ಶಾಪಿಂಗ್​ಗೆ ಅಸಿಸ್ಟೆಂಟ್​ಗಳನ್ನು ಕೊಡುತ್ತೆ ಈ ಸ್ಟಾರ್ಟಪ್; ಲಗೇಜ್ ಹೊರೋದ್ರಿಂದ ಹಿಡಿದು, ಗಾಡಿ ಹತ್ತಿಸೋವರೆಗೂ ಎಲ್ಲಾ ನೆರವೂ ಕೊಡ್ತಾರಂತೆ

Hands-Free Shopping in Delhi: ದೆಹಲಿಯ 'ಕ್ಯಾರಿಮೆನ್' ಸ್ಟಾರ್ಟಪ್ ಶಾಪಿಂಗ್ ಬ್ಯಾಗ್‌ಗಳ ಹೊರೆಯಿಂದ ಗ್ರಾಹಕರನ್ನು ಮುಕ್ತಗೊಳಿಸುತ್ತದೆ. ಗಂಟೆಗೆ ₹149 ಶುಲ್ಕದೊಂದಿಗೆ ತರಬೇತಿ ಪಡೆದ ಸಹಾಯಕರು ಶಾಪಿಂಗ್ ಸಾಮಾನುಗಳನ್ನು ಹೊತ್ತು, ದೈಹಿಕ ಆಯಾಸವಿಲ್ಲದೆ ಶಾಪಿಂಗ್ ಆನಂದಿಸಲು ನೆರವಾಗುತ್ತಾರೆ. ಗರ್ಭಿಣಿಯರು, ಮಕ್ಕಳಿರುವವರು ಮತ್ತು ಇತರೆ ಅಗತ್ಯವುಳ್ಳವರಿಗೆ ಇದು ಉತ್ತಮ ಪರಿಹಾರವಾಗಿದ್ದು, ದೈಹಿಕ ಶ್ರಮವಿಲ್ಲದೆ ಶಾಪಿಂಗ್ ಮಾಡುವುದು ಇದರ ಮುಖ್ಯ ಉದ್ದೇಶ.

ಶಾಪಿಂಗ್​ಗೆ ಅಸಿಸ್ಟೆಂಟ್​ಗಳನ್ನು ಕೊಡುತ್ತೆ ಈ ಸ್ಟಾರ್ಟಪ್; ಲಗೇಜ್ ಹೊರೋದ್ರಿಂದ ಹಿಡಿದು, ಗಾಡಿ ಹತ್ತಿಸೋವರೆಗೂ ಎಲ್ಲಾ ನೆರವೂ ಕೊಡ್ತಾರಂತೆ
ಕ್ಯಾರಿಮೆನ್
Image Credit source: Indiatoday

Updated on: May 21, 2026 | 11:41 AM

ನವದೆಹಲಿ, ಮೇ 20: ಶಾಪಿಂಗ್ ಎಂದ್ರೆ ಯಾವ ಮಹಿಳೆಗೆ ಇಷ್ಟವಿಲ್ಲ ಹೇಳಿ..! ಆದರೆ, ಬಹಳ ಮಂದಿ ಶಾಪರ್ಸ್​ಗೆ ಒಂದೇ ಪ್ರಮುಖ ತಲೆನೋವು. ಅದು ಲಗೇಜ್​ಗಳನ್ನು ಹೊತ್ತು ಶಾಪ್​ನಿಂದ ಶಾಪ್​ಗೆ ತಿರುಗೋದು. ಕೈಯಲ್ಲಿ ಐದಾರು ಬ್ಯಾಗ್​ಗಳನ್ನು ಇಟ್ಟುಕೊಂಡು ನಡೆದಾಡುವುದರಿಂದ ಶಾಪಿಂಗ್​ನ ಖುಷಿಯೇ ಬತ್ತಿಹೋಗಿರುತ್ತೆ ಹೆಂಗಳೆಯರಿಗೆ. ಆ ಮಹಿಳೆಯ ಜೊತೆ ಶಾಪಿಂಗ್​ಗೆ ಬರುವ ಆಕೆಯ ಗಂಡನಿಗೋ ಅಥವಾ ಮಗನಿಗೋ ಈ ಲಗೇಜುಗಳನ್ನು ಹೊರುವ ಕಷ್ಟ ಬರಬಹುದು. ಈ ಕಷ್ಟ ನೋಡಲಾಗದೆ ದಿಲ್ಲಿಯ ಸ್ಟಾರ್ಟಪ್​ವೊಂದು ಪರಿಹಾರ ಹುಡುಕಿದೆ. ಅದೇ ಶಾಪಿಂಗ್ ಅಸಿಸ್ಟೆಂಟ್ ಸೇವೆ. ಈ ಸ್ಟಾರ್ಟಪ್​ನ ಹೆಸರು ಕ್ಯಾರಿಮೆನ್ (CarryMen).

