ಬ್ರಿಟನ್ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ
UK interitance tax: ಬ್ರಿಟನ್ನಲ್ಲಿ ಪಿತ್ರಾರ್ಜಿತ ಆಸ್ತಿ ಎಂಬುದು ಸಾಕಷ್ಟು ಜನರಿಗೆ ಉಗುಳಲೂ ಆಗದ ನುಂಗಲೂ ಆಗದ ವಸ್ತುವಿನಂತಾಗಿದೆ. ಪಿತ್ರಾರ್ಜಿತ ಆಸ್ತಿಗೆ ಇರುವ ಇನ್ಹೆರಿಟೆನ್ಸ್ ಟ್ಯಾಕ್ಸ್ ಕಟ್ಟಲೂ ಆಗದ ಪರಿಸ್ಥಿತಿಯಲ್ಲಿ ಜನರಿದ್ದಾರೆ. ಅದರಲ್ಲೂ ಬೇಬಿ ಬೂಮರ್ಸ್ ಎಂದು ಕರೆಯಲಾಗುವ ಅರವತ್ತರ ದಶಕಕ್ಕಿಂತ ಮುಂಚೆ ಜನಿಸಿದ ಜನರ ಆಸ್ತಿ ಮೌಲ್ಯ ಈಗ ಸಾಕಷ್ಟು ಏರಿದೆ. ಅದನ್ನು ಪಡೆಯಲು ಮಕ್ಕಳು ಭಾರೀ ಮೊತ್ತದ ತೆರಿಗೆ ಕಟ್ಟಬೇಕು. ಇವತ್ತಿನ ಆರ್ಥಿಕ ದುಸ್ಥಿತಿಯಲ್ಲಿ ಇದು ಸಾಧ್ಯವಾಗದ ಹತಾಶೆಯಲ್ಲಿ ಈಗಿನ ತಲೆಮಾರಿನವರಿದ್ದಾರೆ.
ಲಂಡನ್, ಮೇ 20: ಪಿತ್ರಾರ್ಜಿತ ಆಸ್ತಿ ತೆರಿಗೆ (inheritance tax) ಕಟ್ಟಲು ಸಾಧ್ಯವಾಗದೇ ಬೇಬಿ ಬೂಮರ್ಗಳ (Baby boomers) ಮನೆ, ಜಮೀನು ಇತ್ಯಾದಿಗಳು ಈಗ ಮಾರಾಟಕ್ಕೆ ಹೋಗುತ್ತಿವೆ. ಬ್ರಿಟನ್ನಲ್ಲಿ ಈಗ ಭಾರೀ ಪ್ರಮಾಣದಲ್ಲಿ ಆಸ್ತಿಗಳು ಹರಾಜಾಗಲು ಕಾಯುತ್ತಿವೆ ಎನ್ನುವಂತಹ ವರದಿಯೊಂದು ದಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಬಂದಿದೆ. ಇಲ್ಲಿ ಬೇಬಿ ಬೂಮರ್ ಎಂದರೆ 1946ರಿಂದ 1964ರೊಳಗೆ ಜನಿಸಿದವರು. ಇವರು ಸಂಪಾದಿಸಿದ ಆಸ್ತಿಯನ್ನು ಅನುಭವಿಸಲು ಅವರ ತಲೆಮಾರಿನವರಿಗೆ ಸಾಧ್ಯವಾಗುತ್ತಿಲ್ಲವಂತೆ. ಬ್ರಿಟನ್ನ ಈ ಬೇಬಿ ಬೂಮರ್ಗಳು ತಮ್ಮ ಮುಂದಿನ ತಲೆಮಾರಿನವರಿಗೆ ಬಿಟ್ಟು ಹೋಗಿರುವ ಅಥವಾ ಹೋಲಿರುವ ಆಸ್ತಿ ಮೌಲ್ಯ 1.2 ಟ್ರಿಲಿಯನ್ ಪೌಂಡ್. ಅಂದರೆ, ಹೆಚ್ಚೂಕಡಿಮೆ 120 ಲಕ್ಷ ಕೋಟಿ ರುಪಾಯಿ ಮೌಲ್ಯದ ಆಸ್ತಿ.
