ಗರಿಷ್ಠ ಸುರಕ್ಷತೆಗಾಗಿ ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡ ಟಾಟಾ ನಿರ್ಮಾಣದ ಜನಪ್ರಿಯ ಕಾರುಗಳು

ಟಾಟಾ ಮೋಟಾರ್ಸ್ ಜನಪ್ರಿಯ ಕಾರು ಮಾದರಿಗಳಾದ ಸಫಾರಿ ಮತ್ತು ಹ್ಯಾರಿಯರ್ ಗ್ಲೋಬಲ್ ಎನ್‌ಸಿಎಪಿ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರವಾಗಿವೆ.

ಗರಿಷ್ಠ ಸುರಕ್ಷತೆಗಾಗಿ ಪ್ರತಿಷ್ಠಿತ ಪ್ರಶಸ್ತಿ ಬಾಚಿಕೊಂಡ ಟಾಟಾ ನಿರ್ಮಾಣದ ಜನಪ್ರಿಯ ಕಾರುಗಳು
ಟಾಟಾ ಹ್ಯಾರಿಯರ್ ಮತ್ತು ಸಫಾರಿ ಕಾರುಗಳಿಗೆ ಸೇಫರ್ ಚಾಯ್ಸ್ ಪ್ರಶಸ್ತಿ ವಿತರಣೆ
Follow us
|

Updated on: Sep 05, 2024 | 5:42 PM

ಮಧ್ಯಮ ಕ್ರಮಾಂಕದ ಸುರಕ್ಷಿತ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಜನಪ್ರಿಯ ಎಸ್ ಯುವಿ ಮಾದರಿಗಳಾದ ಹ್ಯಾರಿಯರ್ (Harrier) ಮತ್ತು ಸಫಾರಿ (Safari) ಕಾರುಗಳ ಸುರಕ್ಷತೆಗಾಗಿ ವಿಶ್ವದ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ನೀಡುವ ಸೇಫರ್ ಚಾಯ್ಸ್ (Safer Choice) ಪ್ರಶಸ್ತಿಯು ಈ ಬಾರಿ ಹ್ಯಾರಿಯರ್ ಮತ್ತು ಸಫಾರಿ ಕಾರುಗಳಿಗೆ ನೀಡಲಾಗಿದ್ದು, ಇವು ಗುಣಮಟ್ಟದ ಉತ್ಪಾದನೆ ಮತ್ತು ಗರಿಷ್ಠ ಸುರಕ್ಷಾ ಸಾಧನಗಳ ಜೋಡಣೆಯೊಂದಿಗೆ ಜಾಗತಿಕವಾಗಿ ಗುರುತಿಸಿಕೊಳ್ಳುವಂತಾಗಿದೆ.

ಜಾಗತಿಕವಾಗಿ ಕಾರುಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರ್ಯಾಶ್ ಟೆಸ್ಟಿಂಗ್ ಮೂಲಕ ರೇಟಿಂಗ್ಸ್ ನೀಡುತ್ತಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಉತ್ಪಾದನೆಯಲ್ಲೂ ಮಹತ್ವದ ಬದಲಾವಣೆಗೆ ಕಾರಣವಾಗಿದೆ. ರೇಂಟಿಂಗ್ಸ್ ಮೂಲಕ ಗುಣಮಟ್ಟದ ಕಾರುಗಳ ಉತ್ಪಾದನೆಗೆ ಉತ್ತೇಜಿಸುತ್ತಿರುವ ಗ್ಲೋಬಲ್ ಎನ್‌ಸಿಎಪಿಯು ಸುರಕ್ಷತೆಯಲ್ಲಿ ಗಮನಸೆಳೆಯುವ ಕಾರುಗಳಿಗೆ ಜಾಗತಿಕವಾಗಿ ಸೇಫರ್ ಚಾಯ್ಸ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಈ ಬಾರಿ ಟಾಟಾ ನಿರ್ಮಾಣದ ಹ್ಯಾರಿಯರ್ ಮತ್ತು ಸಫಾರಿ ಕಾರುಗಳು ಆಯ್ಕೆಯಾಗಿದ್ದು, ಪ್ರತಿಷ್ಠಿತ ಪ್ರಶಸ್ತಿಗೆ ಟಾಟಾ ಮೋಟಾರ್ಸ್ ಕಂಪನಿಯು ಹೆಮ್ಮೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಅಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಪ್ 5 ಕಾರುಗಳಿವು!

