Union Budget: ಕೇಂದ್ರ ಬಜೆಟ್​ನಲ್ಲಿ ವರ್ಕ್​ ಫ್ರಮ್ ಹೋಮ್​ಗೆ ಸಂಬಂಧಿಸಿದ ನಿಯಮಾವಳಿ ಪ್ರಸ್ತಾವ ಸಾಧ್ಯತೆ

ವರ್ಕ್ ಫ್ರಮ್ ಹೋಮ್​ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ 2022ರ ಬಜೆಟ್​ನಲ್ಲಿ ಕೆಲವು ಪ್ರಸ್ತಾವಗಳನ್ನು ಕಾರ್ಪೊರೇಟ್​ಗಳಿಂದ ನಿರೀಕ್ಷೆ ಮಾಡಲಾಗುತ್ತಿದೆ. ಅವುಗಳೇನು ಎಂಬ ಮಾಹಿತಿ ಇಲ್ಲಿದೆ.

Union Budget: ಕೇಂದ್ರ ಬಜೆಟ್​ನಲ್ಲಿ ವರ್ಕ್​ ಫ್ರಮ್ ಹೋಮ್​ಗೆ ಸಂಬಂಧಿಸಿದ ನಿಯಮಾವಳಿ ಪ್ರಸ್ತಾವ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 21, 2022 | 8:06 PM

ಭಾರತದ ಕಾರ್ಮಿಕ ಸಚಿವಾಲಯವು ಕಂಪೆನಿಗಳ ಜತೆ ಮಾತುಕತೆ ನಡೆಸುತ್ತಿದ್ದು, ಮನೆಗಳಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳ ವೇತನ ರಚನೆಯಲ್ಲಿ ಬದಲಾವಣೆ ಮಾಡುವ ಸಂಬಂಧವಾಗಿ ಇಟ್ಟಿರುವ ಪ್ರಸ್ತಾವದ ಬಗೆಗಿನ ಚರ್ಚೆ ಇದಾಗಿದೆ. ಮನೆಯಿಂದಲೇ ಕೆಲಸ ಮಾಡುವ (Work From Home) ಉದ್ಯೋಗಿಗಳ ಬಾಡಿಗೆ ಭತ್ಯೆಯನ್ನು ಇಳಿಸುವುದರಿಂದ ಹೊಸ ಕಡಿತದ ತನಕ ನಾನಾ ಸಲಹೆಗಳು ಬರುತ್ತಿವೆ. ಕೊರೊನಾ ಕಾರಣದಿಂದಾಗಿ ಹೊಸ ಉದ್ಯೋಗ ಮಾದರಿಯನ್ನು ಪರಿಚಯಿಸಲಾಗಿದ್ದು, ಉದ್ಯೋಗದಾತರು ಕಚೇರಿಗಳನ್ನು ಬಿಡುವಂತಾಗಿದೆ. ಆದ್ದರಿಂದ ಇದಕ್ಕೆ ಸೂಕ್ತವಾದ ಕಾನೂನು ಚೌಕಟ್ಟನ್ನು ರೂಪಿಸುವುದಕ್ಕೆ ಸಂಬಂಧಪಟ್ಟ ವಲಯದ ಪ್ರತಿನಿಧಿಗಳ ಜತೆಗೆ ಚರ್ಚೆ ನಡೆಯಿತು ಎಮದು ಸಚಿವಾಲಯದ ಅಧಿಕಾರಿಗಳು ಬ್ಲೂಮ್​ಬರ್ಗ್​ಕ್ವಿಂಟ್​ಗೆ ತಿಳಿಸಿರುವುದಾಗಿ ವರದಿ ಆಗಿದೆ.

