AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ದಿನ ಉಕ್ರೇನ್ ಮೇಲೆ ದಾಳಿ ನಡೆಸಬೇಡಿ ಎಂದ ಪುಟಿನ್; ರಷ್ಯಾದ ನಿರ್ಧಾರಕ್ಕೆ ಕಾರಣ ಇಲ್ಲಿದೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಸೇನೆಗೆ 3 ದಿನಗಳವರೆಗೆ ಅಥವಾ 72 ಗಂಟೆಗಳ ಕಾಲ ಉಕ್ರೇನ್ ಮೇಲೆ ದಾಳಿ ನಡೆಸದಂತೆ ಆದೇಶಿಸಿದ್ದಾರೆ. ಅಮೆರಿಕದ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಉಕ್ರೇನ್ ಯುದ್ಧದ ಕುರಿತು ಚರ್ಚಿಸಲು ಮಾಸ್ಕೋಗೆ ಭೇಟಿ ನೀಡುತ್ತಿದ್ದಾರೆ. ಇದೇ ಕಾರಣದಿಂದ ಅಮೆರಿಕದ ನಿಯೋಗ ವಾಪಾಸ್ ಹೋಗುವವರೆಗೂ ಕೈವ್ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸದಂತೆ ಪುಟಿನ್ ಆದೇಶಿಸಿದ್ದಾರೆ. ಅಮೆರಿಕದ ಅಧಿಕಾರಿಗಳು ರಷ್ಯಾ ಅಧ್ಯಕ್ಷರೊಂದಿಗೆ ಉಕ್ರೇನ್ ಯುದ್ಧದ ಕುರಿತು ಚರ್ಚಿಸುವ ಸಾಧ್ಯತೆಯಿದೆ.

3 ದಿನ ಉಕ್ರೇನ್ ಮೇಲೆ ದಾಳಿ ನಡೆಸಬೇಡಿ ಎಂದ ಪುಟಿನ್; ರಷ್ಯಾದ ನಿರ್ಧಾರಕ್ಕೆ ಕಾರಣ ಇಲ್ಲಿದೆ
ಝೆಲೆನ್‌ಸ್ಕಿ - ಪುಟಿನ್ Image Credit source: TV9
ಸುಷ್ಮಾ ಚಕ್ರೆ
|

Updated on: Sep 05, 2026 | 6:51 PM

Share

ಮಾಸ್ಕೋ, ಸೆಪ್ಟೆಂಬರ್ 5: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಪ್ರತಿನಿಧಿಗಳ ತಂಡ ರಾಜತಾಂತ್ರಿಕ ಮಾತುಕತೆಗಾಗಿ ರಷ್ಯಾದ ರಾಜಧಾನಿ ಮಾಸ್ಕೋ ತಲುಪುತ್ತಿದ್ದಂತೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲಿನ ಮಿಲಿಟರಿ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು 3 ದಿನಗಳ ಕಾಲ ಸ್ಥಗಿತಗೊಳಿಸುವಂತೆ ತಮ್ಮ ಸಶಸ್ತ್ರ ಪಡೆಗಳಿಗೆ ಆದೇಶಿಸಿದ್ದಾರೆ. ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ರಷ್ಯಾ ನಡುವೆ ತೆರೆಮರೆಯ ರಾಜತಾಂತ್ರಿಕ ಪ್ರಯತ್ನಗಳು ಚುರುಕುಗೊಂಡಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.

ರಷ್ಯಾ-ಉಕ್ರೇನ್ ಯುದ್ಧವನ್ನು ಶೀಘ್ರವೇ ಕೊನೆಗೊಳಿಸುವ ಬದ್ಧತೆ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ಆಡಳಿತ ರಾಯಭಾರಿಗಳು ಹಾಗೂ ಆಪ್ತ ರಾಜತಾಂತ್ರಿಕರ ತಂಡವನ್ನು ಕ್ರೆಮ್ಲಿನ್ ನಾಯಕರೊಂದಿಗೆ ನೇರ ಮಾತುಕತೆಗೆ ಮಾಸ್ಕೋಗೆ ಕಳುಹಿಸಿಕೊಟ್ಟಿದ್ದಾರೆ. ಈ ಸಭೆಯಲ್ಲಿ ಗಡಿ ರೇಖೆಗಳ ನಿರ್ಧಾರ, ಉಕ್ರೇನ್‌ನ ನ್ಯಾಟೋ ಸೇರ್ಪಡೆ ವಿಚಾರ ಹಾಗೂ ಉಭಯ ದೇಶಗಳ ನಡುವಿನ ಸೇನಾ ಹಿಂಪಡೆಯುವಿಕೆ ಕುರಿತು ಪ್ರಾಥಮಿಕ ಕರಡು ಪ್ರಸ್ತಾವನೆಯನ್ನು ಅಮೆರಿಕದ ನಿಯೋಗವು ಪುಟಿನ್ ಮುಂಭಾಗದಲ್ಲಿ ಇರಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ‘ನಾವು ಯುದ್ಧಗಳಿಂದ ಯುದ್ಧದ ಅಂತ್ಯದತ್ತ ಸಾಗಬೇಕಿದೆ’; ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ಸಂದೇಶ

