Repo and Bond: ರೆಪೋ ದರ ಏರಿಕೆ ಇಲ್ಲ ಎನ್ನುತ್ತಿದ್ದಂತೆಯೇ ಸರ್ಕಾರಿ ಬಾಂಡ್​ನ ಬಡ್ಡಿ ಇಳಿಕೆ; ಷೇರು ಮಾರುಕಟ್ಟೆಯಲ್ಲೂ ಸಂಚಲನ

|

Updated on: Apr 06, 2023 | 1:09 PM

RBI Governor Press Meet: ಆರ್​ಬಿಐನ ರೆಪೋ ದರದಲ್ಲಿ ಈ ಬಾರಿ ಏರಿಕೆ ಇಲ್ಲ ಎಂದು ಘೋಷಣೆ ಆಗುತ್ತಿದ್ದಂತೆಯೇ ಷೇರುಪೇಟೆ ಪುಟಿದೆದ್ದಿದೆ. ಬ್ಯಾಂಕುಗಳ ಷೇರುಗಳಿಗೆ ಬೇಡಿಕೆ ಬಂದಿದೆ. ಹಾಗೆಯೇ, ಸರ್ಕಾರಿ ಬಾಂಡ್​ಗಳಿಗೂ ಬೇಡಿಕೆ ಬಂದು, ಅದರ ಪರಿಣಾಮವಾಗಿ ಬಾಂಡ್ ಯೀಲ್ಡ್ ಕುಸಿತಗೊಂಡಿದೆ.

Repo and Bond: ರೆಪೋ ದರ ಏರಿಕೆ ಇಲ್ಲ ಎನ್ನುತ್ತಿದ್ದಂತೆಯೇ ಸರ್ಕಾರಿ ಬಾಂಡ್​ನ ಬಡ್ಡಿ ಇಳಿಕೆ; ಷೇರು ಮಾರುಕಟ್ಟೆಯಲ್ಲೂ ಸಂಚಲನ
ಸರ್ಕಾರಿ ಬಾಂಡ್
Follow us on

ನವದೆಹಲಿ: ಆರ್​ಬಿಐ ತನ್ನ ರೆಪೋ ದರವನ್ನು (Repo Rate) ಶೇ. 6.50ರಲ್ಲಿ ಮುಂದುವರಿಸಲು ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಬಾಂಡ್ ಮಾರುಕಟ್ಟೆ ಮತ್ತು ಷೇರು ಮಾರುಕಟ್ಟೆಯಲ್ಲಿ ಸಂಚಲನವಾಗಿದೆ. ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಏರಿಕೆ ಕಂಡಿವೆ. ಪಿಎನ್​ಬಿ, ಎಸ್​ಬಿಐ ಮೊದಲಾದ ಬ್ಯಾಂಕುಗಳ ಷೇರುಗಳು ಗಳಿಕೆ ಕಂಡಿವೆ. ಇನ್ನು, ಬಾಂಡ್ ಮಾರುಕಟ್ಟೆಯಲ್ಲೂ ವ್ಯತ್ಯಯಗಳಾಗಿವೆ. ಸರ್ಕಾರಿ ಬಾಂಡ್​ನ ಯೀಲ್ಡ್ (ಬಡ್ಡಿ ದರ) ಕಡಿಮೆ ಆಗಿದೆ. ಶೇ. 7.2857ರ ಬಡ್ಡಿ ದರದಲ್ಲಿ ರಿಟರ್ನ್ ಕೊಡುವ ನಿರೀಕ್ಷೆಯ 10 ವರ್ಷದ ಗವರ್ನ್ಮೆಂಟ್ ಬಾಂಡ್​ಗಳ ಯೀಲ್ಡ್ ಈಗ ಶೇ. 7.1469ಕ್ಕೆ ಇಳಿದಿದೆ. ಅಂದರೆ ಸುಮಾರು 14 ಮೂಲಾಂಕಗಳಷ್ಟು ಬಡ್ಡಿ ಕುಸಿತವಾಗಿದೆ. 5 ವರ್ಷದ ಅವಧಿಯ ಸರ್ಕಾರಿ ಬಾಂಡ್​ನ ಬಡ್ಡಿ ದರ ಕೂಡ 16 ಬೇಸಿಸ್ ಪಾಯಿಂಟ್​ಗಳಷ್ಟು ಇಳಿಕೆ ಕಂಡಿದೆ. ಇದೆಲ್ಲವೂ ರೆಪೋ ದರ ವಿಚಾರದಲ್ಲಿ ಆರ್​ಬಿಐ ತೆಗೆದುಕೊಂಡ ಅನಿರೀಕ್ಷಿತ ನಿರ್ಧಾರದ ಪರಿಣಾಮ.

