UPI 123Pay: ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಯುಪಿಐ ಪೇಮೆಂಟ್ ಮಾಡುವುದು ಹೇಗೆ? ಇಲ್ಲಿದೆ 123ಪೇ ಡೀಟೇಲ್ಸ್
Feature Phone and UPI Payment: ಫೀಚರ್ ಫೋನ್ಗಳಲ್ಲಿ ಯುಪಿಐ ಪೇಮೆಂಟ್ ಸಾಧ್ಯವಾಗಿಸುವ ನಿಟ್ಟಿನಲ್ಲಿ ಯುಪಿಐ 2.0 ವ್ಯವಸ್ಥೆ ತಂದಿದೆ. ಇದರ ವಿಸ್ತೃತ ಭಾಗವಾಗಿ ಯುಪಿಐ 123 ಪೇ ಎಂಬ ಫೀಚರ್ ಅನ್ನು ಜಾರಿ ಮಾಡಲಾಗಿದೆ. ಈ 123ಪೇ ಬಳಸುವ 4 ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.
ನವದೆಹಲಿ: ಭಾರತದಲ್ಲಿ ಇ–ಪೇಮೆಂಟ್ ಕ್ರಾಂತಿ (e-Payment) ಸಾಧ್ಯವಾಗಲು ಸ್ಮಾರ್ಟ್ಫೋನ್ ಮಾರುಕಟ್ಟೆ ವಿಸ್ತರಿಸಿದ್ದೂ ಒಂದು ಪ್ರಮುಖ ಕಾರಣ. ಇದೀಗ ಸ್ಮಾರ್ಟ್ಫೋನ್ ಬಳಸುವ ಅನೇಕ ಕೋಟಿ ಜನರು ಸುಲಭವಾಗಿ ಯುಪಿಐ ಪೇಮೆಂಟ್ ಮಾಡುತ್ತಿದ್ದಾರೆ. ಗುಡಿಸಲಿನಲ್ಲಿ ಇರುವ ಒಬ್ಬ ವ್ಯಕ್ತಿಯೂ ಇಂದು ಯುಪಿಐ ಪೇಮೆಂಟ್ ವ್ಯವಸ್ಥೆ ಅರಿತಿದ್ದಾನೆ. ಆದರೂ ಕೂಡ ಎಲ್ಲರ ಕೈಯಲ್ಲೂ ಸ್ಮಾರ್ಟ್ಫೋನ್ ಇದೆ, ಎಲ್ಲರೂ ಡಿಜಿಟಲ್ ಪಾವತಿ ಮಾಡುತ್ತಾರೆ ಎನ್ನಲು ಆಗುವುದಿಲ್ಲ. ಒಂದು ಅಂದಾಜು ಪ್ರಕಾರ 40 ಕೋಟಿ ಭಾರತೀಯರು ಈಗಲೂ ಫೀಚರ್ ಫೋನ್ಗಳನ್ನು ಬಳಸುತ್ತಾರಂತೆ. ಈ ಫೀಚರ್ ಫೋನ್ಗಳಲ್ಲಿ ಇಂಟರ್ನೆಟ್ ಸೌಲಭ್ಯ ಸಾಮಾನ್ಯವಾಗಿ ಇರುವುದಿಲ್ಲ. ಈ ಫೀಚರ್ ಫೋನ್ಗಳಲ್ಲಿ ಯುಪಿಐ ಪೇಮೆಂಟ್ ಸಾಧ್ಯವಾಗಿಸುವ ನಿಟ್ಟಿನಲ್ಲಿ ಯುಪಿಐ 2.0 ವ್ಯವಸ್ಥೆ ತಂದಿದೆ. ಇದರ ವಿಸ್ತೃತ ಭಾಗವಾಗಿ ಯುಪಿಐ 123 ಪೇ ಎಂಬ ಫೀಚರ್ ಅನ್ನು ಜಾರಿ ಮಾಡಲಾಗಿದೆ. ಇದು ಫೀಚರ್ ಫೋನ್ನಲ್ಲೂ ಲಭ್ಯ ಇರುತ್ತದೆ, ಸ್ಮಾರ್ಟ್ಫೋನ್ನಲ್ಲೂ ಲಭ್ಯ ಇರುತ್ತದೆ. ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದರೂ ಈ ಫೀಚರ್ ಬಳಸಿ ಯುಪಿಐ ಪೇಮೆಂಟ್ ಮಾಡಲು ಸಾಧ್ಯವಾಗುತ್ತದೆ. ಅಂತೆಯೇ ಇದು ಫೀಚರ್ ಫೋನ್ಗೆ ಹೇಳಿ ಮಾಡಿಸಿದ ಫೀಚರ್ ಆಗಿದೆ.
