ಭಾರತದ ಮತದಾರರ ಗುರುತಿನ ಚೀಟಿ ವ್ಯವಸ್ಥೆಗೆ ಟ್ರಂಪ್ ಫಿದಾ! ಇಂಡಿಯನ್ ಮಾಡೆಲ್ ಉಲ್ಲೇಖಿಸಿ ‘ಸೇವ್ ಅಮೆರಿಕಾ ಆ್ಯಕ್ಟ್’ಗೆ ಒತ್ತಾಯ

ಅಮೆರಿಕದ ಮತದಾನ ವ್ಯವಸ್ಥೆಯಲ್ಲಿ ಕಡ್ಡಾಯ ಫೋಟೋ ಐಡಿ ಮತ್ತು ಪೌರತ್ವದ ದಾಖಲೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಚುನಾವಣಾ ವ್ಯವಸ್ಥೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ 64.6 ಕೋಟಿ ಮತದಾರರು ಮತ ಚಲಾಯಿಸಿದ್ದು, ಬಹುತೇಕ ಎಲ್ಲರೂ ಮಾನ್ಯ ಫೋಟೋ ಗುರುತಿನ ದಾಖಲೆ ಬಳಸಿದ್ದರು ಎಂದು ಟ್ರಂಪ್ ಹೇಳಿದ್ದಾರೆ.

ಭಾರತದ ಮತದಾರರ ಗುರುತಿನ ಚೀಟಿ ವ್ಯವಸ್ಥೆಗೆ ಟ್ರಂಪ್ ಫಿದಾ! ಇಂಡಿಯನ್ ಮಾಡೆಲ್ ಉಲ್ಲೇಖಿಸಿ ‘ಸೇವ್ ಅಮೆರಿಕಾ ಆ್ಯಕ್ಟ್’ಗೆ ಒತ್ತಾಯ
ಪ್ರಧಾನಿ ಮೋದಿ ಹಾಗೂ ಟ್ರಂಪ್ (ಸಂಗ್ರಹ ಚಿತ್ರ)
Image Credit source: PTI

Updated on: Aug 18, 2026 | 10:21 AM

ಮುಖ್ಯಾಂಶಗಳು

  • ಭಾರತದ ಮತದಾನ ವ್ಯವಸ್ಥೆ ಉಲ್ಲೇಖಿಸಿದ ಟ್ರಂಪ್
  • SAVE America Actಗೆ ಬೆಂಬಲ ಕೋರಿದ ಟ್ರಂಪ್
  • ಅಮೆರಿಕದಲ್ಲಿ ಮತದಾರರ ಐಡಿ ಚರ್ಚೆ ತೀವ್ರ

ನವದೆಹಲಿ, ಆಗಸ್ಟ್ 18: ಅಮೆರಿಕದಲ್ಲಿ ಮತದಾನಕ್ಕೆ ಕಡ್ಡಾಯ ಫೋಟೋ ಗುರುತಿನ ಚೀಟಿ ಹಾಗೂ ಮತದಾರರ ನೋಂದಣಿಗೆ ಪೌರತ್ವದ ದಾಖಲೆ ಅಗತ್ಯವಿರಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೊಮ್ಮೆ ಒತ್ತಾಯಿಸಿದ್ದಾರೆ. ತಮ್ಮ ಟ್ರೂಥ್ (Truth Social) ಪೋಸ್ಟ್‌ನಲ್ಲಿ ಭಾರತದ ಚುನಾವಣಾ ವ್ಯವಸ್ಥೆಯನ್ನು ಉಲ್ಲೇಖಿಸಿರುವ ಟ್ರಂಪ್, ಅಮೆರಿಕದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸುವ ‘ಸೇವ್ ಅಮೆರಿಕಾ ಆ್ಯಕ್ಟ್ (SAVE America Act) ಜಾರಿಗೆ ತರಲು ಅಮೆರಿಕ ಸಂಸತ್​​ಗೆ ಕರೆ ನೀಡಿದ್ದಾರೆ.

