Union Budget 2022: ಗೃಹ ಖರೀದಿದಾರರಿಗೆ ಆದಾಯ ತೆರಿಗೆ ವಿನಾಯ್ತಿ ಗಿಫ್ಟ್ ಸಾಧ್ಯತೆ, ಗರಿಗೆದರಿದ ನಿರೀಕ್ಷೆ
Tax Releif for Home Buyers: ಗೃಹ ನಿರ್ಮಾಣ ಮಾಡುವವರಿಗೆ ನಿರ್ಮಲಾ ಸೀತಾರಾಮನ್ ಖುಷಿ ಸುದ್ದಿ ನೀಡುವ ಸಾಧ್ಯತೆ ಇದೆ. ಗೃಹಸಾಲದ ಮೇಲಿನ ತೆರಿಗೆ ಕಡಿತವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ
ಕೇಂದ್ರ ಸರ್ಕಾರವು ಈ ಬಾರಿಯ ಸಾಮಾನ್ಯ ಬಜೆಟ್ನಲ್ಲಿ (Union Budget 2021) ಗೃಹ ಖರೀದಿದಾರರಿಗೆ (Home Buyers) ಕೆಲ ಗಿಫ್ಟ್ಗಳನ್ನು ನೀಡುವ ಸಾಧ್ಯತೆ ಇದೆ. ದೇಶದಲ್ಲಿ ಗೃಹ ನಿರ್ಮಾಣ ಹಾಗೂ ಖರೀದಿಯನ್ನು ಉತ್ತೇಜಿಸಲು ಗೃಹ ಸಾಲದ ಆದಾಯ ತೆರಿಗೆ ಕಡಿತದ (Tax Relief) ಮಿತಿ ಏರಿಕೆಯ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರಿಂದ ದೇಶದ ಆರ್ಥಿಕತೆಗೂ ಉತ್ತೇಜನ ಸಿಗಲಿದೆ, ಮಧ್ಯಮ ವರ್ಗಕ್ಕೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೇಂದ್ರ ಸರ್ಕಾರವು ಫೆಬ್ರುವರಿ 1 ರಂದು ಲೋಕಸಭೆಯಲ್ಲಿ ಮಂಡಿಸುವ ಕೇಂದ್ರದ 2022-23ನೇ ಸಾಲಿನ ಸಾಮಾನ್ಯ ಬಜೆಟ್ ಬಗ್ಗೆ ದೇಶದ ಜನರಲ್ಲಿ ತಮ್ಮದೇ ಆದ ನಿರೀಕ್ಷೆಗಳಿರುವುದು ಸಹಜ. ಸಮಾಜದ ಬಹುತೇk ಎಲ್ಲ ವರ್ಗಗಳ ಜನರು ಬಜೆಟ್ನಲ್ಲಿ ತಮ್ಮ ಏಳಿಗೆಗೆ ಏನಾದರೂ ಹೊಸ ಯೋಜನೆ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಲ್ಲೇ ಇರುತ್ತಾರೆ. ಆದಾಯ ಗಳಿಸುವ ಹಾಗೂ ಆದಾಯ ತೆರಿಗೆ ಪಾವತಿಸುವ ವರ್ಗವು ಆದಾಯ ತೆರಿಗೆ ಕಡಿತದ ನಿರೀಕ್ಷೆ ಇರಿಸಿಕೊಳ್ಳುವುದು ಸಹಜ. ಈ ವರ್ಷ ಆದಾಯ ತೆರಿಗೆ ದರಗಳಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆದರೆ ಹೊಸ ಆದಾಯ ತೆರಿಗೆ ಪದ್ಧತಿಗೆ ಬದಲಾಗುವಂತೆ ಜನರಿಗೆ ಉತ್ತೇಜನ ನೀಡುವ ಸಾಧ್ಯತೆಯೂ ಇದೆ. ಇನ್ನೂ ಕೋಟ್ಯಂತರ ಆದಾಯ ತೆರಿಗೆ ಪಾವತಿದಾರರು ಹಳೆಯ ಪದ್ಧತಿ ಪ್ರಕಾರವೇ ತೆರಿಗೆ ಪಾವತಿಸುತ್ತಿದ್ದಾರೆ. ಹೊಸ ಆದಾಯ ತೆರಿಗೆ ಪದ್ಧತಿಗಿಂತ ಜನರಿಗೆ ಹಳೆಯ ಆದಾಯ ತೆರಿಗೆ ಸ್ಲ್ಯಾಬ್ ಪದ್ದತಿಯೇ ಲಾಭದಾಯಕ ಎನಿಸಿದೆ.
ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ₹ 2.5 ಲಕ್ಷದವರೆಗೂ ಯಾವುದೇ ಆದಾಯ ತೆರಿಗೆ ಇಲ್ಲ. ₹ 2.5 ಲಕ್ಷ ರೂಪಾಯಿಯಿಂದ ₹ 5 ಲಕ್ಷದವರೆಗೂ ವಾರ್ಷಿಕ ಆದಾಯ ಇರುವವರು ಶೇ 5ರಷ್ಟು ಆದಾಯ ತೆರಿಗೆ ಪಾವತಿಸಬೇಕು. ವಾರ್ಷಿಕ ₹ 5ರಿಂದ ₹ 7.5 ಲಕ್ಷ ಆದಾಯ ಇರುವವರು ಶೇ 10ರಷ್ಟು ಆದಾಯ ತೆರಿಗೆ ಪಾವತಿಸಬೇಕು. ಆದರೆ, ಹೊಸ ತೆರಿಗೆ ಪದ್ಧತಿಯಲ್ಲಿ ಸೆಕ್ಷನ್ 80ಸಿ ಅಡಿ ಪಡೆಯುತ್ತಿದ್ದ ಗೃಹಸಾಲದ ಬಡ್ಡಿ ಪಾವತಿಗೆ ಆದಾಯ ತೆರಿಗೆ ವಿನಾಯಿತಿ, ಸ್ಟಾಂಡರ್ಡ್ ಡಿಡಕ್ಷನ್, ಇನ್ಸೂರೆನ್ಸ್ ಪಾವತಿಗೆ ಆದಾಯ ತೆರಿಗೆ ವಿನಾಯಿತಿ, ಮಕ್ಕಳ ಸ್ಕೂಲ್ ಫೀಜು ಪಾವತಿಗೆ ಐಟಿ ವಿನಾಯಿತಿ ಸೇರಿದಂತೆ ವಿನಾಯಿತಿಗಳನ್ನು ಪಡೆಯಲು ಅವಕಾಶವಿಲ್ಲ. ಹೀಗಾಗಿ ಆದಾಯ ತೆರಿಗೆ ಪಾವತಿದಾರರು ಹಳೆಯ ತೆರಿಗೆ ಪದ್ಧತಿಯಲ್ಲೇ ಹೆಚ್ಚಾಗಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಆದಾಯ ತೆರಿಗೆ ಪಾವತಿದಾರರಿಗೆ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಆಕರ್ಷಣೀಯವಾಗಿಸಲು ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯತ್ನಿಸಬಹುದು.
