Wheat: ಉಕ್ರೇನ್ ಯುದ್ಧದ ನಂತರ ಜಗತ್ತಿನಲ್ಲಿ ಉಳಿದಿರುವುದು ಕೇವಲ 10 ವಾರಕ್ಕಾಗುವಷ್ಟು ಗೋಧಿ ಮಾತ್ರ: ವರದಿ

| Updated By: shivaprasad.hs

Updated on: May 22, 2022 | 6:55 AM

Wheat Shortage | Russia Ukraine War: ವಿಶ್ವದಲ್ಲಿ ಗೋಧಿ ರಫ್ತಾಗುವ ಕಾಲು ಭಾಗದಷ್ಟು ರಷ್ಯಾ ಮತ್ತು ಉಕ್ರೇನ್​ನಿಂದ ಸರಬರಾಜಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳ ಆತಂಕವೆಂದರೆ ವ್ಲಾಡಿಮಿರ್​ ಪುಟಿನ್ ಆಹಾರ ಸರಬರಾಜನ್ನು ಶಸ್ತ್ರದಂತೆ ಬಳಸಬಹುದು ಎನ್ನುವುದು. ಇದಕ್ಕೆ ಕಾರಣ, ಈ ಬಾರಿ ರಷ್ಯಾದಲ್ಲಿ ಗೋಧಿ ಬೆಳೆಯು ಅದ್ಭುತವಾಗಿ ಬಂದಿದೆ. ಆದರೆ ಯುರೋಪ್​ನಲ್ಲಿ ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಂಠಿತವಾಗಿದೆ.

Wheat: ಉಕ್ರೇನ್ ಯುದ್ಧದ ನಂತರ ಜಗತ್ತಿನಲ್ಲಿ ಉಳಿದಿರುವುದು ಕೇವಲ 10 ವಾರಕ್ಕಾಗುವಷ್ಟು ಗೋಧಿ ಮಾತ್ರ: ವರದಿ
ಜಮೀನಿನಲ್ಲಿ ಉಕ್ರೇನ್​ನ ರೈತ
Image Credit source: Paul Grover /The Telegraph
Follow us on

‘ಯುರೋಪ್​ನ ಬ್ರೆಡ್ ಬಾಸ್ಕೆಟ್’ ಎಂದೇ ಕರೆಯಲ್ಪಡುತ್ತದೆ ಉಕ್ರೇನ್. ಆದರೆ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ (Russia Ukraine War) ನಂತರ ಅಲ್ಲಿಂದ ಪೂರೈಕೆಯಾಗುತ್ತಿದ್ದ ಆಹಾರಕ್ಕೆ ತೊಡಕುಂಟಾಗಿದೆ. ರಷ್ಯಾ ದಾಳಿ ನಡೆಸಿದ ನಂತರದಿಂದ ಇಲ್ಲಿಯವರೆಗೆ ಪ್ರಪಂಚವು ಕೇವಲ 10 ವಾರಗಳಕ್ಕಾಗುವಷ್ಟು ಮೌಲ್ಯದ ಗೋಧಿ (Wheat) ಉಳಿದಿದೆ ಎಂದು ಬ್ರಿಟನ್​ನ ‘ದಿ ಟೆಲಿಗ್ರಾಫ್’​ ವರದಿ ಮಾಡಿದೆ. ಈ ನಡುವೆ ಜಾಗತಿಕ ಗೋಧಿ ದಾಸ್ತಾನು 2008 ರಿಂದ ಅತ್ಯಂತ ಕೆಳಮಟ್ಟಕ್ಕೆ ಕುಸಿದಿವೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ವಾಸ್ತವದಲ್ಲಿ ಅಧಿಕೃತ ಸರ್ಕಾರದ ಅಂದಾಜುಗಳಿಗಿಂತ ದಾಸ್ತಾನು ತೀವ್ರ ಮಟ್ಟದಲ್ಲಿ ಕುಸಿದಿದ್ದು, ದಾಸ್ತಾನುಗಳಲ್ಲಿ ಈಗ ಉಳಿದಿರುವುದು ವಿಶ್ವಕ್ಕೆ ಕೇವಲ 10 ವಾರಗಳ ಕಾಲ ಪೂರೈಕೆಯಾಗಬಲ್ಲಷ್ಟು ಗೋಧಿ ಮಾತ್ರ ಎಂದು ಅಂದಾಜಿಸಲಾಗಿದೆ. ವಿಶ್ವದಲ್ಲಿ ಗೋಧಿ ರಫ್ತಾಗುವ ಕಾಲು ಭಾಗದಷ್ಟು ರಷ್ಯಾ ಮತ್ತು ಉಕ್ರೇನ್​ನಿಂದ ಸರಬರಾಜಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳ ಆತಂಕವೆಂದರೆ ವ್ಲಾಡಿಮಿರ್​ ಪುಟಿನ್ ಆಹಾರ ಸರಬರಾಜನ್ನು ಶಸ್ತ್ರದಂತೆ ಬಳಸಬಹುದು ಎನ್ನುವುದು. ಇದಕ್ಕೆ ಕಾರಣ, ಈ ಬಾರಿ ರಷ್ಯಾದಲ್ಲಿ ಗೋಧಿ ಬೆಳೆಯು ಅದ್ಭುತವಾಗಿ ಬಂದಿದೆ. ಆದರೆ ಯುರೋಪ್​ನಲ್ಲಿ ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಂಠಿತವಾಗಿದೆ. ಇದರಿಂದ ರಷ್ಯಾದಿಂದ ರಫ್ತಾಗುವ ಗೋಧಿಯು ಜಗತ್ತಿಗೆ ಅನಿವಾರ್ಯವಾಗಿದೆ.

