ನವದೆಹಲಿ, ಜುಲೈ 24: ಬಜೆಟ್ನಲ್ಲಿ ಸರ್ಕಾರ ಇಂಟರ್ನ್ಶಿಪ್ ಯೋಜನೆಯನ್ನು ಪ್ರಕಟಿಸಿದೆ. ಒಂದು ವರ್ಷದ ಈ ಸ್ಕೀಮ್ನಲ್ಲಿ 21ರಿಂದ 24 ವರ್ಷದ ವಯೋಮಾನದ ಯುವಕರಿಗೆ ತಿಂಗಳಿಗೆ 5,000 ರೂ ಪ್ರೋತ್ಸಾಹ ಧನವನ್ನು ಸರ್ಕಾರವೇ ನೀಡುತ್ತದೆ. ಈ ಸ್ಕೀಮ್ ಮೂಲಕ 5 ವರ್ಷದಲ್ಲಿ ಒಂದು ಕೋಟಿ ಯುವಕರಿಗೆ ಕೌಶಲ್ಯ ವೃದ್ಧಿಸುವ ಅವಕಾಶ ಕಲ್ಪಿಸುವುದು ಸರ್ಕಾರದ ಹೆಗ್ಗುರಿಯಾಗಿದೆ. ಭಾರತದ ಆರ್ಥಿಕತೆ ಬಹಳ ವೇಗವಾಗಿ ಬೆಳೆಯುತ್ತಿರುವುದರಿಂದ ಕೌಶಲ್ಯವಂತ ಕೆಲಸಗಾರರು ಅಥವಾ ಉದ್ಯೋಗಿಗಳು ಅವಶ್ಯಕತೆ ಬಹಳ ಇದೆ. ಈ ಕಾರಣಕ್ಕೆ ಯುವ ಸಮುದಾಯಕ್ಕೆ ವರ್ಕ್ ಸ್ಕಿಲ್ ತರಲು ಈ ಇಂಟರ್ನ್ಶಿಪ್ ಸ್ಕೀಮ್ ಸಹಾಯವಾಗುವ ನಿರೀಕ್ಷೆ ಇದೆ.
ಸರ್ಕಾರ ಟಾಪ್ 500 ಕಂಪನಿಗಳನ್ನು ಈ ಇಂಟರ್ನ್ಶಿಪ್ ಯೋಜನೆಗೆ ಬಳಸಿಕೊಳ್ಳಲಿದೆ. ಓದು ಮುಗಿಸಿರುವ ಮತ್ತು ಇನ್ನೂ ಎಲ್ಲಿಯೂ ಕೆಲಸಕ್ಕೆ ಸೇರದ 21 ವರ್ಷದಿಂದ 24 ವರ್ಷ ವಯೋಮಾನದ ಯುವಕ ಮತ್ತು ಯುವತಿಯರು ಈ ಪ್ರೋಗ್ರಾಮ್ಗೆ ಅರ್ಹರಿರುತ್ತಾರೆ. ಈ ಅಭ್ಯರ್ಥಿಗಳ ಕುಟುಂಬದ ಇತರ ಯಾವುದೇ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿರುವಂತಿಲ್ಲ, ಸರ್ಕಾರಿ ಉದ್ಯೋಗಿಯಾಗಿರುವಂತಿಲ್ಲ. ಅಭ್ಯರ್ಥಿಗಳು ಐಐಟಿ ಅಥವಾ ಐಐಎಂ ಅಥವಾ ಸಿಎ, ಸಿಎಂಎ, ಐಐಸ್ಇಆರ್ ಇತ್ಯಾದಿ ಸಂಸ್ಥೆಗಳಲ್ಲಿ ವೃತ್ತಿಪರ ಶಿಕ್ಷಣ ಪಡೆದಿರುವಂತಿಲ್ಲ. ಒಟ್ಟಾರೆ, ಬಡವರು ಮತ್ತು ಉದ್ಯೋಗ ಗಿಟ್ಟಿಸುವ ಸಾಧ್ಯತೆ ಕಡಿಮೆ ಇರುವಂತಹ ಅಭ್ಯರ್ಥಿಗಳನ್ನು ಆಯ್ದುಕೊಂಡು ಅವರಿಗೆ ಕೌಶಲ್ಯ ವೃದ್ಧಿಸುವುದು ಸರ್ಕಾರದ ಗುರಿ ಇದ್ದಂತಿದೆ.
