ಗ್ರಾಹಕ ಬೆಲೆ ಸೂಚ್ಯಂಕದಿಂದ (CPI) ಅಳೆಯುವ ದೇಶದ ಚಿಲ್ಲರೆ ಹಣದುಬ್ಬರವು ಮಾರ್ಚ್ ತಿಂಗಳಿನಲ್ಲಿ ಶೇಕಡಾ 6.95ಕ್ಕೆ ಏರಿದೆ. ಪ್ರತ್ಯೇಕವಾಗಿ, ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದಲ್ಲಿ (ಐಐಪಿ) ಅಳೆಯಲಾದ ಭಾರತದ ಕಾರ್ಖಾನೆ ಉತ್ಪಾದನೆಯು ಫೆಬ್ರವರಿಯಲ್ಲಿ ಶೇಕಡಾ 1.7ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಬಿಡುಗಡೆ ಮಾಡಿದ ಎರಡು ಪ್ರತ್ಯೇಕ ಅಂಕಿ- ಅಂಶಗಳು ಮಂಗಳವಾರ ತೋರಿಸಿವೆ. ಅಂದಹಾಗೆ ಫೆಬ್ರವರಿ ತಿಂಗಳ ಚಿಲ್ಲರೆ ಹಣದುಬ್ಬರ ದರ ಶೇ 6.07 ರಷ್ಟಿತ್ತು. ಸಿಪಿಐ ಡೇಟಾವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಶೇಕಡಾ 6ರ ಮೇಲಿನ ಮಾರ್ಜಿನ್ ಅನ್ನು ಮೀರಿದ ಸತತ ಮೂರನೇ ತಿಂಗಳು ಇದಾಗಿದೆ. 2026ರ ಮಾರ್ಚ್ಗೆ ಕೊನೆಗೊಳ್ಳುವ ಐದು ವರ್ಷಗಳ ಅವಧಿಗೆ ಎರಡೂ ಕಡೆ ಶೇ 2ರ ಮಾರ್ಜಿನ್‌ನೊಂದಿಗೆ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 4ರಲ್ಲಿ ನಿರ್ವಹಿಸಲು ಸರ್ಕಾರವು ಕೇಂದ್ರ ಬ್ಯಾಂಕ್ಗೆ ಸೂಚಿಸಿದೆ.
ಇಲ್ಲಿ ಹೆಸರೇ ಹೇಳುವ ಹಾಗೆ ಇದು ಗ್ರಾಹಕರ ದರದ ಆಧಾರದ ಮೇಲೆ ಹಣದುಬ್ಬರವನ್ನು ಸೂಚಿಸುವ ಸೂಚ್ಯಂಕ. ನೇರವಾಗಿ ಗ್ರಾಹಕರು ಖರೀದಿಸುವ ಆಹಾರ ಪದಾರ್ಥಗಳ ಬೆಲೆ, ಅದು ತರಕಾರಿ, ಹಣ್ಣು ಮೊದಲಾದವು. ಹಾಗೇ ವಿದ್ಯುತ್, ಇಂಧನದಿಂದ ಮೊದಲುಗೊಂಡು ಸಾಮಾನ್ಯ ಗ್ರಾಹಕರ ಪಾಲಿಗೆ ಬೆಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು ಅದು ಸೂಚಿಸುತ್ತದೆ. ಹಣದುಬ್ಬರ ಅಂದರೆ ದೊಡ್ಡ ಬುಟ್ಟಿಯಲ್ಲಿ ಹಣ್ಣು, ತರಕಾರಿ, ಮಾಂಸ, ಮೊಟ್ಟೆ ಎಲ್ಲವೂ ಇರುತ್ತದೆ ಅಂತ ಊಹಿಸಿಕೊಳ್ಳಿ. ಅವುಗಳ ಬೆಲೆ ಹೆಚ್ಚೋ ಕಡಿಮೆಯೋ ಎಂಬುದನ್ನು ಒಂದು ವರ್ಷದ ಹಿಂದಿನ ಅವಧಿಯ ಬೆಲೆಯೊಂದಿಗೆ ಹೋಲಿಸಿ ಅಳೆಯಲಾಗುತ್ತದೆ. ದೇಶದ ಜನರಿಗೆ ಹೊರೆ ಆಗದಂತೆ, ಜತೆಗೆ ಉತ್ಪಾದಕರಿಗೆ ನಷ್ಟವಾಗದಂತೆ ಸಂಭಾಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಇದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಎರಡು ತಿಂಗಳಿಗೆ ಒಮ್ಮೆ ನಡೆಸುವ ಹಣಕಾಸು ನೀತಿ ಸಭೆಯಲ್ಲಿ ಹಣದುಬ್ಬರ ದರವನ್ನು ಮುಖ್ಯವಾಗಿ ಗಮನದಲ್ಲಿ ಇಟ್ಟುಕೊಳ್ಳುತ್ತದೆ.
