Mahindra XUV700: ಐಷಾರಾಮಿ ಫೀಚರ್ಸ್ ಗಳೊಂದಿಗೆ ಹೊಸ ಮಹೀಂದ್ರಾ ಎಕ್ಸ್ ಯುವಿ700 ಬಿಡುಗಡೆ
ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಎಕ್ಸ್ ಯುವಿ700 ಎಸ್‌ಯುವಿಯ ನವೀಕೃತ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ನೀಡಲಾಗಿದೆ.
ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ (Mahindra) ಕಂಪನಿಯು ನವೀಕೃತ ಎಕ್ಸ್ ಯುವಿ700 (XUV700) ಎಸ್‌ಯುವಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 13.99 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಹೊಸ ಕಾರು ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಎಂಎಕ್ಸ್ ವೆರಿಯೆಂಟ್ ರೂ. 13.99 ಲಕ್ಷ ಬೆಲೆ ಹೊಂದಿದ್ದರೆ ಎಎಕ್ಸ್3 ವೆರಿಯೆಂಟ್ ರೂ. 16.39 ಲಕ್ಷ, ಎಎಕ್ಸ್5 ವೆರಿಯೆಂಟ್ ರೂ.17.69 ಲಕ್ಷ, ಎಎಕ್ಸ್7 ವೆರಿಯೆಂಟ್ ರೂ. 21.29 ಲಕ್ಷ ಮತ್ತು ಎಎಕ್ಸ್7 ಲಗ್ಷುರಿ ವೆರಿಯೆಂಟ್ ರೂ. 23.99 ಲಕ್ಷ ಬೆಲೆ ಹೊಂದಿದೆ.
ಭಾರತದಲ್ಲಿ ಮೊದಲ ಬಾರಿಗೆ 2021ರಲ್ಲಿ ಬಿಡುಗಡೆಯಾಗಿದ್ದ ಮಹೀಂದ್ರಾ ಎಕ್ಸ್ ಯುವಿ700 ಕಾರು ಮಾದರಿಯು ಇದುವರೆಗೆ ಬರೋಬ್ಬರಿ 2 ಲಕ್ಷ ಯುನಿಟ್ ಮಾರಾಟ ದಾಖಲೆ ಹೊಂದಿದ್ದು, ಇದೀಗ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ತಾಂತ್ರಿಕ ಅಂಶಗಳಲ್ಲಿ ಕೆಲವು ಸುಧಾರಿತ ಸೌಲಭ್ಯಗಳ ಹೊರತಾಗಿ ಹೊಸ ಕಾರು ಈ ಹಿಂದಿನ ಮಾದರಿಯೆಂತೆಯೇ ಖರೀದಿಗೆ ಲಭ್ಯವಿರಲಿದ್ದು, ನವೀಕರಿಸಲಾದ ಕ್ಯಾಬಿನ್, ಏರ್ ವೆಂಟ್‌ಗಳು, ಸೆಂಟ್ರಲ್ ಕನ್ಸೋಲ್‌ನಲ್ಲಿ ಡಾರ್ಕ್ ಕ್ರೋಮ್ ಫೀನಿಶಿಂಗ್ ಸೇರಿದಂತೆ ನಪೊಲಿ ಬ್ಲ್ಯಾಕ್ ಬಣ್ಣದ ಆಯ್ಕೆ ನೀಡಲಾಗಿದೆ.
ಇದನ್ನೂ ಓದಿ: ಅಚ್ಚರಿಯ ಬೆಲೆಗೆ ಭರ್ಜರಿ ಮೈಲೇಜ್ ನೀಡುವ ಟಾಟಾ ಪಂಚ್ ಎಲೆಕ್ಟ್ರಿಕ್ ಬಿಡುಗಡೆ
ಹೊಸ ಎಕ್ಸ್ ಯುವಿ700 ಕಾರಿನ ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ವೆರಿಯೆಂಟ್ ಗಳಲ್ಲಿ ಈ ಬಾರಿ ಹೆಚ್ಚಿನ ಮಟ್ಟದ ಫೀಚರ್ಸ್ ನೀಡಲಾಗಿದ್ದು, ಹೊಸ ಕಾರಿನ ಎರಡನೇ ಸಾಲಿನ ಆಸನದಲ್ಲೂ ಕ್ಯಾಪ್ಟನ್ ಸೀಟ್ ಸೇರಿದಂತೆ ಫ್ರಂಟ್ ಸೀಟ್ ವೆಂಟಿಲೆಷನ್ ಸೇರಿದಂತೆ ಆಲ್ ಬ್ಲ್ಯಾಕ್ ಥೀಮ್ ನೀಡಲಾಗಿದೆ. ಇದರೊಂದಿಗೆ ಹೊಸ ಕಾರಿನಲ್ಲಿ ಈ ಹಿಂದಿನ ಮಾದರಿಯಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯನ್ನೇ ಮುಂದುವರಿಸಲಾಗಿದ್ದು, ಪರ್ಫಾಮೆನ್ಸ್ ನಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಎಕ್ಸ್ ಯುವಿ700 ಕಾರಿನಲ್ಲಿ ಈ ಹಿಂದಿನಂತೆಯೇ 2.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳು ಲಭ್ಯವಿದ್ದು, ಇವು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆ ಹೊಂದಿವೆ. ಇದರಲ್ಲಿ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 450-ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.
ಇದನ್ನೂ ಓದಿ: ಬಜೆಟ್ ಬೆಲೆಯಲ್ಲಿ ಭರ್ಜರಿ ಮೈಲೇಜ್ ಸಿಎನ್ಜಿ ಕಾರುಗಳಿವು!
ಇದರೊಂದಿಗೆ ಹೊಸ ಕಾರಿನಲ್ಲಿ ವಿವಿಧ 83 ಫೀಚರ್ಸ್ ಒಳಗೊಂಡಿರುವ ಕಾರ್ ಕನೆಕ್ಟಿವಿಟಿ ನೀಡಲಾಗಿದ್ದು, ಸೀಟ್ ಮೊಮೊರಿಯಲ್ಲಿ ಇದೀಗ ವಿಂಗ್ ಮಿರರ್ ಕಂಟ್ರೋಲ್ ಯುನಿಟ್ ಸೇರಿಸಲಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೊತೆಗೆ 7 ಏರ್‌ಬ್ಯಾಗ್ ಗಳು, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯಗಳಿವೆ.
Published On - 4:55 pm, Fri, 19 January 24