ATM Charges: ಜನವರಿ 1, 2022ರಿಂದ ಎಟಿಎಂ ಶುಲ್ಕಗಳಲ್ಲಿ ಬದಲಾವಣೆ; ಎಷ್ಟು ಎಂಬ ಮಾಹಿತಿ ಇಲ್ಲಿದೆ

| Updated By: Srinivas Mata

Updated on: Dec 16, 2021 | 1:15 PM

ಜನವರಿ 1, 2022ರಿಂದ ಬ್ಯಾಂಕ್​ಗಳ ಎಟಿಎಂ ಶುಲ್ಕಗಳ ಏರಿಕೆ ಆಗಲಿದ್ದು ಪರಿಷ್ಕೃತ ದರ ಎಷ್ಟಿದೆ ಎಂಬುದರ ವಿವರ ಈ ಲೇಖನದಲ್ಲಿ ಇದೆ.

ATM Charges: ಜನವರಿ 1, 2022ರಿಂದ ಎಟಿಎಂ ಶುಲ್ಕಗಳಲ್ಲಿ ಬದಲಾವಣೆ; ಎಷ್ಟು ಎಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂಗಳಿಂದ ಹಣ ವಿಥ್​ಡ್ರಾ ಮಾಡುವವರಿಗೆ 2022ರ ಜನವರಿಯಿಂದ ದುಬಾರಿ ಆಗಲಿದೆ. ಈ ವರ್ಷದ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಅಧಿಸೂಚನೆ ಹೊರಡಿಸಿ, ಬ್ಯಾಂಕ್​ಗಳ ಎಟಿಎಂನಿಂದ ನಿಗದಿತ ಸಂಖ್ಯೆಯ ನಗದು ವಿಥ್​ಡ್ರಾ ಮಿತಿ ಮುಗಿದ ನಂತರ ದೇಶದಾದ್ಯಂತ ಈ ವಹಿವಾಟು ದುಬಾರಿ ಆಗುತ್ತದೆ. ಎಟಿಎಂನಲ್ಲಿನ ನಗದು ವಿಥ್​ಡ್ರಾ ಮಿತಿ ದಾಟಿದ ನಂತರ 2022ರ ಜನವರಿಯಿಂದ ಗ್ರಾಹಕರು ಹೆಚ್ಚು ಶುಲ್ಕ ತೆರಬೇಕಾಗುತ್ತದೆ. ದಿನಾಂಕ ಹತ್ತಿರವಾಗುತ್ತಿದ್ದಂತೆ ಬ್ಯಾಂಕ್​ಗಳು ಗ್ರಾಹಕರಿಗೆ ಎಟಿಎಂ ನಿಯಮ ಬದಲಾವಣೆಗಳ ಬಗ್ಗೆ ಈಗಾಗಲೇ ತಿಳಿಸುತ್ತಿದೆ. ಜನವರಿ 1, 2022ರಿಂದ ಈ ನಿಯಮ ಜಾರಿ ಆಗಲಿದೆ. ಆರ್​ಬಿಐ ಅಧಿಸೂಚನೆಯ ಪ್ರಕಾರ, ನಗದು ವಿಥ್​ಡ್ರಾ ಮಿತಿ ಮೀರಿದ ಮೇಲೆ ಪ್ರತಿ ವಹಿವಾಟಿಗೆ 21 ರೂಪಾಯಿ ಪಾವತಿಸಬೇಕು. ಇಂಥದ್ದೇ ಸನ್ನಿವೇಶ ಉದ್ಭವಿಸಿದಲ್ಲಿ ಸದ್ಯಕ್ಕೆ ಪ್ರತಿ ವಹಿವಾಟಿಗೆ ರೂ. 20 ಇದೆ.

