Maruti Suzuki: ಭಾರತದಲ್ಲಿ ಮೂರು ಹೊಸ ಕಾರುಗಳನ್ನ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ
ಪ್ರಯಾಣಿಕರ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಶೀಘ್ರದಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ಹೊಸ ಕಾರುಗಳು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.

ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆಗಳನ್ನ ಪರಿಚಯಿಸುತ್ತಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಕಾರು ಮಾದರಿಗಳನ್ನ ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ. ಗ್ರಾಹಕರ ಬೇಡಿಕೆಯೆಂತೆ ಸಾಮಾನ್ಯ ಕಾರುಗಳ ಜೊತೆ ಪ್ರೀಮಿಯಂ ಕಾರುಗಳ ಮಾರಾಟದ ಮೇಲೂ ಹೆಚ್ಚಿನ ಗಮನಹರಿಸುತ್ತಿದೆ. ಹೀಗಾಗಿ ಮುಂಬರುವ ಎರಡು ತಿಂಗಳ ಅವಧಿಯಲ್ಲಿ ಒಟ್ಟು ಮೂರು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
ಭಾರತದಲ್ಲಿ ಸದ್ಯ ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟವು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಈ ವಿಭಾಗದಲ್ಲಿ ಇತ್ತೀಚೆಗೆ ಹಲವು ಕಾರು ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಇದರಿಂದ ಮಾರುತಿ ಸುಜುಕಿ ಸಹ ಎರಡು ಹೊಚ್ಚ ಹೊಸ ಕಾರು ಮಾದರಿಗಳ ಜೊತೆ ಒಂದು ಸಿಎನ್ ಜಿ ಮಾದರಿಯನ್ನ ಬಿಡುಗಡೆ ಮಾಡುತ್ತಿದೆ.
ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್ ಯುವಿ
ಮಾರುತಿ ಸುಜುಕಿ ಹೊಸ ಕಾರುಗಳಲ್ಲಿ ಕಂಪ್ಯಾಕ್ಟ್ ಎಸ್ ಯುವಿ ಪ್ರಮುಖವಾಗಿದ್ದು, ಇದು ಹೊಸ ಪ್ಲ್ಯಾಟ್ ಫಾರ್ಮ್ ಆಧರಿಸಿ ಬಿಡುಗಡೆಯಾಗುತ್ತಿದೆ. ಹೊಸ ಫ್ರಾಂಕ್ಸ್ ಕಾರನ್ನ ಮಾರುತಿ ಸುಜುಕಿ ಕಂಪನಿಯು ಗ್ರ್ಯಾಂಡ್ ವಿಟಾರಾ ಮತ್ತು ಬಲೆನೊ ಕಾರುಗಳ ವಿನ್ಯಾಸ ಪ್ರೇರಣೆಯೊಂದಿಗೆ ಅಭಿವೃದ್ದಿಪಡಿಸಿದೆ. ಜೊತೆಗೆ ಹೊಸ ಕಾರಿನಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ.
ಜೊತೆಗೆ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗುತ್ತಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ಇದು ರೂ. 8 ಲಕ್ಷದಿಂದ ರೂ. 12 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದೆ.
ಜಿಮ್ನಿ ಎಸ್ ಯುವಿ
ಮಾರುತಿ ಸುಜುಕಿ ಬಹುನೀರಿಕ್ಷಿತ ಕಾರುಗಳಲ್ಲಿ ಜಿಮ್ನಿ ಎಸ್ ಯುವಿ ಕೂಡಾ ಒಂದಾಗಿದೆ . ಹೊಸ ಕಾರಿನ ಬೆಲೆಯನ್ನ ಮೇ ಹೊತ್ತಿಗೆ ಘೋಷಣೆ ಮಾಡಲಿದ್ದು, ಬಿಡುಗಡೆಗೂ ಮುನ್ನವೇ ಹೊಸ ಕಾರು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಕಾರು ವಿಶೇಷವಾಗಿ ಆಫ್ ರೋಡ್ ಪ್ರಿಯರಿಗಾಗಿ ನಿರ್ಮಾಣಗೊಂಡಿದ್ದು, ಇದರಲ್ಲಿ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ.
ಜೊತೆಗೆ ಹೊಸ ಕಾರು ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿದ್ದು, ಇದು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 15 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದೆ.
ಬ್ರೆಝಾ ಸಿಎನ್ ಜಿ
ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಮತ್ತೊಂದು ಕಾರು ಮಾದರಿಯೆಂದರೆ ಅದು ಬ್ರೆಝಾ ಸಿಎನ್ ಜಿ ವರ್ಷನ್. ಕಂಪನಿಯು ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಿದ ನಂತರ ಪೆಟ್ರೋಲ್ ಜೊತೆಗೆ ಸಿಎನ್ ಜಿ ಕಾರುಗಳ ಉತ್ಪಾದನೆಯನ್ನು ಹೆಚ್ಚಿಸಿದ್ದು, ಶೀಘ್ರದಲ್ಲಿಯೇ ಬ್ರೆಝಾದಲ್ಲೂ ಹೊಸ ವರ್ಷನ್ ಬಿಡುಗಡೆ ಮಾಡಲಿದೆ.
ಸಾಮಾನ್ಯ ಬ್ರೆಝಾ ಕಾರಿನ ವಿಎಕ್ಸ್ಐ ಇಲ್ಲವೆ ಜೆಡ್ಎಕ್ಸ್ಐ ವೆರಿಯೆಂಟ್ ಗಳಲ್ಲಿ ಸಿಎನ್ ಜಿ ವರ್ಷನ್ ಖರೀದಿಗೆ ಲಭ್ಯವಿರಲಿದ್ದು, ಇದು 1.5 ಲೀಟರ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಕಿಟ್ ಹೊಂದಿರಲಿದೆ. ಇದು ಪೆಟ್ರೋಲ್ ಮಾದರಿಯಷ್ಟು ಪರ್ಫಾಮೆನ್ಸ್ ಹೊಂದಿಲ್ಲವಾದರೂ ಭರ್ಜರಿ ಮೈಲೇಜ್ ನೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಿದೆ.
Published On - 8:23 pm, Fri, 17 February 23