ಭಾರತದ ಕಳೆದ ಲೋಕಸಭಾ ಚುನಾವಣೆಯ ಉದಾಹರಣೆ ನೀಡಿರುವ ಟ್ರಂಪ್, ಸುಮಾರು 64.6 ಕೋಟಿ ಮತದಾರರು ಮತ ಚಲಾಯಿಸಿದ್ದು, ಶೇಕಡಾ ಒಂದಕ್ಕಿಂತಲೂ ಕಡಿಮೆ ಮತದಾರರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದರು ಎಂದು ಹೇಳಿದ್ದಾರೆ. ಅಲ್ಲದೆ, ಮತದಾರರು ಮಾನ್ಯ ಫೋಟೋ ಗುರುತಿನ ದಾಖಲೆ ಹೊಂದಿದ್ದರು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಟ್ರಂಪ್ ಪೋಸ್ಟ್


ಟ್ರಂಪ್ ಅವರ ಪ್ರಕಾರ ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಅಮೆರಿಕದ ಚುನಾವಣೆಯಲ್ಲಿ ಮಾನ್ಯ ಫೋಟೋ ಐಡಿ ಇಲ್ಲದೆ ಹೇಗೆ ಮತದಾನ ನಡೆಯುತ್ತದೆ ಎಂಬ ಪ್ರಶ್ನೆಯನ್ನು ಅಮೆರಿಕದ ಆಡಳಿತದ ಮುಂದಿಟ್ಟಿದ್ದರು. ಈ ವಿಚಾರವನ್ನು ಉಲ್ಲೇಖಿಸಿರುವ ಟ್ರಂಪ್, ಅಮೆರಿಕದಲ್ಲೂ ಮತದಾರರ ಗುರುತನ್ನು ಖಚಿತಪಡಿಸುವ ವ್ಯವಸ್ಥೆ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಸೇವ್ ಅಮೆರಿಕಾ ಆ್ಯಕ್ಟ್ (SAVE America Act) ಎಂದರೇನು?

ಅಮೆರಿಕದ ಮತದಾರರ ಅರ್ಹತೆಯನ್ನು ರಕ್ಷಿಸುವ ಮಸೂದೆ (Safeguard American Voter Eligibility (SAVE) Act) ಅಮೆರಿಕದ ಫೆಡರಲ್ ಚುನಾವಣೆಗಳಲ್ಲಿ ಮತದಾರರ ಅರ್ಹತೆಯನ್ನು ಮತ್ತಷ್ಟು ಕಟ್ಟುನಿಟ್ಟಾಗಿಸುವ ಉದ್ದೇಶ ಹೊಂದಿರುವ ಮಸೂದೆಯಾಗಿದೆ. ಮತದಾರರು ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅಮೆರಿಕದ ಪೌರತ್ವದ ಪುರಾವೆ ನೀಡಬೇಕು ಹಾಗೂ ಫೆಡರಲ್ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಮಾನ್ಯ ಗುರುತಿನ ದಾಖಲೆ ತೋರಿಸಬೇಕು ಎಂಬುದು ಮಸೂದೆಯ ಪ್ರಮುಖ ಅಂಶವಾಗಿದೆ.

ಮಸೂದೆಯು ಮತದಾರರ ಪಟ್ಟಿಗಳಿಂದ ಅಮೆರಿಕದ ನಾಗರಿಕರಲ್ಲದವರ ಹೆಸರುಗಳನ್ನು ತೆಗೆದುಹಾಕಲು ರಾಜ್ಯಗಳಿಗೆ ನಿರ್ದೇಶನ ನೀಡುವ ಪ್ರಸ್ತಾವವನ್ನೂ ಒಳಗೊಂಡಿದೆ.

ಅಂಚೆ ಮತದಾನದ ಮೇಲೆ ನಿರ್ಬಂಧ ವಿಧಿಸುವ ಪ್ರಸ್ತಾವ

ಅಂಚೆ ಮತದಾನದ ಮೇಲೂ ನಿರ್ಬಂಧ ವಿಧಿಸುವ ಪ್ರಸ್ತಾವವಿದೆ. ಅನಾರೋಗ್ಯ, ಅಂಗವೈಕಲ್ಯ, ಮಿಲಿಟರಿ ಸೇವೆ ಅಥವಾ ಪ್ರಯಾಣದಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅಂಚೆ ಮತದಾನಕ್ಕೆ ಅವಕಾಶ ನೀಡುವ ಉದ್ದೇಶವನ್ನು ಮಸೂದೆ ಹೊಂದಿದೆ ಎಂದು ಶ್ವೇತಭವನ ಹೇಳಿದೆ.

