ಆಧಾರ್ ಅಪ್​ಡೇಟ್ ಮಾಡದಿರುವವರ ಗಮನಕ್ಕೆ; ಉಚಿತ ಅಪ್​ಡೇಟ್ ಅವಕಾಶ ಮತ್ತೆ 1 ವರ್ಷ ವಿಸ್ತರಣೆ

Free Aadhaar Update Deadline Extended for One Year: ಮೈಆಧಾರ್ ಪೋರ್ಟಲ್ ಮೂಲಕ ಉಚಿತವಾಗಿ ಆನ್‌ಲೈನ್ ಆಧಾರ್ ದಾಖಲೆಗಳನ್ನು ನವೀಕರಿಸುವ ಗಡುವನ್ನು ಯುಐಡಿಎಐ ಮತ್ತೊಂದು ವರ್ಷ ವಿಸ್ತರಿಸಿದೆ. ಸಾರ್ವಜನಿಕರ ಉತ್ತಮ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ನಾಗರಿಕರು ಈಗ 2027ರ ಜೂನ್ 14 ರವರೆಗೆ ಯಾವುದೇ ಶುಲ್ಕವಿಲ್ಲದೆ ತಮ್ಮ ಗುರುತು ಮತ್ತು ವಿಳಾಸದ ಪುರಾವೆಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡಬಹುದು.

ಆಧಾರ್ ಅಪ್​ಡೇಟ್ ಮಾಡದಿರುವವರ ಗಮನಕ್ಕೆ; ಉಚಿತ ಅಪ್​ಡೇಟ್ ಅವಕಾಶ ಮತ್ತೆ 1 ವರ್ಷ ವಿಸ್ತರಣೆ
ಆಧಾರ್
Image Credit source: Alamy

Updated on: May 18, 2026 | 6:58 PM

ನವದೆಹಲಿ, ಮೇ 18: ಕೋಟಿಗಟ್ಟಲೆ ಆಧಾರ್ ಕಾರ್ಡ್ (Aadhaar) ಬಳಕೆದಾರರಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಭರ್ಜರಿ ಸಿಹಿ ಸುದ್ದಿ ನೀಡಿದೆ. ಮೈಆಧಾರ್ (myAadhaar) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ದಾಖಲೆಗಳನ್ನು ನವೀಕರಿಸಲು (Document Update) ನೀಡಲಾಗಿದ್ದ ಕೊನೆಯ ದಿನಾಂಕವನ್ನು ಯುಐಡಿಎಐ ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಿಸಿದೆ. ಕಳೆದ ಕೆಲ ವರ್ಷಗಳಿಂದ ಈ ಅವಕಾಶವನ್ನು ವಿಸ್ತರಿಸುತ್ತಲೇ ಬರಲಾಗುತ್ತಿದೆ.

ಈ ಸುದ್ದಿಯ ಮುಖ್ಯಾಂಶಗಳು

  • ಈ ಹಿಂದೆ ನಿಗದಿಪಡಿಸಲಾಗಿದ್ದ ಉಚಿತ ಆಧಾರ್ ಅಪ್‌ಡೇಟ್ ಗಡುವನ್ನು ಈಗ ಮತ್ತೊಂದು ವರ್ಷದವರೆಗೆ ವಿಸ್ತರಿಸಲಾಗಿದೆ.
  • ಆಧಾರ್ ಕಾರ್ಡ್ ಹೊಂದಿರುವ ನಾಗರಿಕರು ಈಗ 2027ರ ಜೂನ್ 14 ರವರೆಗೆ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ನವೀಕರಿಸಬಹುದು.
  • ಈ ಉಚಿತ ಸೌಲಭ್ಯವು ಕೇವಲ ಅಧಿಕೃತ ಮೈಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದ್ದು, ಆಫ್‌ಲೈನ್ ಕೇಂದ್ರಗಳಲ್ಲಿ ಎಂದಿನಂತೆ ಶುಲ್ಕ ಅನ್ವಯವಾಗುತ್ತದೆ.

ವಿಸ್ತರಣೆಗೆ ಕಾರಣ ಮತ್ತು ಪ್ರಯೋಜನ

ಯುಐಡಿಎಐ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಮೈಆಧಾರ್ ಪೋರ್ಟಲ್ ಮೂಲಕ ಲಕ್ಷಾಂತರ ನಾಗರಿಕರು ತಮ್ಮ ವಿವರಗಳನ್ನು ಯಶಸ್ವಿಯಾಗಿ ನವೀಕರಿಸುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಧನಾತ್ಮಕ ಸ್ಪಂದನೆಯನ್ನು ಪರಿಗಣಿಸಿ, ಇನ್ನುಳಿದ ಜನರಿಗೂ ಅವಕಾಶ ಕಲ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಿಶೇಷವಾಗಿ ತಮ್ಮ ಆಧಾರ್ ಕಾರ್ಡ್ ಪಡೆದು 10 ವರ್ಷಗಳಾಗಿದ್ದು, ಇದುವರೆಗೆ ಒಮ್ಮೆಯೂ ಯಾವುದೇ ದಾಖಲೆಗಳನ್ನು ನವೀಕರಿಸದ ನಾಗರಿಕರು ತಮ್ಮ ಗುರುತಿನ ಪುರಾವೆ (PoI) ಮತ್ತು ವಿಳಾಸದ ಪುರಾವೆಗಳನ್ನು (PoA) ಅಪ್‌ಡೇಟ್ ಮಾಡುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್​ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ?

ಆನ್‌ಲೈನ್ ಮತ್ತು ಆಫ್‌ಲೈನ್ ವ್ಯತ್ಯಾಸ

ಸಾರ್ವಜನಿಕರು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಉಚಿತ ಸೌಲಭ್ಯವು ಕೇವಲ ಆನ್‌ಲೈನ್‌ನಲ್ಲಿ (myaadhaar.uidai.gov.in/) ಸ್ವತಃ ಅಪ್‌ಡೇಟ್ ಮಾಡುವವರಿಗೆ ಮಾತ್ರ ಸೀಮಿತವಾಗಿದೆ. ಒಂದು ವೇಳೆ ನಾಗರಿಕರು ತಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ದಾಖಲೆಗಳನ್ನು ನವೀಕರಿಸಲು ಬಯಸಿದರೆ, ಅಲ್ಲಿ ನಿಯಮಿತ ಸೇವಾ ಶುಲ್ಕವಾದ 75 ರೂ ಅನ್ನು ಪಾವತಿಸಬೇಕಾಗುತ್ತದೆ. ಆಧಾರ್ ಡೇಟಾಬೇಸ್‌ನ ನಿಖರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ತಮ್ಮ ವಿವರಗಳನ್ನು ನವೀಕರಿಸಿಕೊಳ್ಳುವಂತೆ ಯುಐಡಿಎಐ ಮನವಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us