ಇದನ್ನೂ ಓದಿ: ಹೊಸ ವಾತ್ಸಲ್ಯ ಎನ್ಪಿಎಸ್ ಯೋಜನೆ; ಸಣ್ಣ ಮಕ್ಕಳಿಗೆ ಭವಿಷ್ಯ ರೂಪಿಸಲು ಪೋಷಕರಿಗಿದೋ ಅವಕಾಶ
12 ತಿಂಗಳ ಅವಧಿಯ ಈ ಇಂಟರ್ನ್ಶಿಪ್ ಅಥವಾ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗೆ ತಿಂಗಳಿಗೆ 5,000 ರೂ ಭತ್ಯೆ ಸಿಗುತ್ತದೆ. ಒಂದು ವರ್ಷದಲ್ಲಿ ಒಟ್ಟಾರೆ 66,000 ರೂ ಭತ್ಯೆಯು ಒಬ್ಬರಿಗೆ ಸಿಗುತ್ತದೆ. ಇದರಲ್ಲಿ ಸರ್ಕಾರ ಮಾಸಿಕ ಭತ್ಯೆಯಾಗಿ ಒಟ್ಟು 54,000 ರೂ ಒದಗಿಸುತ್ತದೆ. ಅನಿರೀಕ್ಷಿತ ವೆಚ್ಚಗಳಿಗೆಂದು 6,000 ರೂ ನೀಡುತ್ತದೆ. ಕಂಪನಿಗಳೂ ಕೂಡ ಒಬ್ಬ ಇಂಟರ್ನ್ಗೆ ತರಬೇತಿ ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ 6,000 ರೂ ಕೊಡಬೇಕಾಗುತ್ತದೆ. ಅಲ್ಲಿಗೆ ಇಂಟರ್ನ್ಶಿಪ್ ಮಾಡುವ ಯುವಕನೊಬ್ಬನಿಗೆ ಉಚಿತವಾಗಿ ತರಬೇತಿ ಸಿಗುವುದರ ಜೊತೆಗೆ ಒಟ್ಟಾರೆ 66,000 ರೂ ಪ್ರೋತ್ಸಾಹ ಧನ ಕೂಡ ಲಭಿಸುತ್ತದೆ.
ಕಂಪನಿಗಳು ಈ ತರಬೇತಿ ವೆಚ್ಚಗಳಿಗೆ ತಮ್ಮ ಸಿಎಸ್ಆರ್ ಫಂಡ್ಗಳನ್ನು ಬಳಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.
1961ರ ಅಪ್ರೆಂಟಿಸಸ್ ಕಾಯ್ದೆ ಪ್ರಕಾರ ಸಂಸ್ಥೆಗಳಲ್ಲಿರುವ ಒಟ್ಟಾರೆ ಉದ್ಯೋಗಿಗಳಲ್ಲಿ ಶೇ. 2.5ರಷ್ಟು ಮಂದಿ ಇಂಟರ್ನ್ಶಿಪ್ನವರಿರಬೇಕು ಎಂದಿದೆ. ಈ ನಿಯಮವನ್ನು ಸರ್ಕಾರ ಬಿಗಿಗೊಳಿಸಬಹುದು.
ಇದನ್ನೂ ಓದಿ: ಕ್ಯಾಪಿಟಲ್ ಗೇನ್ ಟ್ಯಾಕ್ಸ್ ದರ ಬದಲಾವಣೆ; ಇಂಡೆಕ್ಸೇಶನ್ ಬೆನಿಫಿಟ್ ಇವುಗಳ ಬಗ್ಗೆ ನೀವು ತಿಳಿಯಬೇಕಾದ್ದು
ಬಜೆಟ್ನಲ್ಲಿ ಘೋಷಣೆ ಆಗಿರುವ ಇಂಟರ್ನ್ಶಿಪ್ ಯೋಜನೆಗೆ ಆನ್ಲೈನ್ ಪೋರ್ಟಲ್ವೊಂದನ್ನು ಸದ್ಯದಲ್ಲೆ ಹೊರತರುವ ನಿರೀಕ್ಷೆ ಇದೆ. ಈ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲಿರುವ ಪಟ್ಟಿಯಿಂದ ಕಂಪನಿಗಳೇ ಇಂಟರ್ನ್ಶಿಪ್ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ.
ಈ ಕಂಪನಿಗಳು ಇತರ ರೆಗ್ಯುಲರ್ ಉದ್ಯೋಗಿಗಳಿಗೆ ನೀಡಲಾಗುವ ಕೆಲಸದ ಅವಕಾಶಗಳನ್ನು ಇಂಟರ್ನ್ಶಿಪ್ನವರಿಗೂ ಕೊಡಬೇಕು ಎನ್ನುತ್ತಿದೆ ಸರ್ಕಾರ. ಅವರಿಗೆ ಪ್ರಾಕ್ಟಿಕಲ್ ಕೆಲಸದ ಅನುಭವ ಸಿಗಬೇಕು ಎನ್ನುವುದು ಉದ್ದೇಶ. ಈ ಸ್ಕೀಮ್ ಸುಮಾರು 1 ಕೋಟಿ ಯುವಕ ಮತ್ತು ಯುವತಿಯರಿಗೆ ಅನುಕೂಲವಾಗುವ ನಿರೀಕ್ಷೆ ಇದೆ.
ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Wed, 24 July 24