ಮುಂಬೈ: ಮಾರುಕಟ್ಟೆ ನಿಯಂತ್ರಕಗಳು ತಮ್ಮ ಕೆಲಸ ಮಾಡಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಶನಿವಾರ ಹೇಳಿದ್ದಾರೆ. ಅದಾನಿ ಸಮೂಹದ (Adani Group) ವಿರುದ್ಧ ಕೇಳಿ ಬಂದಿರುವ ಅಕ್ರಮದ ಆರೋಪ, ಉನ್ನತ ಮಟ್ಟದ ತನಿಖೆಗೆ ಪ್ರತಿಪಕ್ಷಗಳಿಂದ ಆಗ್ರಹ ವ್ಯಕ್ತವಾಗಿರುವ ಬೆನ್ನಲ್ಲೇ ಹಣಕಾಸು ಸಚಿವರು ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದಾರೆ. ನಿಯಂತ್ರಕರು ಅವರ ಕೆಲಸ ಮಾಡಲಿದ್ದಾರೆ. ರಿಸರ್ವ್ ಬ್ಯಾಂಕ್ ನಿನ್ನೆಯಷ್ಟೇ ಸ್ಪಷ್ಟನೆ ನೀಡಿದೆ. ಅದಕ್ಕೂ ಮೊದಲು ಹೂಡಿಕೆ ಬಗ್ಗೆ ಎಲ್ಐಸಿ ವಿವರ ನೀಡಿದೆ. ಹೀಗಾಗಿ ನಿಯಂತ್ರಕರು ಅವರ ಕೆಲಸ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಾರುಕಟ್ಟೆ ನಿಯಂತ್ರಕಗಳು ಸರ್ಕಾರದ ಸ್ವಾಯತ್ತ ಸಂಸ್ಥೆಗಳಾಗಿವೆ. ಇಂಥ ಸಂದರ್ಭಗಳಲ್ಲಿ ಮಾರುಕಟ್ಟೆಗೆ ಸಂಬಂಧಿಸಿ ಏನು ಕ್ರಮ ಕೈಗೊಳ್ಳಬೇಕು ಎಂಬುದು ಆ ಸಂಸ್ಥೆಗಳಿಗೆ ಬಿಟ್ಟ ವಿಚಾರ. ಸೆಬಿಗೆ ಏನು ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸುವ ಅಧಿಕಾರವಿದೆ ಎಂದು ಅವರು ಹೇಳಿದ್ದಾರೆ.
ಎಫ್ಪಿಒಗಳು (Follow-On Public Offer) ಬರುತ್ತವೆ ಹೋಗುತ್ತವೆ ಎಂದ ನಿರ್ಮಲಾ ಸೀತಾರಾಮನ್ ಕಳೆದ ಕೆಲವು ದಿನಗಳಲ್ಲಿ 8 ಶತಕೋಟಿ ಡಾಲರ್ ವಿದೇಶಿ ವಿನಿಯಮ ಮೀಸಲು ಸಂಗ್ರಹವಾಗಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಎಫ್ಪಿಒಗಳು ಬರುತ್ತವೆ ಹೋಗುತ್ತವೆ. ಷೇರು ಮಾರುಕಟ್ಟೆಗಳಲ್ಲಿ ಈ ಏರಿಳಿತಗಳು ಸಹಜ. ಆದರೆ, ಕಳೆದ ಕೆಲವೇ ದಿನಗಳಲ್ಲಿ 8 ಶತಕೋಟಿ ಡಾಲರ್ ವಿದೇಶಿ ವಿನಿಯಮ ಮೀಸಲು ಹರಿದುಬಂದಿರುವುದು ಭಾರತದ ಬಗ್ಗೆ ಜಗತ್ತು ಹೊಂದಿರುವ ದೃಷ್ಟಿಕೋನ ಮತ್ತು ನಮ್ಮ ದೇಶದ ಶಕ್ತಿಯನ್ನು ಅನಾವರಣಗೊಳಿಸಿದೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಎಷ್ಟು ಎಫ್ಪಿಒಗಳನ್ನು ದೇಶದಲ್ಲಿ ಹಿಂಪಡೆಯಲಾಗಿಲ್ಲ? ಇಂಥ ಪ್ರಕರಣಗಳಿಂದ ದೇಶ ಎಷ್ಟು ಬಾರಿ ಸಂಕಷ್ಟ ಅನುಭವಿಸಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Adani Loss: ಒಂದು ವಾರದಲ್ಲಿ ಗೌತಮ್ ಅದಾನಿ ಕಳೆದುಕೊಂಡ ಆಸ್ತಿ ಎಷ್ಟು ಲಕ್ಷಕೋಟಿ ಗೊತ್ತೇ?
ಅದಾನಿ ಸಮೂಹದ ಕಂಪನಿಯಾದ ಅದಾನಿ ಎಂಟರ್ಪ್ರೈಸಸ್ ಎಫ್ಪಿಒ ಮೂಲಕ 20,000 ಕೋಟಿ ರೂ. ಸಂಗ್ರಹದ ಗುರಿಯನ್ನು ಹೊಂದಿತ್ತು. ಜನವರಿ 27ರಿಂದ 31ರ ವರೆಗೆ ಎಫ್ಪಿಒ ಮಾರಾಟ ನಡೆದಿತ್ತು. ಆದರೆ, ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯು ಅದಾನಿ ಸಮೂಹದ ವಿರುದ್ಧ ಮಾಡಿದ ಷೇರು ಮೌಲ್ಯ ತಿರುಚಿದ ಮತ್ತು ಅಕ್ರಮದ ಆರೋಪದಿಂದಾಗಿ ಗೌತಮ್ ಅದಾನಿ ಮಾಲಿಕತ್ವದ ಕಂಪನಿಗಳು ಒಂದು ವಾರದಲ್ಲಿ ಸುಮಾರು ನೂರು ಬಿಲಿಯನ್ ಡಾಲರ್ (ಸುಮಾರು 8 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಸಂಪತ್ತನ್ನು ಕಳೆದುಕೊಂಡಿವೆ. ಹೀಗಾಗಿ ಎಫ್ಪಿಒ ರದ್ದುಪಡಿಸಿದ್ದ ಕಂಪನಿ ಹೂಡಿಕೆದಾರರಿಗೆ ಹಣವನ್ನು ಮರಳಿಸುವುದಾಗಿ ತಿಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Sat, 4 February 23