ವಿಶ್ವ ದಾಖಲೆಯ ಐಪಿಒ ಬಳಿಕ ಆಂಥ್ರೋಪಿಕ್​ನ ಶೇ. 96 ಉದ್ಯೋಗಿಗಳು ಈಗ ಮಿಲಿಯನೈರ್​ಗಳು

ವಿಶ್ವದ ಎಐ ದೈತ್ಯ ಕಂಪನಿಯಾದ ಆಂಥ್ರೋಪಿಕ್ ವಿಶ್ವದಾಖಲೆಯ 83 ಬಿಲಿಯನ್ ಡಾಲರ್ ಐಪಿಒ ಯಶಸ್ವಿಯಾಗಿ ಮುಗಿಸಿದೆ. ಈ ಕಂಪನಿಯಲ್ಲಿರುವ ಹೆಚ್ಚಿನ ಉದ್ಯೋಗಿಗಳು ಆಂಥ್ರೋಪಿಕ್ ಷೇರುಗಳಿಂದಲೇ ಮಿಲಿಯನೇರ್ ಎನಿಸಿದ್ದಾರೆ. 5,100 ಉದ್ಯೋಗಿಗಳಲ್ಲಿ ಹತ್ತಿರಹತ್ತಿರ 5,000 ಉದ್ಯೋಗಿಗಳು ಹೊಂದಿರುವ ಆಂಥ್ರೋಪಿಕ್ ಷೇರುಗಳ ಮೌಲ್ಯ ಕನಿಷ್ಠ 1 ಮಿಲಿಯನ್ ಡಾಲರ್ ಆಗುತ್ತದೆ.

ವಿಶ್ವ ದಾಖಲೆಯ ಐಪಿಒ ಬಳಿಕ ಆಂಥ್ರೋಪಿಕ್​ನ ಶೇ. 96 ಉದ್ಯೋಗಿಗಳು ಈಗ ಮಿಲಿಯನೈರ್​ಗಳು
ಷೇರು ಮಾರುಕಟ್ಟೆ
Image Credit source: AP

Updated on: Nov 20, 2026 | 11:50 AM

ನವದೆಹಲಿ, ನವೆಂಬರ್ 20: ತನ್ನ ಚಮತ್ಕಾರಿಕವಾದ ಕ್ಲಾಡ್ ಎಐ ಮಾಡಲ್​ಗಳ ಮೂಲಕ ಗಮನ ಸೆಳೆದಿರುವ ಆಂಥ್ರೋಪಿಕ್ ಸಂಸ್ಥೆ ದೊಡ್ಡ ಸದ್ದಿನೊಂದಿಗೆ ಷೇರು ಮಾರುಕಟ್ಟೆಗೆ ಧುಮುಕಿದೆ. ಇದು ವಿಶ್ವ ದಾಖಲೆಯ ಐಪಿಒ ಕಂಡಿದೆ. ಇದರ ಬೆನ್ನಲ್ಲೇ ಈ ಕಂಪನಿಯ ಬಹುತೇಕ ಎಲ್ಲರೂ ಮಿಲಿಯನೇರ್​ಗಳಾಗಿದ್ದಾರೆ.

ವರದಿಗಳ ಪ್ರಕಾರ, ಆಂಥ್ರೋಪಿಕ್ ಕಂಪನಿ ತನ್ನ ಉದ್ಯೋಗಿಗಳಿಗೆ ಷೇರುಗಳನ್ನು ನೀಡುತ್ತದೆ. ಆ ಕಂಪನಿಯಲ್ಲಿ 5,100 ಉದ್ಯೋಗಿಗಳಿದ್ದಾರೆ. ಆಂಥ್ರೋಪಿಕ್ ಐಪಿಒ ಯಶಸ್ವಿಯಾದ ಬಳಿಕ ಆ ಕಂಪನಿಯ ಶೇ. 96ರಷ್ಟು ಉದ್ಯೋಗಿಗಳ ಷೇರುಮೌಲ್ಯ ಕನಿಷ್ಠ 1 ಮಿಲಿಯನ್ ಡಾಲರ್ ಆಗಿದೆ. ಅದರ ಹಲವು ಮಾಜಿ ಉದ್ಯೋಗಿಗಳೂ ಕೂಡ ಮಿಲಿಯನ್ ಡಾಲರ್​ನಷ್ಟು ಶ್ರೀಮಂತಿಕೆ ಹೆಚ್ಚಿಸಿಕೊಂಡಿದ್ದಾರೆ. ಒಂದು ಮಿಲಿಯನ್ ಡಾಲರ್ ಎಂದರೆ 9.5 ಕೋಟಿ ರೂ ಆಗುತ್ತದೆ.

Loading...

ಇದನ್ನೂ ಓದಿ: ಇಪಿಎಫ್ ನಿಯಮ ಇನ್ನಷ್ಟು ಸರಳ; ಸಿಸ್ಟಮ್ಯಾಟಿಕ್ ವಿತ್​ಡ್ರಾಯಲ್ ಪ್ಲಾನ್​ಗೆ ಅನುಮೋದನೆ; 55 ವರ್ಷ ನಿರ್ಬಂಧ, ನಿರುದ್ಯೋಗ ನಿಯಮ ಸಡಿಲ

