ಮೊದಲ ಬಾರಿಗೆ 3 ಲಕ್ಷಕೋಟಿ ರೂ ತಲುಪಿದ ಬ್ಯಾಂಕ್ ಲಾಭ; ಇದು ಹತ್ತು ವರ್ಷದ ಚಮತ್ಕಾರ ಎಂದ ಮೋದಿ
Banking Sector Net Profit in 24fy: ಭಾರತದ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಬ್ಯಾಂಕಿಂಗ್ ವಲಯದ ಸಂಸ್ಥೆಗಳು 2023-24ರಲ್ಲಿ ಗಳಿಸಿರುವ ನಿವ್ವಳ ಲಾಭ ಇದೇ ಮೊದಲ ಬಾರಿಗೆ ಮೂರು ಲಕ್ಷ ಕೋಟಿ ರೂ ಗಡಿ ದಾಟಿದೆ. ಇತರ ಲಿಸ್ಟಿಂಗ್ ಕಂಪನಿಗಳು 9 ತಿಂಗಳ ಅವಧಿಯಲ್ಲಿ ಗಳಿಸಿರುವ ನಿವ್ವಳ ಲಾಭಕ್ಕೆ ಈ ಬ್ಯಾಂಕುಗಳ ಒಂದು ವರ್ಷದ ಲಾಭ ಸಮವಾಗಿದೆ. ಬ್ಯಾಂಕಿಂಗ್ ವಲಯದ ಈ ಸಾಧನೆಗೆ ಮೆಚ್ಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ 10 ವರ್ಷದಲ್ಲಿ ಆದ ಪರಿವರ್ತನೆಯನ್ನು ಎತ್ತಿತೋರಿಸಿದ್ದಾರೆ.
ನವದೆಹಲಿ, ಮೇ 20: ಜಾಗತಿಕವಾಗಿ ಬ್ಯಾಂಕಿಂಗ್ ವಲಯ (banking sector) ದುರ್ಬಲವಾಗುತ್ತಿದ್ದರೂ ಭಾರತದಲ್ಲಿ ಈ ವಲಯ ಸಮೃದ್ಧವಾಗಿ ಏರುತ್ತಿದೆ. 2023-24ರ ವರ್ಷದಲ್ಲಿ ದೇಶದ ಬ್ಯಾಂಕಿಂಗ್ ಸೆಕ್ಟರ್ನಲ್ಲಿ ಬಂದಿರುವ ನಿವ್ವಳ ಲಾಭ (net profit) ಮೂರು ಲಕ್ಷ ಕೋಟಿ ರೂ ಗಡಿ ದಾಟಿದೆ. ಭಾರತದ ಇತಿಹಾಸದಲ್ಲಿ ಬ್ಯಾಂಕಿಂಗ್ ವಲಯ ಈ ಮೈಲಿಗಲ್ಲು ಮುಟ್ಟಿದ್ದು ಇದೇ ಮೊದಲು. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳ ನಿವ್ವಳ ಲಾಭದ ಮೊತ್ತ ಇದು. 2022-23ರಲ್ಲಿ 2.2 ಲಕ್ಷ ಕೋಟಿ ರೂ ಇದ್ದ ನಿವ್ವಳ ಲಾಭ 2023-24ರಲ್ಲಿ 3.1 ಲಕ್ಷ ಕೋಟಿ ರೂಗೆ ಏರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಬ್ಯಾಂಕಿಂಗ್ ವಲಯದ ಸಾಧನೆಯನ್ನು ಪ್ರಶಂಸಿದ್ದು, ಕಳೆದ ಹತ್ತು ವರ್ಷದಲ್ಲಿ ಆಗಿರುವ ಪರಿವರ್ತನೆಯನ್ನು ಗುರುತಿಸುವ ಕೆಲಸ ಮಾಡಿದ್ದಾರೆ.
ಯುಪಿಎ ಅವಧಿಯಲ್ಲಿ ಫೋನ್ ಬ್ಯಾಂಕಿಂಗ್ ಪಾಲಿಸಿ: ಮೋದಿ ವ್ಯಂಗ್ಯ
‘ಕಳೆದ 10 ವರ್ಷದಲ್ಲಿ ತಿರುಗಿ ನಿಂತಿರುವ ಭಾರತದ ಬ್ಯಾಂಕಿಂಗ್ ವಲಯದ ನಿವ್ವಳ ಲಾಭ ಮೊದಲ ಬಾರಿಗೆ ಮೂರು ಲಕ್ಷ ಕೋಟಿ ರೂ ಗಡಿ ದಾಟಿದೆ. ನಾವು ಅಧಿಕಾರಕ್ಕೆ ಬಂದಾಗ ಬ್ಯಾಂಕ್ಗಳು ನಷ್ಟದಲ್ಲಿದ್ದವು. ಯುಪಿಎ ಅವಧಿಯಲ್ಲಿ ಜಾರಿಯಲ್ಲಿದ್ದ ಫೋನ್ ಬ್ಯಾಂಕಿಂಗ್ ನೀತಿಯಿಂದಾಗಿ ಎನ್ಪಿಎ (ಅನುತ್ಪಾದಕ ಸಾಲ) ಬಹಳ ಹೆಚ್ಚಿತ್ತು. ಬ್ಯಾಂಕ್ಗಳ ಆರೋಗ್ಯ ಹೆಚ್ಚಾಗುವುದರಿಂದ ಬಡವರು, ರೈತರು ಮತ್ತು ಸಣ್ಣ ಕೈಗಾರಿಕೆಗಳಿಗೆ ಸಾಲದ ಲಭ್ಯತೆ ಹೆಚ್ಚುತ್ತದೆ,’ ಎಂದು ನರೇಂದ್ರ ಮೋದಿ ಎಕ್ಸ್ ಪೋಸ್ಟ್ ಮಾಡಿದ್ದಾರೆ.