ಕಳೆದ ವಾರ ಆರ್‌ಬಿಐ ಹಣಕಾಸು ನೀತಿ ಸಮಿತಿಯು (MPC) ಸರ್ವಾನುಮತದಿಂದ ರೆಪೊ ದರವನ್ನು ಸತತ 11ನೇ ಬಾರಿಗೆ ಶೇ 4ರ ದರದಲ್ಲಿ ಇರಿಸಲು ನಿರ್ಧರಿಸಿತು ಮತ್ತು ‘ಅಕಾಮಡೇಟಿವ್ ನಿಲುವು’ ಕಾಯ್ದುಕೊಳ್ಳುತ್ತದೆ. ಆದರೆ ಅದನ್ನು ಹಿಂತೆಗೆದುಕೊಳ್ಳುವತ್ತ ಗಮನ ಹರಿಸಲು ಪ್ರಾರಂಭಿಸುತ್ತದೆ. ಬೆಳವಣಿಗೆಯನ್ನು ಬೆಂಬಲಿಸುವಾಗ ಹಣದುಬ್ಬರವನ್ನು ನಿಯಂತ್ರಿಸುವತ್ತ ಹೆಚ್ಚಿನ ಕಠಿಣ ನಿಲುವು ತೆಗೆದುಕೊಳ್ಳುವುದಿಲ್ಲ. ಕಳೆದ ವಾರ ನಡೆದ ಸಭೆಯಲ್ಲಿ ಆರ್‌ಬಿಐ 2022-23ರ ಹಣಕಾಸು ವರ್ಷದಲ್ಲಿ ಸಿಪಿಐ ಹಣದುಬ್ಬರವನ್ನು ಶೇಕಡಾ 5.7ಕ್ಕೆ ಯೋಜಿತವಾಗಿದ್ದು, ತ್ರೈಮಾಸಿಕ 1ರಲ್ಲಿ ಶೇ 6.3, ತ್ರೈಮಾಸಿಕ 2ರಲ್ಲಿ ಶೇಕಡಾ 5.8, ತ್ರೈಮಾಸಿಕ 3ರಲ್ಲಿ ಶೇಕಡಾ 5.4 ಮತ್ತು ತ್ರೈಮಾಸಿಕ 4ರಲ್ಲಿ ಶೇಕಡಾ 5.1ರಷ್ಟಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಮ್ಮ ಭಾಷಣದಲ್ಲಿ ಹೇಳಿದಂತೆ, ಫೆಬ್ರವರಿ ಅಂತ್ಯದಿಂದ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿನ ಅತಿಯಾದ ಏರಿಳಿತ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ತೀವ್ರ ಅನಿಶ್ಚಿತತೆಯನ್ನು ಗಮನಿಸಿದರೆ ಬೆಳವಣಿಗೆ ಮತ್ತು ಹಣದುಬ್ಬರವು ಅಪಾಯದಿಂದ ಕೂಡಿದೆ ಹಾಗೂ ಇದು ಭವಿಷ್ಯದ ತೈಲ ಮತ್ತು ಸರಕು ಬೆಲೆ ಬೆಳವಣಿಗೆಗಳ ಮೇಲೆ ಅನಿಶ್ಚಿತವಾಗಿದೆ. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (CFPI) ಅಥವಾ ಆಹಾರದ ಬುಟ್ಟಿಯಲ್ಲಿನ ಹಣದುಬ್ಬರವು ಮಾರ್ಚ್‌ನಲ್ಲಿ ತಿಂಗಳಿಗೆ ಶೇ 7.68ಕ್ಕೆ ಏರಿದ್ದು, ಫೆಬ್ರವರಿಯಲ್ಲಿ ಶೇ 5.85ರಷ್ಟಿತ್ತು ಎಂದು ಡೇಟಾ ಬಹಿರಂಗಪಡಿಸಿದೆ. ಆಹಾರದ ಬುಟ್ಟಿಯಲ್ಲಿನ ತೈಲಗಳು ಮತ್ತು ವನಸ್ಪತಿ ಬೆಲೆಗಳ ತೀವ್ರ ಏರಿಕೆಯಿಂದಾಗಿ ಮಾರ್ಚ್‌ನಲ್ಲಿ ವರ್ಷಕ್ಕೆ ಶೇ 18.79ರಷ್ಟು ಏರಿಕೆಯಾಗಿದೆ. ಅಲ್ಲದೆ, ತರಕಾರಿ ಬೆಲೆಗಳು ಶೇಕಡಾ 11.64 ರಷ್ಟು ಏರಿಕೆ ಕಂಡಿದ್ದರೆ, ಮಾಂಸ ಮತ್ತು ಮೀನುಗಳು ಶೇಕಡಾ 9.63ರಷ್ಟು ಮತ್ತು ಮಸಾಲೆಗಳು ಶೇಕಡಾ 8.50ರಷ್ಟು ಏರಿಕೆಯಾಗಿದೆ. ಕಳೆದ ತಿಂಗಳು ಆಲ್ಕೊಹಾಲ್ಯುಕ್ತ ಅಲ್ಲದ ಪಾನೀಯಗಳು ಶೇಕಡಾ 5.62 ರಷ್ಟು ಏರಿಕೆಯಾಗಿದ್ದು, ಧಾನ್ಯಗಳು ಮತ್ತು ಉತ್ಪನ್ನಗಳು ಶೇಕಡಾ 4.93 ಮತ್ತು ಹಾಲು ಹಾಗೂ ಉತ್ಪನ್ನಗಳು ಶೇಕಡಾ 4.71ರಷ್ಟು ಏರಿಕೆಯಾಗಿದೆ.
ಆಹಾರ ಮತ್ತು ಪಾನೀಯಗಳ ಹೊರತಾಗಿ ಇಂಧನ ಮತ್ತು ವಿದ್ಯುತ್ ವಿಭಾಗವು ಶೇಕಡಾ 7.52, ಬಟ್ಟೆ ಮತ್ತು ಪಾದರಕ್ಷೆಗಳು ಶೇಕಡಾ 9.40, ವಸತಿ ವಿಭಾಗವು ಶೇಕಡಾ 3.38 ಮತ್ತು ಪಾನ್, ತಂಬಾಕು ಮತ್ತು ಅಮಲು ಪದಾರ್ಥಗಳು ಶೇಕಡಾ 2.98ರಷ್ಟು ಏರಿಕೆಯಾಗಿದೆ.
