Ola EV Scooters: ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಓಲಾ ಹೊಸ ಇವಿ ಸ್ಕೂಟರ್ ವಿಶೇಷತೆಗಳೇನು?
ಓಲಾ ಎಲೆಕ್ಟ್ರಿಕ್ ಕಂಪನಿಯು ಬಹುನೀರಿಕ್ಷಿತ ಎಸ್1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಬಿಡುಗಡೆಯೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಸ್1 ಪ್ರೊ ಆವೃತ್ತಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಪರಿಚಯಿಸಿದೆ.
ಎಲೆಕ್ಟ್ರಿಕ್ ಸ್ಕೂಟರ್(Electric Scooter) ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್(Ola Electric) ಕಂಪನಿ ಇದೀಗ ಮತ್ತಷ್ಟು ಹೊಸ ಇವಿ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇವಿ ಸ್ಕೂಟರ್ ಆವೃತ್ತಿಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಂಡಿರುವ ಓಲಾ ಕಂಪನಿ ಗ್ರಾಹಕರ ಬೇಡಿಕೆ ಆಧರಿಸಿ ಹೊಚ್ಚ ಹೊಸ ಎಸ್1 ಎಕ್ಸ್(S1 X) ಇವಿ ಸ್ಕೂಟರ್ ಪರಿಚಯಿಸಿದೆ. ಹೊಸ ಎಸ್1 ಎಕ್ಸ್ ಇವಿ ಸ್ಕೂಟರ್ ಜೊತೆಗೆ ಎರಡನೇ ತಲೆಮಾರಿನ ಎಸ್1 ಪ್ರೊ(S1 Pro) ಕೂಡಾ ಪರಿಚಯಿಸಿದ್ದು, ಹೊಸ ಇವಿ ಸ್ಕೂಟರ್ ಗಳು ಆಕರ್ಷಕ ಬೆಲೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.
ಓಲಾ ಹೊಸ ಎಸ್1 ಎಕ್ಸ್ ಇವಿ ಸ್ಕೂಟರ್ ಪ್ರಮುಖ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಸ್ಟ್ಯಾಂಡರ್ಡ್ ಮತ್ತು ಪ್ಲಸ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 79,999 ಬೆಲೆ ಹೊಂದಿದ್ದರೆ ಪ್ಲಸ್ ಎನ್ನುವ ವೆರಿಯೆಂಟ್ ರೂ. 99,999 ಬೆಲೆ ಹೊಂದಿದೆ. ಎಸ್1 ಎಕ್ಸ್ ಸ್ಟ್ಯಾಂಡರ್ಡ್ ವೆರಿಯೆಂಟ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿದ್ದು, ಆರಂಭಿಕ ಮಾದರಿಯಲ್ಲಿ 2ಕೆವಿಹೆಚ್ ಬ್ಯಾಟರಿ ಪ್ಯಾಕ್ ಮತ್ತು ಹೈ ಎಂಡ್ ಮಾದರಿಯಲ್ಲಿ 3 ಕೆವಿಹೆಚ್ ಬ್ಯಾಟರಿ ಪ್ಯಾಕ್ ನೀಡಲಾಗಿದೆ.
ಇದನ್ನೂ ಓದಿ: ನಾಲ್ಕು ಹೊಸ ಓಲಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಗಳು ಅನಾವರಣ
ಹೊಸ ಎಸ್1 ಎಕ್ಸ್ ಪ್ಲಸ್ ಇವಿ ಸ್ಕೂಟರಿನ ಹೈ ಎಂಡ್ ಪ್ಲಸ್ ವೆರಿಯೆಂಟ್ ನಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ. ಇದರಲ್ಲಿ 3ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದ್ದು, ಇದು ಪ್ರತಿ ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್ ನೊಂದಿಗೆ ಪ್ರಮುಖ ಮೂರು ರೈಡ್ ಮೋಡ್ ಗಳನ್ನು ಹೊಂದಿದೆ. ಈ ಮೂಲಕ 2 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರುವ ಮಾದರಿಗಳು ಪ್ರತಿ ಚಾರ್ಜ್ ಗೆ 85 ಕಿ.ಮೀ ಮೈಲೇಜ್ ನೀಡಿದರೆ 3 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಹೊಂದಿರುವ ಮಾದರಿಗಳು ಪ್ರತಿ ಚಾರ್ಜ್ ಗೆ 151 ಕಿ.ಮೀ ಮೈಲೇಜ್ ನೀಡುತ್ತವೆ.
