ವಂಚಕ ಜಾಹೀರಾತುಗಳ ವಿರುದ್ಧ ಕೇಂದ್ರ ಕರಡು ನಿಯಮಾವಳಿ; ಸಾರ್ವಜನಿಕ ಅಭಿಪ್ರಾಯಕ್ಕೆ ಆಹ್ವಾನ; ಡಾರ್ಕ್ ಪ್ಯಾಟರ್ನ್ಸ್ ಎಂದರೇನು?

| Updated By: Digi Tech Desk

Updated on: Sep 27, 2023 | 5:35 PM

Prevention and Regulation of Dark Patterns: ಸುಳ್ಳು ಜಾಹೀರಾತುಗಳನ್ನು ತಡೆಯಲು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಡಾರ್ಕ್ ಪ್ಯಾಟರ್ನ್ ತಡೆಗೆ ಕರಡು ನಿಯಮಗಳನ್ನು ರೂಪಿಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ಇಲಾಖೆ ವೆಬ್​ಸೈಟ್​ನಲ್ಲಿ ಈ ಕರಡು ನಿಯಮಗಳನ್ನು ಪ್ರಕಟಿಸಲಾಗಿದೆ. ಡಾರ್ಕ್ ಪ್ಯಾಟರ್ನ್ ಎಂದರೆ ಯಾವ್ಯಾವ ಕ್ರಿಯೆ ಸೇರುತ್ತದೆ ಎಂದೂ ನಿರ್ದಿಷ್ಟಪಡಿಸಲಾಗಿದೆ.

ವಂಚಕ ಜಾಹೀರಾತುಗಳ ವಿರುದ್ಧ ಕೇಂದ್ರ ಕರಡು ನಿಯಮಾವಳಿ; ಸಾರ್ವಜನಿಕ ಅಭಿಪ್ರಾಯಕ್ಕೆ ಆಹ್ವಾನ; ಡಾರ್ಕ್ ಪ್ಯಾಟರ್ನ್ಸ್ ಎಂದರೇನು?
ಡಾರ್ಕ್ ಪ್ಯಾಟರ್ನ್
Follow us on

ನವದೆಹಲಿ, ಸೆಪ್ಟೆಂಬರ್ 7: ಸುಳ್ಳು ಜಾಹೀರಾತುಗಳ (Fake Ads) ಮೂಲಕ ಸಾರ್ವಜನಿಕರನ್ನು ವಂಚಿಸುವ ಬಹಳಷ್ಟು ಘಟನೆಗಳು ದಿನನಿತ್ಯ ನಡೆಯುತ್ತವೆ. ಇದನ್ನು ತಡೆಯಲು ಸರ್ಕಾರ ಕಾನೂನು ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಡಾರ್ಕ್ ಪ್ಯಾಟರ್ನ್ಸ್​ನ ನಿಯಂತ್ರಣ ಮತ್ತು ನಿಯಮಾವಳಿಗಳ ಮಾರ್ಗಸೂಚಿ (Draft Guidelines for Prevention and Regulations of Dark Patterns) ರಚಿಸಿದೆ. ಇದಿನ್ನೂ ಕರಡು ರೂಪದಲ್ಲಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಸರ್ಕಾರ ಮುಂದಾಗಿದೆ. ಡಾರ್ಕ್ ಪ್ಯಾಟರ್ನ್​ಗಳ ಕರಡು ಮಾರ್ಗಸೂಚಿಗಳನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಲಾಗಿದ್ದು, ಸಾರ್ವಜನಿಕರು ಇದನ್ನು ಪರಾಮರ್ಶಿಸಿ ತಮ್ಮ ಸಲಹೆ ಸೂಚನೆಗಳಿದ್ದಲ್ಲಿ ತಿಳಿಸಬೇಕೆಂದು ಕೋರಲಾಗಿದೆ.

ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳು, ಕಾನೂನು ಸಂಸ್ಥೆಗಳು, ಸರ್ಕಾರದ ಗ್ರಾಹಕ ರಕ್ಷಣಾ ಸಂಸ್ಥೆಗಳು, ಸರ್ಕಾರೇತರ ಗ್ರಾಹಕ ರಕ್ಷಣಾ ಸಂಸ್ಥೆಗಳು ಮೊದಲಾದ ಎಲ್ಲಾ ಸಂಬಂಧಿತ ವ್ಯಕ್ತಿ ಮತ್ತು ಸಂಸ್ಥೆಗಳೊಂದಿಗೆ ಚರ್ಚಿಸಿ, ಅವರ ಸಲಹೆಗಳನ್ನು ಪಡೆದು ಡಾರ್ಕ್ ಪ್ಯಾಟರ್ನ್ಸ್ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಗೂಗಲ್, ಫ್ಲಿಪ್​ಕಾರ್ಟ್, ರಿಲಾಯನ್ಸ್ ಇಂಡಸ್ಟ್ರೀಸ್, ಅಮೇಜಾನ್, ಸ್ವಿಗ್ಗಿ, ಜೊಮಾಟೋ, ಓಲಾ, ಫೇಸ್ಬುಕ್ ಮೊದಲಾದ ಇ-ಪ್ಲಾಟ್​ಫಾರ್ಮ್​ಗಳ ಪ್ರತಿನಿಧಿಗಳನ್ನೊಳಗೊಂಡ ಕಾರ್ಯ ಪಡೆಯೊಂದನ್ನು ಇದಕ್ಕಾಗಿ ರೂಪಿಸಲಾಗಿತ್ತು.

ಯಾವುದೇ ಆನ್​ಲೈನ್ ಪ್ಲಾಟ್​ಫಾರ್ಮ್​ನಲ್ಲಿ ಜನರನ್ನು ದಾರಿತಪ್ಪಿಸುವ ರೀತಿಯಲ್ಲಿ ಇಂಟರ್ಫೇಸ್ ಬಳಸಿ ವಂಚಿಸಲಾಗುವುದನ್ನು ಡಾರ್ಕ್ ಪ್ಯಾಟರ್ನ್ ಎಂದು ಗುರುತಿಸಲಾಗಿದೆ. ಯಾವುದೆಲ್ಲ ರೀತಿಯ ವಂಚನೆಗಳು ಡಾರ್ಕ್ ಪ್ಯಾಟರ್ನ್ ಎಂದು ಪರಿಗಣಿತವಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲಾಗಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್​ಸೈಟ್​ನಲ್ಲಿ ಈ ಮಾಹಿತಿ ಇರುವ ಲಿಂಕ್:

ಇದನ್ನೂ ಓದಿ: ಹಲ್ದಿರಾಮ್ಸ್ ಖರೀದಿಸಲು ಟಾಟಾ ಯತ್ನ; ದುಬಾರಿ ಬೆಲೆ ಕೇಳಿ ಹಿಂದೇಟು; ಆದರೆ, ಮಾತುಕತೆಯೇ ಆಗಿಲ್ಲ ಎನ್ನುತ್ತಿದೆ ಸ್ನ್ಯಾಕ್ಸ್ ಕಂಪನಿ

ಡಾರ್ಕ್ ಪ್ಯಾಟರ್ನ್ ಎನಿಸುವ ಕ್ರಿಯೆಗಳು ಯಾವುವು?

ಸುಳ್ಳು ತುರ್ತು ಸ್ಥಿತಿ: ಒಂದು ಉತ್ಪನ್ನ ಬಹುತೇಕ ಖಾಲಿಯಾಗುತ್ತಿದೆ ಎಂದು ಸುಳ್ಳು ಹೇಳಿ ಗ್ರಾಹಕರನ್ನು ಆತುರಪಡಿಸುವ (ಫಾಲ್ಸ್ ಅರ್ಜೆನ್ಸಿ) ಪ್ರಯತ್ನಗಳು ಡಾರ್ಕ್ ಪ್ಯಾಟರ್ನ್ ವರ್ಗಕ್ಕೆ ಸೇರುತ್ತವೆ.