ಭಾರತದ ಚುನಾವಣಾ ವ್ಯವಸ್ಥೆಗೆ ಟ್ರಂಪ್ ಮೆಚ್ಚುಗೆ

ಭಾರತದ ಚುನಾವಣಾ ವ್ಯವಸ್ಥೆಯನ್ನು ಉಲ್ಲೇಖಿಸಿರುವ ಟ್ರಂಪ್ ಅವರ ನಿಲುವಿಗೆ ಅಮೆರಿಕದ ಭಾರತದ ರಾಯಭಾರಿ ಸೆರ್ಗಿಯೋ ಗೋರ್ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತದ 2024ರ ಲೋಕಸಭಾ ಚುನಾವಣೆಯನ್ನು ಮತದಾರರ ಗುರುತಿನ ದೃಢೀಕರಣದ ಉದಾಹರಣೆಯಾಗಿ ಪ್ರಸ್ತಾಪಿಸಿರುವ ಅವರು, ಭಾರತದಲ್ಲಿ ಕೋಟ್ಯಂತರ ಮತದಾರರಿಗೆ ಗುರುತಿನ ದಾಖಲೆ ಕಡ್ಡಾಯವಾಗಿತ್ತು ಎಂದು ಹೇಳಿದ್ದಾರೆ.

ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳಲ್ಲಿ ಮತದಾರರ ಗುರುತನ್ನು ಬಯೋಮೆಟ್ರಿಕ್ ವ್ಯವಸ್ಥೆಯೊಂದಿಗೆ ಜೋಡಿಸಲಾಗಿದೆ ಎಂದು ಶ್ವೇತಭವನ ಕೂಡ ಹೇಳಿದೆ. ಅಮೆರಿಕದ ವ್ಯವಸ್ಥೆಯಲ್ಲಿ ಪೌರತ್ವದ ಸ್ವಯಂ ಘೋಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಆಡಳಿತವು ಹೋಲಿಕೆ ಮಾಡಿದೆ.

ಮಸೂದೆಗೆ ವಿರೋಧವೂ ಇದೆ!

SAVE Act ನಿಂದ ಚುನಾವಣಾ ಅಕ್ರಮಗಳನ್ನು ತಡೆಯಬಹುದು ಮತ್ತು ಚುನಾವಣಾ ವ್ಯವಸ್ಥೆಯ ಮೇಲಿನ ವಿಶ್ವಾಸ ಹೆಚ್ಚಲಿದೆ ಎಂದು ಅದರ ಬೆಂಬಲಿಗರು ವಾದಿಸುತ್ತಿದ್ದಾರೆ. ಆದರೆ, ಮತದಾನಕ್ಕೆ ಕಠಿಣ ಗುರುತಿನ ದಾಖಲೆ ಕಡ್ಡಾಯಗೊಳಿಸುವುದರಿಂದ ಅಗತ್ಯ ದಾಖಲೆಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗದ ಅರ್ಹ ಮತದಾರರಿಗೆ ತೊಂದರೆಯಾಗಬಹುದು ಎಂದು ವಿರೋಧಿಸುವವರು ಆತಂಕ ವ್ಯಕ್ತಪಡಿಸಿದ್ದಾರೆ.

ಜನವರಿ 29ರಂದು ಮಸೂದೆ ಮಂಡನೆಯಾಗಿದ್ದು, ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಅಂಗೀಕಾರಗೊಂಡಿದೆ. ಇದೀಗ ಸೆನೆಟ್‌ನಲ್ಲಿ ಮುಂದಿನ ಕ್ರಮಕ್ಕಾಗಿ ಮಸೂದೆ ಬಾಕಿಯಿದೆ. ಮಸೂದೆಗೆ ಸಂಬಂಧಿಸಿದಂತೆ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿದೆ.

ಭಾರತದ ಚುನಾವಣಾ ವ್ಯವಸ್ಥೆಯ ಉದಾಹರಣೆಯನ್ನು ಮುಂದಿಟ್ಟುಕೊಂಡು ಅಮೆರಿಕದಲ್ಲಿ ಮತದಾರರ ಗುರುತಿನ ಪರಿಶೀಲನೆ ಕುರಿತ ಚರ್ಚೆಯನ್ನು ಟ್ರಂಪ್ ಮತ್ತಷ್ಟು ಮುನ್ನೆಲೆಗೆ ತಂದಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us