SEBI: ಷೇರು ಮಾರ್ಕೆಟ್ ವ್ಯವಹಾರ ಸುಗಮಕ್ಕೆ ಸೆ. 30ರೊಳಗೆ ಪ್ಯಾನ್- ಆಧಾರ್ ಜೋಡಣೆ ಕಡ್ಡಾಯ
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಪ್ಯಾನ್- ಆಧಾರ್ ಅನ್ನು ಸೆಪ್ಟೆಂಬರ್ 30, 2021ರೊಳಗೆ ಜೋಡಣೆ ಮಾಡಬೇಕು ಎಂದು ಸೆಬಿ ತಿಳಿಸಿದೆ.
ಗ್ರಾಹಕರು ತಮ್ಮ ಪ್ಯಾನ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಸೆಪ್ಟೆಂಬರ್ 30, 2021ರೊಳಗೆ ಜೋಡಣೆ ಮಾಡುವಂತೆ ಹೂಡಿಕೆದಾರರಿಗೆ ಮಾರುಕಟ್ಟೆ ನಿಯಂತ್ರಕವಾದ ಸೆಕ್ಯೂರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಶುಕ್ರವಾರ ಸೂಚಿಸಿದೆ. ಫೆಬ್ರವರಿ 13, 2020ರ ಸಿಬಿಡಿಟಿ ಅಧಿಸೂಚನೆಯನ್ನು ಉಲ್ಲೇಖಿಸಿ, ಮಾರುಕಟ್ಟೆ ನಿಯಂತ್ರಕ ಹೀಗೆ ಹೇಳಿದೆ: “… ಜುಲೈ 01, 2017ರ ವೇಳೆಗೆ ವ್ಯಕ್ತಿಯು ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಪಡೆದಿದ್ದಲ್ಲಿ ಅದನ್ನು ಸೆಪ್ಟೆಂಬರ್ 30, 2021 ಅಥವಾ ಸಿಬಿಡಿಟಿ ನಿಗದಿಪಡಿಸಿದ ಉಳಿದ ಯಾವುದೇ ದಿನಾಂಕದಂದು ಜೋಡಣೆ ಆಗದಿದ್ದರೆ ಅದು ನಿಷ್ಕ್ರಿಯವಾಗುತ್ತದೆ”.
ಸಿಬಿಡಿಟಿ ಅಧಿಸೂಚನೆಯ ದೃಷ್ಟಿಯಿಂದ, ಸೆಕ್ಯೂರಿಟೀಸ್ ಮಾರುಕಟ್ಟೆಯಲ್ಲಿನ ಎಲ್ಲ ವಹಿವಾಟುಗಳಿಗೆ ಪ್ಯಾನ್ ಏಕೈಕ ಗುರುತಿನ ಸಂಖ್ಯೆ ಆಗಿರುವುದರಿಂದ ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳು (ಎಂಐಐಗಳು) ಸೇರಿದಂತೆ ಎಲ್ಲ ಸೆಬಿ ನೋಂದಾಯಿತ ಸಂಸ್ಥೆಗಳು ಈ ಅಧಿಸೂಚನೆಯ ನಿಯಮಗಳನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಸೆಪ್ಟೆಂಬರ್ 30, 2021ರ ನಂತರ ಹೊಸ ಖಾತೆಗಳನ್ನು ತೆರೆಯುವಾಗ ಅಥವಾ CBDT ಸೂಚಿಸಿದ ಯಾವುದೇ ಇತರ ದಿನಾಂಕದಂದು ಸಕ್ರಿಯವಾಗಿರುವ ಪ್ಯಾನ್ ಅನ್ನು ಮಾತ್ರ ಗ್ರಾಹಕರಿಂದ ಸ್ವೀಕರಿಸಬೇಕು (ಅಂದರೆ ಆಧಾರ್‌ನೊಂದಿಗೆ ಜೋಡಣೆ ಆಗಿರುವಂಥದ್ದು)” ಎಂಬುದನ್ನು ಇದು ಸೇರಿಸಿದೆ.
ಸೆಕ್ಯೂರಿಟೀಸ್ ಮಾರುಕಟ್ಟೆಯಲ್ಲಿ ನಿರಂತರ ಮತ್ತು ಸುಗಮ ವಹಿವಾಟುಗಳಿಗಾಗಿ ಸೆಪ್ಟೆಂಬರ್ 30ರ ಮೊದಲು ಆಧಾರ್ ಸಂಖ್ಯೆಯೊಂದಿಗೆ ತಮ್ಮ ಪ್ಯಾನ್ ಅನ್ನು ಜೋಡಣೆ ಮಾಡುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ಈಗಾಗಲೇ ಇರುವ ಎಲ್ಲ ಹೂಡಿಕೆದಾರರಿಗೆ ಸೆಬಿ ಸೂಚಿಸಿದೆ.
ಇದನ್ನೂ ಓದಿ: Financial Tasks: ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣ ಮಾಡಲೇ ಬೇಕಾದ 5 ಆರ್ಥಿಕ ಜವಾಬ್ದಾರಿಗಳು ಇವು
(Aadhaar PAN Linking Mandatory For Stock Market Investors Within September 30 2021 According To SEBI)
Published On - 10:39 pm, Fri, 3 September 21