ವೇದಿಕೆ ಮೇಲೆ ಜೋ ಬೈಡೆನ್ ಮತ್ತೊಂದು ಪ್ರಮಾದ, ಸತ್ತ ಸದಸ್ಯೆಯ ಹೆಸರು ಉಲ್ಲೇಖಿಸಿ, ‘ಅವರೆಲ್ಲಿ ಕಾಣುತ್ತಿಲ್ಲ’ ಅಂದರು!

ನಾರ್ದರ್ನ್ ಇಂಡಿಯಾನಾದಲ್ಲಿ ಆಗಸ್ಟ್ ನಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಜಾಕಿ ವಲೋರ್ಸ್ಕಿ ಮತ್ತು ಅವರ ಕಾಂಗ್ರೆಸ್ ನ ಇನ್ನಿಬ್ಬರು ಸಿಬ್ಬಂದಿ ಮರಣವನ್ನಪ್ಪಿದ್ದರು.

ವೇದಿಕೆ ಮೇಲೆ ಜೋ ಬೈಡೆನ್ ಮತ್ತೊಂದು ಪ್ರಮಾದ, ಸತ್ತ ಸದಸ್ಯೆಯ ಹೆಸರು ಉಲ್ಲೇಖಿಸಿ, ‘ಅವರೆಲ್ಲಿ ಕಾಣುತ್ತಿಲ್ಲ’ ಅಂದರು!
ಯುಎಸ್ ಅಧ್ಯಕ್ಷ ಜೋ ಬೈಡೆನ್
TV9kannada Web Team

| Edited By: Arun Belly

Sep 29, 2022 | 2:25 PM

ವಾಷಿಂಗ್ಟನ್:  ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಅವರಿಗೆ ಅರಳು-ಮರುಳು ಕೊಂಚ ಜಾಸ್ತಿಯೇ ಅಗುತ್ತಿರುವಂತಿದೆ ಮಾರಾಯ್ರೇ. ಅವರ ಮರೆವು, ಅಸಂಬದ್ಧ ಪದ ಉಚ್ಛಾರಣೆ, ವೇದಿಕೆಗಳ ಮೇಲೆ ಗಲಿಬಿಲಿಗೊಳಗಾಗುವುದು- ಪ್ರಸಂಗಗಳನ್ನು ನಾವು ವರದಿ ಮಾಡುತ್ತಲೇ ಇದ್ದೇವೆ. ಬುಧವಾರದಂದು ವ್ಹೈಟ್ ಹೌಸ್ ನಲ್ಲಿ ನಡೆದ ಹಸಿವು, ಪೌಷ್ಠಿಕತೆ ಮತ್ತು ಆರೋಗ್ಯ ಸಮ್ಮೇಳನದಲ್ಲಿ ಮಾತಾಡುತ್ತಿದ್ದ ಅಧ್ಯಕ್ಷರು ರಿಪಬ್ಲಿಕನ್ ಪಕ್ಷದ ಸದಸ್ಯ ಮತ್ತು ಸಂಸತ್ ಸದಸ್ಯೆಯಾಗಿದ್ದ ಜಾಕಿ ವಲೋರ್ಸ್ಕಿ (Jackie Worloski) ಅವರ ಹೆಸರನ್ನು ಉಲ್ಲೇಖಿಸಿ, ಎಲ್ಲಿ ಅವರು, ಸಮ್ಮೇಳನದಲ್ಲಿ ಕಾಣಿಸುತ್ತಿಲ್ಲ, ಅಂತ ಕೇಳಿದರು. ಅಸಲು ಸಂಗತಿಯೇನು ಗೊತ್ತಾ? ಜಾಕಿ ವಲೋರ್ಸ್ಕಿ ಆಗಸ್ಟ್ ನಲ್ಲೇ ಕಾರು ಅಪಘಾತವೊಂದರಲ್ಲಿ (accident) ಬಲಿಯಾದರು!

ಸಮ್ಮೇಳನದಲ್ಲಿ ವಿಷಯದ ಮೇಲೆ ಪ್ರಾಸ್ತಾವಿಕ ಬಾಷಣದಲ್ಲಿ ಬೈಡೆನ್, ತಮ್ಮ ಸರ್ಕಾರ 2030 ರವರಗೆ ಅಮೆರಿಕದಲ್ಲಿ ಹಸಿವನ್ನು ಕೊನೆಗಾಣಿಸಲು ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದ ಬಳಿಕ, ಅಲ್ಲಿ ಹಾಜರಿದ್ದ ಎಲ್ಲರಿಗೆ ಧನ್ಯವಾದಗಳನ್ನು ಹೇಳಿ, ವಲೋರ್ಸ್ಕಿ ಮತ್ತು ಇತರ ಸದಸ್ಯರು ಹಸಿವಿನ ಸಮಸ್ಯೆಯ ಮೇಲೆ ಮಾಡಿದ ಕೆಲಸಗಳನ್ನು ಕೊಂಡಾಡಿದರು.

