
ಫ್ಲೋರಿಡಾ, ನವೆಂಬರ್ 02: ಅಮೆರಿಕದ ಫ್ಲೋರಿಡಾ ರಾಜ್ಯದ ಪಾಮ್ ಬೀಚ್ ಕೌಂಟಿಯ ಜನವಸತಿ ಪ್ರದೇಶದ ಸಮೀಪ ಖಾಸಗಿ ಜೆಟ್ ವಿಮಾನವೊಂದು ಪತನಗೊಂಡು ಭೀಕರ ದುರಂತ ಸಂಭವಿಸಿದೆ. ಈ ಅಪಘಾತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿವಾಸದ ಬಳಿಯೇ ನಡೆದಿದೆ. ನವೆಂಬರ್ 1ರ ಭಾನುವಾರ ನಡೆದ ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ತಿಳಿಸಿದ್ದಾರೆ.
ಟೆಕ್ಸಾಸ್‌ನ ಆಸ್ಟಿನ್-ಬರ್ಗ್‌ಸ್ಟ್ರೋಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಹಾಮಾಸ್‌ನ ನಾರ್ತ್ ಎಲುಥೆರಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಲಿಯರ್‌ಜೆಟ್ 60 ವಿಮಾನವು ಮಧ್ಯಾಹ್ನ ಸುಮಾರು 12.50ರ ವೇಳೆಗೆ ಪಾಮ್ ಬೀಚ್ ಕೌಂಟಿಯ ಗ್ರೀನ್‌ಏಕರ್ಸ್ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನವು ರಸ್ತೆಯ ಸಮೀಪ ಅಪ್ಪಳಿಸಿದ ತಕ್ಷಣ ಭಾರೀ ಸ್ಫೋಟ ಸಂಭವಿಸಿ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದೆ. ದಟ್ಟವಾದ ಕಪ್ಪು ಹೊಗೆ ಆಕಾಶದೆತ್ತರಕ್ಕೆ ಹರಡಿದೆ.
ಪತನಕ್ಕೂ ಮುನ್ನ ಪೈಲಟ್‌ನಿಂದ ತುರ್ತು ಕರೆ
ವಿಮಾನ ಪತನಕ್ಕೂ ಕೆಲವೇ ನಿಮಿಷಗಳ ಮೊದಲು ಪೈಲಟ್‌ಗಳು ಹವಾಮಾನ ವೈಪರೀತ್ಯದ ಬಗ್ಗೆ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ವಿಮಾನದ ಮೇಲೆ ಮಂಜುಗಡ್ಡೆ ಸಂಗ್ರಹವಾಗುತ್ತಿದೆ ಮತ್ತು ತೀವ್ರ ಪ್ರಕ್ಷುಬ್ಧತೆಯಿಂದ ವಿಮಾನ ಅಲುಗಾಡುತ್ತಿದೆ ಎಂದು ತಿಳಿಸಿದ್ದರು. ನಂತರ ವಿಮಾನವು ವೇಗವಾಗಿ ಎತ್ತರ ಕಳೆದುಕೊಳ್ಳಲು ಆರಂಭಿಸಿತು. ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿ ‘ಮೇಡೇ’ ಕರೆ ನೀಡಿದ್ದಾರೆ.
ವಿಮಾನವು ನಿಮಿಷಕ್ಕೆ ಸಾವಿರಾರು ಅಡಿ ವೇಗದಲ್ಲಿ ಕೆಳಕ್ಕೆ ಇಳಿಯುತ್ತಿದ್ದುದಾಗಿ ರೇಡಿಯೋ ಸಂಭಾಷಣೆಯಲ್ಲಿ ತಿಳಿದುಬಂದಿದೆ. ಕೊನೆಗೆ ವಿಮಾನ ನೆಲಕ್ಕೆ ಅಪ್ಪಳಿಸಲಿದೆ ಎಂದು ಪೈಲಟ್ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ದೃಢಪಟ್ಟಿಲ್ಲ.
600 ಜನರ ಸ್ಥಳಾಂತರ
ವಿಮಾನ ಪತನದಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಂಕಿ ಮತ್ತು ಅವಶೇಷಗಳು ಹರಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಮೊಬೈಲ್ ಹೋಮ್ ಸಮುದಾಯದಿಂದ ಸುಮಾರು 600 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಪಘಾತದಲ್ಲಿ ನೆಲದ ಮೇಲಿದ್ದ ಯಾರಿಗೂ ಗಾಯವಾಗಿರುವ ಅಥವಾ ಮೃತಪಟ್ಟಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ ಎಂದು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಮಿಲಿಟರಿ ಟ್ರೇಲ್ ರಸ್ತೆಯನ್ನು ಅಧಿಕಾರಿಗಳು ಮುಚ್ಚಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಿದ್ದಾರೆ.
ವಿಡಿಯೋ
ತನಿಖೆ ಆರಂಭಿಸಿದ ಅಮೆರಿಕದ ಅಧಿಕಾರಿಗಳು
ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಅಪಘಾತದ ತನಿಖೆ ಕೈಗೊಂಡಿವೆ. ವಿಮಾನದ ತಾಂತ್ರಿಕ ಸ್ಥಿತಿ, ಹವಾಮಾನ ಪರಿಸ್ಥಿತಿ ಮತ್ತು ಪೈಲಟ್‌ಗಳ ಕೊನೆಯ ಸಂವಹನ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಮೃತಪಟ್ಟವರ ಗುರುತು ಮತ್ತು ಅಪಘಾತಕ್ಕೆ ನಿಖರ ಕಾರಣದ ಬಗ್ಗೆ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:08 am, Mon, 2 November 26