
ನವದೆಹಲಿ, ಮಾರ್ಚ್ 17: ಮುಂದಿನ ವಾರ ಎರಡು ದಿನ ಸರ್ಕಾರಿ ಬ್ಯಾಂಕ್ ಉದ್ಯೋಗಿಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ. ಬ್ಯಾಂಕ್ ಉದ್ಯೋಗಿಗಳ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಮಾರ್ಚ್ 24 ಮತ್ತು 25ರಂದು ಮುಷ್ಕರ ನಡೆಯುವ ಸಾಧ್ಯತೆ ದಟ್ಟವಾಗಿದೆ. ಭಾರತೀಯ ಬ್ಯಾಂಕುಗಳ ಸಂಘಟನೆಯಾದ ಐಬಿಎ ಜೊತೆ ನಡೆದ ಮಾತುಕತೆಯಲ್ಲಿ ಯಾವುದೇ ಭರವಸೆ ಮೂಡದ ಹಿನ್ನೆಲೆಯಲ್ಲಿ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆಯು (UFBU- United Forum for Bank Unions) ರಾಷ್ಟ್ರವ್ಯಾಪಿ ಮುಷ್ಕರದ ನಿರ್ಧಾರವನ್ನು ಬದಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಎಸ್ಬಿಐ, ಕರ್ಣಾಟಕ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತ್ಯಾದಿ ಸರ್ಕಾರಿ ಬ್ಯಾಂಕುಗಳ ಉದ್ಯೋಗಿಗಳು ಮಾತ್ರವೇ ಮುಷ್ಕರದಲ್ಲಿ ಭಾಗಿಯಾಗಿರುತ್ತಾರೆ.
ಒಂಬತ್ತು ಸರ್ಕಾರಿ ಬ್ಯಾಂಕ್ ಕಾರ್ಮಿಕರ ಒಕ್ಕೂಟಗಳು ಸೇರಿ ರಚಿಸಲಾಗಿರುವ ಯುನೈಟೆಡ್ ಫೋರಂ ತಮ್ಮ ಮುಷ್ಕರದ ನಿರ್ಧಾರ ಹಿಂಪಡೆಯಲಾಗುವುದಿಲ್ಲ ಎಂದು ಮಾರ್ಚ್ 13ರಂದು ಹೇಳಿತ್ತು. ಐಬಿಎ ಜೊತೆ ಅದು ಎರಡು ದಿನ ಮಾತುಕತೆ ನಡೆಸಿತ್ತು. ಆದರೆ, ಬ್ಯಾಂಕ್ ಕಾರ್ಮಿಕರ ಪ್ರಮುಖ ಬೇಡಿಕೆಗಳಿಗೆ ಪರಿಹಾರ ಸಿಗುವ ಯಾವ ಭರವಸೆಯೂ ಮಾತುಕತೆಯಲ್ಲಿ ಬರಲಿಲ್ಲ ಎಂದು ಬ್ಯಾಂಕ್ ಯೂನಿಯನ್ಗಳ ಮಹಾ ಒಕ್ಕೂಟವು ಹೇಳಿದೆ.
ಇದನ್ನೂ ಓದಿ: ಫೆಬ್ರುವರಿಯಲ್ಲಿ ಹೋಲ್ಸೇಲ್ ಹಣದುಬ್ಬರ ಶೇ. 2.38; ಜನವರಿಗೆ ಹೋಲಿಸಿದರೆ ಅಲ್ಪ ಹೆಚ್ಚಳ
ಮಾರ್ಚ್ 22 ನಾಲ್ಕನೇ ಶನಿವಾರವಾಗಿದೆ. ಮಾರ್ಚ್ 23 ಭಾನುವಾರವಾಗಿದೆ. ಈ ಎರಡು ದಿನ ಬ್ಯಾಂಕುಗಳಿಗೆ ರೆಗ್ಯುಲರ್ ರಜೆ. ಈಗ ಮಾರ್ಚ್ 24 ಮತ್ತು 25ರಂದು ಉದ್ಯೋಗಿಗಳು ಮುಷ್ಕರ ನಡೆಸಲಿರುವುದರಿಂದ ಸರ್ಕಾರಿ ಬ್ಯಾಂಕುಗಳು ಬಂದ್ ಆಗಿರುತ್ತವೆ. ಹೀಗಾಗಿ, ಜನರು ತಮ್ಮ ಬ್ಯಾಂಕ್ ಕೆಲಸಗಳೇನಾದರೂ ಇದ್ದರೆ ಶುಕ್ರವಾರದೊಳಗೆ ಮುಗಿಸಿಕೊಳ್ಳುವುದು ಉತ್ತಮ. ಎಚ್ಡಿಎಫ್ಸಿ ಬ್ಯಾಂಕು, ಎಕ್ಸಿಸ್ ಬ್ಯಾಂಕು ಇತ್ಯಾದಿ ಖಾಸಗಿ ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿರುತ್ತವೆ.
ಇದನ್ನೂ ಓದಿ: ಠೇವಣಿ, ಡಿವಿಡೆಂಡ್, ಬಾಡಿಗೆ ಇತ್ಯಾದಿ ಆದಾಯಗಳಿಗೆ ಹೊಸ ಟಿಡಿಎಸ್ ದರ; ಏಪ್ರಿಲ್ 1ರಿಂದ ಜಾರಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Mon, 17 March 25