ಬ್ಯಾಸ್ಕೆಟ್ ಸ್ನೀಕಿಂಗ್: ಆನ್ಲೈನ್ ಪ್ಲಾಟ್​ಫಾರ್ಮ್​ನಲ್ಲಿ ಗ್ರಾಹಕ ಖರೀದಿಸಲು ಆಯ್ಕೆ ಮಾಡಿದ ಉತ್ಪನ್ನಗಳ ಬೆಲೆಯ ಜೊತೆಗೆ, ಅವರಿಗೆ ತಿಳಿಸದೆಯೇ ಬೇರೆ ಉತ್ಪನ್ನಗಳ ಬೆಲೆಯನ್ನೂ ಸೇರಿಸಿ ಅಂತಿಮ ಬಿಲ್ ಕೊಡುವುದನ್ನು ನೀವು ಕಂಡಿರಬಹುದು. ಇಂಥವೂ ಕೂಡ ಡಾರ್ಕ್ ಪ್ಯಾಟರ್ನ್ ಎನಿಸುತ್ತವೆ.

ಕನ್ಫರ್ಮ್ ಶೇಮಿಂಗ್: ಇದು ಬಳಕೆದಾರರನ್ನು ನಿಂದನೆಯೋ, ಬೆದರಿಕೆಯೋ ಇತ್ಯಾದಿ ಮೂಲಕ ಉತ್ಪನ್ನ ಖರೀದಿಸಲು ಬಲವಂತಪಡಿಸುವುದಕ್ಕೆ ಕನ್ಫರ್ಮ್ ಶೇಮಿಂಗ್ ಎನ್ನುತ್ತಾರೆ. ಇದೂ ಕೂಡ ಡಾರ್ಕ್ ಪ್ಯಾಟರ್ನ್ ಆಗುತ್ತದೆ.

ಇದನ್ನೂ ಓದಿ: ಇಂಡಿಯಾ ಹೆಸರು ಭಾರತ್ ಆಗಿ ಬದಲಾಯಿಸಲು 14,000 ಕೋಟಿ ರೂ ವೆಚ್ಚ? ಇದ್ಯಾವ ಲೆಕ್ಕಾಚಾರ?

ಫೋರ್ಸ್ಡ್ ಆ್ಯಕ್ಷನ್: ನೀವು ಒಂದು ಉತ್ಪನ್ನ ಅಥವಾ ಸೇವೆಯನ್ನು ಪಡೆಯಬೇಕೆಂದಿದ್ದರೆ, ಅದನ್ನು ಗಳಿಸಲು ಬೇರಿನ್ನೊಂದು ಉತ್ಪನ್ನ ಅಥವಾ ಸೇವೆಯನ್ನೂ ಪಡೆಯಬೇಕೆಂದು ಹೇಳಿ, ಉತ್ಪನ್ನ ಮಾರಲು ಯತ್ನಿಸುವುದು ತಪ್ಪು. ಇದೂ ಡಾರ್ಕ್ ಪ್ಯಾಟರ್ನ್ ಎಂದು ವರ್ಗೀಕೃತವಾಗುತ್ತದೆ.

ಸಬ್​ಸ್ಕ್ರಿಪ್ಷನ್ ಬಲೆ: ನೀವು ಒಂದು ಸೇವೆಗೆ ಸಬ್​ಸ್ಕ್ರೈಬ್ ಆಗಿದ್ದರೆ ಅದನ್ನು ರದ್ದುಗಳಿಸುವುದು ಅಷ್ಟು ಸುಲಭ ಇರುವುದಿಲ್ಲ. ಅಥವಾ ಅನ್​ಸಬ್​ಸ್ಕ್ರೈಬ್ ಮಾಡುವ ಕ್ರಿಯೆಯನ್ನು ಬಹಳ ಸಂಕೀರ್ಣ ಮಾಡಲಾಗಿರುತ್ತದೆ. ಇದು ಡಾರ್ಕ್ ಪ್ಯಾಟರ್ನ್.

