
ಮಾಸ್ಕೋ, ಸೆಪ್ಟೆಂಬರ್ 20: ರಷ್ಯಾದಲ್ಲಿ 3 ದಿನಗಳ ಕಾಲ ನಡೆದ ಸಂಸತ್ ಚುನಾವಣೆ ಮುಕ್ತಾಯದ ಹಂತ ತಲುಪಿದ್ದಾಗ, ಉಕ್ರೇನಿಯನ್ ಪಡೆಗಳು ರಷ್ಯಾದ ಮೇಲೆ ಏಕಕಾಲದಲ್ಲಿ 1,000ಕ್ಕೂ ಹೆಚ್ಚು ಡ್ರೋನ್ಗಳನ್ನು ಹಾರಿಸಿ ದಾಳಿ ನಡೆಸಿವೆ. ಈ ಬೃಹತ್ ದಾಳಿಯಲ್ಲಿ ನೂರಾರು ಡ್ರೋನ್ಗಳು ನೇರವಾಗಿ ರಷ್ಯಾದ ರಾಜಧಾನಿ ಮೊಸ್ಕೋವನ್ನು ಗುರಿಯಾಗಿಸಿಕೊಂಡಿದ್ದವು ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.ಉಕ್ರೇನಿಯನ್ ಡ್ರೋನ್ ದಾಳಿಯಿಂದಾಗಿ ಮಾಸ್ಕೋದಲ್ಲಿರುವ ಪ್ರಮುಖ ತೈಲ ಸಂಸ್ಕರಣಾಗಾರ ಹಾಗೂ ವಸತಿ ಕಟ್ಟಡವೊಂದಕ್ಕೆ ಹಾನಿಯಾಗಿದೆ.
ಮಾಸ್ಕೋದ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಮಾತನಾಡಿ, “ಇದು ಮಾಸ್ಕೋ ನಗರದ ಮೇಲೆ ಇದುವರೆಗೆ ನಡೆದ ಅತಿ ದೊಡ್ಡ ಡ್ರೋನ್ ದಾಳಿಯಾಗಿದೆ. ದಾಳಿಯಿಂದಾಗಿ ತೈಲ ಶುದ್ಧೀಕರಣ ಘಟಕ ಹಾಗೂ ವಸತಿ ಕಟ್ಟಡವೊಂದಕ್ಕೆ ಹಾನಿಯಾಗಿದೆ” ಎಂದು ತಿಳಿಸಿದ್ದಾರೆ.
ಇಬ್ಬರು ಸಾವು, 20 ಜನರಿಗೆ ಗಾಯ:
ಮಾಸ್ಕೋ ಪ್ರಾಂತ್ಯದ ಗವರ್ನರ್ ಆಂಡ್ರೇ ವೊರೊಬ್ಯೋವ್ ನೀಡಿದ ಮಾಹಿತಿ ಪ್ರಕಾರ, ಡ್ರೋನ್ ದಾಳಿಯಿಂದ 74 ವರ್ಷದ ವೃದ್ಧ ಹಾಗೂ 44 ವರ್ಷದ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, 20 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: 3 ದಿನ ಉಕ್ರೇನ್ ಮೇಲೆ ದಾಳಿ ನಡೆಸಬೇಡಿ ಎಂದ ಪುಟಿನ್; ರಷ್ಯಾದ ನಿರ್ಧಾರಕ್ಕೆ ಕಾರಣ ಇಲ್ಲಿದೆ
ರಷ್ಯಾದ ರಕ್ಷಣಾ ಸಚಿವಾಲಯವು, ತಮ್ಮ ವಾಯು ರಕ್ಷಣಾ ಪಡೆಗಳು ರಷ್ಯಾದ ಭೂಭಾಗ, ಅಕ್ರಮವಾಗಿ ವಶಪಡಿಸಿಕೊಂಡ ಕ್ರೈಮಿಯಾ ಪರ್ಯಾಯ ದ್ವೀಪ ಹಾಗೂ ಕಪ್ಪು ಸಮುದ್ರದ ಮೇಲೆ ಒಟ್ಟು 1 ಸಾವಿರ ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಮೇಯರ್ ಸೊಬ್ಯಾನಿನ್ ಪ್ರಕಾರ, ಮೊಸ್ಕೋ ನಗರದತ್ತ ಧಾವಿಸುತ್ತಿದ್ದ 450 ಡ್ರೋನ್ಗಳನ್ನು ಆಕಾಶದಲ್ಲೇ ಧ್ವಂಸಗೊಳಿಸಲಾಗಿದೆ.
ರಷ್ಯಾದ ಸಂಸತ್ ಚುನಾವಣೆಯನ್ನು ಬುಡಮೇಲು ಮಾಡುವ ಉದ್ದೇಶದಿಂದ ಉಕ್ರೇನ್ ಈ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಆದರೆ ಈ ಯತ್ನ ವಿಫಲವಾಗಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇಂಧನ ಘಟಕಗಳ ಮೇಲಿನ ದಾಳಿ ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಂದ: ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ
ಈ ಬೃಹತ್ ದಾಳಿಯ ಕುರಿತು ಉಕ್ರೇನ್ ಕಡೆಯಿಂದ ತಕ್ಷಣದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ರಷ್ಯಾ-ಉಕ್ರೇನ್ ಸಮರ ಶುರುವಾದ ಬಳಿಕ ರಷ್ಯಾದಲ್ಲಿ ನಡೆದ ಮೊದಲ ಸಂಸತ್ ಚುನಾವಣೆ ಇದಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನೀತಿಗಳಿಗೆ ಆಡಳಿತಾರೂಢ ಕ್ರೆಮ್ಲಿನ್ನಲ್ಲಿ ಯಾವುದೇ ಬಲವಾದ ವಿರೋಧ ಪಕ್ಷವಿಲ್ಲದೆ ಈ ಚುನಾವಣೆ ನಡೆದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