ಹಾರ್ಮುಜ್ ಜಲಸಂಧಿಗೆ ‘ಟ್ರಂಪ್ ಜಲಸಂಧಿ’ ಎಂದು ಹೆಸರಿಡೋಣವೇ?: ಇರಾನ್ ಸಂಘರ್ಷದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಪ್ರಸ್ತಾಪ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಗೆ ‘ಟ್ರಂಪ್ ಜಲಸಂಧಿ’ ಎಂದು ಮರುನಾಮಕರಣ ಮಾಡುವ ಪ್ರಸ್ತಾಪ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದೇ ವೇಳೆ ಇರಾನ್–ಅಮೆರಿಕ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಕ್ಷಿಪಣಿ ದಾಳಿ, ಪ್ರತಿದಾಳಿ ಎಚ್ಚರಿಕೆ ಹಾಗೂ ತೈಲ ಮಾರುಕಟ್ಟೆಯ ಆತಂಕ ವಿಶ್ವದ ಗಮನ ಸೆಳೆದಿದೆ. ಸರ್ಕಾರದ ವಿರುದ್ಧ ದಂಗೆಯೇಳಲು ಇರಾನಿಯನ್ನರಿಗೆ ಟ್ರಂಪ್ ಕರೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಗೆ ‘ಟ್ರಂಪ್ ಜಲಸಂಧಿ’ ಎಂದು ಹೆಸರಿಡೋಣವೇ?: ಇರಾನ್ ಸಂಘರ್ಷದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಪ್ರಸ್ತಾಪ
ಡೊನಾಲ್ಡ್​ ಟ್ರಂಪ್
Image Credit source: The Guardian

Updated on: Sep 03, 2026 | 7:31 AM

ವಾಷಿಂಗ್ಟನ್, ಸೆಪ್ಟೆಂಬರ್ 3: ಇರಾನ್ ಮತ್ತು ಅಮೆರಿಕ ನಡುವಿನ ಸೇನಾ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾಗತಿಕ ತೈಲ ಸಾಗಣೆಯ ಪ್ರಮುಖ ನರನಾಡಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು ‘ಟ್ರಂಪ್ ಜಲಸಂಧಿ’ ಎಂದು ಮರುನಾಮಕರಣ ಮಾಡಬೇಕೇ? ಎಂದು ಕೇಳುವ ಮೂಲಕ ಹೊಸ ಅಂತಾರಾಷ್ಟ್ರೀಯ ಚರ್ಚೆ ಹುಟ್ಟುಹಾಕಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಮಾಡಿರುವ ಅವರು, ಆಯಕಟ್ಟಿನ ಜಲಮಾರ್ಗವು ಸಂಪೂರ್ಣವಾಗಿ ಅಮೆರಿಕದ ನಿಯಂತ್ರಣಕ್ಕೆ ಬಂದಿರುವುದರಿಂದ ಈ ಹೊಸ ಹೆಸರು ಹಿಂದೆಂದಿಗಿಂತಲೂ ಪ್ರಸ್ತುತ ಮತ್ತು ಪ್ರಭಾವಶಾಲಿಯಾಗಿರಲಿದೆ ಎಂದು ಪ್ರತಿಪಾದಿಸಿದ್ದಾರೆ.

ಟ್ರಂಪ್ ಹೇಳಿಕೆಯ ಪ್ರಮುಖ ಅಂಶಗಳು

ಹೆಸರು ಬದಲಾವಣೆಯ ಪ್ರಸ್ತಾಪ: ಈಗ ಜಲಮಾರ್ಗವು ಅಮೆರಿಕದ ನಿಯಂತ್ರಣದಲ್ಲಿದೆ. ಹೀಗಿರುವಾಗ ನಾವು ಹಾರ್ಮುಜ್ ಜಲಸಂಧಿಯ ಹೆಸರನ್ನು ಟ್ರಂಪ್ ಸ್ಟ್ರೈಟ್ ಎಂದು ಬದಲಾಯಿಸಬೇಕೇ? ಎಂದು ಪ್ರಶ್ನಿಸಿದ್ದಾರೆ.

ಮಾತುಕತೆಗೆ ಒತ್ತಾಯಿಸುತ್ತಿಲ್ಲ: ಇರಾನ್ ಅನ್ನು ಸಂಧಾನದ ಮೇಜಿಗೆ ತರಲು ಅಮೆರಿಕ ಹರಸಾಹಸ ಪಡುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದ ಅವರು, ಅವರೊಂದಿಗೆ ನಿಷ್ಪ್ರಯೋಜಕ ಒಪ್ಪಂದಕ್ಕೆ ಸಹಿ ಹಾಕುವ ಯಾವುದೇ ಆತುರ ನನಗಿಲ್ಲ. ಜಲಸಂಧಿಯ ಮೇಲೆ ನಮ್ಮ ಹಿಡಿತವಿದೆ ಮತ್ತು ಇರಾನ್ ಆರ್ಥಿಕತೆ ಸಂಪೂರ್ಣ ಕುಸಿಯುತ್ತಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ:

ಪುಟಿನ್ ನ್ಯಾಟೋ ದೇಶಗಳ ಮೇಲೆ ದಾಳಿ ಮಾಡುವುದಿಲ್ಲ: ಸಿಐಎ ಮುಖ್ಯಸ್ಥರ ರಷ್ಯಾ ಭೇಟಿ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅಭಯ

 

ಇರಾನ್ ಜನತೆಗೆ ದಂಗೆಯೇಳಲು ಕರೆ: ಇರಾನ್‌ನ ಇಸ್ಲಾಮಿಕ್ ಆಡಳಿತ ವ್ಯವಸ್ಥೆಯ ವಿರುದ್ಧ ಅಲ್ಲಿನ ನಾಗರಿಕರೇ ತಿರುಗಿಬೀಳುವಂತೆ ಪ್ರಚೋದಿಸಿದ ಟ್ರಂಪ್, ಇರಾನಿನ ಜನತೆ ಇನ್ನಾದರೂ ತಮ್ಮ ಸರ್ಕಾರದ ವಿರುದ್ಧ ಎದ್ದು ನಿಲ್ಲುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.

