E20 ಪೆಟ್ರೋಲ್ ಹಾಕಿಸುವ ವಾಹನಗಳ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತವಾಗುತ್ತದಾ? ಸರ್ಕಾರದ ಸ್ಪಷ್ಟನೆ ಇದು

E20 Fuel & Car Insurance: E20 ಇಂಧನ ಬಳಸುವ ವಾಹನಗಳಿಗೆ ವಿಮಾ ಕ್ಲೇಮ್ ತಿರಸ್ಕೃತವಾಗಬಹುದು ಎಂಬ ವೈರಲ್ ಸುದ್ದಿಗೆ ಸರ್ಕಾರ ಮತ್ತು ವಿಮಾ ಕಂಪನಿಗಳು ಸ್ಪಷ್ಟನೆ ನೀಡಿವೆ. E20 ಇಂಧನದಿಂದ ನಿಮ್ಮ ವಿಮಾ ಪಾಲಿಸಿಗಳು ರದ್ದಾಗುವುದಿಲ್ಲ, ಸಂಪೂರ್ಣವಾಗಿ ಚಾಲ್ತಿಯಲ್ಲಿರುತ್ತವೆ. ಅಪಘಾತ ಕ್ಲೇಮ್‌ಗಳಿಗೆ ಇಂಧನ ವಿಧ ಮುಖ್ಯವಲ್ಲ. ಆದರೆ, ಹಳೆಯ ವಾಹನಗಳಲ್ಲಿ E20 ಬಳಕೆ ಇಂಜಿನ್ ಭಾಗಗಳ ಸವೆತಕ್ಕೆ ಕಾರಣವಾದರೆ, ಅಂತಹ 'ಪರಿಣಾಮಕಾರಿ ಹಾನಿಗಳಿಗೆ' ಸಾಮಾನ್ಯ ವಿಮೆಯಲ್ಲಿ ಪರಿಹಾರ ಸಿಗುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು.

E20 ಪೆಟ್ರೋಲ್ ಹಾಕಿಸುವ ವಾಹನಗಳ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತವಾಗುತ್ತದಾ? ಸರ್ಕಾರದ ಸ್ಪಷ್ಟನೆ ಇದು
ಪೆಟ್ರೋಲ್ ಪಂಪ್
Image Credit source: Shutterstock

Updated on: Jun 16, 2026 | 7:16 PM

ನವದೆಹಲಿ, ಜೂನ್ 16: ಇ20 ಇಂಧನ ಬಳಸುವ ಕಾರಿಗೆ ಇನ್ಷೂರೆನ್ಸ್ ಕ್ಲೇಮ್ ತಿರಸ್ಕೃತವಾಗಬಹುದು ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ಕೊಟ್ಟಿದ್ದು, ಆ ರೀತಿ ಆಗುವುದಿಲ್ಲ ಎಂದು ಹೇಳಿದೆ. ಶೇ. 20ರಷ್ಟು ಎಥೆನಾಲ್ ಮಿಶ್ರಣವಿರುವ ಇ20 ಪೆಟ್ರೋಲ್ (E20 fuel) ಅನ್ನು ಹಳೆಯ ವಾಹನಗಳು ಬಳಸಿದರೆ ಇನ್ಷೂರೆನ್ಸ್ ಕ್ಲೇಮ್ ಸಾಧ್ಯವಾಗದೇ ಹೋಗಬಹುದು ಎಂದು ಐಸಿಐಸಿಐ ಲೊಂಬಾರ್ಡ್ ಎನ್ನುವ ವಿಮಾ ಕಂಪನಿ ಕಳೆದ ವಾರ ತನ್ನ ಬ್ಲಾಗ್​ನಲ್ಲಿ ಮಾಹಿತಿ ಹಂಚಿಕೊಂಡಿತ್ತು. ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬಿ ವಾಹನ ಸವಾರರು ಇ20 ಇಂಧನದ ಬಗ್ಗೆ ಆತಂಕ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸ್ವತಃ ಐಸಿಐಸಿಐ ಲೊಂಬಾರ್ಡ್ ಕಂಪನಿ ಸ್ಪಷ್ಟನೆ ನೀಡಿ ಗೊಂದಲಕ್ಕೆ ತೆರೆ ಎಳೆಯಲು ಯತ್ನಿಸಿವೆ.

ವಿಮೆ ಸಂಪೂರ್ಣ ಸಿಂಧು

“ವಾಹನಗಳಲ್ಲಿ E20 ಇಂಧನವನ್ನು ಬಳಸುವುದರಿಂದ ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗಳು ರದ್ದಾಗುವುದಿಲ್ಲ, ಅವು ಸಂಪೂರ್ಣವಾಗಿ ಚಾಲ್ತಿಯಲ್ಲಿರುತ್ತವೆ” ಎಂದು ಕೇಂದ್ರ ಸರ್ಕಾರ ಮತ್ತು ಐಸಿಐಸಿಐ ಲೊಂಬಾರ್ಡ್ ಸಂಸ್ಥೆ ಸ್ಪಷ್ಟಪಡಿಸಿವೆ.

ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್

ಇದನ್ನೂ ಓದಿ: ಹಳೆಯ ಕಾರಿಗೆ ಇ20 ಪೆಟ್ರೋಲ್ ಹಾಕಿಸಿದ್ರೆ ಇನ್ಷೂರೆನ್ಸ್ ಸಿಗಲ್ಲವಾ? ವಿಮಾ ಕಂಪನಿ ಹೇಳಿದ್ದಿದು

ಇಂಧನದ ಆಧಾರದ ಮೇಲೆ ಕ್ಲೈಮ್ ತಿರಸ್ಕರಿಸಲ್ಲ

ಬ್ಯಾಂಕುಗಳು ಮತ್ತು ವಿಮಾ ನಿಯಂತ್ರಕರು ತಿಳಿಸಿರುವಂತೆ, ಅಪಘಾತ ಅಥವಾ ಕಳ್ಳತನದಂತಹ ಸಂದರ್ಭಗಳಲ್ಲಿ ಕ್ಲೈಮ್ ನೀಡಲು ವಾಹನದಲ್ಲಿ ಯಾವ ಇಂಧನ (ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಅಥವಾ E20) ಬಳಸಲಾಗಿದೆ ಎಂಬುದು ಮುಖ್ಯವಾಗುವುದಿಲ್ಲ. ಸಾಮಾನ್ಯ ಇಂಧನ ಬಳಸಿದಾಗ ಯಾವೆಲ್ಲಾ ಅಪಘಾತದ ಕ್ಲೈಮ್‌ಗಳು ಸಿಗುತ್ತವೆಯೋ, ಅವೆಲ್ಲವೂ E20 ಇಂಧನ ಬಳಸುವ ವಾಹನಗಳಿಗೂ ಸಿಗಲಿವೆ.

ಹಳೆಯ ವಾಹನಗಳ ಬಳಕೆ ‘ಬೇಜವಾಬ್ದಾರಿತನ’ ಅಲ್ಲ

“ಹಳೆಯ ವಾಹನಗಳಲ್ಲಿ E20 ಪೆಟ್ರೋಲ್ ಹಾಕಿಸುವುದನ್ನು ನಾವು ‘ಗ್ರಾಹಕರ ನಿರ್ಲಕ್ಷ್ಯ’ ಎಂದು ಪರಿಗಣಿಸುವುದಿಲ್ಲ. ಸರ್ಕಾರದ ಎಥೆನಾಲ್ ಮಿಶ್ರಣ ಯೋಜನೆಯು ಪರಿಸರಸ್ನೇಹಿಯಾಗಿದ್ದು, ಇದರ ಕಾರಣಕ್ಕಾಗಿ ಯಾವುದೇ ಕ್ಲೈಮ್ ಅನ್ನು ತಿರಸ್ಕರಿಸಲಾಗುವುದಿಲ್ಲ” ಎಂದು ಇನ್ಶೂರೆನ್ಸ್ ಕಂಪನಿ ತನ್ನ ಹಳೆಯ ಹೇಳಿಕೆಯನ್ನು ತಿದ್ದಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಎಂಬಿಎ ಕಾಲಘಟ್ಟ ಮುಗಿಯಿತು, ಈಗ ಬೇಕಿರೋದು ಟ್ರೇಡ್ ಸ್ಕಿಲ್ಸ್: ಮುಖ್ಯ ಆರ್ಥಿಕ ಸಲಹೆಗಾರ ಅನಂತ ನಾಗೇಶ್ವರನ್ ಸಲಹೆ

ಗ್ರಾಹಕರು ಗಮನಿಸಬೇಕಾದ ಸಂಗತಿ

ಅಪಘಾತದಿಂದ ವಾಹನ ಜಖಂಗೊಂಡರೆ ವಿಮೆ ಸಿಗುತ್ತದೆ. ಆದರೆ, E20 ಹೊಂದಾಣಿಕೆಯಾಗದ ಹಳೆಯ ವಾಹನಗಳಲ್ಲಿ (ಏಪ್ರಿಲ್ 2023 ಕ್ಕಿಂತ ಮುಂಚಿನ ಮಾಡೆಲ್‌ಗಳು) ಈ ಇಂಧನವನ್ನು ಸತತವಾಗಿ ಬಳಸುವುದರಿಂದ ಇಂಜಿನ್‌ನ ರಬ್ಬರ್ ಪಾರ್ಟ್ಸ್ ಅಥವಾ ಪೈಪ್‌ಗಳು ಕಾಲಕ್ರಮೇಣ ಕೆಟ್ಟುಹೋದರೆ (Chemical Corrosion/Wear and tear), ಅಂತಹ ‘ಪರಿಣಾಮಕಾರಿ ಹಾನಿಗಳಿಗೆ’ (Consequential Damages) ಸಾಮಾನ್ಯ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಪರಿಹಾರ ಸಿಗುವುದಿಲ್ಲ. ಏಕೆಂದರೆ ಇನ್ಶೂರೆನ್ಸ್ ಕೇವಲ ದಿಢೀರ್ ಆಗುವ ಅಪಘಾತಗಳನ್ನು ಮಾತ್ರ ಕವರ್ ಮಾಡುತ್ತದೆ, ಸಮಯ ಕಳೆದಂತೆ ಆಗುವ ಸವೆತಗಳನ್ನಲ್ಲ.

ಹೀಗಾಗಿ ಹಳೆಯ ವಾಹನ ಸವಾರರು ಇನ್ಶೂರೆನ್ಸ್ ರದ್ದಾಗುವ ಭಯಪಡುವ ಅಗತ್ಯವಿಲ್ಲದಿದ್ದರೂ, ಇಂಧನ ವ್ಯವಸ್ಥೆಯ ಬಿಡಿಭಾಗಗಳನ್ನು ನಿಯಮಿತವಾಗಿ ಸರ್ವಿಸಿಂಗ್ ಮಾಡಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us