ನವದೆಹಲಿ, ಜನವರಿ 10: ಶ್ರೀ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆ ನಗರ (Ayodhya city) ಇಡೀ ಜಗತ್ತಿನ ಗಮನ ಸೆಳೆದಿದೆ. ಇನ್ನೆರಡು ವಾರದೊಳಗೆ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದೆ. ಶ್ರೀರಾಮನ ಜನ್ಮಸ್ಥಾನ ಎನ್ನಲಾದ ಸ್ಥಳದಲ್ಲಿ ಭವ್ಯವಾದ ದೇವಸ್ಥಾನವನ್ನು ಮರುನಿರ್ಮಿಸಲಾಗಿದೆ. ಇದರ ಜೊತೆಗೆ ಅಯೋಧ್ಯೆ ನಗರವನ್ನೂ ವ್ಯವಸ್ಥಿತವಾಗಿ ಮಾರ್ಪಾಡು ಮಾಡಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಈ ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕನಿಷ್ಠ ಮೂರು ಲಕ್ಷವಾದರೂ ಆದೀತು ಎಂಬ ಮುಂದಾಲೋಚನೆಯಲ್ಲಿ ನಗರದ ರೂಪುರೇಖೆಯನ್ನು ಬದಲಿಸಲಾಗುತ್ತಿದೆ.
ಈ ಅಯೋಧ್ಯೆ ನವೀಕರಣ ಯೋಜಿಸುವ ಜವಾಬ್ದಾರಿಯನ್ನು ದೀಕ್ಷು ಕುಕ್ರೇಜಾ ಅವರಿಗೆ ವಹಿಸಲಾಗಿದೆ. ಸಿ.ಪಿ. ಕುಕ್ರೇಜಾ ಆರ್ಕಿಟೆಕ್ಟ್ಸ್ ಸಂಸ್ಥೆಯ ಮುಖ್ಯಸ್ಥರಾದ ದೀಕ್ಷು ಅವರು ಅಯೋಧ್ಯೆಯ ವಿವಿಧ ಸೌಕರ್ಯ ವ್ಯವಸ್ಥೆ ಹೇಗಿರಬೇಕು ಎಂಬಿತ್ಯಾದಿಯ ಪ್ಲಾನಿಂಗ್ ನೀಡುತ್ತಿದ್ದಾರೆ. ಅಪಾರ ಸಂಖ್ಯೆಯ ಪ್ರವಾಸಿಗರಿಗೆ ಆತಿಥ್ಯ ನೀಡಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ಹೆಚ್ಚಿನ ಪ್ರವಾಸಿಗರು ಹೋಗುವ ದೇಶ ವಿದೇಶಗಳಲ್ಲಿನ ಇತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿನ ಇನ್ಫ್ರಾಸ್ಟ್ರಕ್ಚರ್ ವ್ಯವಸ್ಥೆಯನ್ನು ಗಮನಿಸಲಾಗಿದೆ ಎಂದು ದೀಕ್ಷು ಕುಕ್ರೇಜಾ ಹೇಳುತ್ತಾರೆ. ಆಂಧ್ರದ ತಿರುಪತಿ, ಪಂಜಾಬ್ನ ಅಮೃತಸರ್, ಅಷ್ಟೇ ಅಲ್ಲ, ವ್ಯಾಟಿಕನ್ ಸಿಟಿ, ಕಾಂಬೋಡಿಯಾ, ಜೆರುಸಲೆಮ್ ಮೊದಲಾದ ಸ್ಥಳಗಳಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಲಾಗಿದೆ.
ಇದನ್ನೂ ಓದಿ: BR Shetty: ಸಾವಿರ ಕೋಟಿ ರೂ ಬಜೆಟ್ನಲ್ಲಿ ಮಹಾಭಾರತ ಸಿನಿಮಾ ನಿರ್ಮಿಸಲು ಹೊರಟಿದ್ದ ಈ ಕನ್ನಡಿಗನಿಗೆ ಈಗ ದಿಕ್ಕುತೋಚದ ಸ್ಥಿತಿ
ಅಯೋಧ್ಯೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹೆಗ್ಗುರುರಿಗೆ ಧಕ್ಕೆಯಾಗದ ರೀತಿಯಲ್ಲಿ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಪಡಿಸುವುದು ಕುಕ್ರೇಜಾ ಅವರ ಮಾಸ್ಟರ್ ಪ್ಲಾನ್ ಆಗಿದೆ. ನೆಲದ ಸಮರ್ಪಕ ಬಳಕೆ ಮಾಡುವುದು, ದಟ್ಟನೆ ಹೆಚ್ಚಾಗದಂತೆ ನೋಡಿಕೊಳ್ಳುವುದು, ಧರ್ಮಶಾಲೆಗಳು, ಧರ್ಮಛತ್ರಗಳು, ಹೋಮ್ಸ್ಟೇಗಳ ನಿರ್ಮಾಣ ಮಾಡುವುದು ನವೀಕರಣ ಯೋಜನೆಯ ಭಾಗವಾಗಿರುತ್ತವೆ.
‘ಅಯೋಧ್ಯೆಯು ಜಾಗತಿಕ ಪ್ರವಾಸೋದ್ಯಮ ಸ್ಥಳವಾಗಿ ಬೆಳೆಯುವ ನಿರೀಕ್ಷೆ ಇದೆ. ಪ್ರವಾಸ, ಆರ್ಥಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಲಿದೆ. ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಅಯೋಧ್ಯೆಗೆ ನಿತ್ಯವೂ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ಕೊಡುವ ಸಾಧ್ಯತೆ ಇರುತ್ತದೆ,’ ಎಂದು ದೀಕ್ಷು ಕುಕ್ರೇಜಾ ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