ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಇಂದೇ ಕೊನೆಯ ದಿನ; ಡೆಡ್​ಲೈನ್ ಮಿಸ್ ಆದವರಿಗೆ ಏನು ದಂಡ?

Advance Tax 2024-25, Payment Rules: ಮುಂಗಡ ತೆರಿಗೆ (Advance Tax) ಎಂದರೇನು? ಪ್ರಸಕ್ತ ಹಣಕಾಸು ವರ್ಷದ ಮೊದಲ ಕಂತು ಪಾವತಿಸಲು ಜೂನ್ 15 ಕೊನೆಯ ದಿನ. ₹10,000 ಕ್ಕಿಂತ ಹೆಚ್ಚು ತೆರಿಗೆ ಬಾಧ್ಯತೆ ಹೊಂದಿರುವ ಸಂಬಳದಾರರು, ಸ್ವಯಂ ಉದ್ಯೋಗಿಗಳು ಕಡ್ಡಾಯವಾಗಿ ಪಾವತಿಸಬೇಕು. ಹಿರಿಯ ನಾಗರಿಕರಿಗೆ ಕೆಲವು ವಿನಾಯಿತಿಗಳಿವೆ. ಗಡುವು ತಪ್ಪಿದರೆ ಬಡ್ಡಿ ದಂಡ ಬೀಳುತ್ತದೆ. ಆನ್‌ಲೈನ್‌ನಲ್ಲಿ ಸುಲಭವಾಗಿ ಪಾವತಿಸುವ ವಿಧಾನ ಇಲ್ಲಿದೆ.

ಅಡ್ವಾನ್ಸ್ ಟ್ಯಾಕ್ಸ್ ಪಾವತಿಗೆ ಇಂದೇ ಕೊನೆಯ ದಿನ; ಡೆಡ್​ಲೈನ್ ಮಿಸ್ ಆದವರಿಗೆ ಏನು ದಂಡ?
ಆದಾಯ ತೆರಿಗೆ
Image Credit source: Getty Images

Updated on: Jun 15, 2026 | 7:38 PM

ನವದೆಹಲಿ, ಜೂನ್ 15: ನಮ್ಮ ದೇಶದ ಆದಾಯ ತೆರಿಗೆ (Income Tax) ನಿಯಮಗಳ ಪ್ರಕಾರ, ಹಣಕಾಸು ವರ್ಷದ ಕೊನೆಯಲ್ಲಿ ಒಂದೇ ಬಾರಿಗೆ ಪೂರ್ಣ ತೆರಿಗೆ ಕಟ್ಟುವ ಬದಲಿಗೆ, ಮುಂಗಡವಾಗಿ ಒಂದಷ್ಟು ತೆರಿಗೆ ಕಟ್ಟುವ ವ್ಯವಸ್ಥೆ ಇರುತ್ತದೆ. ಅದು ಅಡ್ವಾನ್ಸ್ ಟ್ಯಾಕ್ಸ್ ಸಿಸ್ಟಂ (Advance Tax). ಪ್ರಸಕ್ತ ಆರ್ಥಿಕ ವರ್ಷದ (2026-27) ಮೊದಲ ಕಂತಿನ ಮುಂಗಡ ತೆರಿಗೆ ಪಾವತಿಸಲು ಜೂನ್ 15 ಕೊನೆಯ ದಿನವಾಗಿದೆ. ಅಂದರೆ ಇವತ್ತೇ ಅದರ ಡೆಡ್​ಲೈನ್ ಇದೆ. ಹಣಕಾಸು ವರ್ಷದ ಆರಂಭದಿಂದ ಇಲ್ಲಿಯವರೆಗೆ 10,000 ರೂಗಿಂತ ಹೆಚ್ಚಿನ ಮೊತ್ತದ ತೆರಿಗೆ ಬಾಧ್ಯತೆ ಹೊಂದಿರುತ್ತಾರೋ ಅಂಥವರು ಅಡ್ವಾನ್ಸ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.

ಅಡ್ವಾನ್ಸ್ ಟ್ಯಾಕ್ಸ್ ಯಾರೆಲ್ಲಾ ಪಾವತಿಸಬೇಕು?

