ಕಾಂಗ್ರೆಸ್​ನ ಪ್ರಣಾಳಿಕೆ ಓದಿದ್ದು ಸಂತಸದ ಸಂಗತಿ; ಬಜೆಟ್ ಕುರಿತು ವಿಪಕ್ಷಗಳ ವ್ಯಂಗ್ಯ

|

Updated on: Jul 23, 2024 | 1:49 PM

2024-25ನೇ ಸಾಲಿನ ಬಜೆಟ್ ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಕ್ಷೇತ್ರಗಳಿಗೆ ನೀಡಿರುವ ಆದ್ಯತೆಯ ಬಗ್ಗೆ ಪ್ರಮುಖಾಂಶಗಳನ್ನು ತಿಳಿಸಿದ್ದಾರೆ. ಈ ಬಾರಿಯ ಮೋದಿ ಸರ್ಕಾರದ ಬಜೆಟ್ ಬಗ್ಗೆ ವಿರೋಧ ಪಕ್ಷಗಳ ನಾಯಕರು ಯಾವ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಕಾಂಗ್ರೆಸ್​ನ ಪ್ರಣಾಳಿಕೆ ಓದಿದ್ದು ಸಂತಸದ ಸಂಗತಿ; ಬಜೆಟ್ ಕುರಿತು ವಿಪಕ್ಷಗಳ ವ್ಯಂಗ್ಯ
ಪಿ. ಚಿದಂಬರಂ
Follow us on

ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಮಾನ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯನ್ನೇ ಮತ್ತೊಮ್ಮೆ ಓದಿದ್ದಾರೆ ಎಂದು ನನಗೆ ಸಂತೋಷವಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಲೇವಡಿ ಮಾಡಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಕಾಂಗ್ರೆಸ್ ಪ್ರಣಾಳಿಕೆಯ ಯಥಾವತ್ ಪ್ರಸ್ತುತಿ ಎಂದಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯ ಪುಟ 30ರಲ್ಲಿ ವಿವರಿಸಿರುವ ಉದ್ಯೋಗ-ಸಂಯೋಜಿತ ಪ್ರೋತ್ಸಾಹವನ್ನು (ELI) ಮೋದಿ ಸರ್ಕಾರ ತನ್ನ ಬಜೆಟ್​ನಲ್ಲಿ ವಾಸ್ತವಿಕವಾಗಿ ಅಳವಡಿಸಿಕೊಂಡಿದೆ ಎಂದು ನನಗೆ ಸಂತೋಷವಾಗಿದೆ. ಅವರು ಕಾಂಗ್ರೆಸ್ ಪ್ರಣಾಳಿಕೆಯ ಪುಟ 11ರಲ್ಲಿ ಪ್ರತಿ ಅಪ್ರೆಂಟಿಸ್‌ಗೆ ಭತ್ಯೆಯೊಂದಿಗೆ ಅಪ್ರೆಂಟಿಸ್‌ಶಿಪ್ ಯೋಜನೆಯನ್ನು ಪರಿಚಯಿಸಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯ ಇತರೆ ವಿಚಾರಗಳನ್ನೇ ನಿರ್ಮಲಾ ಸೀತಾರಾಮನ್ ನಕಲು ಮಾಡಿದ್ದಾರೆ ಎಂದು ಹೇಳಲು ನಾನು ಬಯಸುತ್ತೇನೆ. ಉಳಿದ ಮಾಹಿತಿಯನ್ನು ನಾನು ಶೀಘ್ರದಲ್ಲೇ ಪಟ್ಟಿ ಮಾಡುತ್ತೇನೆ ಎಂದು ಪಿ. ಚಿದಂಬರಂ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.


ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತೇಂದ್ರ (ಜಿತು) ಪಟ್ವಾರಿ ಕೂಡ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಮೋದಿ ಸರ್ಕಾರ 2 ಕೋಟಿ ಉದ್ಯೋಗಗಳ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ನರೇಂದ್ರ ಮೋದಿ ಸರ್ಕಾರವು “ಡಬಲ್ ಇಂಜಿನ್” ಬದಲಿಗೆ “ಡಬಲ್ ಸುಳ್ಳಿನ ಸರ್ಕಾರ” ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: Budget 2024: ಬಜೆಟ್‌ನಲ್ಲಿ ಮೋದಿ ಸರ್ಕಾರದ 9 ಆದ್ಯತೆಗಳು, 4 ಸ್ತಂಭಗಳನ್ನು ಪಟ್ಟಿ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್

2024ರ ಕೇಂದ್ರ ಬಜೆಟ್‌ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, “ಸಾಮಾನ್ಯ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಬಜೆಟ್​ನಲ್ಲಿ ಏನನ್ನೂ ಹೇಳಲಿಲ್ಲ. MNREGA ಬಗ್ಗೆ ಯಾವುದೇ ಉಲ್ಲೇಖವಿಲ್ಲ ಮತ್ತು ಆದಾಯವನ್ನು ಸುಧಾರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸಾಕಷ್ಟು ಉಲ್ಲೇಖವಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯ ಆದಾಯದ ಅಸಮಾನತೆಯನ್ನು ಪರಿಹರಿಸುವಲ್ಲಿ ಮೋದಿ ಸರ್ಕಾರ ಸೋತಿದೆ.” ಎಂದಿದ್ದಾರೆ.


ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಕೂಡ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಕ್ಯಾನ್ಸರ್ ಅಥವಾ ಇತರ ಜೀವರಕ್ಷಕ ಔಷಧಿಗಳ ಮೇಲೆ ನೀಡಲಾದ ಪರಿಹಾರವು ಶ್ಲಾಘನೀಯವಾಗಿದೆ. ಬಿಹಾರಕ್ಕೆ ಏನು ನೀಡಲಾಗಿದೆಯೋ ಅದು ಉತ್ತಮವಾಗಿದೆ. ಬಿಹಾರ, ಆಂಧ್ರಪ್ರದೇಶವನ್ನು ಕೇಂದ್ರೀಕರಿಸಿರುವ ನೀವು ತೆಲಂಗಾಣ, ಪಂಜಾಬ್ ಮತ್ತು ಪಶ್ಚಿಮ ಬಂಗಾಳಕ್ಕೆ ಏನು ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: LIVE Budget 2024 Speech: ಕೇಂದ್ರ ಬಜೆಟ್; ಆದಾಯ ತೆರಿಗೆ ಸ್ಲ್ಯಾಬ್​​ನಲ್ಲಿ ತುಸು ಬದಲಾವಣೆ


ಬಜೆಟ್ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ರೈತರ ಸಮಸ್ಯೆಗಳನ್ನು ಪರಿಹರಿಸುವವರೆಗೆ ಮತ್ತು ಯುವಕರಿಗೆ ಉದ್ಯೋಗವನ್ನು ಖಾತ್ರಿ ಪಡಿಸುವವರೆಗೆ ಈ ಸರ್ಕಾರದಿಂದ ಜನರಿಗೆ ಪ್ರಯೋಜನವಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ಬಜೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:45 pm, Tue, 23 July 24