ಇಪಿಎಫ್ಒ ಅಪ್ಡೇಟ್; ಸದಸ್ಯ ಸತ್ತಾಗ ಕ್ಲೇಮ್ ಮಾಡುವ ಪ್ರಕ್ರಿಯೆ ಈಗ ಸರಳ
EPF death claim simplified: ಆಧಾರ್ನಲ್ಲಿರುವ ಮಾಹಿತಿ ಈಗ ಬಹಳಷ್ಟು ದಾಖಲೆಗೆ ಆಧಾರವಾಗಿರುತ್ತದೆ. ಆಧಾರ್ನಲ್ಲಿರುವ ಹೆಸರು ನಿಖರವಾಗಿರಬೇಕು. ಅದರಂತೆಯೇ ಯುಎಎನ್ನಲ್ಲೂ ಇರಬೇಕು. ವ್ಯತ್ಯಾಸ ಇದ್ದರೆ ಕ್ಲೇಮ್ ಮಾಡುವುದು ಕಷ್ಟ. ಸದಸ್ಯ ಸತ್ತ ಬಳಿಕ ಅವರ ಪಿಎಫ್ ಹಣಕ್ಕೆ ಕ್ಲೇಮ್ ಮಾಡುವಾಗ, ಆಧಾರ್ ಮತ್ತು ಯುಎಎನ್ ಮಾಹಿತಿ ತಾಳೆಯಾಗದಿದ್ದರೆ ಕಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಇಪಿಎಫ್ಒ ಸಂಸ್ಥೆ ಒಂದಷ್ಟು ವಿನಾಯಿತಿ ಕೊಟ್ಟಿದೆ.
ಇಪಿಎಫ್ ಖಾತೆ ರಚಿಸುವಾಗ ಆಧಾರ್ ಮತ್ತು ಯುಎಎನ್ ಮಾಹಿತಿ ಒಂದಕ್ಕೊಂದು ತಾಳೆಯಾಗಬೇಕು. ಇಲ್ಲದಿದ್ದರೆ ಹಣ ಹಿಂಪಡೆಯುವಾಗ (epf claim) ಕಷ್ಟವಾಗುತ್ತದೆ. ಬಹಳಷ್ಟು ಇಪಿಎಫ್ ಸದಸ್ಯರ ಯುಎಎನ್ ಮತ್ತು ಆಧಾರ್ ವಿವರದಲ್ಲಿ ಹೊಂದಿಕೆ ಆಗಿರುವುದಿಲ್ಲ. ಒಂದೋ ಆಧಾರ್ನಲ್ಲಿರುವ ಮಾಹಿತಿಯನ್ನು ಬದಲಿಸಬೇಕು. ಅಥವಾ ಯುಎಎನ್ ಮಾಹಿತಿ ಬದಲಿಸಬೇಕು. ಆದರೆ, ಆಧಾರ್ ಮತ್ತು ಯುಎಎನ್ ಹೊಂದಿಕೆಯಾಗದೇ ಇರುವ ಇಪಿಎಫ್ ಖಾತೆದಾರ ಆಕಸ್ಮಿಕವಾಗಿ ಮೃತಪಟ್ಟಾಗ ನಾಮಿನಿ ಹಣ ಕ್ಲೇಮ್ ಮಾಡುವಾಗ ತೊಂದರೆ ಆಗುತ್ತದೆ. ಸಾವನ್ನಪ್ಪಿದ ವ್ಯಕ್ತಿಯ ಆಧಾರ್ ದಾಖಲೆಯನ್ನು ತಿದ್ದಲು ಅಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಪಿಎಫ್ಒ ಸಂಸ್ಥೆ ಹೊಸ ನಿಯಮವೊಂದನ್ನು ತಂದಿದ್ದು, ಇಂಥ ಪ್ರಸಂಗಗಳಲ್ಲಿ ಇಪಿಎಫ್ ಡೆತ್ ಕ್ಲೇಮ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ.
