ಪಂಚಾಯಿತಿ ಮಟ್ಟದಲ್ಲಿ ಬ್ಯಾಂಕ್ ಕೆವೈಸಿ ಶಿಬಿರ; ದಾಖಲೆಗಳೇನು ಬೇಕು? ಇಲ್ಲಿದೆ ವಿವರ

Banks hold camps till Sep 30 for re-KYC of Jan Dhan accounts: ಬ್ಯಾಂಕ್ ಖಾತೆಗಳ ಮರು ಕೆವೈಸಿ ಮಾಡಿಸಲು ಗ್ರಾಹಕರ ಮನೆ ಬಾಗಿಲಿಗೇ ಬ್ಯಾಂಕುಗಳು ಬಂದಿವೆ. ಆರ್​ಬಿಐ ಅಣತಿ ಮೇರೆಗೆ ಬ್ಯಾಂಕುಗಳು ಗ್ರಾಮ ಪಂಚಾಯಿತಿಗಳಲ್ಲಿ ಶಿಬಿರ ಸ್ಥಾಪಿಸಿವೆ. ಗ್ರಾಹಕರು ಇಲ್ಲಿಯೇ ತಮ್ಮ ಖಾತೆಗಳ ರೀ-ಕೆವೈಸಿ ಮಾಡಿಸಿ ಬ್ಯಾಂಕ್ ಅಕೌಂಟ್ ನಿಷ್ಕ್ರಿಯಗೊಳ್ಳದಂತೆ ಎಚ್ಚರ ವಹಿಸಬಹುದು. ಜುಲೈ 1ರಿಂದಲೇ ಆರಂಭವಾಗಿರುವ ಈ ಶಿಬಿರ ಸೆ. 30ರವರೆಗೂ ಇರುತ್ತದೆ.

ಪಂಚಾಯಿತಿ ಮಟ್ಟದಲ್ಲಿ ಬ್ಯಾಂಕ್ ಕೆವೈಸಿ ಶಿಬಿರ; ದಾಖಲೆಗಳೇನು ಬೇಕು? ಇಲ್ಲಿದೆ ವಿವರ
ಬ್ಯಾಂಕ್

Updated on: Aug 27, 2025 | 12:08 PM

ನವದೆಹಲಿ, ಆಗಸ್ಟ್ 27: ಪಿಎಂ ಜನ್ ಧನ್ ಅಕೌಂಟ್ ಸ್ಕೀಮ್ 10 ವರ್ಷ ಪೂರ್ಣಗೊಂಡಿದ್ದು, ಅದರಡಿ ತೆರೆಯಲಾಗಿರುವ ಬಹಳಷ್ಟು ಬ್ಯಾಂಕ್ ಖಾತೆಗಳಿಗೆ ರೀ-ಕೆವೈಸಿ (Re-KYC) ಮಾಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ಪಂಚಾಯಿತಿ ಮಟ್ಟದಲ್ಲಿ ಜನ್ ಧನ್ ಖಾತೆಗಳಿಗಾಗಿ ಮರು ಕೆವೈಸಿ ಮಾಡಲು ಶಿಬಿರಗಳನ್ನು ನಡೆಸುತ್ತಿವೆ. ಜುಲೈ 1ರಿಂದಲೇ ಕ್ಯಾಂಪ್​ಗಳು ಆರಂಭವಾಗಿದ್ದು, ಅಲ್ಲಿ ಮರು ಕೆವೈಸಿಗೆ ಸೆಪ್ಟೆಂಬರ್ 30ರವರೆಗೂ ಅವಕಾಶ ನೀಡಲಾಗಿದೆ. ಈ ಪಂಚಾಯಿತಿ ಮಟ್ಟದ ಕ್ಯಾಂಪ್​ಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಮರು-ಕೆವೈಸಿ ಮಾಡುವುದು ಮಾತ್ರವಲ್ಲ, ಖಾತೆಯಲ್ಲಿ ಸಮಸ್ಯೆ ಇದ್ದರೆ ಸರಿಪಡಿಸುವುದು ಸೇರಿದಂತೆ ವಿವಿಧ ಸೇವೆಗಳು ಲಭ್ಯ ಇವೆ. ನಿಮ್ಮ ಮನೆ ಬಾಗಿಲಿನ ಸಮೀಪವೇ ಬಂದಿರುವ ಬ್ಯಾಂಕುಗಳ ಸೌಲಭ್ಯದ ಅವಕಾಶ ಬಳಸಿಕೊಳ್ಳಬಹುದು.

