ತಾಮ್ರ
Image Credit source: Abhishek Mehta/Moment/Getty Images
ಲಂಡನ್, ಸೆಪ್ಟೆಂಬರ್ 8: ತಾಮ್ರವು ಮುಂದಿನ ಚಿನ್ನ ಎಂದು ತಜ್ಞರು ಹೇಳುತ್ತಿದ್ದ ಮಾತು ನಿಜವಾಗುತ್ತಿದೆ. ಜಾಗತಿಕ ಲೋಹ ಮಾರುಕಟ್ಟೆಯಲ್ಲಿ ತಾಮ್ರದ (Copper) ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಲಂಡನ್ ಮೆಟಲ್ ಎಕ್ಸ್‌ಚೇಂಜ್‌ನಲ್ಲಿ (LME) ಪ್ರತಿ ಮೆಟ್ರಿಕ್ ಟನ್‌ಗೆ $14,533 ತಲುಪುವ ಮೂಲಕ ಈವರೆಗಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.
ಕಳೆದ 12 ತಿಂಗಳುಗಳಲ್ಲಿ ತಾಮ್ರದ ದರವು ಜಾಗತಿಕವಾಗಿ ಸುಮಾರು ಶೇಕಡಾ 47ರಷ್ಟು ಭಾರಿ ಏರಿಕೆ ಕಂಡಿದೆ.
ತಾಮ್ರದ ದರ ಏರಿಕೆಗೆ ಪ್ರಮುಖ ಕಾರಣಗಳು
- ಅಮೆರಿಕದ ಆಮದು ಸುಂಕದ ಭೀತಿ: ರೀಫೈನ್ಡ್ ಕಾಪರ್ನ ಆಮದಿನ ಮೇಲೆ ಅಮೆರಿಕ ಸರ್ಕಾರ ಹೆಚ್ಚುವರಿ ಸುಂಕ (Tariff) ವಿಧಿಸುವ ಸಾಧ್ಯತೆಯಿರುವುದರಿಂದ, ಜಾಗತಿಕ ಪೂರೈಕೆದಾರರು ದಾಸ್ತಾನನ್ನು ಅಮೆರಿಕಕ್ಕೆ ರವಾನಿಸುತ್ತಿದ್ದಾರೆ. ಇದರಿಂದ ಇತರ ಮಾರುಕಟ್ಟೆಗಳಲ್ಲಿ ತಾಮ್ರದ ತೀವ್ರ ಅಭಾವ ಸೃಷ್ಟಿಯಾಗಿದೆ.
- ಎಐ ಮತ್ತು ಡೇಟಾ ಸೆಂಟರ್‌ಗಳ ಬೇಡಿಕೆ: ಎಐ ಡೇಟಾ ಸೆಂಟರ್‌ಗಳ ಸ್ಥಾಪನೆ, ವಿದ್ಯುತ್ ಗ್ರಿಡ್‌ಗಳ ವಿಸ್ತರಣೆ, ಇವಿ (ಮೋಟಾರು ವಾಹನ) ಮತ್ತು ಮರುಬಳಕೆ ಇಂಧನ (Renewable Energy) ಯೋಜನೆಗಳಲ್ಲಿ ತಾಮ್ರದ ಬಳಕೆ ವಿಪರೀತ ಹೆಚ್ಚಾಗಿದೆ.
- ಗಣಿ ಪೂರೈಕೆಯಲ್ಲಿ ಕುಸಿತ: ಹೊಸ ತಾಮ್ರದ ಗಣಿಗಾರಿಕೆ ಯೋಜನೆಗಳ ವಿಳಂಬ ಹಾಗೂ ಪ್ರಮುಖ ಗಣಿಗಳಲ್ಲಿ ಉತ್ಪಾದನೆ ಕುಸಿದಿರುವುದು ಪೂರೈಕೆ ಮತ್ತು ಬೇಡಿಕೆಯ ನಡುವೆ ಭಾರಿ ಅಂತರವನ್ನು ಸೃಷ್ಟಿಸಿದೆ.
ಇದನ್ನೂ ಓದಿ: ಸೆಪ್ಟೆಂಬರ್ 11, ಶುಕ್ರವಾರಕ್ಕೆ ಬ್ಯಾಂಕ್ ಉದ್ಯೋಗಿಗಳ ಮುಷ್ಕರ ಫಿಕ್ಸ್; ಸರ್ಕಾರ ಬಗ್ಗದಿದ್ದರೆ 3 ದಿನಗಳ ಬಂದ್
ಭಾರತೀಯ ಮಾರುಕಟ್ಟೆಯ ಮೇಲಿನ ಪರಿಣಾಮ
- ಷೇರು ಮಾರುಕಟ್ಟೆಯಲ್ಲಿ ಏರಿಕೆ: ಜಾಗತಿಕ ದರ ಏರಿಕೆಯ ಬೆನ್ನಲ್ಲೇ ಭಾರತ ಸರ್ಕಾರಿ ಸ್ವಾಮ್ಯದ ‘ಹಿಂದುಸ್ತಾನ್ ಕಾಪರ್’ (Hindustan Copper) ಷೇರು ಮೌಲ್ಯ ಮಾರುಕಟ್ಟೆಯಲ್ಲಿ ಶೇ. 5ಕ್ಕಿಂತ ಹೆಚ್ಚು ಜಿಗಿತ ಕಂಡಿದೆ.
- ಎಂಸಿಎಕ್ಸ್ ತಾಮ್ರದ ಬೆಲೆ: ಭಾರತದ ಎಂಸಿಎಕ್ಸ್ ಮಾರುಕಟ್ಟೆಯಲ್ಲೂ ತಾಮ್ರದ ಫ್ಯೂಚರ್ಸ್ ಬೆಲೆ ಕೆಜಿಗೆ ₹1,400ರ ಸನಿಹದಲ್ಲಿದೆ. ಆದರೆ, ಕಳೆದ ಕೆಲವು ದಿನಗಳಿಂದ ರೂಪಾಯಿ ಮೌಲ್ಯ ಸ್ಥಿರವಾಗಿರುವುದರಿಂದ ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ದೇಶೀಯ ದರ ಏರಿಕೆಯ ಪ್ರಮಾಣ ಕೊಂಚ ನಿಯಂತ್ರಣದಲ್ಲಿದೆ.
ಇದನ್ನೂ ಓದಿ: ಭಾರತದ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ಗೆ ಬ್ರಿಟನ್ ಮಾನ್ಯತೆ; ಭಾರತೀಯ ರಫ್ತುದಾರರಿಗೆ ಅನುಕೂಲ
ವಿದ್ಯುತ್ ಉಪಕರಣಗಳು, ಸೆಮಿಕಂಡಕ್ಟರ್, ವಾಹನ ತಯಾರಿಕೆ ಹಾಗೂ ಇಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ತಾಮ್ರವೇ ಪ್ರಮುಖ ಕಚ್ಚಾವಸ್ತುವಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಇವುಗಳ ತಯಾರಿಕಾ ವೆಚ್ಚ ಹೆಚ್ಚಾಗುವ ಸಾಧ್ಯತೆಯಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