In a remarkable turnaround in the last 10 years, India’s banking sector net profit crosses Rs 3 lakh crore for the first time ever.
When we came to power, our banks were reeling with losses and high NPAs due to the phone-banking policy of UPA. The doors of the banks were closed…
— Narendra Modi (@narendramodi) May 20, 2024
ಇದನ್ನೂ ಓದಿ: ಬ್ರಿಟನ್ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ
ಸರ್ಕಾರಿ ಬ್ಯಾಂಕುಗಳ ಲಾಭದಲ್ಲಿ ಶೇ. 34ರಷ್ಟು ಹೆಚ್ಚಳ
ಸರ್ಕಾರಿ ವಲಯದ ಬ್ಯಾಂಕುಗಳು ಸಿಕ್ಕಿದ್ದು ಸೀರುಂಡೆ ಆಡಲು ಇರುವ ಸ್ಥಳ ಎನ್ನುವ ಭಾವನೆ ಈ ಹಿಂದೆ ಇತ್ತು. ಇವತ್ತು ಎಸ್ಬಿಐ ದೇಶದಲ್ಲೇ ಅತಿಹೆಚ್ಚು ಲಾಭ ಮಾಡಿದ ಕಂಪನಿ ಎನ್ನುವ ಕೀರ್ತಿ ಪಡೆದಿದೆ. ರಿಲಾಯನ್ಸ್ ಸಂಸ್ಥೆಗಿಂತಲೂ ಎಸ್ಬಿಐ ಹೆಚ್ಚು ಲಾಭ ಮಾಡಿದೆ. 2023-24ರ ವರ್ಷದಲ್ಲಿ ಸರ್ಕಾರಿ ಬ್ಯಾಂಕುಗಳು ಒಟ್ಟಾರೆ 1.4 ಲಕ್ಷ ಕೋಟಿ ರೂ ನಿವ್ವಳ ಲಾಭ ತೋರಿವೆ. ಹಿಂದಿನ ವರ್ಷದಕ್ಕಿಂತ ಶೇ. 34ರಷ್ಟು ನಿವ್ವಳ ಲಾಭದಲ್ಲಿ ಹೆಚ್ಚಳವಾಗಿದೆ.
ಇದೇ ಅವಧಿಯಲ್ಲಿ ಖಾಸಗಿ ವಲಯದ ಬ್ಯಾಂಕುಗಳ ನಿವ್ವಳ ಲಾಭ 1.2 ಲಕ್ಷ ಕೋಟಿ ರೂನಿಂದ 1.7 ಲಕ್ಷ ಕೋಟಿ ರೂಗೆ ಏರಿದೆ. ವರ್ಷದಿಂದ ವರ್ಷಕ್ಕೆ ಶೇ. 42ರಷ್ಟು ಲಾಭ ಏರಿಕೆ ಆಗಿದೆ.
ಬ್ಯಾಂಕಿಂಗ್ ವಲಯದಲ್ಲಿ ಈ ಪರಿ ಲಾಭ ನಿಜಕ್ಕೂ ಅಚ್ಚರಿ ಪಡುವಂಥದ್ದೇ. ಅದರಲ್ಲೂ ಹತ್ತು ವರ್ಷದ ಹಿಂದೆ ಇದನ್ನು ಊಹಿಸಲೂ ಸಾಧ್ಯವಾಗದಾಗಿತ್ತು. ಭಾರತದಲ್ಲಿ ಬ್ಯಾಂಕಿಂಗ್ ವಲಯ ಹೊರತುಪಡಿಸಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳು ಮೊದಲ ಮೂರು ಕ್ವಾರ್ಟರ್ಗಳಲ್ಲಿ ಗಳಿಸಿರುವ ಲಾಭಕ್ಕೆ ಸಮವಾಗಿದೆ ಬ್ಯಾಂಕಿಂಗ್ ವಲಯ ಗಳಿಸಿರುವ ಲಾಭ.
ಇದನ್ನೂ ಓದಿ: ಬ್ರಿಟನ್ ದೊರೆ ಚಾರ್ಲ್ಸ್ಗಿಂತಲೂ ಹೆಚ್ಚು ಶ್ರೀಮಂತರಾದ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕುಟುಂಬ
ಐಟಿ ಸರ್ವಿಸ್ ಕಂಪನಿಗಳು ಗಳಿಸಿರುವ ಲಾಭಕ್ಕಿಂತ ಹೆಚ್ಚಿದೆ ಬ್ಯಾಂಕುಗಳ ಲಾಭ. ಐಟಿ ಸರ್ವಿಸ್ ಕಂಪನಿಗಳು 2023-24ರಲ್ಲಿ 1 ಲಕ್ಷ ಕೋಟಿ ರೂಗಿಂತ ತುಸು ಹೆಚ್ಚು ಲಾಭ ಮಾಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Mon, 20 May 24