Union Budget: ಮುಂಬರುವ ಮಧ್ಯಂತರ ಬಜೆಟ್ನಲ್ಲಿ ಟ್ಯಾಕ್ಸ್ ರಿಬೇಟ್ 7.5 ಲಕ್ಷ ರೂಗೆ ಹೆಚ್ಚಿಸುವ ಸಾಧ್ಯತೆ ಇಲ್ಲ: ವರದಿ
Income Tax Rebate: ಫೆಬ್ರುವರಿ 1ರಂದು ಮಂಡನೆಯಾಗಲಿರುವ ಮಧ್ಯಂತರ ಬಜೆಟ್ನಲ್ಲಿ ಟ್ಯಾಕ್ ರಿಬೇಟ್ ಹೆಚ್ಚಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಸದ್ಯ ಆದಾಯ ತೆರಿಗೆ ರಿಯಾಯಿತಿ 7 ಲಕ್ಷ ರೂ ಇದೆ. ಅದನ್ನು 7.5 ಲಕ್ಷಕ್ಕೆ ಹೆಚ್ಚಿಸಬಹುದು ಎನ್ನಲಾಗುತ್ತಿತ್ತು. ಈ ಬಾರಿಯ ಬಜೆಟ್ ವೋಟ್ ಆನ್ ಅಕೌಂಟ್ ಮಾತ್ರವೇ ಆಗಿರುವುದರಿಂದ ಟ್ಯಾಕ್ಸ್ ರಿಬೇಟ್ ಪರಿಷ್ಕರಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನವದೆಹಲಿ, ಜನವರಿ 9: ಫೆಬ್ರುವರಿ ಒಂದರಂದು ಮಂಡನೆಯಾಗಲಿರುವ ಬಜೆಟ್ನಲ್ಲಿ ಟ್ಯಾಕ್ ರಿಬೇಟ್ (Income Tax Rebate) ಹೆಚ್ಚಿಸುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ರಿಬೇಟ್ ಅನ್ನು ಹೆಚ್ಚಿಸಬಹುದು ಎನ್ನುವಂತಹ ಸುದ್ದಿಗಳು ಕೆಲ ಮಾಧ್ಯಮಗಳಲ್ಲಿ ವರದಿ ಆಗಿದ್ದವು. ಆದರೆ, ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಅವರ ಪ್ರಕಾರ ಫೆಬ್ರುವರಿ 1ರಂದು ಮಂಡನೆಯಾಗಲಿರುವುದು ಮಧ್ಯಂತರ ಬಜೆಟ್ ಮಾತ್ರ. ಅಲ್ಲದೇ ವೋಟ್ ಆನ್ ಅಕೌಂಟ್ ಮಾತ್ರ ಇರುತ್ತದೆ. ಹೀಗಾಗಿ, ದೊಡ್ಡ ಯೋಜನೆ ಅಷ್ಟೇ ಅಲ್ಲ ಯಾವುದೇ ತೆರಿಗೆ ಪರಿಷ್ಕರಣೆಯೂ ಇರುವುದಿಲ್ಲ ಎಂದು ಮನಿ ಕಂಟ್ರೋಲ್ ವೆಬ್ಸೈಟ್ನಲ್ಲಿ ವರದಿಯಾಗಿದೆ.
ಇನ್ಕಮ್ ಟ್ಯಾಕ್ಸ್ ರಿಬೇಟ್ ಅಥವಾ ಆದಾಯ ತೆರಿಗೆ ರಿಯಾಯಿತಿ ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ 7 ಲಕ್ಷ ರೂ ಇದೆ. 5 ಲಕ್ಷ ರೂ ಇದ್ದ ರಿಬೇಟ್ ಅನ್ನು ಕಳೆದ ವರ್ಷದ ಬಜೆಟ್ನಲ್ಲಿ 7 ಲಕ್ಷ ರೂಗೆ ಹೆಚ್ಚಿಸಲಾಗಿತ್ತು. ಈ ಮೊತ್ತವನ್ನು 7.5 ಲಕ್ಷ ರೂಗೆ ಏರಿಸಬಹುದು ಎನ್ನಲಾಗಿತ್ತು. ಇಂಥದ್ದೊಂದು ಸಾಧ್ಯತೆಯನ್ನು ಈಗ ತಳ್ಳಿಹಾಕಲಾಗಿದೆ.
ಇದನ್ನೂ ಓದಿ: MSMEs: ಭಾರತದ ಜಿಡಿಪಿಗೆ ಎಂಎಸ್ಎಂಇಗಳ ಕೊಡುಗೆ ಶೇ. 30; ಕರ್ನಾಟಕದಲ್ಲಿ ಎಷ್ಟಿವೆ ಸಣ್ಣ ಉದ್ದಿಮೆಗಳು?
ಆದರೆ, ಇನ್ಕಮ್ ಟ್ಯಾಕ್ಸ್ ರಿಬೇಟ್ ಸಾಧ್ಯತೆ ಇಲ್ಲದೇ ಹೋದರೂ, ಮೂಲದಲ್ಲಿ ಕಡಿತಗೊಳಿಸಲಾಗುವ ಟಿಸಿಎಸ್ ತೆರಿಗೆಯ ಪರಿಷ್ಕರಣೆ ಸಾಧ್ಯತೆ ಇದೆ ಎನ್ನಲಾಗಿದೆ. ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಸಿ ವೈಯಕ್ತಿಕವಾಗಿ ಒಂದು ಹಣಕಾಸು ವರ್ಷದಲ್ಲಿ ಮಾಡಲಾಗುವ 7 ಲಕ್ಷ ರೂವರೆಗಿನ ವೆಚ್ಚಕ್ಕೆ ಟಿಸಿಎಸ್ ತೆರಿಗೆಯಿಂದ ವಿನಾಯಿತಿ ಕೊಡುವ ಕ್ರಮವನ್ನು ಬಜೆಟ್ನಲ್ಲಿ ಘೋಷಣೆ ಮಾಡಬಹುದು ಎಂದು ವರದಿಗಳು ಹೇಳುತ್ತಿವೆ.
ಆದಾಯ ತೆರಿಗೆಯ ವಿವಿಧ ಸ್ಲ್ಯಾಬ್ಗಳು ಹೀಗಿವೆ
- 3 ಲಕ್ಷ ರೂವರೆಗಿನ ಆದಾಯ: ತೆರಿಗೆ ಇಲ್ಲ
- 3 ಲಕ್ಷ ರೂನಿಂದ 6 ಲಕ್ಷ ರೂವರೆಗಿನ ಆದಾಯ: ಶೇ. 5ರಷ್ಟು ತೆರಿಗೆ
- 6 ಲಕ್ಷ ರೂನಿಂದ 9 ಲಕ್ಷ ರೂವರೆಗೆ: ಶೇ. 10ರಷ್ಟು ತೆರಿಗೆ
- 9 ಲಕ್ಷ ರೂನಿಂದ 12 ಲಕ್ಷ ರೂವರೆಗೆ: ಶೇ. 15ರಷ್ಟು ತೆರಿಗೆ
- 12 ಲಕ್ಷ ರೂನಿಂದ 15 ಲಕ್ಷ ರೂವರೆಗೆ: ಶೇ. 20ರಷ್ಟು ತೆರಿಗೆ
- 15 ಲಕ್ಷಕ್ಕೂ ಮೇಲ್ಪಟ್ಟ ಆದಾಯಕ್ಕೆ: ಶೇ. 30ರಷ್ಟು ತೆರಿಗೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:48 pm, Tue, 9 January 24