ಇನ್ನು ಗೃಹ ಖರೀದಿ, ಗೃಹ ನಿರ್ಮಾಣ ಮಾಡುವವರಿಗೆ ನಿರ್ಮಲಾ ಸೀತಾರಾಮನ್ ಖುಷಿ ಸುದ್ದಿ ನೀಡುವ ಸಾಧ್ಯತೆ ಇದೆ. ಗೃಹಸಾಲದ ಮೇಲಿನ ತೆರಿಗೆ ಕಡಿತವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ. ದೇಶದಲ್ಲಿ ಹೆಚ್ಚೆಚ್ಚು ಜನರು ಗೃಹ ನಿರ್ಮಾಣ ಮಾಡಬೇಕು, ಜನರು ಸ್ವಂತ ಮನೆಯನ್ನು ಹೊಂದಲು ಉತ್ತೇಜನ ನೀಡಬೇಕೆಂಬ ಉದ್ದೇಶದಿಂದ ಗೃಹ ಸಾಲದ ಮೇಲೆ ಹೆಚ್ಚಿನ ತೆರಿಗೆ ಕಡಿತದ ಮಿತಿ ಏರಿಕೆಯ ಘೋಷಣೆ ಮಾಡುವ ಸಾಧ್ಯತೆ ಇದೆ.
ಸದ್ಯ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿ ಗೃಹಸಾಲದ ಮೇಲಿನ ಅಸಲು ಮೊತ್ತಕ್ಕೆ ವಾರ್ಷಿಕ ₹ 1.5 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ವಿನಾಯಿತಿ ಇದೆ. ಇದನ್ನು 2 ಲಕ್ಷ ರೂಪಾಯಿಗೆ ಏರಿಸುವ ಸಾಧ್ಯತೆ ಇದೆ. ಬಜೆಟ್ನಲ್ಲಿ ಈ ಘೋಷಣೆ ಮಾಡಿದರೆ, ಗೃಹಸಾಲ ಪಡೆದು ಆದಾಯ ತೆರಿಗೆ ಪಾವತಿಸುವವರಿಗೆ ರಿಲೀಫ್ ನೀಡಿದಂತೆ ಆಗುತ್ತೆ. ಜೊತೆಗೆ ರಿಯಲ್ ಎಸ್ಟೇಟ್ ವಲಯಕ್ಕೂ ಬೇಡಿಕೆ ಹೆಚ್ಚಾಗಲು ಪೋತ್ಸಾಹ ನೀಡಿದಂತೆ ಆಗುತ್ತೆ ಎಂಬ ಲೆಕ್ಕಾಚಾರ ಕೇಂದ್ರ ಸರ್ಕಾರದಲ್ಲಿದೆ.
ಸೆಕ್ಷನ್ 80ಸಿ ಅಡಿ ಗೃಹಸಾಲದ ಅಸಲು ಮೊತ್ತದ ಮೇಲಿನ ಆದಾಯ ತೆರಿಗೆ ವಿನಾಯಿತಿ ಮೊತ್ತವನ್ನು 2 ಲಕ್ಷ ರೂಪಾಯಿಗೆ ಏರಿಸುವುದರಿಂದ ಸ್ವಲ್ಪ ಅನುಕೂಲ ಆಗುತ್ತೆ, ಹೆಚ್ಚುವರಿಯಾಗಿ 50 ಸಾವಿರ ರೂಪಾಯಿಗೆ ಆದಾಯ ತೆರಿಗೆಯಿಂದ ವಿನಾಯಿತಿ ಸಿಕ್ಕಂತಾಗುತ್ತೆ ಎಂದು ಗೃಹ ಸಾಲ ಪಡೆದಿರುವ ಬೆಂಗಳೂರಿನ ಅತ್ತಿಬೆಲೆಯ ನಿವಾಸಿ ಡಿ.ಎನ್.ದಯಾನಂದಮೂರ್ತಿ ಹೇಳಿದ್ದಾರೆ. ಕೇಂದ್ರ ಸರ್ಕಾರವು ಗೃಹಸಾಲದ ಅಸಲು ಮೊತ್ತದ ಮೇಲಿನ ಆದಾಯ ತೆರಿಗೆ ವಿನಾಯಿತಿಯನ್ನು 2014ರಲ್ಲಿ ಏರಿಸಿತ್ತು. ಆದಾದ ಬಳಿಕ ವಿನಾಯಿತಿ ಮಿತಿ ಏರಿಸಿಲ್ಲ. ಹೀಗಾಗಿ ಎಂಟು ವರ್ಷಗಳ ಬಳಿಕ ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ಅಗತ್ಯವಾಗಿದೆ ಎಂದು ರಿಯಲ್ ಎಸ್ಟೇಟ್ ಕ್ಷೇತ್ರದ ತಜ್ಞರು ಪ್ರತಿಪಾದಿಸುತ್ತಿದ್ದಾರೆ. ಜೊತೆಗೆ ಕೊರೊನಾದ ಕಾರಣದಿಂದ ಬೆಲೆಗಳು ಏರಿಕೆಯಾಗಿವೆ, ಹಣದುಬ್ಬರ ಏರಿಕೆಯಾಗಿದೆ. ಹೀಗಾಗಿ ಬೇರೆ ದೇಶಗಳಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ವಿನಾಯಿತಿ ನೀಡುವಂತೆ ಭಾರತದಲ್ಲೂ ವಿನಾಯಿತಿ ನೀಡಬೇಕೆಂದು ರಿಯಲ್ ಎಸ್ಟೇಟ್ ಕ್ಷೇತ್ರದ ತಜ್ಞರು ಆಗ್ರಹಿಸಿದ್ದಾರೆ.