ಉದ್ಯೋಗಿಗಳು ತಮ್ಮ ಮೂಲಸ್ಥಳಗಳಿಗೆ ಹಿಂತಿರುಗಿರುವುದರಿಂದ ಮನೆ ಬಾಡಿಗೆ ಭತ್ಯೆಯಲ್ಲಿ ಇಳಿಕೆ, ಹೊಸದಾಗಿ ವಿದ್ಯುತ್​ ಬಿಲ್ ಹಾಗೂ ವೈಫೈ ಖರ್ಚಿನಂಥದ್ದರ ರೀಎಂಬರ್ಸ್​ಮೆಂಟ್ ಇಂಥವುಗಳನ್ನು ಸೇರ್ಪಡೆ ಮಾಡುವ ಕುರಿತು ಚರ್ಚೆ ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಪರ್ಸಂಟೇಜ್ ಆಧಾರದಲ್ಲಿ ಮನೆ ಬಾಡಿಗೆ ಭತ್ಯೆ ಇಳಿಕೆ ಮಾಡುವ ಕುರಿತು ನಿರ್ಧಾರ ಇನ್ನೂ ಅಂತಿಮ ಆಗಬೇಕಿದೆ. ಈ ಚೌಕಟ್ಟಿನ ಕರಡು ಪ್ರಸ್ತಾವವನ್ನು ಹಣಕಾಸು ಸಚಿವಾಲಯಕ್ಕೆ ಸಲ್ಲಿಸಲಾಗುವುದು. ಯಾವುದೇ ಬದಲಾವಣೆ ಆಗಬೇಕಿದ್ದಲ್ಲಿ ತೆರಿಗೆ ಕಾನೂನುಗಳಿಗೆ ತಿದ್ದುಪಡಿ ತರಬೇಕಾಗುತ್ತದೆ. 2022ರ ಬಜೆಟ್​ನಲ್ಲಿ ಇದು ಒಳಗೊಳ್ಳುತ್ತದೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಕಾರ್ಮಿಕ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯಗಳಿಗೆ ಕಳಿಸಿರುವ ಮೇಲ್​ಗಳಿಗೂ ಉತ್ತರ ಸಿಕ್ಕಿಲ್ಲ.

ಭಾರತೀಯ ಕಂಪೆನಿಗಳ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಕಾರ್ಮಿಕ ಸಚಿವಾಲಯದ ಜತೆಗೆ ಜನವರಿ 13ನೇ ತಾರೀಕಿನಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದರು. ಅಖಿಲ ಭಾರತ ವಾಣಿಜ್ಯೋದ್ಯಮಿಗಳ ಒಕ್ಕೂಟವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದು, ಕೊವಿಡ್-19 ಕಳೆದ ಎರಡು ವರ್ಷದಿಂದ ಕಾಣಿಸಿಕೊಂಡ ಮೇಲೆ ವರ್ಕ್ ಫ್ರಮ್ ಹೋಮ್ ಪದ್ಧತಿ ಜಾರಿಗೆ ಬಂದಿದೆ ಮತ್ತು ಈ ವಿಧಾನವು ಗಟ್ಟಿಯಾದ ಮತ್ತು ರಚನಾತ್ಮಕವಾದ ನಿಯಮಗಳು ಮತ್ತು ನೀತಿಗಳನ್ನು ಅಳವಡಿಸಿಕೊಂಡಲ್ಲಿ ಸರಾಗವಾಗಿ ನಡೆದುಕೊಂಡು ಹೋಗುತ್ತದೆ ಎಂದಿದೆ.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇವಾಲ್ ಮಾತನಾಡಿ, ವರ್ಕ್​ ಫ್ರಮ್​ ಹೋಮ್​ಗೆ ಸಮಗ್ರವಾದ ನಿಯಮ ಹಾಗೂ ನಿಬಂಧನೆಗಳನ್ನು ಕೇಂದ್ರ ಸರ್ಕಾರ ರೂಪಿಸಬೇಕು. ಹಾಗೆ ಮಾಡಿದಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳ ಮಧ್ಯೆ ಬಿಕ್ಕಟ್ಟು ತಡೆಯಬಹುದು ಎಂದಿದ್ದಾರೆ. ಸೇವಾ ವಲಯಕ್ಕೆ ಸರ್ಕಾರದಿಂದ ಕಳೆದ ವರ್ಷ ಜನವರಿಯಲ್ಲಿ ವರ್ಕ್​ ಫ್ರಮ್ ಹೋಮ್​ಗೆ ಸಂಬಂಧಿಸಿದ ಆದೇಶ ಹೊರಡಿಸಲಾಗಿತ್ತು. ಉದ್ಯೋಗದಾತರು ಹಾಗೂ ಉದ್ಯೋಗಿಗಳು ಚರ್ಚಿಸಿ, ಪರಸ್ಪರ ಒಪ್ಪಿಗೆಯೊಂದಿಗೆ ಕೆಲಸದ ಅವಧಿ ಮತ್ತು ಇತರ ಸೇವಾ ನಿಯಮಾವಳಿ ರೂಪಿಸಿಕೊಳ್ಳಲು ಅವಕಾಶ ನೀಡಿತ್ತು. ಇದೀಗ ಸರ್ಕಾರದಿಂದ ಎಲ್ಲ ವಲಯಗಳಿಗೂ ಸಮಗ್ರವಾದ ಅಧಿಕೃತ ರಚನೆಯೊಂದನ್ನು ತರಲು ಯೋಜನೆ ರೂಪಿಸಲಾಗಿದೆ.

