‘ನಾವು ಯುದ್ಧಗಳಿಂದ ಯುದ್ಧದ ಅಂತ್ಯದತ್ತ ಸಾಗಬೇಕಿದೆ’; ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ಸಂದೇಶ
ಕಿರ್ಗಿಸ್ತಾನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ (SCO) ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಪುಟಿನ್ ಜೊತೆ ಬಹಳ ಉತ್ತಮ ಬಾಂಧವ್ಯ ಹೊಂದಿರುವ ಪ್ರಧಾನಿ ಮೋದಿ ಪುಟಿನ್ ಅವರನ್ನು ಅಪ್ಪಿಕೊಳ್ಳುವ ಮೂಲಕ ತಮ್ಮ ಆತ್ಮೀಯತೆಯನ್ನು ತೋರಿಸಿದರು. ಈ ವೇಳೆ ಅವರು ನಿರಂತರ ಯುದ್ಧದಿಂದ ಯುದ್ಧದ ಅಂತ್ಯದತ್ತ ಸಾಗುವ ಅಗತ್ಯವನ್ನು ಒತ್ತಿ ಹೇಳಿದರು. ಅಮೆರಿಕ-ಇರಾನ್ ಯುದ್ಧ ಹಾಗೂ ರಷ್ಯಾ-ಉಕ್ರೇನ್ ಸಂಘರ್ಷಗಳು ಜಾಗತಿಕವಾಗಿ ಸವಾಲೊಡ್ಡುತ್ತಿರುವ ಈ ಸಮಯದಲ್ಲಿ ಪ್ರಧಾನಿ ಮೋದಿಯವರ ಈ ಶಾಂತಿ ಸಂದೇಶ ಹೊರಬಿದ್ದಿದೆ.

ನವದೆಹಲಿ, ಆಗಸ್ಟ್ 31: ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಮಹತ್ವದ ದ್ವಿಪಕ್ಷೀಯ ಸಭೆ ನಡೆಸಿದರು. ಪ್ರಮುಖ ಜಿಯೋಪಾಲಿಟಿಕಲ್ ವಿದ್ಯಮಾನಗಳು ಮತ್ತು ಜಾಗತಿಕ ಇಂಧನ ಅಭದ್ರತೆಯ ನಡುವೆ ಈ ಭೇಟಿ ನಡೆದಿದೆ. ಈ ಸಭೆಯ ಆರಂಭದಲ್ಲಿ ಮೋದಿ ಮತ್ತು ಪುಟಿನ್ ಪರಸ್ಪರ ಆಲಿಂಗನ ಮಾಡಿಕೊಂಡು ಸುದೀರ್ಘ ಚರ್ಚೆಗೆ ಚಾಲನೆ ನೀಡಿದರು.
“ನಾವು ಉಕ್ರೇನ್ ವಿಷಯವನ್ನು ಸತತವಾಗಿ ಚರ್ಚಿಸುತ್ತಾ ಬಂದಿದ್ದೇವೆ. ಈ ಹಿಂದೆ ನಾವು ಭೇಟಿಯಾದಾಗ, ನೀವು ಈ ವಿಷಯದ ಎಲ್ಲಾ ಮಗ್ಗುಲುಗಳ ಬಗ್ಗೆ ನನಗೆ ವಿವರವಾಗಿ ತಿಳಿಸಿದ್ದಿರಿ. ನಿಮಗೆ ತಿಳಿದಿರುವಂತೆ, ಭಾರತವು ಶಾಂತಿಯತ್ತ ಕೈಗೊಳ್ಳುವ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಮತ್ತು ಮುಂದೆಯೂ ಬೆಂಬಲಿಸಲಿದೆ. ಯುದ್ಧದಲ್ಲಿ ಕಳೆಯುವ ಪ್ರತಿಯೊಂದು ದಿನವೂ ಮಾನವೀಯತೆಯನ್ನು ತುಳಿದುಹಾಕುತ್ತದೆ. ಆದರೆ ಶಾಂತಿಯತ್ತ ಇಡುವ ಪ್ರತಿಯೊಂದು ಹೆಜ್ಜೆಯೂ ಮಾನವೀಯತೆಯಲ್ಲಿ ಹೊಸ ಭರವಸೆ ಮತ್ತು ಉತ್ಸಾಹವನ್ನು ತುಂಬುತ್ತದೆ. ನಾವು ನಿರಂತರ ಯುದ್ಧಗಳಿಂದ ಯುದ್ಧದ ಅಂತ್ಯದತ್ತ ಸಾಗಬೇಕು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಎಲ್ಲಾ ಸಮಸ್ಯೆಗಳಿಗೆ ಆದಷ್ಟು ಬೇಗ ಶಾಂತಿಯುತ ಪರಿಹಾರ ಕಂಡುಕೊಳ್ಳುವುದೇ ಮಾನವೀಯತೆಯ ಕರೆಯನ್ನು ಧ್ವನಿಸುತ್ತದೆ ಮತ್ತು ಇದೇ ಭಾರತದ ಸಂದೇಶವಾಗಿದೆ. ಗಾಂಧಿ ಮತ್ತು ಬುದ್ಧನ ಭೂಮಿ ಒಂದೇ ಸಂದೇಶವನ್ನು ಹಂಚಿಕೊಳ್ಳುತ್ತದೆ… ಅದೇ ಶಾಂತಿಯ ಮಾರ್ಗ. ಇಂದು, ನಾನು ಈ ವಿಷಯಗಳನ್ನೇ ನಿಮ್ಮೊಂದಿಗೆ ಚರ್ಚಿಸಲು ನಿರೀಕ್ಷಿಸುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗೇ, ಭಾರತ ಮತ್ತು ರಷ್ಯಾ ಎರಡೂ ದೇಶಗಳಿಗೆ ರಾಷ್ಟ್ರೀಯ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಿ ಉಳಿದಿದೆ ಎಂದೂ ಕೂಡ ಪ್ರಧಾನಿ ಮೋದಿ ಹೇಳಿದ್ದಾರೆ.
