ಕೇಂದ್ರ ಬಜೆಟ್ 2022ರ ಮಂಡನೆ ವೇಳೆ ಹಣಕಾಸು ಸಚಿವೆ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣದ (Privatisation) ಬಗ್ಗೆ ಪ್ರಸ್ತಾವ ಮಾಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಎಲ್ಐಸಿ ಐಪಿಒ ಮತ್ತು ಇಸ್ಪಾತ್ ನೀಲಾಂಚಲ್ ಅನ್ನು ಟಾಟಾ ಸ್ಟೀಲ್ಗೆ ವಹಿಸುವ ಬಗ್ಗೆ ಕೂಡ ತಿಳಿಸಿದ್ದಾರೆ. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ಷೇರಿನ ಬೆಲೆಯಲ್ಲಿ ಹೆಚ್ಚಳವಾಗಿದೆ. ಬಿಎಸ್ಇ ಪಿಎಸ್ಯು ಸೂಚ್ಯಂಕವು ಈ ಹಿಂದಿನ ಟ್ರೇಡಿಂಗ್ ಸೆಷನ್ನಲ್ಲಿ 9020.21 ಪಾಯಿಂಟ್ಸ್ನೊಂದಿಗೆ ವಹಿವಾಟು ಮುಕ್ತಾಯಗೊಳಿಸಿತ್ತು. ಇಂದು ಆರಂಭವಾಗಿದ್ದು 9113.04 ಪಾಯಿಂಟ್ಸ್ಗೆ. ಆ ನಂತರ ದಿನದ ಗರಿಷ್ಠ ಮಟ್ಟ 9114.15 ಪಾಯಿಂಟ್ಸ್ ತಲುಪಿತು.
ಅಂದ ಹಾಗೆ ಬಿಎಸ್ಇ ಪಿಎಸ್ಯು ಸೂಚ್ಯಂಕದ ವಾರ್ಷಿಕ ಕನಿಷ್ಠ ಮಟ್ಟ 5724.42 ಪಾಯಿಂಟ್ಸ್ ಆಗಿದ್ದು, ಗರಿಷ್ಠ ಮಟ್ಟ 9,358.78 ಪಾಯಿಂಟ್ಸ್ ಆಗಿದೆ. ಇತ್ತೀಚೆಗೆ ಏರ್ ಇಂಡಿಯಾವನ್ನು ಯಶಸ್ವಿಯಾಗಿ ಟಾಟಾ ಸಮೂಹಕ್ಕೆ ವರ್ಗಾವಣೆ ಮಾಡಿ ಮುಗಿಸಿರುವುದು ದೊಡ್ಡ ಮಟ್ಟದ ಆತ್ಮವಿಶ್ವಾಸ ನೀಡಿದೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಏರ್ ಇಂಡಿಯಾದ ಷೇರಿನ ಪಾಲನ್ನು ಮಾರಾಟ ಮಾಡಿದ್ದು, ಇದೀಗ ಎಲ್ಐಸಿ ಐಪಿಒ ಪ್ರಸಕ್ತ ಹಣಕಾಸು ವರ್ಷದಲ್ಲಿ ಅತಿ ದೊಡ್ಡ ನಿರೀಕ್ಷೆ ಆಗಿದೆ.
ಎಲ್ಐಸಿ ಐಪಿಒ ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಆಗಿದೆ. ಇದರ ಜತೆಗೆ ಇತರ ಸಾರ್ವಜನಿಕ ಸ್ವಾಮ್ಯದ ಷೇರುಗಳ ಮಾರಾಟ ಕೂಡ 2022-23ರ ಹಣಕಾಸು ವರ್ಷದಲ್ಲಿ ಮಾಡಲಾಗುವುದು. ಈ ಲೇಖನವನ್ನು ಸಿದ್ಧ ಮಾಡುವ ಹೊತ್ತಿಗೆ ಅಲ್ಪ ಪ್ರಮಾಣದ ಇಳಿಕೆಯೊಂದಿಗೆ 9,019.46 ಪಾಯಿಂಟ್ಸ್ನಲ್ಲಿ ವಹಿವಾಟು ನಡೆಸುತ್ತಿತ್ತು.
ಇದನ್ನೂ ಓದಿ: Air India: ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರಿಸುವ ಕಾರ್ಯ ಸಂಪೂರ್ಣ ಎಂದು ಘೋಷಿಸಿದ ತುಹಿನ್ ಕಾಂತ್ ಪಾಂಡೆ