಂದು ಕರೆದರು ಮತ್ತು ಯುದ್ಧಕ್ಕೆ ಒತ್ತಾಯಿಸಿದರೆ, ಪಾಕಿಸ್ತಾನ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದ್ದರು.
ಮತ್ತಷ್ಟು ಓದಿ: ಸಿಂಧೂ ನದಿಗೆ ಭಾರತ ಡ್ಯಾಂ ನಿರ್ಮಿಸಿದರೆ ಬಾಂಬ್ ಹಾಕುತ್ತೇವೆ; ಅಮೆರಿಕದಲ್ಲಿ ಅಸೀಮ್ ಮುನೀರ್ ಬೆದರಿಕೆ
ಕಳೆದ ವಾರಾಂತ್ಯದಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್, ಫ್ಲೋರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನಿ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ, ಭಾರತ ನೀರು ಸರಬರಾಜನ್ನು ಅಡ್ಡಿಪಡಿಸಲು ಅಣೆಕಟ್ಟು ನಿರ್ಮಿಸಿದರೆ, ಪಾಕಿಸ್ತಾನ ಅದನ್ನು ಕ್ಷಿಪಣಿಗಳಿಂದ ನಾಶಪಡಿಸುತ್ತದೆ ಎಂದು ಮುನೀರ್ ಹೇಳಿದರು. ಪಾಕಿಸ್ತಾನಕ್ಕೆ ಕ್ಷಿಪಣಿಗಳ ಕೊರತೆಯಿಲ್ಲ ಎಂದು ಅವರು ಹೇಳಿದರು.
ಏತನ್ಮಧ್ಯೆ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಕೂಡ ವಿಷವನ್ನು ಕಾರುತ್ತಾ, ಮುಂದಿನ ಯುದ್ಧವು ಗಡಿಯಲ್ಲಿ ಅಲ್ಲ, ಭಾರತದೊಳಗೆ ನಡೆಯುತ್ತದೆ ಎಂದು ಹೇಳಿದರು ಭಾರತ ಅಣೆಕಟ್ಟು ನಿರ್ಮಿಸಿದರೆ, ಪಾಕಿಸ್ತಾನ ಅದನ್ನು ಕ್ಷಿಪಣಿಯಿಂದ ನಾಶಪಡಿಸುತ್ತದೆ ಎಂದು ಹೇಳಿದರು. ಪರಮಾಣು ದಾಳಿಯ ಬೆದರಿಕೆ ಹಾಕುತ್ತಾ, ನಾವು ಮುಳುಗುತ್ತಿದ್ದರೆ, ನಮ್ಮೊಂದಿಗೆ ಅರ್ಧದಷ್ಟು ಪ್ರಪಂಚವನ್ನು ಮುಳುಗಿಸುತ್ತೇವೆ ಎಂದು ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರದ ಸಿಂಧು ಗ್ರಾಮದ ಬಳಿಯ ಚೆನಾಬ್ ನದಿಯಲ್ಲಿ ನಿರ್ಮಿಸಲಾಗುವ ರಾಷ್ಟ್ರೀಯ ಜಲ ವಿದ್ಯುತ್ ಯೋಜನೆಗೆ ಭಾರತ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಿಂದ ಭಾರತ ನೀರನ್ನು ನಿಲ್ಲಿಸಬಹುದು ಮತ್ತು ಅದರ ಕೃಷಿ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಪಾಕಿಸ್ತಾನ ಭಯಪಡುತ್ತಿದೆ. ಆದಾಗ್ಯೂ, ಭಾರತದ ನಿಲುವು ಸ್ಪಷ್ಟವಾಗಿದೆ.
ಈ ಯೋಜನೆಯು ಅಂತಾರಾಷ್ಟ್ರೀಯ ಮಾನದಂಡಗಳಲ್ಲಿದೆ ಮತ್ತು ಭಾರತದ ನ್ಯಾಯವ್ಯಾಪ್ತಿಯಲ್ಲಿದೆ. ಭಾರತವು ಈಗಾಗಲೇ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳ ಮೇಲೆ ನಿಯಂತ್ರಣ ಹೊಂದಿದೆ ಮತ್ತು ಈಗ ಭಾರತ ಸಿಂಧೂ ಜಲಾನಯನ ಪ್ರದೇಶದ ಇತರ ನದಿಗಳ ಮೇಲೆ ಸಕ್ರಿಯವಾದರೆ, ಅದರ ನೀರಿನ ಬಿಕ್ಕಟ್ಟು ಗಂಭೀರವಾಗುತ್ತದೆ ಎಂಬ ಕಾರಣದಿಂದಾಗಿ ಪಾಕಿಸ್ತಾನದ ಕಳವಳ ಹೆಚ್ಚುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Wed, 13 August 25