ಇರಾನ್ ನಗರಗಳ ಮೇಲೆ ಹೊಸ ಕ್ಷಿಪಣಿ ದಾಳಿ

ಅಹ್ವಾಜ್ ಮತ್ತು ಅಘಜರಿ ಮೇಲೆ ಪ್ರಹಾರ: ನೈಋತ್ಯ ಇರಾನ್‌ನ ಖುಜೆಸ್ತಾನ್ ಪ್ರಾಂತ್ಯದ ಪ್ರಮುಖ ತೈಲ ಸಮೃದ್ಧ ನಗರಗಳಾದ ಅಹ್ವಾಜ್ ಮತ್ತು ಅಘಜರಿ ಸಮೀಪದ ಎರಡು ನೆಲೆಗಳ ಮೇಲೆ ಅಮೆರಿಕ ಪಡೆಗಳು ಭೀಕರ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‌ನ ಸರ್ಕಾರಿ ವಾಹಿನಿ ಐಆರ್‌ಐಬಿ  ದೃಢಪಡಿಸಿದೆ.

ಇರಾನ್ ಆಕ್ರೋಶ: ಅಮೆರಿಕದ ಈ ಕಾರ್ಯಾಚರಣೆಯನ್ನು ಭಯೋತ್ಪಾದಕ ಶತ್ರುವಿನ ದಾಳಿ ಎಂದು ಖಂಡಿಸಿರುವ ಇರಾನ್ ಅಧಿಕಾರಿಗಳು, ಪ್ರತಿದಾಳಿಯ ಎಚ್ಚರಿಕೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಜಲಮಾರ್ಗ: ಹಾರ್ಮುಜ್ ಜಲಸಂಧಿಯು ಇರಾನ್ ಮತ್ತು ಒಮಾನ್ ನಡುವೆ ಇರುವ ನೈಸರ್ಗಿಕ ಸಮುದ್ರ ಮಾರ್ಗವಾಗಿದ್ದು, ಯಾವುದೇ ಕಾರಣಕ್ಕೂ ಇದು ಅಮೆರಿಕದ ಸಾರ್ವಭೌಮ ಭೂಪ್ರದೇಶವಲ್ಲ. ವಿಶ್ವಸಂಸ್ಥೆಯ ಸಮುದ್ರ ಕಾನೂನುಗಳ ಒಪ್ಪಂದದ ಪ್ರಕಾರ, ಇಂತಹ ಅಂತಾರಾಷ್ಟ್ರೀಯ ಜಲಸಂಧಿಗಳಲ್ಲಿ ಎಲ್ಲಾ ದೇಶಗಳ ವಾಣಿಜ್ಯ ಹಡಗುಗಳಿಗೆ ಮುಕ್ತ ಸಂಚಾರದ ಹಕ್ಕಿರುತ್ತದೆ.

ಹೆಸರು ಬದಲಿಸುವ ಟ್ರಂಪ್ ಹಳೆಯ ಚಾಳಿ: ಅಮೆರಿಕ ಮತ್ತು ಕೆನಡಾ ಗಡಿಯಲ್ಲಿರುವ ಸುಪ್ರಸಿದ್ಧ ಒಂಟಾರಿಯೊ ಸರೋವರವನ್ನು ಈ ಹಿಂದೆ ಟ್ರಂಪ್ ಲೇಕ್ ಅಮೆರಿಕ ಎಂದು ಕರೆದು ಕೆನಡಾ ಸರ್ಕಾರದ ಆಕ್ರೋಶಕ್ಕೆ ಗುರಿಯಾಗಿದ್ದರು. ಇದೀಗ ಮಧ್ಯಪ್ರಾಚ್ಯದ ಜಲಮಾರ್ಗಕ್ಕೂ ಇದೇ ರೀತಿಯ ಹೇಳಿಕೆ ನೀಡಿರುವುದು ರಾಜತಾಂತ್ರಿಕ ವಲಯದಲ್ಲಿ ಲೇವಡಿಗೆ ಕಾರಣವಾಗಿದೆ.

ಜಾಗತಿಕ ತೈಲ ಮಾರುಕಟ್ಟೆ ಆತಂಕ: ವಿಶ್ವದ ಒಟ್ಟು ಸಮುದ್ರ ಮಾರ್ಗದ ಕಚ್ಚಾ ತೈಲ ಸಾಗಣೆಯ ಐದನೇ ಒಂದು ಭಾಗ (ಶೇ. 20) ಹಾರ್ಮುಜ್ ಮೂಲಕವೇ ಸಾಗುವುದರಿಂದ, ಇಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಯುದ್ಧದ ವಾತಾವರಣವು ಜಾಗತಿಕ ಇಂಧನ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us