ನಿಗದಿತ ತಾಳಿಕೆಯ ಮಟ್ಟಕ್ಕಿಂತ ಹೆಚ್ಚೇ ಇರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು ಆರ್​ಬಿಐ ಸತತವಾಗಿ ರೆಪೋ ದರ, ಅಂದರೆ ಬಡ್ಡಿ ದರಗಳನ್ನು ಹೆಚ್ಚಿಸುತ್ತಾ ಬಂದಿತ್ತು. ಫೆಬ್ರುವರಿ ತಿಂಗಳಲ್ಲಿ ಹಣದುಬ್ಬರ ತುಸು ಇಳಿಕೆ ಕಂಡರೂ ಶೇ. 6ರ ನಿಗದಿತ ಗುರಿಗಿಂತ ಆಚೆಯೇ ಇದ್ದರಿಂದ ಈ ಬಾರಿಯೂ ರೆಪೋ ದರವನ್ನು ಆರ್​ಬಿಐ ಹೆಚ್ಚಿಸಬಹುದು ಎಂಬ ಅಂದಾಜಿತ್ತು. ರೆಪೋ ದರ ಹೆಚ್ಚಾಗುವ ಭೀತಿಯಲ್ಲಿ ಏಪ್ರಿಲ್ 6 ರ ಬೆಳಗಿನ ವಹಿವಾಟಿನಲ್ಲಿ ಷೇರುಪೇಟೆಗಳು ಕುಸಿತ ಕಂಡಿದ್ದವು. ಆದರೆ, ರೆಪೋ ದರ ಹೆಚ್ಚಳ ಇಲ್ಲ ಎಂಬುದು ಖಾತ್ರಿ ಆಗುತ್ತಿದ್ದಂತೆಯೇ ಸೆನ್ಸೆಕ್ಸ್ ಮತ್ತು ನಿಫ್ಟಿಯಲ್ಲಿನ ಹೂಡಿಕೆದಾರರು ಪುಟಿದೆದಿದ್ದಾರೆ. ಸೆನ್ಸೆಕ್ಸ್ 150 ಅಂಕಗಳಷ್ಟು ಹೆಚ್ಚು ಗಳಿಕೆ ಕಂಡರೆ, ನಿಫ್ಟಿ 17,600 ಅಂಕಗಳ ಮಟ್ಟಕ್ಕಿಂತ ಮೇಲೆ ಹೋಗಿದೆ.

ಇದನ್ನೂ ಓದಿREPO Rate: ರೆಪೋ ದರ ಹೆಚ್ಚಿಸದಿರಲು ಆರ್​ಬಿಐ ನಿರ್ಧಾರ; ತುಸು ನಿರಾಳರಾದ ಜನಸಾಮಾನ್ಯರು