ವಿಪರ್ಯಾಸ ಎಂದರೆ, ಬ್ರಿಟನ್ನಲ್ಲಿ ಈಗ ಶ್ರೀಮಂತರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಪಿತ್ರಾರ್ಜಿತ ಆಸ್ತಿ ಪಡೆಯಲು ಅಲ್ಲಿ ಭಾರೀ ತೆರಿಗೆ ಕಟ್ಟಬೇಕು. ಅಷ್ಟು ತೆರಿಗೆ ಹಣ ಕಟ್ಟಲೂ ಇವತ್ತಿನ ತಲೆಮಾರಿನವರಿಗೆ ಸಾಧ್ಯವಾಗುತ್ತಿಲ್ಲ. ಅಪ್ಪ ಹಾಕಿದ ಆಲದ ಮರದಿಂದ ಇವರಿಗೆ ನೆರಳೂ ಸಿಗದಂತಾಗಿದೆ.
ಬ್ರಿಟನ್ನಲ್ಲಿ ಎಷ್ಟಿದೆ ಪಿತ್ರಾರ್ಜಿತ ಆಸ್ತಿ ತೆರಿಗೆ?
ಪಿತ್ರಾರ್ಜಿತ ಆಸ್ತಿ ತೆರಿಗೆ ಅಥವಾ ಇನ್ಹೆರಿಟೆನ್ಸ್ ಟ್ಯಾಕ್ಸ್ ಎಂಬುದು ಒಬ್ಬ ವ್ಯಕ್ತಿ ಸತ್ತ ಬಳಿಕ ಅವರ ಆಸ್ತಿಯನ್ನು ಮುಂದಿನ ತಲೆಮಾರಿನವರಿಗೆ ವರ್ಗಾಯಿಸುವಾಗ ವಿಧಿಸಲಾಗುವ ತೆರಿಗೆಯಾಗಿದೆ. ಭಾರತದಲ್ಲೂ ಕೆಲ ದಶಕಗಳ ಕಾಲ ಇನ್ಹೆರಿಟೆನ್ಸ್ ಟ್ಯಾಕ್ಸ್ ಇತ್ತು. ಅಮೆರಿಕದಲ್ಲಿ ಎಸ್ಟೇಟ್ ಟ್ಯಾಕ್ಸ್ ಎಂದಿದೆ.
ಇದನ್ನೂ ಓದಿ: ಬ್ರಿಟನ್ ದೊರೆ ಚಾರ್ಲ್ಸ್ಗಿಂತಲೂ ಹೆಚ್ಚು ಶ್ರೀಮಂತರಾದ ಪ್ರಧಾನಿ ರಿಷಿ ಸುನಕ್, ಅಕ್ಷತಾ ಮೂರ್ತಿ ಕುಟುಂಬ
ಆಸ್ತಿ ಮುಂದಿನ ತಲೆಮಾರಿನವರಿಗೆ ವರ್ಗಾವಣೆ ಆಗುವಾಗ ಅದರ ಇಂದಿನ ಮಾರುಕಟ್ಟೆ ಮೌಲ್ಯ 3,25,000 ಪೌಂಡ್ನಷ್ಟಿದ್ದರೆ ತೆರಿಗೆ ಕಟ್ಟಬೇಕಿಲ್ಲ. ಅದಕ್ಕೂ ಹೆಚ್ಚಿನ ಮೌಲ್ಯದ ಆಸ್ತಿಗೆ ಶೇ. 40ರಷ್ಟು ಇನ್ಹೆರಿಟೆನ್ಸ್ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಅಂದರೆ ಸುಮಾರು 35 ಕೋಟಿ ರೂ ಮೇಲ್ಪಟ್ಟ ಮೌಲ್ಯದ ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆಯಬೇಕೆಂದರೆ ಅದಕ್ಕೆ ಶೇ. 40ರಷ್ಟು ತೆರಿಗೆ ಪಾವತಿಸಬೇಕು.
