ಇಪಿಎಫ್​ಒ ವೇತನ ಮಿತಿ 15,000 ದಿಂದ 25,000 ರೂಗೆ ಏರಿಕೆ; ಹೆಚ್ಚು ಉದ್ಯೋಗಿಗಳಿಗೆ ಇಪಿಎಫ್ ಅಕೌಂಟ್, ಹೆಚ್ಚು ಕಾರ್ಪಸ್

ಇಪಿಎಫ್​ಒ ಸಂಸ್ಥೆಯು ವೇತನ ಮಿತಿ ನಿಯಮ ಪರಿಷ್ಕರಿಸಿದ್ದು, ಮಿತಿಯನ್ನು 15,000 ರೂನಿಂದ 25,000 ರೂಗೆ ಹೆಚ್ಚಿಸಲಾಗಿದೆ. ಈ ಕ್ರಮದಿಂದ 51 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಉದ್ಯೋಗಿಗಳು ಇಪಿಎಫ್​ಒ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಇಪಿಎಫ್ ಅಕೌಂಟ್​ಗಳಿಗೆ ಉದ್ಯೋಗದಾತರ ವತಿಯಿಂದ ಸಿಗುವ ಕೊಡುಗೆಯ ಮೊತ್ತವೂ ಹೆಚ್ಚಲಿದೆ.

ಇಪಿಎಫ್​ಒ ವೇತನ ಮಿತಿ 15,000 ದಿಂದ 25,000 ರೂಗೆ ಏರಿಕೆ; ಹೆಚ್ಚು ಉದ್ಯೋಗಿಗಳಿಗೆ ಇಪಿಎಫ್ ಅಕೌಂಟ್, ಹೆಚ್ಚು ಕಾರ್ಪಸ್
ಇಪಿಎಫ್​ಒ
Image Credit source: Getty Images

Updated on: Sep 16, 2026 | 5:55 PM

ನವದೆಹಲಿ, ಸೆಪ್ಟೆಂಬರ್ 16: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (EPFO) ವೇತನ ಮಿತಿಯನ್ನು ₹15,000 ದಿಂದ ₹25,000 ಕ್ಕೆ ಏರಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಕ್ರಮವು ಬಹಳ ಮಹತ್ವದ್ದೆಂದು ಪರಿಗಣಿತವಾಗಿದೆ. ಈ ನಿರ್ಧಾರದಿಂದ ದೇಶದ ಹೆಚ್ಚುವರಿ 51 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕಡ್ಡಾಯ ಪಿಎಫ್, ಪಿಂಚಣಿ ಮತ್ತು ವಿಮಾ ಸೌಲಭ್ಯಗಳ ವ್ಯಾಪ್ತಿಗೆ ಬರಲಿದ್ದಾರೆ.

ವೇತನ ಮಿತಿ ಹೆಚ್ಚಳದಿಂದ ಹಲವು ಲಾಭ

51 ಲಕ್ಷ ನೌಕರರಿಗೆ ನೇರ ಲಾಭ: ವೇತನ ಮಿತಿಯ ಏರಿಕೆಯಿಂದಾಗಿ ₹15,000 ದಿಂದ ₹25,000 ರವರೆಗೆ ಮಾಸಿಕ ವೇತನ ಪಡೆಯುತ್ತಿರುವ ಸುಮಾರು 51 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಉದ್ಯೋಗಿಗಳಿಗೆ ಕಡ್ಡಾಯ ಇಪಿಎಫ್‌ಒ ಭದ್ರತೆ ಸಿಗಲಿದೆ.

ಹೆಚ್ಚಿನ ಇಪಿಎಫ್ ಕಾರ್ಪಸ್: ಪ್ರಸ್ತುತ ಉದ್ಯೋಗಿಗಳು ಕೆಲಸ ಮಾಡುತ್ತಿರುವ ಸಂಸ್​ಥೆಗಳು ₹15,000 ವೇತನ ಲೆಕ್ಕದಲ್ಲಿ ಶೇ. 12ರಷ್ಟು ಹಣವನ್ನು ಕೊಡುಗೆಯಾಗಿ ನೀಡುತ್ತಿವೆ. ಈಗ ₹25,000 ಲೆಕ್ಕದಲ್ಲಿ ಅವುಗಳು ಕನಿಷ್ಠ ಕೊಡುಗೆ ನೀಡಬೇಕಾಗುತ್ತದೆ. ಅಂದರೆ, ₹3,000 ಹಣವು ಕಂಪನಿ ವತಿಯಿಂದ ಉದ್ಯೋಗಿಯ ಇಪಿಎಫ್ ಮತ್ತು ಇಪಿಎಸ್ ಖಾತೆಗಳಿಗೆ ಸಂದಾಯವಾಗುತ್ತದೆ.