VIDEO | Bishkek: At a bilateral meeting with Russian President Vladimir Putin ahead of the SCO Summit, PM Modi says, “…we have always discussed the situation in Ukraine. When we met last time as well, you had briefed me in detail about all aspects of the situation. As you know,… pic.twitter.com/3AbKwE66TQ
— Press Trust of India (@PTI_News) August 31, 2026
ಪುಟಿನ್ ಕುರಿತು ಮೋದಿ ಮೆಚ್ಚುಗೆ:
“ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗಿ ನನಗೆ ತುಂಬಾ ಸಂತೋಷವಾಗಿದೆ. ಕಳೆದ ವರ್ಷ ಪುಟಿನ್ ಅವರ ಭಾರತ ಭೇಟಿ ಅತ್ಯಂತ ಯಶಸ್ವಿಯಾಗಿತ್ತು. ನಮ್ಮ ಆರ್ಥಿಕ ಸಂಬಂಧಗಳಿಗೆ ಮತ್ತಷ್ಟು ಬಲ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತವು ಬ್ರಿಕ್ಸ್ (BRICS) ಶೃಂಗಸಭೆಯನ್ನು ಆಯೋಜಿಸುತ್ತಿದ್ದು, ಎಲ್ಲಾ ಭಾರತೀಯರು ನಿಮ್ಮನ್ನು ಮತ್ತು ನಿಮ್ಮ ನಿಯೋಗವನ್ನು ಸ್ವಾಗತಿಸಲು ಕಾತರರಾಗಿದ್ದಾರೆ. ನಿಮ್ಮ ಈ ಭೇಟಿಯು ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲಿದೆ ಮತ್ತು ಬ್ರಿಕ್ಸ್ ಚೌಕಟ್ಟಿನೊಳಗಿನ ಮಾತುಕತೆ ಹಾಗೂ ಸಹಕಾರವನ್ನು ಮತ್ತಷ್ಟು ವೃದ್ಧಿಸಲಿದೆ” ಎಂದು ಮೋದಿ ಹೇಳಿದ್ದಾರೆ.
ಪುಟಿನ್ ಹೇಳಿದ್ದೇನು?:
ರಷ್ಯಾ ಮತ್ತು ಭಾರತದ ನಡುವಿನ ವ್ಯಾಪಾರ ಹಾಗೂ ಆರ್ಥಿಕ ಸಹಕಾರವು ಸಕಾರಾತ್ಮಕ ಹಾದಿಯಲ್ಲಿದ್ದು, ದ್ವಿಪಕ್ಷೀಯ ವ್ಯಾಪಾರ ವಹಿವಾಟು ಶೇ. 2ಕ್ಕಿಂತ ಹೆಚ್ಚಾಗಿದೆ ಎಂದು ಪುಟಿನ್ ಹೇಳಿದ್ದಾರೆ. ಭಾರತ ಮತ್ತು ರಷ್ಯಾದ ಸಂಬಂಧಗಳು ನಿರಂತರವಾಗಿ ಬಲಗೊಳ್ಳುತ್ತಿದ್ದು, ಇದಕ್ಕೆ ಪ್ರಧಾನಿ ಮೋದಿಯವರ ವೈಯಕ್ತಿಕ ಗಮನವೇ ಪ್ರಮುಖ ಕಾರಣ ಎಂದು ಪುಟಿನ್ ಹೇಳಿದ್ದಾರೆ.
ಇದನ್ನೂ ಓದಿ: ಉಜ್ಬೆಕಿಸ್ತಾನ್ ಮಕ್ಕಳ ಬಾಯಲ್ಲಿ ತಾವೇ ಬರೆದ ಹಿಂದಿ ಕವಿತೆ ಕೇಳಿ ಭಾವುಕರಾದ ಪ್ರಧಾನಿ ಮೋದಿ
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜಾಗತಿಕ ತೈಲ ಮಾರುಕಟ್ಟೆಗಳ ಮೇಲೆ ತೀವ್ರ ಒತ್ತಡ ಬಿದ್ದಿದೆ. ಈ ಸಂದರ್ಭದಲ್ಲಿ ಮೋದಿ-ಪುಟಿನ್ ಸಭೆಯು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತಕ್ಕೆ ಮಧ್ಯಪ್ರಾಚ್ಯದ ವಿದ್ಯಮಾನಗಳು ಇಂಧನ ಭದ್ರತೆಯ ಕಳವಳವನ್ನು ಹೆಚ್ಚಿಸಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Mon, 31 August 26