ಗ್ರೋ ಇಂಟೆಲಿಜೆನ್ಸ್ ಮುಖ್ಯ ಕಾರ್ಯನಿರ್ವಾಹಕ ಸಾರಾ ಮೆಂಕರ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿರುವಂತೆ ಗೊಬ್ಬರದ ಕೊರತೆ, ಹವಾಮಾನ ವೈಪರೀತ್ಯ, ಅಡುಗೆ ಎಣ್ಣೆಗಳು ಮತ್ತು ಧಾನ್ಯಗಳ ಕಡಿಮೆ ದಾಸ್ತಾನು ಸೇರಿದಂತೆ ಹಲವಾರು ‘ಅಸಾಧಾರಣ’ ಸವಾಲುಗಳು ಜಾಗತಿಕ ಆಹಾರ ಸರಬರಾಜಿಗೆ ಸಮಸ್ಯೆಯಾಗಿದೆ ಎಂದಿದ್ದಾರೆ. ಇದು ತಲೆಮಾರಿಗೊಮ್ಮೆ ಆಗುವ ಸಂಕಷ್ಟವಾಗಿದ್ದು, ಅಪಾರ ಪ್ರಮಾಣದ ಅಪಾಯವನ್ನು ಎದುರಿಸುತ್ತಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಯುದ್ಧದಿಂದಾಗಿ ಉಕ್ರೇನ್​ನಂತಹ ಪ್ರದೇಶದಲ್ಲಿ ಕೃಷಿ ಉತ್ಪಾದನೆ ಕುಂಠಿತವಾಗಿದೆ. ಪರಿಣಾಮವಾಗಿ ಜಗತ್ತಿನಲ್ಲಿ ಆಹಾರ ಬೆಲೆಗಳು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿವೆ. ಇದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಶಾಂತಿಯ ಭಯವನ್ನು ಹುಟ್ಟುಹಾಕಿದೆ. ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕ ರಾಷ್ಟ್ರವಾದ ಭಾರತದಲ್ಲೂ ಬಿಕ್ಕಟ್ಟು ಸೃಷ್ಟಿಯಾಗಿದೆ. ರೈತರಿಗೆ ಆಹಾರ ಹಾಗೂ ಇಂಧನ ದುಬಾರಿಯಾಗಿದೆ.

ಇದನ್ನೂ ಓದಿ
ಗೋಧಿ ರಫ್ತಿನ ಮೇಲಿನ ನಿಷೇಧ ಸಡಿಲಗೊಳಿಸಿದ ಕೇಂದ್ರ; ಮೇ 13 ರೊಳಗೆ ನೋಂದಾಯಿಸಲಾದ ಸರಕುಗಳಿಗೆ ಅನುಮತಿ
ಭಾರತ ರಫ್ತು ನಿಷೇಧಿಸಿದ ನಂತರ ದಾಖಲೆಯ ಏರಿಕೆ ಕಂಡ ಗೋಧಿ ಬೆಲೆ: ವರದಿ
Wheat Export Ban: ಗೋಧಿ ದರ ಇಳಿಕೆಗೆ ಪ್ಲ್ಯಾನ್: ರಫ್ತು ನಿಷೇಧಿಸಿದ ಭಾರತ
ಗೋಧಿ ಮತ್ತು ಮೋದಿ: ವಿಶ್ವದಲ್ಲೀಗ ಗೋಧಿ ಬಿಕ್ಕಟ್ಟಿನ ಆತಂಕ, ಸಹಾಯ ಮಾಡುವ ಸ್ಥಿತಿಯಲ್ಲಿದೆಯೇ ಭಾರತ