ಇದನ್ನೂ ಓದಿ: ಯುಪಿಐ ಪಾವತಿಗೆ ಎಂಡಿಆರ್ ಶುಲ್ಕ; ನಾಲ್ಕು ಭಾಗವಾಗಿ ಹಂಚಿಕೆ; ಯಾರಿಗೆ ಎಷ್ಟು ಆದಾಯ ಸಿಗುತ್ತೆ? ಇಲ್ಲಿದೆ ವಿವರ

ಈ ನೂತನ ಮಿತಿಯ ವ್ಯಾಪ್ತಿಗೆ ಬರುವ ಹೊಸ ಉದ್ಯೋಗಿಗಳು ಮೂರು ಪ್ರಮುಖ ಯೋಜನೆಗಳ ಲಾಭ ಪಡೆಯಲಿದ್ದಾರೆ:

  • ಉದ್ಯೋಗಿಗಳ ಭವಿಷ್ಯ ನಿಧಿ (EPF): ನಿವೃತ್ತಿಯ ನಂತರದ ಒಂದಷ್ಟು ಒಟ್ಟು ಲಂಪ್ಸಮ್ ಹಣ ಸಿಗುತ್ತದೆ.
  • ಉದ್ಯೋಗಿಗಳ ಪಿಂಚಣಿ ಯೋಜನೆ (EPS): ನಿವೃತ್ತಿಯ ನಂತರ ಮಾಸಿಕ ಪಿಂಚಣಿ ಸೌಲಭ್ಯ.
  • ಇಡಿಎಲ್‌ಐ (EDLI): ಜೀವ ವಿಮಾ ರಕ್ಷಣೆ.

ಸರ್ಕಾರಕ್ಕೆ ಹೆಚ್ಚುವರಿ ವೆಚ್ಚ: ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ವಾರ್ಷಿಕ ಅಂದಾಜು ₹11,339 ಕೋಟಿ ವೆಚ್ಚ ಮಾಡಲಿದ್ದು, ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿಯಾಗಿ ಒಟ್ಟು ₹56,696 ಕೋಟಿ ಬಜೆಟ್ ಮೀಸಲಿಡಬೇಕಾಗುತ್ತದೆ.

ಏರಿಕೆಗೆ ಪ್ರಮುಖ ಕಾರಣ: ದೇಶದಲ್ಲಿ ಕನಿಷ್ಠ ವೇತನ ಮತ್ತು ಸರಾಸರಿ ವೇತನ ಮಟ್ಟಗಳು ಹೆಚ್ಚಾಗಿರುವುದನ್ನು ಪರಿಗಣಿಸಿ, ಸಾಮಾಜಿಕ ಭದ್ರತಾ ಶ್ರೇಣಿಯನ್ನು ಪ್ರಚಲಿತ ಆರ್ಥಿಕ ವಾಸ್ತವಕ್ಕೆ ಅನುಗುಣವಾಗಿ ವಿಸ್ತರಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಫ್ಲಿಪ್‌ಕಾರ್ಟ್​ನಿಂದ ಬಿಗ್ ಬಿಲಿಯನ್ ಡೇಸ್ 2026 ಸೇಲ್ ಘೋಷಣೆ; ಯಾವಾಗ ಆರಂಭ?

ಎಂಟು ಕೋಟಿ ಇಪಿಎಫ್ ಸಬ್​ಸ್ಕ್ರೈಬರ್ಸ್

ಪ್ರಸ್ತುತ ಇಪಿಎಫ್‌ಒ ಸಂಸ್ಥೆಯು ಸುಮಾರು 7.68 ಲಕ್ಷ ಸಂಸ್ಥೆಗಳಲ್ಲಿ 7.98 ಕೋಟಿ ಚಂದಾದಾರರನ್ನು ಹೊಂದಿದೆ. ಇಪಿಎಸ್ ಪಿಂಚಣಿ ಹೊಂದಿರುವವರ ಸಂಖ್ಯೆ 82 ಲಕ್ಷಕ್ಕೂ ಹೆಚ್ಚು ಇದೆ.

ಅಶ್ವಿನಿ ವೈಷ್ಣವ್ ಮಾಹಿತಿ ಹಂಚಿಕೊಂಡಿರುವುದು

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ನಿರ್ಧಾರವು ದೇಶದ ಶ್ರಮಿಕ ವರ್ಗದ ನಿವೃತ್ತಿ ಭದ್ರತೆಯನ್ನು ಬಲಪಡಿಸುವುದಲ್ಲದೆ, ಉದ್ಯೋಗ ವಲಯದ ಔಪಚಾರಿಕೀಕರಣವನ್ನು (Formalisation) ಮತ್ತಷ್ಟು ವೇಗಗೊಳಿಸಲಿದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Wed, 16 September 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us