ಹಾಗೆಯೇ ಹೊಸ ಎಸ್1 ಎಕ್ಸ್ ಸ್ಕೂಟರ್ ನಲ್ಲಿ ಓಲಾ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಿದೆ. ಎಸ್1 ಏರ್ ನಲ್ಲಿರುವಂತೆ ಎಲ್ ಸಿಡಿ ಡಿಸ್ಪ್ಲೇ ಸೇರಿದಂತೆ ಟ್ಯುಬುಲರ್ ಫ್ರೆಮ್ ನೊಂದಿಗೆ ಸಸ್ಷೆಂಷನ್ ಸೌಲಭ್ಯಕ್ಕಾಗಿ ಮುಂಭಾಗದಲ್ಲಿ ಟ್ವಿನ್ ಟೆಲಿಸ್ಕೊಪಿಕ್ ಮತ್ತು ಹಿಂಬದಿಯಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ವರ್ ನೀಡಲಾಗಿದೆ. ಇದರಲ್ಲಿ ಸುರಕ್ಷತೆಗಾಗಿ ಎರಡು ಬದಿಯಲ್ಲೂ ಡ್ರಮ್ ಬ್ರೇಕ್ ಜೊತೆಗೆ ಸಿಬಿಎಸ್, ಸ್ಟೀಲ್ ವ್ಹೀಲ್ ನೀಡಲಾಗಿದೆ. ಹೀಗಾಗಿ ನಗರದಲ್ಲಿನ ದಿನನಿತ್ಯದ ಸಂಚಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದ್ದು, ಆಕರ್ಷಕ ಬೆಲೆಯಿಂದಾಗಿ ಪೆಟ್ರೋಲ್ ಸ್ಕೂಟರ್ ಖರೀದಿದಾರರನ್ನು ಸೆಳೆಯಲಿದೆ.
ನ್ಯೂ ಜನರೇಷನ್ ಎಸ್1 ಪ್ರೊ
ಓಲಾ ಕಂಪನಿಯು ಎಸ್1 ಎಕ್ಸ್ ಜೊತೆಗೆ ಹೊಸ ತಲೆಮಾರಿನ ಎಸ್1 ಪ್ರೊ ಸಹ ಬಿಡುಗಡೆ ಮಾಡಿದೆ. ಹೊಸ ಎಸ್1 ಪ್ರೊ ಆವೃತ್ತಿಯು ಈ ಹಿಂದಿನ ಮಾದರಿಗಿಂತಲೂ ಹಲವಾರು ಆಕರ್ಷಕ ಫೀಚರ್ಸ್ ಗಳನ್ನು ಹೊಂದಿದ್ದು, ಎಕ್ಸ್ ಶೋರೂಂ ಪ್ರಕಾರ ಇದು ರೂ. 1,47,499 ಬೆಲೆ ಹೊಂದಿದೆ. ಹೊಸ ಆವೃತ್ತಿಯೊಂದಿಗೆ ಹಳೆಯ ಆವೃತ್ತಿಯು ಸಹ ಖರೀದಿಗೆ ಲಭ್ಯವಿದ್ದು, ಹೊಸ ಆವೃತ್ತಿಯಲ್ಲಿ ಪ್ಲ್ಯಾಟ್ ಫುಟ್ ರೆಸ್ಟ್ ಮತ್ತು ಟ್ಯೂಬಲರ್ ರಿಯರ್ ಗ್ರ್ಯಾಬ್ ಹ್ಯಾಂಡಲ್ ನೀಡಲಾಗಿದೆ. ಆದರೆ ಹೊಸ ಆವೃತ್ತಿಯಲ್ಲಿ ಈ ಹಿಂದಿನ ಮಾದರಿಗಿಂತಲೂ ತುಸು ಕಡಿಮೆ ಸ್ಥಳಾವಕಾಶ ಹೊಂದಿರುವ ಅಂಡರ್ ಸೀಟ್ ಸ್ಟೋರೇಜ್ ನೀಡಲಾಗಿದ್ದು, ಇಂಟ್ರಾಗ್ರೆಡೆಟ್ ಮೋಟಾರ್ ಯುನಿಟ್ ಅನ್ನು ಸರಳೀಕರಣಗೊಳಿಸಲಾಗಿದೆ.
ಇದನ್ನೂ ಓದಿ: ಹೊಸ ಕಾರುಗಳಿಗೆ ಕಡ್ಡಾಯ ಭಾರತ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ಜಾರಿ
ಎಸ್1 ಪ್ರೊ ಹೊಸ ಆವೃತ್ತಿಯಲ್ಲಿನ ತಾಂತ್ರಿಕ ಅಂಶಗಳನ್ನು ಸರಳೀಕರಣಗೊಳಿಸಿದ ನಂತರ ಪರ್ಫಾಮೆನ್ಸ್ ಮತ್ತು ಮೈಲೇಜ್ ಸಾಕಷ್ಟು ಸುಧಾರಿಸಿದೆ. 4 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಹೊಸ ಇವಿ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್ ಗೆ 195 ಕಿ.ಮೀ ಮೈಲೇಜ್ ನೀಡುತ್ತದೆ. ಹಳೆಯ ಆವೃತ್ತಿಗಿಂತಲೂ ಹೊಸ ಆವೃತ್ತಿಯು ಪ್ರತಿ ಚಾರ್ಜ್ ಗೆ 14 ಕಿ.ಮೀ ಹೆಚ್ಚುವರಿ ಮೈಲೇಜ್ ನೀಡಲಿದ್ದು, ಟಾಪ್ ಸ್ಪೀಡ್ ಪ್ರತಿ ಗಂಟೆಗೆ 120 ಕಿ.ಮೀ ಗೆ ಹೆಚ್ಚಳವಾಗಿದೆ. ಈ ಮೂಲಕ ಹೊಸ ಆವೃತ್ತಿಯು ಈ ಹಿಂದಿನ ಮಾದರಿಗಿಂತಲೂ ರೂ. 8 ಸಾವಿರದಷ್ಟು ದುಬಾರಿಯಾಗಿದ್ದು, ಸುಧಾರಿತ ಫೀಚರ್ಸ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲು ಸಹಕಾರಿಯಾಗಿವೆ ಎನ್ನಬಹುದು.