ರಷ್ಯಾದ ಅಧ್ಯಕ್ಷ ಪುಟಿನ್ ಉದ್ದೇಶಪೂರ್ವಕವಾಗಿ ಉಪಕರಣಗಳನ್ನು ನಾಶಪಡಿಸುವ ಮೂಲಕ ಮತ್ತು ಉಕ್ರೇನ್‌ನಲ್ಲಿ ಧಾನ್ಯವನ್ನು ಕದಿಯುವ ಮೂಲಕ ಜಾಗತಿಕ ಆಹಾರ ಸರಬರಾಜನ್ನು ಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಪಾಶ್ಚಿಮಾತ್ಯ ಅಧಿಕಾರಿಗಳು ಭಯಪಡುತ್ತಿದ್ದಾರೆ ಎಂದೂ ಟೆಲಿಗ್ರಾಫ್ ವರದಿ ಮಾಡಿದೆ.

ಇದನ್ನೂ ಓದಿ: ಗೋಧಿ ರಫ್ತಿನ ಮೇಲಿನ ನಿಷೇಧ ಸಡಿಲಗೊಳಿಸಿದ ಕೇಂದ್ರ; ಮೇ 13 ರೊಳಗೆ ನೋಂದಾಯಿಸಲಾದ ಸರಕುಗಳಿಗೆ ಅನುಮತಿ

ಅಮೇರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್​ ಗುರುವಾರ ಮಾತನಾಡಿ, ‘‘ಪುಟಿನ್ ಆಹಾರವನ್ನು ಆಯುಧವಾಗಿ ಬಳಸುತ್ತಿದ್ದಾರೆ’’ ಎಂದು ಆರೋಪಿಸಿದ್ದಾರೆ. ‘‘ಲಕ್ಷಾಂತರ ಉಕ್ರೇನಿಯನ್ನರು ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಆಹಾರ ಪೂರೈಕೆ ಮಾಡದೇ ಅಕ್ಷರಶಃ ಒತ್ತೆಯಾಳಾಗಿ ಇರಿಸಲಾಗಿದೆ. ಉಕ್ರೇನಿಯನ್ ಸಿಲೋಸ್‌ನಲ್ಲಿ ಸುಮಾರು 20 ಮಿಲಿಯನ್ ಟನ್ ಧಾನ್ಯಗಳು ಬಳಕೆಯಾಗದೆ ಕುಳಿತಿವೆ. ಇದೂ ಕೂಡ ಆಹಾರ ಪೂರೈಕೆ ಕ್ಷೀಣವಾಗಿ ಬೆಲೆಗಳು ಏರಲು ಕಾರಣ’’ ಎಂದು ಅವರು ಹೇಳಿದ್ದಾರೆ.

ಈ ನಡುವೆ ರಷ್ಯಾವು ಗೋಧಿ ಬೆಳೆ ಉತ್ತಮವಾಗಿ ಬಂದಿದ್ದರೂ ಕೂಡ ತನ್ನ ಸರಬರಾಜಿನ ಮೇಲೆ ಹಿಡಿತ ಬಿಗಿಗೊಳಿಸಿದೆ. ಜಾಗತಿಕ ರಫ್ತಿನ ಐದನೇ ಒಂದು ಭಾಗವನ್ನು ರಷ್ಯಾ ಪೂರೈಸುತ್ತದೆ. ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಗೋಧಿ ಬೆಳೆಯು ಈ ಬಾರಿ ಕೈಕೊಟ್ಟಿದೆ.

ಅಮೆರಿಕಾದ ದಕ್ಷಿಣ ಬಯಲು ಪ್ರದೇಶದಲ್ಲಿ ಹಾದುಹೋಗುವ ‘ಗೋಧಿ ಬೆಲ್ಟ್’ ಪ್ರದೇಶಗಳು ಈ ಬಾರಿ ಬರ ಪರಿಸ್ಥಿತಿ ಎದುರಿಸಿದೆ. ಈ ತಿಂಗಳ ಆರಂಭದಲ್ಲಿ ಒಂದು ವರದಿಯಲ್ಲಿ, ಅಮೇರಿಕಾ ಕೃಷಿ ಇಲಾಖೆಯು ಗೋಧಿ ದಾಸ್ತಾನುಗಳಲ್ಲಿ ಪ್ರಮುಖ ಕುಸಿತದ ಮುನ್ಸೂಚನೆ ನೀಡಿದೆ. ಈ ಪರಿಸ್ಥಿತಿ ಜಗತ್ತಿನಾದ್ಯಂತ ಮತ್ತಷ್ಟು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ಮತ್ತಷ್ಟು ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