ಇಪಿಎಫ್ ಸದಸ್ಯ ಸತ್ತ ಬಳಿಕ, ಅವರ ಆಧಾರ್ ವಿವರ ತಾಳೆಯಾಗದೇ ಇದ್ದರೂ ನಾಮಿನಿಯು ಪಿಎಫ್ ಹಣ ಕ್ಲೇಮ್ ಮಾಡಲು ಈಗ ಅವಕಾಶ ಇದೆ. ಇಲ್ಲಿ ಯುಎಎನ್ನಲ್ಲಿರುವ ವಿವರ ಸರಿ ಇದ್ದು, ಆಧಾರ್ನಲ್ಲಿ ಮಾತ್ರವೇ ವ್ಯತ್ಯಾಸ ಇದ್ದಂತಹ ಪ್ರಕರಣಗಳಿಗೆ ಮಾತ್ರ ಈ ಹೊಸ ನಿಯಮವು ಸಹಾಯಕ್ಕೆ ಬರುತ್ತದೆ.
ಇದನ್ನೂ ಓದಿ: ಹೊಸ ಇಪಿಎಫ್ಒ ಆಟೊ ಸೆಟಲ್ಮೆಂಟ್ ನಿಯಮ; ಸುಲಭವಾಗಿ ಹಣ ಹಿಂಪಡೆಯಿರಿ
ಯುಎಎನ್ ಮಾಹಿತಿ ತಪ್ಪಾಗಿದ್ದರೆ?
‘ಒಂದು ವೇಳೆ ಆಧಾರ್ ಡಾಟಾ ಸರಿಯಾಗಿದ್ದು ಯುಎಎನ್ನಲ್ಲಿ ತಪ್ಪಾಗಿದ್ದರೆ, 2024ರ ಮಾರ್ಚ್ 26ರಂದು ಹೊರಡಿಸಲಾದ ಮಾರ್ಗಸೂಚಿಯ ಪ್ಯಾರಾ 6.9 ಮತ್ತು 6.10ರಲ್ಲಿನ ನಿಯಮಗಳನ್ನು ಅನುಸರಿಸಬೆಕು. ಆಧಾರ್ ಮೂಲಕ ಯುಎಎನ್ನಲ್ಲಿರುವ ದತ್ತಾಂಶವನ್ನು ಬದಲಾಯಿಸಬೇಕಾಗುತ್ತದೆ,’ ಎಂದು ಇಪಿಎಫ್ಒ ಸಂಸ್ಥೆ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ಸತ್ತ ಪಿಎಫ್ ಸದಸ್ಯರ ಆಧಾರ್ ಖಾತೆಗಳು ಡೀ ಆ್ಯಕ್ಟಿವೇಟ್ ಆಗಿರುವುದು, ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಇತ್ಯಾದಿ ಕಾರಣಗಳಿಂದ ಆಧಾರ್ ಅಥೆಂಟಿಕೇಶನ್ ಪಡೆಯಲು ಸಾಧ್ಯವಾಗದೇ ಹೋಗಬಹುದು. ಇಂಥ ಸನ್ನಿವೇಶದಲ್ಲಿ ಇಪಿಎಫ್ಒ ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ತಿಳಿಸಿದೆ.
ಇದನ್ನೂ ಓದಿ: ಇಪಿಎಫ್ಒ ಹೊಸ ಆದೇಶ: ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂವರೆಗೆ ಪಿಎಫ್ ಹಣ ಪಡೆಯುವ ಅವಕಾಶ
- ಸಾವಿನ ಪ್ರಕರಣಗಳಲ್ಲಿ ಆಧಾರ್ ಸೀಡಿಂಗ್ ಇಲ್ಲದೇ ಕ್ಲೈಮ್ ಪಡೆಯಲು ತಾತ್ಕಾಲಿಕವಾಗಿ ಅನುಮತಿಸಬಹುದು.
- ಇ-ಆಫೀಸ್ ಫೈಲ್ ಮೂಲಕ ಆಫೀಸರ್ ಇನ್ಚಾರ್ಜ್ ಅವರಿಂದ ಅನುಮೋದನೆ ಪಡೆಯಬೇಕು.
- ಸಾವನ್ನಪ್ಪಿದ ಇಪಿಎಫ್ ಸದಸ್ಯನ ಪಿಎಫ್ ಹಣಕ್ಕೆ ಕ್ಲೇಮ್ ಮಾಡುವ ವ್ಯಕ್ತಿಯ ವಿವರಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