ಚೆನ್ನೈ, ಮಾರ್ಚ್ 16: ಭಾರತದ ಮೊದಲ ಹೈಪರ್ಲೂಪ್ ಪ್ರಾಜೆಕ್ಟ್ (Hyperloop Project) ಶೀಘ್ರದಲ್ಲೇ ಸಾಕಾರಗೊಳ್ಳುವ ಹಾದಿಯಲ್ಲಿದೆ. ಐಐಟಿ ಮದ್ರಾಸ್ನ ಆವಿಷ್ಕಾರ್ ಹೈಪರ್ಲೂಪ್ (Avishkar Hyperloop) ತಂಡ ಹಾಗೂ ಟುಟರ್ (TuTr) ಎನ್ನುವ ಸ್ಟಾರ್ಟಪ್ ಜಂಟಿಯಾಗಿ ಐಐಟಿ ಸೆಂಟರ್ನಲ್ಲಿ ಹೈಪರ್ಲೂಪ್ ಮಾದರಿಯೊಂದನ್ನು ನಿರ್ಮಿಸಿವೆ. ಈ ಪ್ರೋಟೋಟೈಪ್ 410 ಮೀಟರ್ ಉದ್ದ ಇದೆ. ಸದ್ಯ ಇದು ಏಷ್ಯಾದ ಅತಿ ಉದ್ದದ ಪ್ರೋಟೋಟೈಪ್ ಹೈಪರ್ಲೂಪ್ ಟೆಸ್ಟ್ ಟ್ರ್ಯಾಕ್ ಆಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ನಿನ್ನೆ ಶನಿವಾರ ಐಐಟಿ ಮದ್ರಾಸ್ನಲ್ಲಿರುವ ಈ ಹೈಪರ್ಲೂಪ್ ಪ್ರಯೋಗ ಆಗುತ್ತಿರುವ ಕೇಂದ್ರಕ್ಕೆ ಭೇಟಿ ನೀಡಿದರು. ಕಾರ್ಯದ ಪ್ರಗತಿ ಬೆಳವಣಿಗೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಏಷ್ಯಾದ ಅತಿದೊಡ್ಡ ಹೈಪರ್ಲೂಪ್ ಟ್ಯೂಬ್ ಅತಿಶೀಘ್ರದಲ್ಲೇ ವಿಶ್ವದ ಅತಿದೊಡ್ಡದ ಟ್ರ್ಯಾಕ್ ಆಗಲಿದೆ… ಹೈಪರ್ಲೂಪ್ ಟ್ರಾನ್ಸ್ಪೋರ್ಟೇಶನ್ಗೆ ಬೇಕಾದ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ. ಬಹಳ ಶೀಘ್ರದಲ್ಲಿ ಭಾರತದಲ್ಲಿ ಹೈಪರ್ಲೂಪ್ ಸಾರಿಗೆ ವ್ಯವಸ್ಥೆ ಸಿದ್ಧವಾಗಲಿದೆ’ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಚಿತ ಯೋಜನೆಗಳಿಂದ ಬಡತನ ಹೋಗಲ್ಲ: ಸಮಾಜವಾದದಿಂದ ಪರಿಹಾರ ಇಲ್ಲ: ಇನ್ಫೋಸಿಸ್ ನಾರಾಯಣಮೂರ್ತಿ
ಭಾರತೀಯ ರೈಲ್ವೆ, ಎಲ್ ಅಂಡ್ ಟಿ, ಆವಿಷ್ಕಾರ್ ಹೈಪರ್ಲೂಪ್ ಸಂಸ್ಥೆಗಳು ಸೇರಿ ಹೈಪರ್ಲೂಪ್ ಟೆಸ್ಟ್ ಟ್ರ್ಯಾಕ್ ನಿರ್ಮಾಣ ಕಾರ್ಯ ಮುಗಿಸಿವೆ. 40ರಿಂದ 50 ಕಿಮೀಯಷ್ಟು ಉದ್ದದ ಟೆಸ್ಟ್ ಟ್ರ್ಯಾಕ್ ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ. ಇದು ವಿಶ್ವದ ಅತಿ ಉದ್ದದ ಹೈಪರ್ಲೂಪ್ ಟೆಸ್ಟ್ ಟ್ರ್ಯಾಕ್ ಎನಿಸಲಿದೆ. ಗಂಟೆಗೆ 1,100 ಕಿಮೀ ವೇಗದಲ್ಲಿ ಪ್ರಯಾಣಿಸಬಹುದಾ ಎಂದು ಈ ಟ್ರ್ಯಾಕ್ನಲ್ಲಿ ಪರೀಕ್ಷಿಸಲಾಗುತ್ತದೆ.
