ನೀವು ಯಾವುದೋ ಹೊಸ ಕೆಲಸಕ್ಕೆ ಸೇರಿದಾಗ ಹಳೆಯ ಪಿಎಫ್ ಖಾತೆ (EPF account) ಮುಂದುವರಿಯುವುದಿಲ್ಲ. ಹೊಸದಾಗಿ ಪಿಎಫ್ ಖಾತೆಯನ್ನು ಸೃಷ್ಟಿಸಲಾಗುತ್ತದೆ. ಆದರೆ, ಯುಎಎನ್ ನಂಬರ್ ಮಾತ್ರ ಒಂದೇ ಇರಬೇಕು. ಈ ಯುಎಎನ್ ನಂಬರ್ (UAN) ಅಡಿಯಲ್ಲಿ ನಿಮ್ಮ ಎಲ್ಲಾ ಪಿಎಫ್ ಖಾತೆಗಳು ಇರುತ್ತವೆ. ಆದರೆ, ವಿವಿಧ ಪಿಎಫ್ ಖಾತೆಗಳ ಬದಲು ಒಂದೇ ಖಾತೆ ಇದ್ದರೆ ಹಲವು ರೀತಿಯ ಪ್ರಯೋಜನಗಳು ಇರುತ್ತವೆ. ನಿಮ್ಮ ಸಕ್ರಿಯ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಮಾತ್ರವೇ ಸರ್ಕಾರದ ಬಡ್ಡಿ ಹಣ ಸಂದಾಯ ಆಗುತ್ತದೆ. ನೀವು ಕೆಲಸ ಬದಲಿಸಿದಾಗ ಹೊಸ ಪಿಎಫ್ ಖಾತೆಯಲ್ಲಿರುವ ಅಲ್ಪ ಹಣಕ್ಕೆ ಮಾತ್ರವೇ ಬಡ್ಡಿ ಸಿಗುತ್ತದೆ. ನಿಮ್ಮ ಹಳೆಯ ಪಿಎಫ್ ಖಾತೆಯಲ್ಲಿ ಹೆಚ್ಚಿನ ಮೊತ್ತ ಇದ್ದರೆ ಅದಕ್ಕೆ ಬಡ್ಡಿ ಸಿಗುವುದಿಲ್ಲ. ಹೀಗಾಗಿ, ಕೆಲಸ ಬದಲಿಸಿದಾಗ ಪಿಎಫ್ ಖಾತೆಯನ್ನೂ ಹೊಸ ಪಿಎಫ್ ಖಾತೆಗೆ ವಿಲೀನಗೊಳಿಸುವುದು ಮುಖ್ಯ.
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ: ಮಹಿಳಾ ದಿನಾಚರಣೆ ದಿನ ಪ್ರಧಾನಿ ಮೋದಿ ಗಿಫ್ಟ್
ಇಪಿಎಫ್ ಎಂಬುದು ಖಾಸಗಿ ಕ್ಷೇತ್ರವನ್ನೂ ಒಳಗೊಂಡಂತೆ ಎಲ್ಲಾ ಕಂಪನಿಗಳ ಉದ್ಯೋಗಿಗಳ ಭವಿಷ್ಯದ ಭದ್ರತೆ ಅಥವಾ ನಿವೃತ್ತಿ ನಂತರದ ಜೀವನದ ಭದ್ರತೆಗೆಂದು ಸರ್ಕಾರ ರೂಪಿಸಿದ ಯೋಜನೆ ಇದು. 20ಕ್ಕೂ ಹೆಚ್ಚು ಉದ್ಯೋಗಿಗಳನ್ನು (ರೆಗ್ಯುಲರ್) ಹೊಂದಿರುವ ಯಾವುದೇ ಕಂಪನಿಯಾದರೂ ಇಪಿಎಫ್ ಯೋಜನೆಯನ್ನು ತಮ್ಮ ಉದ್ಯೋಗಿಗಳಿಗೆ ಅಳವಡಿಸುವುದು ಕಡ್ಡಾಯ. ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳೂ ಕೂಡ ಈ ಯೋಜನೆಯನ್ನು ಅಳವಡಿಸಬಹುದು.
ಈ ಯೋಜನೆಯ ಅಡಿಯಲ್ಲಿ ಉದ್ಯೋಗಿಯ ಬೇಸಿಕ್ ಸ್ಯಾಲರಿಯ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಅದನ್ನು ಪಿಎಫ್ ಖಾತೆಗೆ ಸಂದಾಯ ಮಾಡಲಾಗುತ್ತದೆ. ಅಷ್ಟೇ ಪ್ರಮಾಣದ ಹಣವನ್ನು ಸಂಸ್ಥೆಯೂ ಕೂಡ ಆ ಖಾತೆಗೆ ಹಾಕುತ್ತದೆ. ಸರ್ಕಾರ ವರ್ಷಕ್ಕೆ ಒಮ್ಮೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ಸೇರಿಸುತ್ತದೆ. ಬೇರೆ ಉಳಿತಾಯ ಸ್ಕೀಮ್ಗಳಿಗಿಂತ ಇದಕ್ಕೆ ಹೆಚ್ಚು ಬಡ್ಡಿ ಸಿಗುತ್ತದೆ. ಹೀಗಾಗಿ, ಉದ್ಯೋಗಿಯ ಪಿಎಫ್ ಖಾತೆ ಒಂದು ರೀತಿಯಲ್ಲಿ ಉಳಿತಾಯದ ಜೊತೆಗೆ ಉತ್ತಮ ಹೂಡಿಕೆಯೂ ಆಗಿರುತ್ತದೆ. ನಿವೃತ್ತಿಯ ವೇಳೆಗೆ ಸಾಕಷ್ಟು ದೊಡ್ಡ ಮೊತ್ತವೇ ಸಂಗ್ರಹವಾಗಿರುತ್ತದೆ.
ಇದನ್ನೂ ಓದಿ: ಪಿಎಂ ಉಜ್ವಲ ಫಲಾನುಭವಿಗಳಿಗೆ 300 ರೂ ಎಲ್ಪಿಜಿ ಸಬ್ಸಿಡಿ, ಒಂದು ವರ್ಷ ಮುಂದುವರಿಕೆ
ನೀವು ಇಪಿಎಫ್ಒ ಪೋರ್ಟಲ್ಗೆ ಹೋಗಿ ನಿಮ್ಮ ಯುಎಎನ್ ನಂಬರ್ ಮೂಲಕ ನೊಂದಾಯಿಸಿಕೊಂಡು ಲಾಗಿ ಆಗಿ. ಹಳೆಯ ಪಿಎಫ್ ಖಾತೆಯನ್ನು ಹೊಸ ಖಾತೆಗೆ ವರ್ಗಾಯಿಸಿಕೊಳ್ಳಲು ಆನ್ಲೈನ್ನಲ್ಲೇ ಮನವಿ ಸಲ್ಲಿಸುವ ಅವಕಾಶ ಇದೆ. ಇದಕ್ಕೆ ಹಿಂದೆ ಕೆಲಸ ಮಾಡಿದ ಸಂಸ್ಥೆ ಅಥವಾ ಈಗ ಕೆಲಸ ಮಾಡುತ್ತಿರುವ ಸಂಸ್ಥೆ ಅನುಮೋದನೆ ಕೊಡಬೇಕು. ಒಟ್ಟಾರೆ ಈ ಪ್ರಕ್ರಿಯೆ ಮೂರರಿಂದ ಆರು ವಾರದೊಳಗೆ ಪೂರ್ಣಗೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