ಕನ್ಸಲ್ಟೆನ್ಸಿ ಸಂಸ್ಥೆಯಾದ ಡೆಲಾಯಿಟ್, ಸದ್ಯದ ಪರಿಸ್ಥಿತಿಯನ್ನು ಮನಗಂಡು, ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ 50 ಸಾವಿರ ರೂಪಾಯಿ ವರ್ಕ್ ಫ್ರಮ್ ಹೋಮ್ ಭತ್ಯೆ ನೀಡಬೇಕು ಎಂದಿದೆ. ಇಂಟರ್​ನೆಟ್ ಶುಲ್ಕ, ಬಾಡಿಗೆ, ವಿದ್ಯುತ್, ಪೀಠೋಪಕರಣ ಮುಂತಾದವನ್ನು ವರ್ಕ್​ ಫ್ರಮ್ ಹೋಮ್ ವೆಚ್ಚ ಎಂದು ಪರಿಗಣಿಸಬೇಕಾಗುತ್ತದೆ. ಆದ್ದರಿಂದ ಈ ವೆಚ್ಚಗಳನ್ನು ಭರಿಸುವುದಕ್ಕೆ ಭತ್ಯೆಯನ್ನು ನೀಡಬೇಕಾಗುತ್ತದೆ ಎಂದಿದೆ. ಡೆಲಾಯಿಟ್​ನಿಂದ ಯುನೈಟೆಡ್ ಕಿಂಗ್​ಡಮ್ ಉದಾಹರಣೆ ನೀಡಲಾಗಿದೆ. ಅಲ್ಲಿ ಸರ್ಕಾರವು ಪ್ರತಿ ವಾರಕ್ಕೆ ಆರು ಪೌಂಡ್ ಸ್ಟರ್ಲಿಂಗ್ (ರೂ. 609) ತೆರಿಗೆ ವಿನಾಯಿತಿಯನ್ನು ನೀಡಲಾಗಿದ್ದು, ಮನೆಯ ವೆಚ್ಚದ ಜತೆಗೆ ಇದು ವರ್ಕ್ ಫ್ರಮ್ ಹೋಮ್ ಮಾಡುವವರಿಗೆ ಅನ್ವಯ ಆಗುತ್ತದೆ.

ಇನ್​ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್​ ಆಫ್ ಇಂಡಿಯಾ (ಐಸಿಎಐ) ಕೂಡ ಸರ್ಕಾರಕ್ಕೆ ಬಜೆಟ್ ಪೂರ್ವ ಮನವಿ ಸಲ್ಲಿಸುವಾಗ ವರ್ಕ್ ಫ್ರಮ್ ಹೋಮ್ ವೆಚ್ಚಗಳಿಗೆ ತೆರಿಗೆ ವಿನಾಯಿತಿ ನೀಡಲು ಶಿಫಾರಸು ಮಾಡಿದೆ. ಇನ್ನು ನಾಸ್ಕಾಂ (Nasscom) ಕೆಲಸದ ಅವಧಿ, ಪಾಳಿಯ ಅವಧಿ, ಆದಾಯ ತೆರಿಗೆ ಕಾನೂನಲ್ಲಿ ಬದಲಾವಣೆ ತಂದು ವರ್ಕ್​ ಫ್ರಮ್​ ಹೋಮ್​ಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವುದನ್ನು ವ್ಯಾಪಾರದ ವೆಚ್ಚ ಎಂದು ಪರಿಗಣಿಸಬೇಕು- ಹೀಗೆ ಆರು ಕ್ರಮಗಳನ್ನು ಜಾರಿಗೆ ತರಲು ಶಿಫಾರಸು ಮಾಡಿದೆ.

ಇದನ್ನೂ ಓದಿ: Union Budget 2022: ಕೇಂದ್ರ ಬಜೆಟ್​ನಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಕಿ- ಅಂಶಗಳು