‘ನೀವು ಶಾಪಿಂಗ್ ಮಾಡಿ, ನಾವು ಹೊರೆ ಹೊರುತ್ತೇವೆ’. ಇದು ದೆಹಲಿಯ ಕ್ಯಾರಿಮೆನ್ ಸಂಸ್ಥೆಯ ಧ್ಯೇಯ ನುಡಿ. ಗಂಟೆಗೆ 149 ರೂ ಚಾರ್ಜ್ ಮಾಡಲಾಗುತ್ತದೆ. 2 ಗಂಟೆ, 3 ಗಂಟೆ, 4 ಗಂಟೆಯ ಪ್ಯಾಕೇಜ್​ಗಳಿವೆ. ತರಬೇತಿ ಪಡೆದ ಸಹಾಯಕರನ್ನು ಜೊತೆಗೆ ಕಳುಹಿಸಿಕೊಡಲಾಗುತ್ತದೆ.

ಈ ಸಹಾಯಕರು ಶಾಪಿಂಗ್ ಬ್ಯಾಗ್​ಗಳನ್ನು ಹೊತ್ತುಕೊಂಡು ಜೊತೆಯಲ್ಲಿ ಬರುತ್ತಾರೆ. ಶಾಪ್​ಗಳಿಗೆ ಕರೆದೊಯ್ಯುತ್ತಾರೆ. ಗ್ರಾಹಕರನ್ನು ಕುಳ್ಳಿರಿಸಿ ಆಹಾರದ ಕ್ಯೂಗಳಲ್ಲಿ ತಾವು ನಿಲ್ಲುತ್ತಾರೆ. ಶಾಪಿಂಗ್ ಮಧ್ಯೆ ಗ್ರಾಹಕರಿಗೆ ಕೂರಲು ಜಾಗದ ವ್ಯವಸ್ಥೆ ಮಾಡುತ್ತಾರೆ. ಕೂರುವ ಜಾಗ ಸಿಗದೇ ಹೋದರೆ ತಾವೇ ತಂದ ಫೋಲ್ಡಬಲ್ ಚೇರ್ ಅನ್ನು ಕೊಟ್ಟು ಕೂರಿಸಲು ಸಹಾಯವಾಗುತ್ತಾರೆ.

ಇದನ್ನೂ ಓದಿ: ಕೆಲಸ ಸಿಕ್ಕಿತೆಂದು ಖುಷಿಯಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ ದೆಹಲಿಗೆ ಹೋದ್ರೆ ಅಲ್ಲಿ ಆಫೀಸೇ ಇರ್ಲಿಲ್ವಂತೆ

‘ಜನರಿಗೆ ಶಾಪಿಂಗ್ ಮಾಡುವುದೆಂದರೆ ಇಷ್ಟ. ಆದರೆ, ಅದರಿಂದ ದೈಹಿಕ ಆಯಾಸವೂ ಇರುತ್ತದೆ. ಜನರು ಶಾಪಿಂಗ್ ಬ್ಯಾಗ್ ಹೊರಲೂ ಆಗದೆ, ಕೈಯಲ್ಲಿರುವ ಮೋಮೋ ತಿನ್ನಲೂ ಆಗದೆ ಚಿಂತಿತರಾಗುವುದುಂಟು. ಶಾಪಿಂಗ್ ಬ್ಯಾಗ್​ಗಳ ಹೊರೆ ಬಿಟ್ಟು ಜನರು ಶಾಪಿಂಗ್​ನ ಆನಂದ ಅನುಭವಿಸಬೇಕೆಂಬುದು ನಮ್ಮ ಉದ್ದೇಶ’ ಎಂದು ಕ್ಯಾರಿಮೆನ್ ಸಂಸ್ಥೆ ಹೇಳುತ್ತದೆ.

