Tata Curvv: ಅಚ್ಚರಿಯ ಬೆಲೆಗೆ ಪೆಟ್ರೋಲ್, ಡೀಸೆಲ್ ಎಂಜಿನ್ ಆಯ್ಕೆಯ ಟಾಟಾ ಕರ್ವ್ ಬಿಡುಗಡೆ
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಕರ್ವ್ ಕೂಪೆ ಎಸ್ ಯುವಿ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ವಿವಿಧ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ದೇಶದ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಟಾಟಾ ಮೋಟಾರ್ಸ್ (Tata Motors) ತನ್ನ ಬಹುನೀರಿಕ್ಷಿತ ಕರ್ವ್ (Curvv) ಕೂಪೆ ಎಸ್ ಯುವಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10 ಲಕ್ಷ ಬೆಲೆ ಹೊಂದಿದೆ. ಹೊಸ ಕರ್ವ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಸ್ಮಾರ್ಟ್, ಪ್ಯೂರ್ ಪ್ಲಸ್, ಪ್ಯೂರ್ ಪ್ಲಸ್ ಎಸ್, ಕ್ರಿಯೆಟಿವ್, ಕ್ರಿಯೆಟಿವ್ ಪ್ಲಸ್, ಕ್ರಿಯೆಟಿವ್ ಪ್ಲಸ್ ಎಸ್, ಅಕಂಪ್ಲಿಶೇಡ್ ಎಸ್ , ಅಕಂಪ್ಲಿಶೇಡ್ ಪ್ಲಸ್ ಎಸ್ ಎನ್ನುವ ಎಂಟು ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಆರಂಭಿಕ ಮಾದರಿಯು ರೂ. 10 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 17.70 ಲಕ್ಷ ಬೆಲೆ ಹೊಂದಿದೆ.
ಹೊಸ ಕರ್ವ್ ಕಾರಿನಲ್ಲಿ ಪೆಟ್ರೋಲ್ ಮಾದರಿಗಳು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10 ಲಕ್ಷದಿಂದ ಟಾಪ್ ಎಂಡ್ ಮಾದರಿ ರೂ. 17.50 ಲಕ್ಷ ಬೆಲೆ ಹೊಂದಿದ್ದರೆ, ಡೀಸೆಲ್ ಆವೃತ್ತಿಗಳು ಆರಂಭಿಕವಾಗಿ ರೂ. 11.50 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 17.70 ಲಕ್ಷ ಬೆಲೆ ಹೊಂದಿದೆ.
ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಡಾಪ್ಟಿವ್ ಟೆಕ್-ಫಾರ್ವಡ್ ಲೈಫ್ ಸ್ಟೈಲ್ ಆರ್ಕಿಟೆಕ್ಚರ್ (ATLAS) ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವ ಹೊಸ ಕರ್ವ್ ಕಾರು ಗ್ರಾಹಕರ ಬೇಡಿಕೆಯೆಂತೆ ವಿವಿಧ ಎಂಜಿನ್ ಆಯ್ಕೆಯೊಂದಿಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ವಿವಿಧ ಹಂತದ ಪರ್ಫಾಮೆನ್ಸ್ ಆಯ್ಕೆಗಳನ್ನು ಒದಗಿಸುತ್ತಿದೆ.
ಹೊಸ ಕರ್ವ್ ಕಾರಿನಲ್ಲಿ120 ಹಾರ್ಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ತ್ರಿ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್, 118 ಹಾರ್ಸ್ ಪವರ್ ಉತ್ಪಾದಿಸಬಲ್ಲ 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 125 ಹಾರ್ಸ್ ಪವರ್, 225 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ 1.2 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ. ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಎಲ್ಲಾ ವೆರಿಯೆಂಟ್ ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಗಾಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಮಾಡಬಹುದಾಗಿದೆ.
ಕರ್ವ್ ಕಾರಿನಲ್ಲಿ ನೆಕ್ಸಾನ್ ಮತ್ತು ನೆಕ್ಸಾನ್ ಇವಿಯಲ್ಲಿರುವ ಹಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿರುವ ಟಾಟಾ ಮೋಟಾರ್ಸ್ ಪ್ರತಿಸ್ಪರ್ಧಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ಸುಳಿವು ನೀಡಿದ್ದು, ಹೊಸ ಕಾರಿನಲ್ಲಿ ಕೂಪೆ ಎಸ್ ಯುವಿ ವಿನ್ಯಾಸದೊಂದಿಗೆ ಡ್ಯುಯಲ್ ಟೋನ್ ಬಂಪರ್, ರೂಫ್ ಟಾಪ್ ಮೌಂಟೆಡ್ ಸ್ಪಾಯ್ಲರ್, 18 ಇಂಚಿನ ಅಲಾಯ್ ವ್ಹೀಲ್, ಫ್ಲಶ್ ಡೋರ್ ಹ್ಯಾಂಡಲ್ಸ್, ಪನೊರಮಿಕ್ ಸನ್ ರೂಫ್, ಗೆಸ್ಚರ್ ಕಂಟ್ರೋಲ್ ಹೊಂದಿರುವ ಟೈಲ್ ಗೇಟ್ ಹೊಂದಿದ್ದು, ಒಳಭಾಗದಲ್ಲಿ 12.3 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಮುಂಭಾಗದಲ್ಲಿ ವೆಂಟಿಲೆಟೆಡ್ ಆಸನಗಳು, 2 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಹಿಂಬದಿ ಆಸನಗಳಿವೆ.
ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇದರಲ್ಲಿ ಆರು ಏರ್ ಬ್ಯಾಗ್ ಗಳೊಂದಿಗೆ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ಸ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೌಲಭ್ಯಗಳಿವೆ. ಹಾಗೆಯೇ ಹೈಎಂಡ್ ಮಾದರಿಗಳಿಗಾಗಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಹೊಂದಿರುವ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ನೀಡಲಾಗಿದ್ದು, ಇದು ರಡಾರ್ ಸಹಾಯದೊಂದಿಗೆ ಸಂಭಾವ್ಯ ಅಪಘಾತಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ಮೂಲಕ ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಹೋಂಡಾ ಎಲಿವೇಟ್, ಫೋಕ್ಸ್ ವ್ಯಾಗನ್ ಟೈಗುನ್, ಎಂಜಿ ಆಸ್ಟರ್ ಮತ್ತು ಸ್ಕೋಡಾ ಕುಶಾಕ್ ಕಾರುಗಳಿಗೆ ಉತ್ತಮ ಪೈಪೋಟಿಯಾಗಲಿದೆ.