ಯುಪಿಐ 123ಪೇ (123Pay) ಫೀಚರ್ ಮೂಲಕ ನಾಲ್ಕು ವಿಧಾನಗಳಲ್ಲಿ ಯುಪಿಐ ಪೇಮೆಂಟ್ ಮಾಡಲು ಅವಕಾಶ ಇದೆ. ಇದು ಇಂಗ್ಲೀಷ್ ಮತ್ತು ಹಿಂದಿ ಮಾತ್ರವಲ್ಲದೇ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ ಇದೆ. ಹೀಗಾಗಿ, ಇಂಗ್ಲೀಷ್ ಭಾಷೆ ಗೊತ್ತಿಲ್ಲದವರೂ ತಮ್ಮದೇ ತಾಯ್ನುಡಿಯಲ್ಲಿ ಈ ಆ್ಯಪ್ ಅನ್ನು ಬಳಸಬಹುದು. ಆದರೆ, ಈ ಯುಪಿಐ 123ಪೇ ಅನ್ನು ಬಳಸಬೇಕಾದರೆ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯನ್ನು ಈ ಸೇವೆಗೆ ಜೋಡಿಕೆ ಮಾಡಬೇಕು. ಇದನ್ನು ಬ್ಯಾಂಕಿನ ಮುಖಾಂತರವೇ ಮಾಡಿಸಬೇಕು. ವೆರಿಫಿಕೇಶನ್ ಆದ ಬಳಿಕ ಗ್ರಾಹಕರು 123 ಪೇ ಆ್ಯಪ್ ಅನ್ನು ಬಳಸಬಹುದು.
ಫೀಚರ್ ಫೋನ್ನಲ್ಲಿ ಯುಪಿಐ 123 ಪೇ ಬಳಸುವ ನಾಲ್ಕು ವಿಧಾನಗಳು
- ಮಿಸ್ಡ್ ಕಾಲ್
- ಯುಪಿಐ ಅ್ಯಪ್
- ಐವಿಆರ್ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್)
- ಪ್ರಾಕ್ಸಿಮಿಟಿ ಸೌಂಡ್ ಪೇಮೆಂಟ್
ಇಲ್ಲಿ ಯಾವುದಾದರೂ ಅಂಗಡಿಗೆ ಹೋಗಿ ಫೀಚರ್ ಫೋನ್ ಮೂಲಕ ಹಣ ಪಾವತಿಸಲು ಮಿಸ್ಡ್ ಕಾಲ್ ಸೌಲಭ್ಯ ಬಳಸಿಕೊಳ್ಳಬಹುದು. ಕಾಮನ್ ನಂಬರ್ಗೆ ಮಿಸ್ಡ್ ಕಾಲ್ ಕೊಟ್ಟರೆ ಕರೆ ಕಟ್ ಆಗಿ ಅತ್ತಲಿಂದ ಕಾಲ್ ಬ್ಯಾಕ್ ಬರುತ್ತದೆ. ಆಗ ಹಣ ಪಾವತಿಯ ವಿವರ ನೀಡಿ ಯುಪಿಐ ಪಿನ್ ಟೈಪಿಸಿದರೆ ಪೇಮೆಂಟ್ ಆಗುತ್ತದೆ.
ಯುಪಿಐ ಆ್ಯಪ್ ಮೂಲಕ ಫೀಚರ್ ಫೋನ್ನಿಂದ ಪೆಮೆಂಟ್:
ಇದು ಸಾಧ್ಯವಾಗಬೇಕಾದರೆ ಯುಪಿಐ 123ಪೇ ಆ್ಯಪ್ ಅನ್ನು ಫೀಚರ್ ಫೋನ್ನಲ್ಲಿ ಇನ್ಸ್ಟಾಲ್ ಮಾಡಿರಬೇಕು. ಸ್ಕ್ಯಾನ್ ಮಾಡಿ ಹಣ ಪಾವತಿಸುವ ಫೀಚರ್ ಹೊರತುಡಪಿಸಿ ಇತರ ಯುಪಿಐ ಆ್ಯಪ್ಗಳಲ್ಲಿ ಇರುವ ಬಹುತೇಕ ಎಲ್ಲಾ ಫೀಚರ್ಗಳು 123ಪೇ ಆ್ಯಪ್ನಲ್ಲೂ ಇರುತ್ತದೆ. ಫಾಸ್ಟ್ಯಾಗ್, ಎಲ್ಪಿಜಿ ಪೇಮೆಂಟ್, ಎಲೆಕ್ಟ್ರಿಸಿಟಿ ಬಿಲ್ ಇತ್ಯಾದಿ ಸೇವೆಗೆ ಪೇಮೆಂಟ್ ಮಾಡಬಹುದು.