ಅರ್ಧಕ್ಕಿಂತ ಹೆಚ್ಚಿನ ಉದ್ಯೋಗಿಗಳು ನೂರು ಕೋಟಿ ರೂ ಸರದಾರರು

ಈ 5,100 ಉದ್ಯೋಗಿಗಳ ಪೈಕಿ 2,800 ಉದ್ಯೋಗಿಗಳು, ಅಂದರೆ ಅರ್ಧಕ್ಕಿಂತ ಹೆಚ್ಚು ಮಂದಿ ಹೊಂದಿರುವ ಷೇರುಗಳ ಮೌಲ್ಯ 10 ಮಿಲಿಯನ್ ಡಾಲರ್​ಗಿಂತ ಹೆಚ್ಚಿದೆ. 600 ಮಂದಿ ಹಿರಿಯ ಉದ್ಯೋಗಿಗಳು ಹೊಂದಿರುವ ಆಂಥ್ರೋಪಿಕ್ ಷೇರುಗಳ ಮೌಲ್ಯ 100 ಮಿಲಿಯನ್ ಡಾಲರ್​ಗಿಂತ ಹೆಚ್ಚು. ಅಂದರೆ, 950 ಕೋಟಿ ರೂಪಾಯಿ ಮೌಲ್ಯದ ಷೇರುಗಳ ಒಡೆಯರಾಗಿದ್ದಾರೆ.

ಬಿಲಿಯನೇರ್​ಗಳಾದ ಸಹ-ಸಂಸ್ಥಾಪಕರು

ಆಂಥ್ರೊಪಿಕ್ ಕಂಪನಿಗೆ ಏಳು ಮಂದಿ ಸಹ-ಸಂಸ್ಥಾಪಕರಿದ್ದಾರೆ. ಅವರೆಲ್ಲರಿಗೂ ನೀಡಲಾಗಿರುವ ಷೇರುಗಳ ಮೌಲ್ಯ 20 ಬಿಲಿಯನ್ ಡಾಲರ್ ಆಗುತ್ತದೆ. ಈ ಪ್ರತೀ ಸಹ-ಸಂಸ್ಥಾಪಕರು 1.9 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಂಥ್ರೋಪಿಕ್ ಷೇರುಗಳ ಒಡೆಯರಾಗಿದ್ದಾರೆ.

ಭಾರತೀಯ ಮೂಲದ ವ್ಯಕ್ತಿಗಳಿಗೂ ಸುಗ್ಗಿ

ಆಂಥ್ರೋಪಿಕ್​ನೊಂದಿಗೆ ಜೋಡಿತಗೊಂಡ ಕೆಲ ಭಾರತ ಮೂಲದ ವ್ಯಕ್ತಿಗಳೂ ಕೂಡ ಕುಬೇರರಾಗಿದ್ದಾರೆ. ಆಂಥ್ರೋಪಿಕ್​ನ ಸಿಎಫ್​ಒ ಕೃಷ್ಣರಾವ್ ಅವರ ಷೇರುಸಂಪತ್ತಿನ ಮೌಲ್ಯ 788 ಮಿಲಿಯನ್ ಡಾಲರ್. ದಿವೇಶ್ ಮಕನ್ ಅವರ ಐಕಾನಿಕ್ ಕ್ಯಾಪಿಟಲ್ ಸಂಸ್ಥೆಗೆ 30 ಬಿಲಿಯನ್ ಡಾಲರ್ ಮೌಲ್ಯದ ಆಂಥ್ರೋಪಿಕ್ ಷೇರುಗಳು ಸಿಕ್ಕಿವೆ. ಆಂತ್ರೋಪಿಕ್ ಮಂಡಳಿ ಸದಸ್ಯ ವಾಸ್ ನರಸಿಂಹನ್ ಅವರು ಹೊಂದಿರುವ ಷೇರುಗಳ ಮೌಲ್ಯ 14.6 ಮಿಲಿಯನ್ ಡಾಲರ್ ಇದೆ.

ಇದನ್ನೂ ಓದಿ: 2013ರಲ್ಲಿ GTA5, 2026ರಲ್ಲಿ GTA 6; ‘ಭಾರತ ಈಗ ಹೊಸ ಗೇಮ್ ಆಡುತ್ತಿದೆ’: ವಿಪಕ್ಷಗಳಿಗೆ ನರೇಂದ್ರ ಮೋದಿ ಟಾಂಟ್

ಆಂಥ್ರೋಪಿಕ್ ಸೂಪರ್ ಐಪಿಒ

ಇದೂವರೆಗಿನ ಅತಿದೊಡ್ಡ ಐಪಿಒ ಎಂದು ಆಂಥ್ರೊಪಿಕ್ ದಾಖಲೆ ಸ್ಥಾಪಿಸಿದೆ. ಪ್ರತೀ ಷೇರಿಗೆ 83 ಡಾಲರ್ ಐಪಿಒ ಬೆಲೆ ಹೊಂದಿದ್ದ ಆಂಥ್ರೋಪಿಕ್, ಷೇರುಪೇಟೆಯಲ್ಲಿ ಲಿಸ್ಟ್ ಆದ ದಿನ 117 ಡಾಲರ್​ವರೆಗೂ ಹೋಗಿತ್ತು. ಪ್ರಾಥಮಿಕ ಮಾರುಕಟ್ಟೆ ಅಥವಾ ಐಪಿಒದಿಂದ ಆಂಥ್ರೋಪಿಕ್ 81.34 ಬಿಲಿಯನ್ ಡಾಲರ್ ಹಣ ಸಂಗ್ರಹಿಸಿದೆ. ಇದು ಸ್ಪೇಸ್​ಎಕ್ಸ್​ನ ಐಪಿಒ ಅನ್ನೂ ಮೀರಿಸಿದೆ. ಇಲಾನ್ ಮಸ್ಕ್ ಅವರ ಸ್ಪೇಸ್​ಎಕ್ಸ್ 75 ಬಿಲಿಯನ್ ಡಾಲರ್ ಐಪಿಒ ಆಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us