ಯಾವುದೇ ಒಬ್ಬ ತೆರಿಗೆದಾರನ (ಸಂಬಳ ಪಡೆಯುವವರು, ಸ್ವಯಂ ಉದ್ಯೋಗಿಗಳು, ಫ್ರೀಲ್ಯಾನ್ಸರ್‌ಗಳು ಅಥವಾ ಉದ್ಯಮಿಗಳು) ವಾರ್ಷಿಕ ಅಂದಾಜು ತೆರಿಗೆಯ ಮೊತ್ತವು ಟಿಡಿಎಸ್ (TDS) ಕಡಿತದ ನಂತರವೂ ₹10,000 ಅಥವಾ ಅದಕ್ಕಿಂತ ಹೆಚ್ಚು ಇರುತ್ತದೆಯೋ, ಅವರು ಮುಂಗಡ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ.

ಸಾಮಾನ್ಯವಾಗಿ ಸಂಬಳ ಪಡೆಯುವವರ ಟಿಡಿಎಸ್ ಅನ್ನು ಕಂಪನಿಯೇ ಕಡಿತಗೊಳಿಸುತ್ತದೆ. ಆದರೆ, ಅವರಿಗೆ ಸಂಬಳದ ಜೊತೆಗೆ ಸ್ಥಿರ ಠೇವಣಿ (FD) ಮೇಲಿನ ಬಡ್ಡಿ, ಬಾಡಿಗೆ ಆದಾಯ ಅಥವಾ ಷೇರು ಮಾರುಕಟ್ಟೆಯಿಂದ ಬಂಡವಾಳ ಲಾಭ (Capital Gains) ಇದ್ದು, ಅದರಿಂದಾಗಿ ತೆರಿಗೆ ಮೊತ್ತ ₹10,000 ದಾಟಿದರೆ ಮುಂಗಡ ತೆರಿಗೆ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: ಮೇ ತಿಂಗಳಲ್ಲಿ ರಫ್ತು ಶೇ. 18 ಹೆಚ್ಚಳ; ಆಮದು ಹೊರೆಯೂ ಏರಿಕೆ; ಟ್ರೇಡ್ ಡೆಫಿಸಿಟ್ ಇಳಿಕೆ

ಹಿರಿಯ ನಾಗರಿಕರಿಗೆ ವಿನಾಯಿತಿ: 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ (Senior Citizens) ಯಾವುದೇ ವ್ಯವಹಾರ (Business) ಅಥವಾ ವೃತ್ತಿಪರ ಆದಾಯ (Professional Income) ಇಲ್ಲದಿದ್ದರೆ, ಅವರು ಮುಂಗಡ ತೆರಿಗೆ ಪಾವತಿಯಿಂದ ವಿನಾಯಿತಿ ಹೊಂದಿರುತ್ತಾರೆ.

ಮುಂಗಡ ತೆರಿಗೆ ಪಾವತಿಯ ಕಂತುಗಳು

ಸರ್ಕಾರವು ಮುಂಗಡ ತೆರಿಗೆಯನ್ನು ವರ್ಷದಲ್ಲಿ ನಾಲ್ಕು ಕಂತುಗಳಾಗಿ ವಿಂಗಡಿಸಿದೆ. ಮೊದಲ ಕಂತಿನಲ್ಲಿ ಒಟ್ಟು ಅಂದಾಜು ತೆರಿಗೆಯ ಶೇ. 15 ಅನ್ನು ಪಾವತಿಸಬೇಕಾಗುತ್ತದೆ. ಎರಡನೇ ಕಂತಿನಲ್ಲಿ ಒಟ್ಟು ತೆರಿಗೆ ಬಾಧ್ಯತೆಯ ಶೇ. 45ರಷ್ಟನ್ನು ಕಟ್ಟಬೇಕಾಗುತ್ತದೆ. ಮೂರನೇ ಕಂತಿನಲ್ಲಿ ಶೇ. 75 ಮತ್ತು ಕೊನೆಯ ಹಾಗೂ ನಾಲ್ಕನೇ ಕಂತಿನಲ್ಲಿ ಶೇ. 100 ತೆರಿಗೆ ಕಟ್ಟಬೇಕಾಗುತ್ತದೆ. ಇವುಗಳಿಗೆ ಈ ಹಣಕಾಸು ವರ್ಷದಲ್ಲಿ ಇರುವ ಡೆಡ್​ಲೈನ್ ಕ್ರಮವಾಗಿ ಜೂನ್ 15, ಸೆಪ್ಟೆಂಬರ್ 15, ಡಿಸೆಂಬರ್ 15 ಮತ್ತು 2027ರ ಮಾರ್ಚ್ 15 ಆಗಿರುತ್ತದೆ.

