ಮುಂಬೈ: ಅದಾನಿ ಸಮೂಹದ (Adani Group) ಕಂಪನಿಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾದ ಬೆನ್ನಲ್ಲೇ ಕ್ವಾಂಟ್ ಮ್ಯೂಚುವಲ್ ಫಂಡ್(Quant Mutual Fund) ಸ್ಕೀಮ್ಗಳಲ್ಲಿ ಹೂಡಿಕೆ ಮಾಡಿದ್ದವರಿಗೂ ತಲೆನೋವು ಆರಂಭವಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಕ್ವಾಂಟ್ ಮ್ಯೂಚುವಲ್ ಫಂಡ್ನ ಯೋಜನೆಗಳಲ್ಲಿ ಶೇ 2.50 ಯಿಂದ ಶೇ -6.28ರ ವರೆಗೆ ಕುಸಿತವಾಗಿದೆ. ಈ ಮ್ಯೂಚುವಲ್ ಫಂಡ್ ಯೋಜನೆಗಳು ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿರುವುದೇ ಈ ಕುಸಿತಕ್ಕೆ ಮುಖ್ಯ ಕಾರಣವಾಗಿದೆ. ಉಳಿದಂತೆ ಹೆಚ್ಚಿನ ಮ್ಯೂಚುವಲ್ ಫಂಡ್ ಕಂಪನಿಗಳು ಅದಾನಿ ಸಮೂಹದಲ್ಲಿ ನೇರ ಹೂಡಿಕೆ ಮಾಡಿಲ್ಲ. ಅವುಗಳ ಇಂಡೆಕ್ಸ್ ಸ್ಕೀಮ್ಗಳು ಮತ್ತು ಇಟಿಎಫ್ಗಳು ಮಾತ್ರ ಅದಾನಿ ಷೇರುಗಳೊಂದಿಗೆ ಲಿಂಕ್ ಹೊಂದಿವೆ ಎಂದು ವರದಿಯೊಂದು ತಿಳಿಸಿದೆ.
ಕ್ವಾಂಟ್ ಅಬ್ಸಲ್ಯೂಟ್ ಫಂಡ್, ಕ್ವಾಂಟ್ ಆ್ಯಕ್ಟೀವ್ ಫಂಡ್ ಸೇರಿದಂತೆ ಅನೇಕ ಫಂಡ್ಗಳು ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್, ಅಂಬುಜಾ ಸಿಮೆಂಟ್ಸ್ ಸೇರಿದಂತೆ ಅದಾನಿ ಸಮೂಹದ ಅನೇಕ ಕಂಪನಿಗಳಲ್ಲಿ ಹೂಡಿಕೆ ಮಾಡಿವೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಅದಾನಿ ಸಮೂಹದ ವಿರುದ್ಧ ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಮಾಡಿರುವ ಆರೋಪ ಕಂಪನಿಯ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತಕ್ಕೆ ಕಾರಣವಾಗಿದೆ. ಇದು ದೇಶದ ಆರ್ಥಿಕ ಮತ್ತು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: Multibagger Stock: 1 ಲಕ್ಷ ಹೂಡಿಕೆಗೆ ಮೂರೇ ವರ್ಷಗಳಲ್ಲಿ 2.4 ಕೋಟಿ ಗಳಿಸಿಕೊಟ್ಟಿದೆ ಈ ಮಲ್ಟಿಬ್ಯಾಗರ್ ಸ್ಟಾಕ್!
ಜನವರಿ 25ರಿಂದ ಫೆಬ್ರವರಿ 1ರ ನಡುವೆ ಕ್ವಾಂಟ್ ಮ್ಯೂಚುವಲ್ ಫಂಡ್ಗಳ ಪೈಕಿ ಕ್ವಾಂಟ್ ಇನ್ಫ್ರಾಸ್ಟ್ರಕ್ಚರ್ ಮ್ಯೂಚುವಲ್ ಫಂಡ್ ಶೇ -6.28, ಕ್ವಾಂಟ್ ಟ್ಯಾಕ್ಸ್ ಪ್ಲಾನ ಶೇ -5.19, ಕ್ವಾಂಟ್ ಆ್ಯಕ್ಟೀವ್ ಫಂಡ್ ಶೇ -5.14, ಕ್ವಾಂಟ್ ಲಾರ್ಜ್ ಕ್ಯಾಪ್ ಫಂಡ್ ಶೇ -4.30 ಕುಸಿತ ದಾಖಲಿಸಿವೆ. ಇವುಗಳು ಮಾತ್ರವಲ್ಲದೆ ಕ್ವಾಂಟ್ ಮ್ಯೂಚುವಲ್ ಫಂಡ್ನ ಇನ್ನೂ ಹಲವು ಯೋಜನೆಗಳು ಕುಸಿತ ದಾಖಲಿಸಿವೆ.
ಕ್ವಾಂಟ್ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದವರಿಗೆ ಸಹಜವಾಗಿಯೇ ಈಗ ಭೀತಿ ಶುರುವಾಗಿದೆ. ಆದರೆ, ಹೂಡಿಕೆದಾರರು ಆತಂಕಕ್ಕೊಳಗಾಗಿ ಫಂಡ್ ವಾಪಸ್ ಕೈಗೊಳ್ಳುವ ನಿರ್ಧಾರ ಮಾಡಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಹೂಡಿಕೆದಾರರು ಈಗ ಕಾದುನೋಡುವ ತಂತ್ರ ಅನುಸರಿಸಬೇಕು. ಎಸ್ಐಪಿ ಹೇಗೆ ಮುಂದುವರಿಯುತ್ತದೆ ಎಂಬುದನ್ನು ಗಮನಿಸಬೇಕು. ಫಂಡ್ಗಳು ಮತ್ತೆ ಸುಧಾರಿಸಿಕೊಂಡು ಗಳಿಕೆಯ ಹಾದಿಗೆ ಮರಳಬಹುದು ಎಂದು ಪ್ರಕಾಲ ವೆಲ್ತ್ ಮ್ಯಾನೇಜ್ಮೆಂಟ್ ಸ್ಥಾಪಕ ಚೊಕ್ಕಲಿಂಗಂ ಪಳನಿಯಪ್ಪನ್ ಸಲಹೆ ನೀಡಿರುವುದಾಗಿ ವರದಿ ಉಲ್ಲೇಖಿಸಿದೆ. 6 ತಿಂಗಳ ನಂತರ ಹೂಡಿಕೆದಾರರು ನಿರ್ಧಾರ ಕೈಗೊಳ್ಳಬಹುದು. ಫಂಡ್ಗಳಲ್ಲಿ ಶೇ 5ರ ವರೆಗೆ ಕುಸಿತವಾಗುವುದೆಲ್ಲ ಸಾಮಾನ್ಯ. ಈಕ್ವಿಡಿ ಫಂಡ್ಗಳಲ್ಲಿ ಏರಿಳಿತ ಸಾಮಾನ್ಯ. ಈಗ ಕುಸಿದಿರುವ ಫಂಡ್ಗಳು ಮುಂದೆ ಚೇತರಿಸಬಹುದು ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