ಬ್ಯಾಂಕ್ ಖಾತೆಯ ಕೆವೈಸಿ ನವೀಕರಣದ ಮಾಹಿತಿ

  • ಸ್ಥಳ: ನಿಮ್ಮ ಗ್ರಾಮ ಪಂಚಾಯಿತಿ
  • ದಿನ: ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ
  • ದಾಖಲೆಗಳು: ನಿಮ್ಮ ಹೆಸರು ಮತ್ತು ವಿಳಾಸದಲ್ಲಿ ಯಾವುದೇ ಬದಲಾವಣೆ ಆಗಿರದಿದ್ದರೆ ಸ್ವಯಂ ಘೋಷಣೆ ಅಥವಾ ಸೆಲ್ಫ್ ಡಿಕ್ಲರೇಶನ್ ಫಾರ್ಮ್ ಭರ್ತಿ ಮಾಡಿಕೊಡಬಹುದು.

ಹೆಸರು ಮತ್ತು ವಿಳಾಸ ಬದಲಾಗಿದ್ದರೆ, ಅದನ್ನು ಪುಷ್ಟೀಕರಿಸುವ ಒಂದು ದಾಖಲೆ ಬೇಕಾಗುತ್ತದೆ. ಆರ್​ಬಿಐ ನಿಗದಿ ಮಾಡಿದ ಈ ಕೆಳಗಿನ ಒಂದು ದಾಖಲೆ ನೀಡಿದರೆ ಸಾಕಾಗುತ್ತದೆ:

  1. ಆಧಾರ್
  2. ವೋಟರ್ ಐಡಿ
  3. ನರೇಗಾ ಜಾಬ್ ಕಾರ್ಡ್
  4. ಡ್ರೈವಿಂಗ್ ಲೈಸೆನ್ಸ್
  5. ಪಾಸ್​ಪೋರ್ಟ್
  6. ರಾಷ್ಟ್ರೀಯ ಜನಸಂಖ್ಯಾ ನೊಂದಣಿಯಿಂದ ಹೊರಡಿಸಲಾದ ಪತ್ರ

ಇದನ್ನೂ ಓದಿ: ಎಲ್​ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ರಿವೈವಲ್​ಗೆ ಅ. 17ರವರೆಗೂ ಅವಕಾಶ

ಪಿಎಂ ಜನ್ ಧನ್ ಖಾತೆಗಳಿಗೆ

ಭಾರತೀಯ ರಿಸರ್ವ್ ಬ್ಯಾಂಕ್ ಈಗ ಪಂಚಾಯಿತಿ ಮಟ್ಟದಲ್ಲಿ ರೀ-ಕೆವೈಸಿ ಮಾಡಿಸುತ್ತಿರುವುದು ಪಿಎಂ ಜನ್ ಧನ್ ಸ್ಕೀಮ್ ಅಡಿ ತೆರೆಯಲಾಗಿರುವ ಬ್ಯಾಂಕ್ ಖಾತೆಗಳಿಗೆ. ಸರ್ಕಾರದ ಸ್ಕೀಮ್​ಗಳಲ್ಲಿ ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಬಹುತೇಕ ಈ ಬ್ಯಾಂಕ್ ಖಾತೆಗಳಿಗೆ. ಇವುಗಳ ಕೆವೈಸಿ ಅಪ್​ಡೇಟ್ ಆಗದೇ ಹೋದರೆ ಖಾತೆ ಇನಾಪರೇಟಿವ್ ಎಂದು ಪರಿಗಣಿಸಲಾಗಬಹುದು. ಆಗ ಹಣ ರವಾನೆಯಾಗದೇ ಸ್ಥಗಿತಗೊಳ್ಳಬಹುದು. ಈ ಕಾರಣಕ್ಕೆ ಬ್ಯಾಂಕ್ ಖಾತೆಯ ನವೀಕರಣಕ್ಕಾಗಿ ಮರು ಕೆವೈಸಿ ಮಾಡುವುದು ಅತ್ಯಗತ್ಯ.

ಪಂಚಾಯಿತಿ ಮಟ್ಟದಲ್ಲಿ ನಡೆಸಲಾಗುವ ಈ ಶಿಬಿರಗಳಲ್ಲಿ ಬ್ಯಾಂಕ್ ಖಾತೆಗಳಿಗೆ ರೀ-ಕೆವೈಸಿ ಪಡೆಯಲಾಗುತ್ತದೆ. ಜೊತೆಗೆ ಮೈಕ್ರೋ ಇನ್ಷೂರೆನ್ಸ್ ಸ್ಕೀಮ್​ಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನವಾಗಲಿದೆ. ಜನರು ಇಂಥ ಸ್ಕೀಮ್​ಗಳಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸಬಹುದು. ಆರ್​ಬಿಐನ ಬಾಂಡ್​ಗಳ ಬಗ್ಗೆಯೂ ಗ್ರಾಹಕರಲ್ಲಿ ತಿಳಿವಳಿಕೆ ಮೂಡಿಸಲು ಈ ಶಿಬಿರದಲ್ಲಿ ಪ್ರಯತ್ನವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us