ಬೆಂಗಳೂರು ಮತ್ತು ಚೆನ್ನೈ ನಡುವೆ ಸುಮಾರು 350 ಕಿಮೀ ಅಂತರ ಇದೆ. ಹೈಪರ್ಲೂಪ್ ಟ್ರ್ಯಾಕ್ ನಿರ್ಮಾಣವಾದರೆ ಕೇವಲ 30 ನಿಮಿಷದಲ್ಲಿ ಪ್ರಯಾಣಿಸಲು ಸಾಧ್ಯ. ಬುಲೆಟ್ ಟ್ರೈನು, ವಿಮಾನಕ್ಕಿಂತಲೂ ವೇಗವಾಗಿ ಸಾಗಬಹುದು.
ಹೈಪರ್ಲೂಪ್ ತತ್ವ ಬಹಳ ಸರಳ. ಗಾಳಿಯ ಒತ್ತಡವೇ ಇಲ್ಲದ ಬೃಹತ್ ಟ್ಯೂಬ್ನೊಳಗೆ ಕ್ಯಾಪ್ಸೂಲ್ ಆಕಾರದ ಪೋಡ್ ಅನ್ನು ಅಯಸ್ಕಾಂತೀಯ ಶಕ್ತಿ ಮೂಲಕ ಚಲಿಸುವಂತೆ ಮಾಡಲಾಗುತ್ತದೆ. ಟ್ಯೂಬ್ನ ಒಳಗೆ ಈ ಪೋಡ್ ಯಾವುದಕ್ಕೂ ಘರ್ಷಿಸುವುದಿಲ್ಲ. ಟ್ರ್ಯಾಕ್ ಮತ್ತು ಗಾಳಿಯ ಘರ್ಷಣೆ ಇಲ್ಲದ್ದರಿಂದ ಪೋಡ್ ಬಹಳ ವೇಗವಾಗಿ ಸಾಗಬಲ್ಲುದು. ಗಂಟೆಗೆ 1,000 ಕಿಮೀಯಷ್ಟು ವೇಗದಲ್ಲಿ ಹೋಗಲು ಸಾಧ್ಯ.
ಇದನ್ನೂ ಓದಿ: 2035ಕ್ಕೆ ಭಾರತದಲ್ಲಿ ಸ್ಟಾರ್ಪಟ್ ಸಂಖ್ಯೆ 10,00,000 ಆಗುವ ನಿರೀಕ್ಷೆ: ನಂದನ್ ನಿಲೇಕಣಿ ನಿರೀಕ್ಷೆ
ಸ್ವಿಟ್ಜರ್ಲ್ಯಾಂಡ್, ನೆದರ್ಲ್ಯಾಂಡ್ಸ್ ಮೊದಲಾದ ಕೆಲ ದೇಶಗಳಲ್ಲಿ ಹೈಪರ್ಲೂಪ್ ಟೆಸ್ಟಿಂಗ್ ಟ್ರ್ಯಾಕ್ ನಿರ್ಮಿಸಿ ಪರೀಕ್ಷೆ ಮಾಡಲಾಗುತ್ತಿದೆ. ಎಲ್ಲಿಯೂ ಕೂಡ ಇನ್ನೂ ಪೂರ್ಣವಾಗಿ ಟ್ರ್ಯಾಕ್ ನಿರ್ಮಾಣವಾಗಿಲ್ಲ. ಐಐಟಿ ಮದ್ರಾಸ್ನಲ್ಲಿ ಕೆಲವಾರು ತಿಂಗಳಿಂದ ಈ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿ ನಡೆಯುತ್ತಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಪೂರ್ಣ ಬೆಂಬಲ ನೀಡಿದೆ. ಇದೀಗ ಪ್ರೋಟೋಟೈಪ್ ಸಿದ್ಧವಾಗಿದ್ದು, ಶೀಘ್ರದಲ್ಲೇ 50 ಕಿಮೀಯಷ್ಟು ಟೆಸ್ಟಿಂಗ್ ಟ್ರ್ಯಾಕ್ ಕೂಡ ಸಿದ್ಧವಾಗಲಿದೆ. ಪ್ರಯೋಗಗಳು ಯಶಸ್ವಿಯಾದ ಬಳಿಕ ಬೆಂಗಳೂರು ಮತ್ತು ಚೆನ್ನೈ ಮಧ್ಯೆ ಹೈಪರ್ಲೂಪ್ ಟ್ರ್ಯಾಕ್ ಸಿದ್ಧಪಡಿಸಲು ಸರ್ಕಾರ ನಿರ್ಧರಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