ಅಮೆರಿಕದ ಪ್ರತಿನಿಧಿಗಳ ಭೇಟಿಯ ಸಮಯದಲ್ಲಿ ರಷ್ಯಾದೊಂದಿಗೆ ತಾತ್ಕಾಲಿಕ ಕದನ ವಿರಾಮ ಘೋಷಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಪ್ರಸ್ತಾಪಿಸಿದ ಮರುದಿನವೇ ಪುಟಿನ್ ಈ ಆದೇಶ ಹೊರಡಿಸಿದ್ದಾರೆ. “ಈ 3 ದಿನ ನಮ್ಮ ಕಡೆಯಿಂದ ಯಾವುದೇ ವೈಮಾನಿಕ ದಾಳಿಗಳು ನಡೆಯುವುದಿಲ್ಲ. ಈ ಮಾತುಕತೆಗಳನ್ನು ನಡೆಸಲು ಮತ್ತು ಅಮೆರಿಕದ ನಿಯೋಗದ ಭೇಟಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಅಗತ್ಯವಿರುವಷ್ಟು ಸಮಯ ರಷ್ಯಾ ಕೂಡ ತನ್ನ ವೈಮಾನಿಕ ದಾಳಿಗಳನ್ನು ನಿಲ್ಲಿಸುವ ಮೂಲಕ ಶಾಂತಿ ಕಾಯ್ದುಕೊಳ್ಳಬೇಕು” ಎಂದು ಝೆಲೆನ್‌ಸ್ಕಿ ಕದನ ವಿರಾಮದ ಪ್ರಸ್ತಾವನೆ ಮುಂದಿಟ್ಟಿದ್ದರು.

“ಉಕ್ರೇನ್‌ಗೆ ಅಮೆರಿಕದ ಪ್ರತಿನಿಧಿಗಳ ಸುರಕ್ಷತೆ ಮುಖ್ಯವೇ ಹೊರತು ರಷ್ಯಾವಲ್ಲ” ಎಂದು ಸ್ಪಷ್ಟಪಡಿಸಿದ್ದ ಝೆಲೆನ್‌ಸ್ಕಿ, ಕಳೆದ ನಾಲ್ಕೂವರೆ ವರ್ಷಗಳಿಂದ ನಡೆಯುತ್ತಿರುವ ಈ ಯುದ್ಧಕ್ಕೆ ಅಂತ್ಯ ಹಾಡಲು ನಮಗೆ ನಿಜವಾದ ಪರಿಹಾರಗಳು ಬೇಕಾಗಿವೆ ಎಂದಿದ್ದರು. “ಸ್ಟೀವ್ ಮತ್ತು ಜೇರೆಡ್ ಏನೆಲ್ಲಾ ಪ್ರಸ್ತಾವನೆಗಳನ್ನು ತರುತ್ತಾರೆ ಹಾಗೂ ಮಾಸ್ಕೋ ಅವರಿಗೆ ಏನು ಉತ್ತರಿಸುತ್ತದೆ ಎಂಬುದನ್ನು ನಾವು ಕಾದು ನೋಡಲಿದ್ದೇವೆ” ಎಂದು ಝೆಲೆನ್‌ಸ್ಕಿ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ನಾವಂತೂ ಯಾವುದೇ ವಾಯು ದಾಳಿ ನಡೆಸಲ್ಲ, ರಷ್ಯಾನೂ ಸುಮ್ಮನಿರಲಿ ಎಂದ ಉಕ್ರೇನ್

ರಷ್ಯಾ ಉಕ್ರೇನ್‌ನ ಗುಪ್ತಚರ ಸಂಸ್ಥೆಯ ಪ್ರಧಾನ ಕಚೇರಿಯ ಮೇಲೆ ಹಗಲಿನಲ್ಲಿ ವೈಮಾನಿಕ ದಾಳಿ ನಡೆಸಿದ ದಿನವೇ ಝೆಲೆನ್‌ಸ್ಕಿ ಅವರ ಈ ಕದನ ವಿರಾಮದ ಪ್ರಸ್ತಾವನೆ ಬಂದಿದೆ. ಈ ದಾಳಿಯು ಗುಪ್ತಚರ ಮುಖ್ಯಸ್ಥರ ಕಚೇರಿಯನ್ನೇ ಗುರಿಯಾಗಿಸಿಕೊಂಡಿತ್ತು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ತಿಳಿಸಿದ್ದಾರೆ. ರಾತ್ರಿ ವೇಳೆ ರಷ್ಯಾ ನಡೆಸಿದ ದಾಳಿಯಲ್ಲಿ ಉಕ್ರೇನ್‌ನಲ್ಲಿ ಮೂವರು ಮೃತಪಟ್ಟಿದ್ದು, ಯುದ್ಧ ಕೊನೆಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳ ಭಾಗವಾಗಿ ಅಮೆರಿಕದ ಪ್ರತಿನಿಧಿಗಳನ್ನು ಕೈವ್‌ನಲ್ಲಿ ಎದುರು ನೋಡುತ್ತಿರುವುದಾಗಿ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us