ವಿವಿಧ ಬ್ಯಾಂಕುಗಳ ಷೇರುಗಳು ಗರಿಗೆದರಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಷೇರುಗಳು ಅತಿ ಹೆಚ್ಚು ಗಳಿಕೆ ಕಂಡಿವೆ. ಐಡಿಎಫ್​ಸಿ, ಬ್ಯಾಂಕ್ ಆಫ್ ಬರೋಡಾ, ಇಂಡಸ್​ಇಂಡ್ ಬ್ಯಾಂಕ್​ನ ಷೇರುಗಳೂ ಕೂಡ ಒಳ್ಳೆಯ ವೃದ್ಧಿ ಕಂಡಿವೆ. ಬ್ಯಾಂಕ್ ನಿಫ್ಟಿ ಸೂಚ್ಯಂಕ 41,200 ಅಂಕಗಳ ಮಟ್ಟ ತಲುಪಿದ್ದು ಗಮನಾರ್ಹ.

ಸರ್ಕಾರಿ ಬಾಂಡ್​ನ ಯೀಲ್ಡ್​ನಲ್ಲಿ ಯಾಕೆ ಕುಸಿತ ಆಗಿದೆ?

ಸರ್ಕಾರಿ ಬಾಂಡ್ ಎಂದರೆ ಅದು ಸರ್ಕಾರ ಸಾರ್ವಜನಿಕವಾಗಿ ವಿತರಿಸುವ ಸಾಲಪತ್ರ. ಹಣದ ಕೊರತೆಯಾದಾಗ ಸರ್ಕಾರ ಈ ರೀತಿ ಸಾಲಪತ್ರಗಳನ್ನು ವಿತರಿಸಿ ಹಣ ಪಡೆಯುತ್ತದೆ. ವಿವಿಧ ಅವಧಿಗೆ ನೀಡಲಾಗುವ ಈ ಬಾಂಡ್​ಗಳಿಗೆ ಸರ್ಕಾರ ನಿರ್ದಿಷ್ಟ ಬಡ್ಡಿ ದರ ಪಾವತಿಸುತ್ತದೆ. ಇಂದು ಏಪ್ರಿಲ್ 6ರಂದು ಸರ್ಕಾರ 33 ಸಾವಿರ ಕೋಟಿ ರುಪಾಯಿ ಮೌಲ್ಯದಷ್ಟು ಬಾಂಡ್​​ಗಳನ್ನು ವಿತರಿಸುತ್ತದೆ.

ಇದನ್ನೂ ಓದಿGoogle Lawsuit: ಟ್ರೇಡ್​ಮಾರ್ಕ್ ದುರುಪಯೋಗ: ಗೂಗಲ್ ಎಂಟರ್ಪ್ರೈಸಸ್​ಗೆ 10 ಲಕ್ಷ ದಂಡ ವಿಧಿಸಿದ ದೆಹಲಿ ಹೈಕೋರ್ಟ್

ಈ ಸರ್ಕಾರಿ ಬಾಂಡ್​​ಗಳಿಗೆ ಬೇಡಿಕೆ ಹೆಚ್ಚಿದಷ್ಟೂ ಅದರ ರಿಟರ್ನ್ಸ್ ಮೌಲ್ಯ ಕಡಿಮೆ ಆಗುತ್ತದೆ. ಬ್ಯಾಂಕುಗಳ ಬಡ್ಡಿ ದರ ಹೆಚ್ಚಾದರೆ ಸರ್ಕಾರಿ ಬಾಂಡ್​ಗಳಿಗೆ ಬೇಡಿಕೆ ಕಡಿಮೆ ಆಗುತ್ತದೆ. ಈಗ ಆರ್​ಬಿಐ ತನ್ನ ಬಡ್ಡಿ ದರ ಹೆಚ್ಚಿಸದಿರಲು ನಿರ್ಧರಿಸಿರುವುದರಿಂದ ಬಾಂಡ್​ಗೆ ಬೇಡಿಕೆ ಹೆಚ್ಚಾಗಿದೆ. ಪರಿಣಾಮವಾಗಿ ಅದರ ಯೀಲ್ಡ್, ಅಂದರೆ ಅದರ ಬಡ್ಡಿ ದರ ಕಡಿಮೆ ಆಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Thu, 6 April 23