ಅದಾದ ಮೇಲೆ ಬೈಡೆನ್, ‘ಜಾಕೀ ಇಲ್ಲಿದ್ದೀರಾ ನೀವು? ಜಾಕಿ ಎಲ್ಲಿದ್ದಾರೆ, ಕಾಣಿಸ್ತಾನೇ ಇಲ್ಲ, ಅವರು ಬಂದಿಲ್ಲವೇನೋ ಅಂದ್ಕೋತೀನಿ,’ ಅಂತ ಹೇಳಿದರು!

ನಾರ್ದರ್ನ್ ಇಂಡಿಯಾನಾದಲ್ಲಿ ಆಗಸ್ಟ್ ನಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಜಾಕಿ ವಲೋರ್ಸ್ಕಿ ಮತ್ತು ಅವರ ಕಾಂಗ್ರೆಸ್ ನ ಇನ್ನಿಬ್ಬರು ಸಿಬ್ಬಂದಿ ಮರಣವನ್ನಪ್ಪಿದ್ದರು.

ಯುಎಸ್ ಸೆನೇಟ್ ಗೆ 2012 ರಲ್ಲಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದ ವಲೋರ್ಸ್ಕಿ ಅವರು ಹೌಸ್ ಹಂಗರ್ ಕಾಕಸ್ ಸಮಿತಿ ಸಹ-ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಮೂಲಗಳ ಪ್ರಕಾರ ಅವರಿಗೆ ಸಮ್ಮೇಳನದಲ್ಲಿ ಅವರು ಮಾಡಿದ ಕೆಲಸಗಳನ್ನು ವಿಡಿಯೋ ಮೂಲಕ ಪ್ರದರ್ಶಿಸಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

ನವೆಂಬರ್ ನಲ್ಲಿ 80ನೇ ವಯಸ್ಸಿಗೆ ಕಾಲಿಡುವ ಬೈಡನ್ ಅವರಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಂಥ ಪ್ರಮಾದಗಳು ಪದೇಪದೆ ಜರುಗುತ್ತಿದ್ದು ತಮ್ಮ ಪಕ್ಷದವರಿಂದಲೇ ಟೀಕೆಗೊಳಗಾಗುತ್ತಿದ್ದಾರೆ. ಅವರ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. 2024 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಾವು ಮರು ಆಯ್ಕೆ ಬಯಸುವುದಾಗಿ ಬೈಡೆನ್ ಹೇಳಿದ್ದಾರೆ.

ವೋರ್ಲೊಸ್ಕಿ ಸಾವಿನ ಬಗ್ಗೆ ಬೈಡೆನ್ ಆಗಸ್ಟ್ ನಲ್ಲಿ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು. ‘ಅವರ ಸಾವು ನನ್ನನ್ನು ಮತ್ತು ನನ್ನ ಪತ್ನಿ ಜಿಲ್ ಬೈಡೆನ್ ಗೆ ತೀವ್ರ ಆಘಾತವನ್ನುಂಟು ಮಾಡಿದೆ ಮತ್ತು ದುಃಖದಲ್ಲಿ ಮುಳುಗಿಸಿದೆ,’ ಅಂತ ಹೇಳಿದ್ದ ಅವರು ಹಂಗರ್ ಸಮ್ಮೇಳನ ಆಯೋಜನೆಗೆ ಅವರು ಪಡುತ್ತಿದ್ದ ಶ್ರಮವನ್ನು ಶ್ಲಾಘಿಸಿದ್ದರು.

ಅಧ್ಯಕ್ಷರಿಂದಾದ ಪ್ರಮಾದದ ಬಗ್ಗೆ ವ್ಹೈಟ್ ಹೌಸ್ ಮಾಧ್ಯಮ ಕಾರ್ಯದರ್ಶಿ ಕೆರೀನ್ ಜೀನ್-ಪೀರಿ ಅವರನ್ನು ಮಾಧ್ಯಮದವರು ಕೇಳಿದಾಗ, ‘ಆ ಸಮಯದಲ್ಲಿ ಅಧ್ಯಕ್ಷರು ವೋರ್ಲೊಸ್ಕಿ ಬಗ್ಗೆಯೇ ಯೋಚಿಸುತ್ತಿದ್ದರು, ಯಾಕೆಂದರೆ ಈ ಸಮ್ಮೇಳನ ನಡೆಯುವಂತಾಗಲು ಅವರು ನೀಡಿದ ಕಾಣಿಕೆ ಅಪಾರವಾದದ್ದು’ ಅಂತ ಹೇಳಿದರು.

ಬೈಡೆನ್ ಯಾಕೆ ವೋರ್ಲೊಸ್ಕಿ ಬಗ್ಗೆ ಯೋಚಿಸುತ್ತಿದ್ದರು ಅನ್ನೋದನ್ನು ಅಮೇರಿಕನ್ನರು ಅರ್ಥಮಾಡಿಕೊಳ್ಳುತ್ತಾರೆ, ಎಂದು ಹೇಳಿದ ಜೀನ್ ಪೀರಿ, ‘ವ್ಯಕ್ತಿಯೊಬ್ಬರ ಬಗ್ಗೆ ಹೆಚ್ಚು ಯೋಚಿಸುವುದು ಅಸ್ವಾಭಾವಿಕವೇನೂ ಅಲ್ಲವೆಂದು ನಾನು ಭಾವಿಸುತ್ತೇನೆ,’ ಅಂದರು.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada