Patent: ಸರ್ಕಾರದ ಸಿಡಾಟ್ ಅಭಿವೃದ್ದಿಪಡಿಸಿದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್​ಗೆ ಪೇಟೆಂಟ್; ಇದು ಸ್ವಾವಲಂಬಿ ಭಾರತದ ಫಲಶೃತಿ ಎಂದ ಸಚಿವ ವೈಷ್ಣವ್

|

Updated on: Mar 14, 2024 | 12:57 PM

C-Dot Gets Patent for QKD System: ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ ಸಂಸ್ಥೆ ಅಭಿವೃದ್ದಿಪಡಿಸಿದ ಕ್ವಾಂಟಂ ಕೀ ಡಿಸ್ಟ್ರಿಬ್ಯೂಶನ್ ಸಿಸ್ಟಂ ಆವಿಷ್ಕಾರಕ್ಕೆ ಪೇಟೆಂಟ್ ಸಿಕ್ಕಿದೆ. ಈ ಬೆಳವಣಿಗೆಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವ ಡಾ. ಎ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ಯುಕೆಡಿ ಅಥವಾ ಕ್ವಾಂಟಂ ಕೀ ಡಿಸ್ಟ್ರಿಬ್ಯೂಶನ್ ತಂತ್ರಜ್ಞಾನವು ಕ್ವಾಂಟಂ ವಿಜ್ಞಾನದ ತತ್ವಗಳನ್ನು ಅಳವಡಿಸಿ ದತ್ತಾಂಶದ ಎನ್​ಕ್ರಿಪ್ಷನ್ ಮತ್ತು ಡೀಕ್ರಿಪ್ಷನ್ ಕಾರ್ಯವನ್ನು ಹೆಚ್ಚು ಸುರಕ್ಷಿತಗೊಳಿಸುತ್ತದೆ.

Patent: ಸರ್ಕಾರದ ಸಿಡಾಟ್ ಅಭಿವೃದ್ದಿಪಡಿಸಿದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್​ಗೆ ಪೇಟೆಂಟ್; ಇದು ಸ್ವಾವಲಂಬಿ ಭಾರತದ ಫಲಶೃತಿ ಎಂದ ಸಚಿವ ವೈಷ್ಣವ್
ಸಚಿವ ಡಾ. ಎ ವೈಷ್ಣವ್
Follow us on

ನವದೆಹಲಿ, ಮಾರ್ಚ್ 14: ಇತ್ತೀಚಿನ ದಿನಗಳಲ್ಲಿ ಭಾರತೀಯ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪಡೆಯುತ್ತಿರುವ ಪೇಟೆಂಟ್​ಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್ (QKD- quantum key distribution) ತಂತ್ರಜ್ಞಾನವೊಂದಕ್ಕೆ ಸರ್ಕಾರಿ ಸ್ವಾಮ್ಯದ ಸಿಡಾಟ್ ಸಂಸ್ಥೆಗೆ (C-DOT) ಪೇಟೆಂಟ್ ಸಿಕ್ಕಿದೆ. ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿಡಾಟ್) ಸಂಸ್ಥೆ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಸನ್ ಸಿಸ್ಟಂನಲ್ಲಿ ಹೊಂದಾಣಿಕೆ (synchronisation) ಮೂಡಿಸುವ ವಿಧಾನ ಮತ್ತು ಸಾಧನಕ್ಕೆ ಈ ಪೇಟೆಂಟ್ ಲಭಿಸಿದೆ. 2019ರ ಅಕ್ಟೋಬರ್ 23ರಿಂದ 20 ವರ್ಷ ಕಾಲ ಈ ಪೇಟೆಂಟ್ ಸಿಂಧು ಇರುತ್ತದೆ. ಕೇಂದ್ರ ಟೆಲಿಕಮ್ಯೂನಿಕೇಶನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.

ಕ್ವಾಂಟಂ ಕೀ ಡಿಸ್ಟ್ರಿಬ್ಯೂಶನ್​ಗಾಗಿ ಸಿ-ಡಾಟ್​ಗೆ ಪೇಟೆಂಟ್ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತ ಅಭಿಯಾನ ಫಲ ಕೊಡುತ್ತಿದೆ ಎಂದು ರೈಲ್ವೆ ಸಚಿವರೂ ಆದ ಡಾ. ಎ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಎ ವೈಷ್ಣವ್ ಮಾಡಿರುವ ಟ್ವೀಟ್:

ಕ್ಯುಕೆಡಿ ಮಹತ್ವ ಏನು?

ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್ ಎಂಬುದು ಟೆಲಿಕಾಂ ವಲಯದಲ್ಲಿ ಬಹಳ ಮಹತ್ವ ಪಡೆಯಲಿದೆ. ಇದು ಕ್ವಾಂಟಂ ತಂತ್ರಜ್ಞಾನವನ್ನು ಬಳಸಿ ಮೆಸೇಜ್​ಗಳ ಎನ್​ಕ್ರಿಪ್ಷನ್ ಮತ್ತು ಡೀಪ್ರಿಕ್ಷನ್ ಮಾಡಲು ಅನುವು ಮಾಡಿಕೊಡುತ್ತದೆ. ಈಗಿರುವ ಎನ್​ಕ್ರಿಪ್ಷನ್ ವಿಧಾನ ತೀರಾ ಸುರಕ್ಷಿತವಲ್ಲ. ಕ್ಯೂಕೆಡಿ ಈ ಎಲ್ಲಾ ಎನ್​ಕ್ರಿಪ್ಷನ್ ವ್ಯವಸ್ಥೆಯನ್ನು ಬುಡಮೇಲು ಮಾಡಿ ಹೊಸ ವ್ಯವಸ್ಥೆ ನಿರ್ಮಾಣಕ್ಕೆ ಸಹಾಯವಾಗುತ್ತದೆ. ವ್ಯಕ್ತಿಯ ದತ್ತಾಂಶ ರಕ್ಷಣೆಗೆ ಇದು ಬಹಳ ಉಪಯುಕ್ತ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ವಯಾಕಾಮ್18ನಲ್ಲಿ ಶೇ. 13ರಷ್ಟು ಷೇರುಪಾಲು ಖರೀದಿಸಿದ ರಿಲಾಯನ್ಸ್ ಇಂಡಸ್ಟ್ರೀಸ್