ಇಂಟರ್​ಫೇಸ್ ಇಂಟರ್​ಫಿಯರೆನ್ಸ್: ಕೆಲ ಮಾಹಿತಿಯನ್ನು ಮಾತ್ರ ಉದ್ದೇಶಪೂರ್ವಕವಾಗಿ ಹೈಲೈಟ್ ಮಾಡಲಾಗುತ್ತದೆ. ಅಥವಾ ಕೆಲ ಮಾಹಿತಿಯನ್ನು ಕಣ್ಣಿಗೆ ಕಾಣದ ರೀತಿಯಲ್ಲಿ ಮರೆಮಾಚಲಾಗಿರುತ್ತದೆ. ಅಥವಾ ತನಗೆ ಬೇಕಿಲ್ಲದ ಕ್ರಿಯೆಗೆ ಒಳಪಡುವಂತೆ ತಪ್ಪು ಮಾಹಿತಿ ಕೊಡಲಾಗಿರುತ್ತದೆ. ಇವೆಲ್ಲವೂ ಡಾರ್ಕ್ ಪ್ಯಾಟರ್ನ್ ಅಡಿಯಲ್ಲಿ ವರ್ಗೀಕರಣಗೊಂಡಿವೆ.

ಇದನ್ನೂ ಓದಿ: ಉದ್ಯೋಗಿ ಆಗದೇ ಬ್ಯಾಂಕ್​ನಿಂದ ಆದಾಯ ಪಡೆಯುವ ಮಾರ್ಗಗಳು ಹೇಗೆ? ಸ್ವಯಂ ಉದ್ಯೋಗದ ಅವಕಾಶ ಬಳಸಿ

ಬೇಟ್ ಅಂಡ್ ಸ್ವಿಚ್: ಒಬ್ಬ ಬಳಕೆದಾರನಿಗೆ ಇಷ್ಟವಾಗುವ ಜಾಹೀರಾತು ತೋರಿಸಿ, ಅದನ್ನು ಕ್ಲಿಕ್ ಮಾಡಿದಾಗ ಬೇರೆ ಲಿಂಕ್​ಗೆ ಕರೆದೊಯ್ಯುವುದೂ ಡಾರ್ಕ್ ಪ್ಯಾಟರ್ನ್.

ಡ್ರಿಪ್ ಪ್ರೈಸಿಂಗ್: ನೈಜ ಬೆಲೆಯನ್ನು ತೋರಿಸದೇ ಇರುವುದು ಅಥವಾ ರಹಸ್ಯವಾಗಿಡುವುದು ಇತ್ಯಾದಿ ಜಾಹೀರಾತುಗಳೂ ಡಾರ್ಕ್ ಪ್ಯಾಟರ್ನ್ ಎನಿಸುತ್ತವೆ.

ನಕಲಿ ಜಾಹೀರಾತು: ಸುದ್ದಿ, ಲೇಖನ, ಸುಳ್ಳು ಜಾಹೀರಾತು ಇತ್ಯಾದಿ ರೂಪದಲ್ಲಿ ನೈಜ ಜಾಹೀರಾತನ್ನು ಮರೆ ಮಾಚುವುದು.

ಪದೇ ಪದೇ ಒತ್ತಡ: ಒಂದು ಉತ್ಪನ್ನವನ್ನು ಖರೀದಿಸಲು ಗ್ರಾಹಕ ಆಸಕ್ತಿ ತೋರದಿದ್ದರೂ ಪದೇ ಪದೇ ಮನವಿ ಮಾಡುವುದು, ಮಾಹಿತಿ ತೋರಿಸುವುದು ಇತ್ಯಾದಿ ಮೂಲಕ ಒತ್ತಡ ಹಾಕುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Thu, 7 September 23