ಕೈಗಾರಿಕಾ ಉತ್ಪಾದನೆ (IIP)
ಐಐಪಿಯ ಪರಿಭಾಷೆಯಲ್ಲಿ ಅಳೆಯಲಾದ ಭಾರತದ ಕಾರ್ಖಾನೆಯ ಉತ್ಪಾದನೆಯು ವರ್ಷದಿಂದ ವರ್ಷಕ್ಕೆ ಶೇಕಡಾ 1.7ರಷ್ಟು ಬೆಳವಣಿಗೆಯನ್ನು ಕಂಡು, ಫೆಬ್ರವರಿ ತಿಂಗಳಲ್ಲಿ 132.1ಕ್ಕೆ ತಲುಪಿದೆ ಎಂದು MoSPI ಬಿಡುಗಡೆ ಮಾಡಿದ ಪ್ರತ್ಯೇಕ ಡೇಟಾ ತೋರಿಸಿದೆ. 2021ರ ಫೆಬ್ರವರಿಯಲ್ಲಿ IIP ಶೇಕಡಾ 3.2 ರಷ್ಟು ಕುಸಿದಿತ್ತು ಎಂದು ಡೇಟಾ ತೋರಿಸಿದೆ. 2021-22ರ ಹಣಕಾಸು ವರ್ಷದಲ್ಲಿ (ಏಪ್ರಿಲ್-ಫೆಬ್ರವರಿ) ಇದುವರೆಗಿನ ಕೈಗಾರಿಕಾ ಬೆಳವಣಿಗೆಯು ಒಂದು ವರ್ಷದ ಹಿಂದಿನ ಅವಧಿಯಲ್ಲಿನ (-) 11.1 ಶೇಕಡಾ ಏರಿಕೆಗೆ ಹೋಲಿಸಿದರೆ ಶೇಕಡಾ 12.5ರಷ್ಟು ಏರಿಕೆಯಾಗಿದೆ ಎಂದು ಅಂಕಿ-ಅಂಶಗಳು ತೋರಿಸಿವೆ.
ಫೆಬ್ರವರಿಯಲ್ಲಿ ಐಐಪಿ ದತ್ತಾಂಶದ ಬೆಳವಣಿಗೆಯು ಗಣಿಗಾರಿಕೆ ಮತ್ತು ವಿದ್ಯುತ್ ಕ್ಷೇತ್ರಗಳ ಖಾತೆಯಲ್ಲಿ ಶೇ 4.5ರಷ್ಟು ಏರಿಕೆಯಾಗಿದೆ. ಗಣಿಗಾರಿಕೆ ವಲಯವು ಫೆಬ್ರವರಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 4.5ರಷ್ಟು ಏರಿಕೆಯಾಗಿ 123.2ಕ್ಕೆ ತಲುಪಿದೆ. ವಿದ್ಯುತ್ ವಲಯವು ಶೇ 4.5ರಷ್ಟು ಬೆಳವಣಿಗೆಯನ್ನು ಕಂಡು 160.8ಕ್ಕೆ ಮುಟ್ಟಿದೆ. ಇವುಗಳ ಹೊರತಾಗಿ, ಪ್ರಮುಖ ಉತ್ಪಾದನಾ ವಲಯವು ಶೇಕಡಾ 0.8ರಷ್ಟು ಬೆಳವಣಿಗೆಯನ್ನು ದಾಖಲಿಸಿ, 130.8ಕ್ಕೆ ತಲುಪಿದೆ ಎಂದು MoSPI ಡೇಟಾ ತೋರಿಸಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಉತ್ಪಾದನಾ ವಲಯವು (-) 3.4ರಷ್ಟು ಸಂಕೋಚನವನ್ನು ಕಂಡಿತ್ತು. ಅದೇ ತಿಂಗಳಲ್ಲಿ ಗಣಿಗಾರಿಕೆ ವಲಯವು (-) ಶೇ 4.4ರಷ್ಟು ಕುಸಿದಿದ್ದರೆ, ವಿದ್ಯುತ್ ಕ್ಷೇತ್ರವು ಮಾತ್ರ ಶೇಕಡಾ 0.1ರಷ್ಟು ಬೆಳವಣಿಗೆಯನ್ನು ಕಂಡಿತ್ತು ಎಂದು ಅಂಕಿಅಂಶಗಳು ತೋರಿಸಿವೆ.
ಇದನ್ನೂ ಓದಿ: ‘ಹಣದುಬ್ಬರ ಎಲ್ಲಾ ಭಾರತೀಯರ ಮೇಲೆ ಹೇರಿದ ತೆರಿಗೆ’: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