ಈಗಿರುವ ಸಾಂಪ್ರದಾಯಿಕ ಕೀ ಡಿಸ್ಟ್ರಿಬ್ಯೂಶನ್ ವಿಧಾನದಲ್ಲಿ ಗಣಿತದ ಎಣಿಕೆಗಳಿರುತ್ತವೆ. ಕ್ವಾಂಟಂ ವಿಧಾನಸದಲ್ಲಿ ಫೋಟೋನ್​ಗಳನ್ನು ಬಳಸಲಾಗುತ್ತದೆ. ಕ್ಯುಕೆಡಿ ಮೂಲಕ ಎನ್​ಕ್ರಿಪ್ಟ್ ಆದ ದತ್ತಾಂಶವನ್ನು ಯಾರಾದರೂ ನೋಡಲು ಯತ್ನಿಸಿದರೆ ಕೂಡಲೇ ಸಂಬಂಧಪಟ್ಟವರಿಗೆ ಗೊತ್ತಾಗಿ ಹೋಗುತ್ತದೆ.

ಭಾರತೀಯರಿಂದ ಹೆಚ್ಚಿದ ಪೇಟೆಂಟ್ಸ್

ಭಾರತದಲ್ಲಿ 2023ರಲ್ಲಿ ಪೇಟೆಂಟ್​ಗಳಿಗೆ ಸಲ್ಲಿಸಲಾಗಿರುವ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಭಾರತದಲ್ಲಿ 2023ರಲ್ಲಿ 3,791 ಪೇಟೆಂಟ್ ಅರ್ಜಿಗಳು ಸಲ್ಲಿಕೆ ಆಗಿರಬಹುದು ಎನ್ನುವಂತಹ ವರದಿ ಇದೆ. 2022ಕ್ಕೆ ಹೋಲಿಸಿದರೆ ಇದರ ಸಂಖ್ಯೆ ಶೇ. 44.6ರಷ್ಟು ಏರಿದೆ. ವಿಶ್ವದ ಇತರ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದ ಪೆಟೆಂಟ್ ಏರಿಕೆ ಗಣನೀಯವಾಗಿದೆ.

ಚೀನಾದಲ್ಲಿ 69,000 ದಷ್ಟು ಪೇಟೆಂಟ್ ಅರ್ಜಿ ಸಲ್ಲಿಕೆಯಾಗಿದೆಯಾದರೂ ಹಿಂದಿನ ವರ್ಷಕ್ಕಿಂತ ಆ ಸಂಖ್ಯೆ ಕಡಿಮೆ ಇದೆ. ವಿಶ್ವದ ಪ್ರಮುಖ ದೇಶಗಳ ಪೇಟೆಂಟ್ ಅರ್ಜಿ 2023ರಲ್ಲಿ ಕಡಿಮೆ ಆಗಿವೆ. ಭಾರತ ಮಾತ್ರವೇ ಗಣನೀಯವಾಗಿ ಪೇಟೆಂಟ್ ಅರ್ಜಿ ಹೆಚ್ಚಿಸಿರುವುದು.

ಕ್ಯುನು ಲ್ಯಾಬ್ಸ್ ಸಂಸ್ಥಾಪಕರಿಂದ ಟ್ವೀಟ್

ಬೆಂಗಳೂರಿನ ಕ್ಯುನು ಲ್ಯಾಬ್ಸ್​ಗೆ 7 ಪೇಟೆಂಟ್​ಗಳು

ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಕ್ವಾಂಟಂ ಕ್ರಿಪ್ಟೋಗ್ರಫಿ ಸಲ್ಯೂಶನ್ಸ್ ಕಂಪನಿ ಕ್ಯುನು ಲ್ಯಾಬ್ಸ್ (QNu Labs) 7 ಪೇಟೆಂಟ್​ಗಳನ್ನು ಪಡೆದಿದೆ. ಈ ಎಲ್ಲವೂ ಕೂಡ ಕ್ವಾಂಟಂ ಕ್ರಿಪ್ಟೋಗ್ರಫಿ ಕ್ಷೇತ್ರಕ್ಕೆ ಸಂಬಂಧಿಸಿದವುಗಳೇ ಆಗಿವೆ. ಈ ಏಳು ಪೇಟೆಂಟ್​ಗಳಲ್ಲಿ ಮೂರನ್ನು ಅಮೆರಿಕದಲ್ಲಿ ಪಡೆಯಲಾಗಿದೆ. ಕ್ಯುನು ಲ್ಯಾಬ್ಸ್​ನ ಸಂಸ್ಥಾಪಕ ಸುನೀಲ್ ಗುಪ್ತಾ ಅವರು ಎಕ್ಸ್ ಖಾತೆಯಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