ಕಳೆದ ವರ್ಷ 2023ರ ಅಕ್ಟೋಬರ್ ನಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್ ಎದುರಿಸಿದ್ದ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್ ಆವೃತ್ತಿಗಳು ಅತ್ಯುತ್ತಮ ಸುರಕ್ಷಾ ಸೌಲಭ್ಯಗಳ ಮೂಲಕ 5 ಸ್ಟಾರ್ ರೇಟಿಂಗ್ಸ್ ಪಡೆದುಕೊಂಡು ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಖಾತ್ರಿಪಡಿಸಿದ್ದವು. ಸೈಡ್ ಇಂಪ್ಯಾಕ್ಟ್, ಫ್ರಂಟಲ್ ಇಂಪ್ಯಾಕ್ಟ್ ಮತ್ತು ಪೋಲ್ ಸೈಡ್ ಇಂಪ್ಯಾಕ್ಟ್ ನಲ್ಲೂ ಗಮನಸೆಳೆಯುವ ಮೂಲಕ ಪ್ರಾಣಹಾನಿ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಭರವಸೆ ನೀಡಿದ್ದವು. ಹೀಗಾಗಿ ಸೇಫರ್ ಚಾಯ್ಸ್ ಪ್ರಶಸ್ತಿ ಸಹಜವಾಗಿಯೇ ಹ್ಯಾರಿಯರ್ ಮತ್ತು ಸಫಾರಿ ಫೇಸ್‌ಲಿಫ್ಟ್ ಪಾಲಾಗಿದ್ದು, ಟಾಟಾ ಇನ್ನುಳಿದ ಕಾರುಗಳ ಸಹ ಸುರಕ್ಷತೆಯಲ್ಲಿ ಸಾಕಷ್ಟು ಗಮನಸೆಳೆಯುತ್ತಿವೆ.

ಸಫಾರಿ ಮತ್ತು ಹ್ಯಾರಿಯರ್ ಫೇಸ್‌ಲಿಫ್ಟ್ ಮಾದರಿಗಳಲ್ಲಿ ಟಾಟಾ ಮೋಟಾರ್ಸ್ ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್ ಗಳನ್ನು ಜೋಡಣೆ ಮಾಡಿದ್ದು, ಟಾಪ್ ಎಂಡ್ ಮಾದರಿಗೆ ಅನ್ವಯಿಸುವಂತೆ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಜೋಡಣೆ ಮಾಡಿದೆ. ಜೊತೆಗೆ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳನ್ನು ಮತ್ತು ಟಾಪ್ ಎಂಡ್ ಮಾದರಿಗಳಿಗೆ ಅನ್ವಯಿಸುವಂತೆ 7 ಏರ್ ಬ್ಯಾಗ್ ಗಳನ್ನು ಜೋಡಿಸಿದ್ದು, ಇದರೊಂದಿಗೆ ಎಬಿಎಸ್, ಇಬಿಡಿ, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಹಿಲ್ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.

ಇದನ್ನೂ ಓದಿ: ಗುಜರಿ ಪಾಲಿಸಿ ಅಡಿ ಹೊಸ ಕಾರು ಖರೀದಿದಾರರಿಗೆ ಭರ್ಜರಿ ಆಫರ್

ಇನ್ನು ಹೊಸ ಸಫಾರಿ ಮತ್ತು ಹ್ಯಾರಿಯರ್ ನಲ್ಲಿ ಈ ಹಿಂದಿನಂತೆ 2.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಮುಂದುವರಿಸಿದ್ದು, ಇದು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ವಿವಿಧ ಡ್ರೈವ್ ಮೋಡ್ ಗಳ ಮೂಲಕ 170 ಹಾರ್ಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಕಾರುಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 27.34 ಲಕ್ಷ ಬೆಲೆ ಹೊಂದಿವೆ.