ಫೀಚರ್ ಫೋನ್ನಲ್ಲಿ ಐವಿಆರ್ ಮೂಲಕ ಡಿಜಿಟಲ್ ಪೇಮೆಂಟ್
ಈ ವ್ಯವಸ್ಥೆಯಲ್ಲಿ ಗ್ರಾಹಕರು ಐವಿಆರ್ಗೆ ನಿಗದಿತವಾದ ಫೋನ್ ನಂಬರ್ಗೆ ಕರೆ ಮಾಡಬೇಕು. ಯುಪಿಐ ಪಿನ್ ದೃಢೀಕರಿಸಿದ ಬಳಿಕ ಫೋನ್ನಲ್ಲಿ ಬರುವ ಸೂಚನೆಗೆ ಅನುಗುಣವಾಗಿ ಸ್ಪಂದಿಸುತ್ತಾ ಹೋಗಬೇಕು. ಈ ಐವಿಆರ್ ಮೂಲಕ ಯುಟಿಲಿಟಿ ಬಿಲ್, ಫಂಡ್ ಟ್ರಾನ್ಸ್ಫರ್, ರೀಚಾರ್ಜ್ ಇತ್ಯಾದಿಗೆ ಗ್ರಾಹಕರು ಹಣ ಪಾವತಿಸಬಹುದು.
ಫೀಚರ್ ಫೋನ್ನಲ್ಲಿ ಪ್ರಾಕ್ಸಿಮಿಟಿ ಸೌಂಡ್ ಪೇಮೆಂಟ್ ವ್ಯವಸ್ಥೆ
ಯುಪಿಐ 123ಪೇ ಆ್ಯಪ್ನ ಒಂದು ವೈಶಿಷ್ಟ್ಯ ಎಂದರೆ ಅದರ ಸೌಂಡ್ ವೇವ್ ಟೆಕ್ನಿಕ್. ಟಾಟಾ ಟ್ರಾನ್ಸ್ಫರ್ ಮಾಡಬೇಕಾದ ಸಾಧನದ ಬಳಿ ಫೋನ್ ಇದ್ದರೆ ಸೌಂಡ್ ವೇವ್ ಟೆಕ್ನಿಕ್ ಮೂಲಕ ಡಾಟಾ ಟ್ರಾನ್ಸ್ಫರ್ ಸಾಧ್ಯವಾಗುತ್ತದೆ.
ಆದರೆ, ಮೇಲಿನ ಕೆಲ ಫೀಚರ್ಗಳು ಸ್ಮಾರ್ಟ್ಫೋನ್ನಲ್ಲಿರುವ ಸ್ಕ್ಯಾನ್ ಅಂಡ್ ಪೇ ಫೀಚರ್ನಷ್ಟು ಸರಳವಲ್ಲ ಎಂಬುದೂ ನಿಜ. ಆದರೂ ಕೂಡ ಯುಪಿಐ 123ಪೇ ವ್ಯವಸ್ಥೆ ಬಂದ ಬಳಿಕ ಬಹಳಷ್ಟು ಫೀಚರ್ ಫೋನ್ ಬಳಕೆದಾರರಿಗೆ ಅನುಕೂಲವಾಗಿದೆಯಂತೆ. 124ಪೇ ಮೂಲಕ ಲಕ್ಷಾಂತರ ಮಂದಿ ಗ್ಯಾಸ್ ಬುಕ್ ಮಾಡುವುದು ಇತ್ಯಾದಿ ಸೇವೆ ಬಳಸಿದ್ದಾರೆ ಎನ್ನುವ ಮಾಹಿತಿ ಲಭ್ಯ ಇದೆ.