ಯಾವ ಬ್ಯಾಂಕ್​ನಲ್ಲಿ ಖಾತೆ ಇದೆಯೋ ಆ ಬ್ಯಾಂಕ್​ನ ಎಟಿಎಂನಿಂದ ಉಚಿತವಾಗಿ 5 ವಹಿವಾಟುಗಳನ್ನು ಮಾಡುವುದಕ್ಕೆ ಆರ್​ಬಿಐ ಅವಕಾಶ ನೀಡುತ್ತದೆ. ಆ ನಂತರ ಈ ಶುಲ್ಕ ಅನ್ವಯ ಆಗುತ್ತದೆ. ಖಾತೆ ಇರುವ ಬ್ಯಾಂಕ್​ಗಳದೇ ಎಟಿಎಂಗಳಿಂದ ನಗದು ಹಾಗೂ ನಗದುಯೇತರ ಎರಡೂ ಸೇರಿ ಗರಿಷ್ಠ 5 ವಹಿವಾಟುಗಳನ್ನು ನಡೆಸಬಹುದು. ಇದನ್ನು ಹೊರತುಪಡಿಸಿ ಮೆಟ್ರೋ ನಗರಗಳಲ್ಲಿ (ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ದೆಹಲಿ ಮತ್ತು ಹೈದರಾಬಾದ್) ಇತರ ಬ್ಯಾಂಕ್​ಗಳಲ್ಲಿ ಮೂರು ವಹಿವಾಟು ಉಚಿತ ಇದೆ. ಇನ್ನು ಮೆಟ್ರೋಯೇತರ ನಗರಗಳಲ್ಲಿ 5 ವಹಿವಾಟು ಉಚಿತವಿದೆ. ಈ ದರ ಏರಿಕೆ ಬಗ್ಗೆ 2021ರ ಜೂನ್​ನಲ್ಲಿ ಆರ್​ಬಿಐ ಅಧಿಸೂಚನೆ ಹೊರಡಿಸಿತ್ತು.

ನಿಯಮ ಬದಲಾವಣೆ ಬಗ್ಗೆ ಬ್ಯಾಂಕ್​ಗಳು ವೆಬ್​ಸೈಟ್​ಗಳಲ್ಲಿ ಅಧಿಸೂಚನೆ ಹೊರಡಿಸಿವೆ. “ಜನವರಿ 1, 2022ರಿಂದ ಜಾರಿಯಾಗುವಂತೆ ಉಚಿತ ಮಿತಿಯ ನಂತರದಲ್ಲಿ ಎಟಿಎಂ ವಹಿವಾಟುಗಳ ಶುಲ್ಕವು ರೂ. 20+ ತೆರಿಗೆಗಳು ಇರುವುದು ಇನ್ನು ಮುಂದೆ ರೂ. 21+ ತೆರಿಗೆ ಎಲ್ಲಿ ಅನ್ವಯಿಸುತ್ತದೋ ಅಲ್ಲಿಗೆ ಆನ್ವಯಿಸುತ್ತದೆ,” ಎಂದು ಎಚ್​ಡಿಎಫ್​ಸಿ ಬ್ಯಾಂಕ್ ವೆಬ್​ಸೈಟ್​ ತಿಳಿಸಿದೆ.

“ಆಕ್ಸಿಸ್ ಬ್ಯಾಂಕ್ ಅಥವಾ ಇತರ ಬ್ಯಾಂಕ್​ಗಳ ಎಟಿಎಂಗಳ ಮಿತಿಯನ್ನು ದಾಟಿದಲ್ಲಿ ಜನವರಿ 1, 2022ರಿಂದ ರೂ. 21+ ಜಿಎಸ್​ಟಿ ಅನ್ವಯಿಸುತ್ತದೆ,” ಆಕ್ಸಿಸ್ ಬ್ಯಾಂಕ್ ತನ್ನ ವೆಬ್​ಸೈಟ್​ನಲ್ಲಿ ಹೇಳಿದೆ.

ಈ ಬದಲಾವಣೆ ಏಕಾಗುತ್ತಿದೆ?
ಬದಲಾವಣೆಗಳನ್ನು ತರುವ ಉದ್ದೇಶದಿಂದ 2019ನೇ ಇಸವಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸಮಿತಿಯೊಂದನ್ನು ರಚಿಸಿತ್ತು. ಎಟಿಎಂ ಶುಲ್ಕಗಳು ಮತ್ತು ಫೀ ಬದಲಾವಣೆ, ಅದರಲ್ಲೂ ಬೇರೆ ಎಟಿಎಂಗಳಲ್ಲಿ ವಿಥ್​ಡ್ರಾ ಮಾಡುವುದಿದ್ದಲ್ಲಿ ಆ ಶುಲ್ಕದ ಬಗ್ಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮುಖ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2019ರ ಜೂನ್​ನಲ್ಲಿ ಸಮಿತಿ ರಚಿಸಲಾಗಿತ್ತು.

ಇದನ್ನೂ ಓದಿ: ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು 1300 ಕೋಟಿ ರೂಪಾಯಿ ಪಿಎಲ್​ಐ ಯೋಜನೆಗೆ ಕೇಂದ್ರ ಅನುಮೋದನೆ