ಗೃಹಸಾಲದ ಮೇಲಿನ ಯಾವುದೇ ವಿನಾಯಿತಿಯು ಅಗ್ಗದ, ಮಧ್ಯಮ ಹಾಗೂ ಹೈರೇಂಜ್ ಪ್ರಾಪರ್ಟಿ ಖರೀದಿಗೆ ಉತ್ತೇಜನ ನೀಡುತ್ತೆ ಎಂದು ರಿಯಲ್ ಎಸ್ಟೇಟ್ ಕ್ಷೇತ್ರದ ಎಸ್.ಪಿ.ಚಿದಾನಂದ ಹೇಳಿದ್ದಾರೆ. ಇನ್ನು ರಿಯಲ್ ಎಸ್ಟೇಟ್ ಕ್ಷೇತ್ರವು ಮತ್ತೊಂದು ಉತ್ತೇಜನವನ್ನು ಬಜೆಟ್ನಿಂದ ನಿರೀಕ್ಷಿಸುತ್ತಿದೆ. ಗೃಹಸಾಲದ ಬಡ್ಡಿ ಪಾವತಿಗೂ ಆದಾಯ ತೆರಿಗೆ ವಿನಾಯಿತಿ ಇದೆ. ಸದ್ಯ ವಾರ್ಷಿಕ ಅಗ್ಗದ ಮನೆಗಳ ಮೇಲಿನ ಗೃಹ ಸಾಲದ ಮೇಲಿನ 1.5 ಲಕ್ಷ ರೂಪಾಯಿ ಬಡ್ಡಿ ಪಾವತಿಗೆ 2023ರ ಮಾರ್ಚ್ವರೆಗೂ ವಿನಾಯಿತಿ ನೀಡುವ ನಿರೀಕ್ಷೆಯನ್ನು ರಿಯಲ್ ಎಸ್ಟೇಟ್ ಕ್ಷೇತ್ರ ಇಟ್ಟುಕೊಂಡಿದೆ.
ಇದನ್ನೂ ಓದಿ: Budget 2022: ಸಾಲಪತ್ರಗಳಲ್ಲಿ ಹೂಡಿಕೆ ಮಾಡುವ ಜಾಗತಿಕ ಹೂಡಿಕೆದಾರರಿಗೆ ಬಜೆಟ್ನಲ್ಲಿ ತೆರಿಗೆ ಅನುಕೂಲ ಸಾಧ್ಯತೆ ಇದನ್ನೂ ಓದಿ: Union Budget 2022: ಈ ಬಾರಿಯ ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ ಶೇ. 20ರಷ್ಟು ಅನುದಾನ ಹೆಚ್ಚಳ ಸಾಧ್ಯತೆ
Published On - 3:39 pm, Thu, 20 January 22