ಪ್ರೆಸಂಪ್ಟಿವ್ ಟ್ಯಾಕ್ಸೇಷನ್ ಅಡಿಯಲ್ಲಿ ಬರುವ ಸಣ್ಣ ಉದ್ಯಮಿಗಳು ಮತ್ತು ವೃತ್ತಿಪರರು ಮಾರ್ಚ್ 15ರ ಒಳಗಾಗಿ ಒಂದೇ ಕಂತಿನಲ್ಲಿ 100% ಮುಂಗಡ ತೆರಿಗೆಯನ್ನು ಪಾವತಿಸಬಹುದು.

ಗಡುವು ತಪ್ಪಿದರೆ ಆಗುವ ನಷ್ಟವೇನು?

ನಿಗದಿಪಡಿಸಿದ ದಿನಾಂಕದೊಳಗೆ ಅಗತ್ಯವಿರುವಷ್ಟು ಮುಂಗಡ ತೆರಿಗೆಯನ್ನು ಪಾವತಿಸದಿದ್ದರೆ ಅಥವಾ ಕಡಿಮೆ ಪಾವತಿಸಿದರೆ, ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ ಬಡ್ಡಿ ರೂಪದ ದಂಡವನ್ನು ತೆರಬೇಕಾಗುತ್ತದೆ.

ಸೆಕ್ಷನ್ 425 (ಹಳೆಯ ಸೆಕ್ಷನ್ 234C) ಪ್ರಕಾರ, ತ್ರೈಮಾಸಿಕ ಕಂತುಗಳ ಗಡುವು ತಪ್ಪಿದರೆ, ಬಾಕಿ ಉಳಿಸಿಕೊಂಡ ಮೊತ್ತದ ಮೇಲೆ ತಿಂಗಳಿಗೆ ಶೇ.1 ರಂತೆ ಸರಳ ಬಡ್ಡಿಯನ್ನು ವಿಧಿಸಲಾಗುತ್ತದೆ.

ಸೆಕ್ಷನ್ 424 (ಹಳೆಯ ಸೆಕ್ಷನ್ 234B) ಪ್ರಕಾರ, ಆರ್ಥಿಕ ವರ್ಷದ ಕೊನೆಯಲ್ಲಿ (ಮಾರ್ಚ್ 31ರ ವೇಳೆಗೆ) ಒಟ್ಟು ತೆರಿಗೆಯ ಕನಿಷ್ಠ ಶೇ. 90 ರಷ್ಟನ್ನು ಪಾವತಿಸದೇ ಇದ್ದರೆ, ಮುಂದಿನ ವರ್ಷದ ಏಪ್ರಿಲ್ 1 ರಿಂದ ತೆರಿಗೆ ಕಟ್ಟುವವರೆಗೆ ಬಾಕಿ ಮೊತ್ತಕ್ಕೆ ತಿಂಗಳಿಗೆ ಶೇ 1 ರಷ್ಟು ಬಡ್ಡಿ ಅನ್ವಯವಾಗುತ್ತದೆ.

ಇದನ್ನೂ ಓದಿ: ಸಂಬಳ ₹15,000 ಇದ್ದರೂ ಸಾಲವಿಲ್ಲದೆ ಬದುಕಬಹುದೇ? ಹೌದು ಎನ್ನುತ್ತದೆ ಈ ಸರಳ ಬಜೆಟ್ ಸೂತ್ರ

ಅಡ್ವಾನ್ಸ್ ಟ್ಯಾಕ್ಸ್ ಅನ್ನು ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ?

ತೆರಿಗೆದಾರರು ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್ (`incometax.gov.in`) ಗೆ ಭೇಟಿ ನೀಡಿ, ‘e-Pay Tax’ ಆಯ್ಕೆಯ ಮೂಲಕ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಯುಪಿಐ (UPI) ಬಳಸಿ ಸುಲಭವಾಗಿ ಈ ತೆರಿಗೆಯನ್ನು ಪಾವತಿಸಬಹುದು. ಪಾವತಿ ಮಾಡುವಾಗ ಸರಿಯಾದ ಮೌಲ್ಯಮಾಪನ ವರ್ಷ (Assessment Year) ಮತ್ತು ‘Advance Tax (100)’ ಕೋಡ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us