
ಪ್ರತಿವರ್ಷದಂತೆ ನವೆಂಬರ್ 1ರಂದು ಪ್ರಪಂಚದಾದ್ಯಂತ ಇರುವ ಕನ್ನಡಿಗರೆಲ್ಲರು ಸಂಭ್ರಮಿಸುವ ದಿನ. ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವಾಗಿ ಘೋಷಣೆ ಮಾಡಲಾಯಿತು. 1956 ನವೆಂಬರ್ 1 ಮೈಸೂರು ರಾಜ್ಯವಾಗಿ ಘೋಷಣೆಯಾದ ಈ ಪರ್ವದಿಂದ ಸಂಕೇತವಾಗಿ ಅಂದಿನಿಂದ ಕನ್ನಡಿಗರೆಲ್ಲರು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ನಮ್ಮ ಕರುನಾಡಿಗೆ 2ಸಾವಿರಕ್ಕೂ ಹೆಚ್ಚು ವರ್ಷಗಳ ಬಹುದೊಡ್ಡ ಇತಿಹಾಸವಿದೆ. ನಮ್ಮ ನಾಡು ಕಲೆ, ಸಾಹಿತ್ಯ, ಸಂಸ್ಕೃತಿ, ವಾಸ್ತುಶಿಲ್ಪ, ಕ್ರೀಡೆ, ವಾಣಿಜ್ಯ ಮುಂತಾದ ವಿಷಯಗಳಲ್ಲಿ ಜಗತ್ತೇ ತಿರುಗಿ ನೋಡುವಂತ ಸಾಧನಗಳನ್ನು ಮಾಡಿದೆ. ಹಾಗೆಯೇ ರಾಜ ಮಹಾರಾಜರುಗಳು ಮತ್ತು ಮಹಾನಾಯಕರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಇಂತಹ ಪವಿತ್ರ ಭೂಮಿಯಲ್ಲಿ ಹುಟ್ಟಿದ ನಾವು ಪುಣ್ಯವಂತರು ಎಂದರೂ ತಪ್ಪಾಗಲಾರದು.
ಇದನ್ನು ಓದಿ: ವಿಕಿಪಿಡಿಯಾದಲ್ಲಿ ಕನ್ನಡ ನಿರ್ಲಕ್ಷ್ಯ?: ಕನ್ನಡದ ಅಸ್ಮಿತೆಯ ಕೂಗು ಎಲ್ಲೆಡೆ ಕೇಳಲಿ
ಈ ಬಾರಿ ನಮ್ಮ ರಾಜ್ಯ ಸರ್ಕಾರ ಕೋಟಿ ಕಂಠ ಗಾಯನ ಎನ್ನುವ ವಿಶಿಷ್ಟ ಚಿಂತನೆಯ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಕನ್ನಡ ಭಾಷೆಯ ಮೇಲೆ ಇತರೆ ಭಾಷಿಕರ ದಬ್ಬಾಳಿಕೆ ಹೆಚ್ಚಾಗುತ್ತಿದೆ. ಇದೇ ರೀತಿ ಕನ್ನಡಿಗರಿಗೆ ಉದ್ಯೋಗ ದೊರಕುವುದು ಕಷ್ಟವಾಗಿದೆ. ಇಂತಹ ಸಮಯದಲ್ಲಿ ನಾವೆಲ್ಲರೂ ಎಚ್ಚೆತ್ತುಕೊಂಡು ಕನ್ನಡಕ್ಕಾಗಿ ಕನ್ನಡದ ಅಸ್ಮಿತೆಗಾಗಿ ಹೋರಾಡಬೇಕಾಗಿದೆ.
ನಾವೆಲ್ಲರೂ ಬರೀ ನವೆಂಬರ್ ತಿಂಗಳಲ್ಲಿ ಕನ್ನಡಿಗರಾಗದೆ, ನಾವು ಪ್ರತಿನಿತ್ಯವೂ ಕನ್ನಡಿಗರಾಗಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಮ್ಮ ನಾಡು ನುಡಿಯನ್ನು, ಕಲೆ, ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮದು. ರಾಷ್ಟ್ರ ಕವಿ ಕುವೆಂಪುರವರ ಕವನ ಸಾಲುಗಳಾದ “ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎಂದೆಂದಿಗೂ ಕನ್ನಡಿಗರಿಗೆ ಸ್ಪೂರ್ತಿಯಾಗಿದೆ. ಇದು ನಮ್ಮ ಹಬ್ಬ, ಕನ್ನಡಿಗರ ಹೆಮ್ಮೆಯ ಹಬ್ಬವನ್ನು ಸಂಭ್ರಮಿಸೋಣ.
ಶಮಿತಾ ಮುತ್ಲಾಜೆ
Published On - 11:47 am, Tue, 1 November 22