ಗರ್ಭಿಣಿಯಾಗಿರುವವರು, ಸಣ್ಣ ಮಕ್ಕಳಿರುವವರು, ಜನಸಂದಣಿ ಇರುವ ಮಾರುಕಟ್ಟೆ ಪ್ರದೇಶಗಳಲ್ಲಿ ಶಾಪಿಂಗ್ ಮಾಡುವವರು, ಜೊತೆಗೆ ಸಾಮಾನು ಹೊರಲು ನೆರವಾಗಲು ಯಾರೂ ಇಲ್ಲದವರು, ಇಂಥವರಿಗೆ ಶಾಪಿಂಗ್ ಅಸಿಸ್ಟೆಂಟ್​ಗಳು ಬೇಕಾಗಬಹುದು. ಗಂಟೆ ಲೆಕ್ಕದಲ್ಲಿ ಶುಲ್ಕ ಪಡೆಯಲಾಗುತ್ತದೆ.

ಅಸಿಸ್ಟೆಂಟ್​​ಗೆ ಹೆಚ್ಚು ಭಾರ ಹೊರಿಸುವಂತಿಲ್ಲ

ಮೇಲೆ ಹೇಳಲಾದಂತೆ ಶಾಪಿಂಗ್ ಅಸಿಸ್ಟೆಂಟ್​ಗಳಿಗೆ ಗಂಟೆಯ ಲೆಕ್ಕದಲ್ಲಿ ಶುಲ್ಕ ಇರುತ್ತದೆ. ಗಂಟೆಗೆ 149 ರೂ ನಿಗದಿ ಮಾಡಲಾಗಿದೆ. ಆದರೆ, ಒಬ್ಬ ಸಹಾಯಕರು ಎಲ್ಲಾ ತೂಕವನ್ನೂ ಹೊರಲು ಆಗುವುದಿಲ್ಲ. ಒಬ್ಬ 12 ಕಿಲೋ ಮಾತ್ರ ಹೊರುವುದು. ಅದಕ್ಕಿಂತ ಹೆಚ್ಚಿನ ತೂಕದ ಶಾಪಿಂಗ್ ಬ್ಯಾಗ್ಗಳಿದ್ದರೆ ಮತ್ತೊಬ್ಬ ಅಸಿಸ್ಟೆಂಟ್ ಅನ್ನು ಬುಕ್ ಮಾಡಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: ಮೊದಲಿಗೆ ವರ್ಕ್ ಫ್ರಂ ಹೋಮ್, ನಂತರ ಬೆಳ್ಳಂಬೆಳಗ್ಗೆ ಇಮೇಲ್ ಶಾಕ್; ಮೆಟಾದಲ್ಲಿ 8,000 ಮಂದಿಗೆ ಕೆಲಸದಿಂದ ಕೊಕ್

ದೆಹಲಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಈ ಸ್ಟಾರ್ಟಪ್ ಆರಂಭವಾಗಿದೆ. ಮೊದಲ ತಿಂಗಳಲ್ಲೇ 50 ಬುಕಿಂಗ್ ಆಗಿದೆಯಂತೆ. ದೊಡ್ಡ ಪ್ರಚಾರ ಇಲ್ಲದೆ, ಸೋಷಿಯಲ್ ಮೀಡಿಯಾ ಹಾಗೂ ಬಾಯಿಯಿಂದ ಬಾಯಿಗೆ ಈ ಸ್ಟಾರ್ಟಪ್ ಸೇವೆ ಪ್ರಚಾರ ಪಡೆಯುತ್ತಿದೆಯಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us