2020-21ರಲ್ಲಿ ಬ್ರಿಟನ್ನಲ್ಲಿ ಸಾವನ್ನಪ್ಪಿದವರ ಪೈಕಿ ಶೇ. 3.73ರಷ್ಟು ಜನರ ಆಸ್ತಿಗಳಿಗೆ ಪಿತ್ರಾರ್ಜಿ ಆಸ್ತಿ ತೆರಿಗೆ ಹೇರಲಾಗಿದೆ. 27,000 ಆಸ್ತಿ ವರ್ಗಾವಣೆಯಿಂದ ಸರಕಾರಕ್ಕೆ ಬಂದ ತೆರಿಗೆ ಆದಾಯ 5.76 ಬಿಲಿಯನ್ ಪೌಂಡ್ (ಸುಮಾರು 61,000 ಕೋಟಿ ರೂ) ಎನ್ನಲಾಗಿದೆ.
ಬೇಬಿ ಬೂಮರ್ಗಳ ಕಥೆ ಏನು?
ಬ್ರಿಟನ್ನಲ್ಲಿರುವ ಪಿತ್ರಾರ್ಜಿತ ಆಸ್ತಿ ತೆರಿಗೆ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದವರಿಗೆ ಹೆಚ್ಚು ತಲೆನೋವಾಗಿಲ್ಲ. ಆದರೆ ಬೇಬಿ ಬೂಮರ್ಗಳ ಸಂತಾನದವರಿಗೆ ಇದು ತಲೆನೋವಾಗಿದೆ. 1946ರಿಂದ 1964ರವರೆಗೆ ಜನಿಸಿದವರನ್ನು ಬೇಬಿ ಬೂಮರ್ಗಳೆನ್ನುತ್ತಾರೆ. ತಲೆಮಾರಿನವರು ಸಾಮಾನ್ಯವಾಗಿ ಭೂ ಆಸ್ತಿ ಮಾಡುವ ಸ್ವಭಾವದವರಾಗಿದ್ದರು. ಹಣದ ಬದಲು ಈ ರೀತಿಯ ಸಾಕಷ್ಟು ಆಸ್ತಿಪಾಸ್ತಿಗಳನ್ನು ಮಾಡಿರುತ್ತಾರೆ. ಆಗ ಇವರು ಕೂಡಿಟ್ಟ ಈ ಆಸ್ತಿಯ ಈಗಿನ ಮಾರುಕಟ್ಟೆ ಮೌಲ್ಯ ಬಹಳ ಹೆಚ್ಚಿದೆ.
ಇದನ್ನೂ ಓದಿ: ಸಮಾಜವಾದಿ ಸೋಗಿನಲ್ಲಿ 4 ವರ್ಷ ಕಾಲ ಆದಾಯ ತೆರಿಗೆಯನ್ನು ಶೇ 97.5 ಕ್ಕೆ ಏರಿಸಿದ್ದ ಪ್ರಧಾನಿ ಇಂದಿರಾ! ಏನಾಯ್ತು ಆಗ?
ಈ ಬೇಬಿ ಬೂಮರ್ಗಳು ಸಾವನ್ನಪ್ಪಿದ ಬಳಿಕ ಅವರ ಈ ದುಬಾರಿ ಮೌಲ್ಯದ ಆಸ್ತಿಯನ್ನು ಮಕ್ಕಳು ಪಡೆಯಬೇಕಾದರೆ ಶೇ. 40ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಇವತ್ತಿನ ಆರ್ಥಿಕ ದುಸ್ಥಿತಿಯಲ್ಲಿ ಇದು ಕಷ್ಟವಾಗುತ್ತಿದೆ. ಅಂತೆಯೇ ಬೇಬಿ ಬೂಮರ್ಗಳ ಅಪಾರ ಮೌಲ್ಯದ ಆಸ್ತಿ ಈಗ ಮಾರಾಟಕ್ಕೆ ಹೋಗುವುದು ಅನಿವಾರ್ಯ ಎನ್ನುವಂತಾಗಿದೆ ಎಂದು ಟೆಲಿಗ್ರಾಫ್ ವರದಿ ಹೇಳುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